ಚುನಾವಣೆ ಎಫೆಕ್ಟ್‌: ಯುಗಾದಿಗೆ ಕುರುಕ್ಷೇತ್ರ ಬಿಡುಗಡೆ ಅನುಮಾನ?

ಶನಿವಾರ, ಮಾರ್ಚ್ 23, 2019
34 °C

ಚುನಾವಣೆ ಎಫೆಕ್ಟ್‌: ಯುಗಾದಿಗೆ ಕುರುಕ್ಷೇತ್ರ ಬಿಡುಗಡೆ ಅನುಮಾನ?

Published:
Updated:
Prajavani

ಕನ್ನಡ ಚಿತ್ರರಂಗದ ದೊಡ್ಡ ತಾರಾಬಳಗವೇ ಇರುವ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಬಿಡುಗಡೆಯ ಮೇಲೆ ಲೋಕಸಭಾ ಚುನಾವಣೆಯ ಕಾರ್ಮೋಡ ಕವಿದಿದೆ. ಏಪ್ರಿಲ್‌ 5ರಂದು ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಆದರೆ, ಚುನಾವಣೆ ಘೋಷಣೆಯಾದರೆ ಬಿಡುಗಡೆಯ ದಿನಾಂಕ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಕುಮಾರ್‌ ಅವರು ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗಿರುವುದೇ ಮೂಲ ಕಾರಣ ಎನ್ನಲಾಗಿದೆ. ಚಿತ್ರದಲ್ಲಿ ಅವರದು ಅಭಿಮನ್ಯು ಪಾತ್ರ.

ನಿಖಿಲ್ ಕುಮಾರ್‌ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಚುನಾವಣೆಗೆ ದಿನಾಂಕ ಘೋಷಣೆಗಾಗಿ ದಿನಗಣನೆ ಆರಂಭವಾಗಿದೆ. ಏಪ್ರಿಲ್‌ ಮೊದಲ ವಾರ ಚಿತ್ರ ಬಿಡುಗಡೆಯಾಗಲಿದೆ. ಆ ವೇಳೆಗೆ ಚುನಾವಣೆ ಘೋಷಣೆಯಾದರೆ ನೀತಿಸಂಹಿತೆ ಜಾರಿಯಾಗಲಿದೆ. ನಿಖಿಲ್‌ ಕುಮಾರ್‌ ಈ ಚಿತ್ರದಲ್ಲಿ ನಟಿಸಿರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚುನಾವಣಾ ಆಯೋಗ ತಡೆ ನೀಡಲಿದೆ ಎನ್ನುವುದು ಚಿತ್ರತಂಡದ ಆತಂಕ.  

‘ಚಾಲೆಂಜಿಂಗ್ ಸ್ಟಾರ್’ ದರ್ಶನ್‌ ದುರ್ಯೋಧನನಾಗಿ ನಟಿಸಿರುವ ಈ ಚಿತ್ರಕ್ಕೆ ಶಾಸಕ ಮುನಿರತ್ನ ಆರ್ಥಿಕ ಇಂಧನ ಒದಗಿಸಿದ್ದಾರೆ. ಕಳೆದ ವರ್ಷವೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿತ್ತು.  

ಚಿತ್ರದ 2D ಆವೃತ್ತಿಗೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಪ್ರಮಾಣಪತ್ರ ನೀಡಿದೆ. 3D ಆವೃತ್ತಿ ಕಾರ್ಯ ಇನ್ನೂ ನಡೆಯುತ್ತಿದೆ. ಏಕಕಾಲಕ್ಕೆ 2D ಮತ್ತು 3D ಆವೃತ್ತಿ ಬಿಡುಗಡೆಯಾಗಲಿದೆ.

ಈ ಚಿತ್ರ ತಮಿಳು, ತೆಲುಗು, ಮಲಯಾಳ ಭಾಷೆಗೂ ಡಬ್‌ ಆಗುತ್ತಿದೆ. ನಾಗಣ್ಣ ಈ ಸಿನಿಮಾ ನಿರ್ದೇಶಿಸಿದ್ದು, ಮುನಿರತ್ನ ಕಥೆ ಬರೆದಿದ್ದಾರೆ. ಜಿ.ಕೆ. ಭಾರವಿ ಸಂಭಾಷಣೆ ಬರೆದಿದ್ದಾರೆ. ಜಯನನ್‌ ವಿನ್ಸೆಂಟ್‌ ಅವರ ಛಾಯಾಗ್ರಹಣವಿದೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ವಿ. ನಾಗೇಂದ್ರಪ್ರಸಾದ್‌ ಸಾಹಿತ್ಯ ನೀಡಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಕಿಂಗ್‌ ಸಾಲೋಮನ್‌ ಅವರ ಸಾಹಸ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !