ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುರುಕ್ಷೇತ್ರ’ ಪತ್ರಿಕಾಗೋಷ್ಠಿಗೆ ಹಾಜರಾಗಲಿಲ್ಲ ದರ್ಶನ್‌, ನಿಖಿಲ್‌

ಆಗಸ್ಟ್‌ 9ಕ್ಕೆ 'ಮುನಿರತ್ನ ಕುರುಕ್ಷೇತ್ರ' ಸಿನಿಮಾ ಬಿಡುಗಡೆ
Last Updated 18 ಮೇ 2019, 15:46 IST
ಅಕ್ಷರ ಗಾತ್ರ

ಬೆಂಗಳೂರು:ದುರ್ಯೋಧನನಾಗಿ ದರ್ಶನ್‌ ಹಾಗೂ ಅಭಿಮನ್ಯುವಾಗಿ ನಿಖಿಲ್‌ ಕುಮಾರಸ್ವಾಮಿ ಅಭಿನಯಿಸಿರುವ ಬಹು ನಿರೀಕ್ಷಿತ ಸಿನಿಮಾ'ಮುನಿರತ್ನ ಕುರುಕ್ಷೇತ್ರ' ಇದೇ ಆಗಸ್ಟ್‌ 9ರ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಲಿದೆ.

ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನಿಖಿಲ್‌ ಎದುರು ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಪರವಾಗಿ ದರ್ಶನ್‌ ಪ್ರಚಾರ ನಡೆಸಿದ್ದರು. ಸಾಕಷ್ಟು ಆರೋಪ–ಪ್ರತ್ಯಾರೋಪಗಳು ಅಲ್ಲಿ ಹಾದುಹೋಗಿದ್ದವು. ಹೀಗಾಗಿ ಇಬ್ಬರೂ ಅಭಿನಯಿಸಿರುವ ಈ ಕುರುಕ್ಷೇತ್ರ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆಯೇ ಎನ್ನುವ ಕುತೂಹಲ ಜನರ ಮನಸ್ಸಿನಲ್ಲಿ ಮೂಡಿತ್ತು.

ಒಂದೂವರೆ ವರ್ಷಗಳ ನಂತರ ಈ ಸಿನಿಮಾದ ಪತ್ರಿಕಾಗೋಷ್ಠಿ ನಡೆಯುತ್ತಿದೆ. ಅಲ್ಲದೆ, ದರ್ಶನ್‌ ಅವರ 50ನೇ ಸಿನಿಮಾ ಇದಾಗಿರುವುದರಿಂದ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸುವ ವೇಳೆ ದರ್ಶನ್‌ ಹಾಜರಿರುತ್ತಾರೆ ಎಂದೇ ಅಭಿಮಾನಿಗಳು ಎಣಿಸಿದ್ದರು. ಆದರೆ, ಇಬ್ಬರೂ ಪತ್ರಿಕಾಗೋಷ್ಠಿಗೆ ಗೈರಾಗಿದ್ದರು.

‘ಸಿನಿಮಾ ದಿನಾಂಕದ ಬಗ್ಗೆ ಹೇಳಲು ಈ ಪತ್ರಿಕಾಗೋಷ್ಠಿ ಕರೆದಿರುವೆ. ಹಾಗಾಗಿ, ಚಿತ್ರದಲ್ಲಿ ನಟಿಸಿರುವ ಯಾವೊಬ್ಬ ಕಲಾವಿದರು ಬಂದಿಲ್ಲ. ಆಡಿಯೊ ಬಿಡುಗಡೆ ದಿನದಂದು ಎಲ್ಲ ನಟ, ನಟಿಯರು ಬರುತ್ತಾರೆ’ ಎಂದು ನಿರ್ಮಾಪಕ ಮುನಿರತ್ನಸ್ಪಷ್ಟಪಡಿಸಿದರು.

ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳ ಭಾಷೆಯಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ 2D ಮತ್ತು 3D ರೂಪದಲ್ಲಿ ತೆರೆಕಾಣಲಿದೆ. ಚಿತ್ರದ ಕಾಲಾವಧಿ 2 ಗಂಟೆ 55 ನಿಮಿಷ.

ಜುಲೈ ಮೊದಲ ವಾರದಲ್ಲಿ ಆಡಿಯೊ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಚಿತ್ರದ ಹಿಂದಿಯ ಸ್ಯಾಟಲೈಟ್ ಹಕ್ಕು ₹ 9.5 ಕೋಟಿ, ಕನ್ನಡದ ಸ್ಯಾಟಲೈಟ್ ಹಕ್ಕು ₹ 9.5 ಕೋಟಿ ಮತ್ತು ಆಡಿಯೊ ಹಕ್ಕು ₹ 1.5 ಕೋಟಿಗೆ ಮಾರಾಟವಾಗಿದೆ.

'ಪ್ರಸ್ತುತ ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಿದೆ. ಹಾಗಾಗಿ, ನಾವು ಕೂಡ ಚಿತ್ರದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಿದೆ. ಹಾಗಾಗಿ, ಈ ಚಿತ್ರದ ಗುಣಮಟ್ಟಕ್ಕೆ ಹೆಚ್ಚು ಕೊಡಲಾಗಿದೆ. 3D ಕೆಲಸದಿಂದ ಸಿನಿಮಾದ ಬಿಡುಗಡೆಗೆ ವಿಳಂಬವಾಯಿತು' ಎಂದು ಚಿತ್ರದ ನಿರ್ಮಾಪಕ ಮುನಿರತ್ನ ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಅಂಬರೀಷ್ ಅವರು ಭೀಷ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಅವರು ನಿಧನರಾಗುವುದಕ್ಕೂ ಮೊದಲೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ನಿರ್ದೇಶಕ ನಾಗಣ್ಣ, 'ಈಗ ಎಲ್ಲರೂ ಕನ್ನಡ ಚಿತ್ರರಂಗದತ್ತ ನೋಡುತ್ತಿದ್ದಾರೆ. ಮಾರುಕಟ್ಟೆಯೂ ವಿಸ್ತಾರಗೊಂಡಿದೆ. ಒಳ್ಳೆಯ ಚಿತ್ರಗಳು‌ ನಿರ್ಮಾಣವಾಗುತ್ತಿರುವುದೇ ಇದಕ್ಕೆ ಕಾರಣ. ಈ ಸಿನಿಮಾ ವಿಶ್ವದ ಗಮನ ಸೆಳೆಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರಕ್ಕೆ ಜಯನ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. ವಿ.‌ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ದರ್ಶನ್ ದುರ್ಯೋಧನನಾಗಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಸರ್ಜಾ(ಕರ್ಣ), ಅಂಬರೀಷ್(ಭೀಷ್ಮ), ರವಿಚಂದ್ರನ್ (ಕೃಷ್ಣ), ಶಶಿಕುಮಾರ್ (ಧರ್ಮರಾಯ), ಡ್ಯಾನಿಶ್ ಅಖ್ತರ್(ಭೀಮ), ಸೋನು ಸೂದ್(ಅರ್ಜುನ), ಯಶಸ್ ಸೂರ್ಯ(ನಕುಲ), ಚಂದನ್(ಸಹದೇವ), ನಿಖಿಲ್ ಕುಮಾರಸ್ವಾಮಿ (ಅಭಿಮನ್ಯು), ರವಿಶಂಕರ್ (ಶಕುನಿ), ಭಾರತಿ(ಕುಂತಿ), ಸ್ನೇಹಾ(ದ್ರೌಪದಿ), ರಾಕ್ ಲೈನ್ ವೆಂಕಟೇಶ್(ಶಲ್ಯ), ರಮೇಶ್ ಭಟ್(ವಿದುರ), ಶ್ರೀನಿವಾಸ ಮೂರ್ತಿ(ದ್ರೋಣಾಚಾರ್ಯ), ಶ್ರೀನಾಥ್ (ಧೃತರಾಷ್ಟ್ರ), ರವಿಚೇತನ್(ದುಶ್ಯಾಸನ), ಅವಿನಾಶ್(ಗಂಧರ್ವರಾಜ), ಪವಿತ್ರಾ ಲೋಕೇಶ್(ಸುಭದ್ರಾ) ಹರಿಪ್ರಿಯಾ ನಟಿಸಿದ್ದಾರೆ.

ಮುನಿರತ್ನ ಕುರುಕ್ಷೇತ್ರ ಸಿನಿಮಾವನ್ನು ಚೀನಾ ಭಾಷೆಗೂ ಡಬ್ಬಿಂಗ್ ಮಾಡುವ ಆಲೋಚನೆ ನಡೆದಿದೆ. ಕೇರಳದ ವಿತರಕರೊಬ್ಬರ ಜೊತೆಗೆ ಈ ಕುರಿತು ಮಾತುಕತೆ ನಡೆದಿದೆ ಎಂದು ಮನಿರತ್ನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT