ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಂದ್ವಾರ್ಥದಲ್ಲಿ ಮುಳುಗೇಳುವ ‘ಲಂಬೋದರ’

ಬಿಗಿ ನಿರೂಪಣೆಯಲ್ಲಿ ಸೋತ ನಿರ್ದೇಶಕ
Last Updated 11 ಜನವರಿ 2019, 10:22 IST
ಅಕ್ಷರ ಗಾತ್ರ

ಚಿತ್ರ: ಲಂಬೋದರ

ನಿರ್ಮಾಣ: ವಿಶ್ವೇಶ್ವರ ಪಿ. ಮತ್ತು ರಾಘವೇಂದ್ರ ಭಟ್‌

ನಿರ್ದೇಶನ: ಕೆ. ಕೃಷ್ಣರಾಜ್

ತಾರಾಗಣ: ‘ಲೂಸ್‌ ಮಾದ’ ಯೋಗೇಶ್‌, ಆಕಾಂಕ್ಷಾ, ಧರ್ಮಣ್ಣ, ಅಚ್ಯುತ್‌ಕುಮಾರ್, ಅರುಣಾ ಬಾಲರಾಜ್, ಮಂಜುನಾಥ ಹೆಗಡೆ, ಭೂಮಿಕಾ ಶೆಟ್ಟಿ

ತಾಯಿಯ ಗರ್ಭದಲ್ಲಿ ಇದ್ದಾಗಲೇ ಸಿಲ್ಕ್‌ಸ್ಮಿತಾಳ ಹಾಡು ಕೇಳುತ್ತಾ ಹುಟ್ಟಿದವ ಲಂಬೋದರ. ಬೆಳೆದು ದೊಡ್ಡವನಾದಾಗ ಮನ್ಮಥನ ಅವತಾರ ತಳೆಯುತ್ತಾನೆ. ಬೀದಿಯಲ್ಲಿ ಕಾಣುವ ಹುಡುಗಿಯರ ಮೇಲೆ ಪ್ರೇಮಬಾಣ ಹೂಡುತ್ತಾನೆ. ಅವುಗಳು ಅವನಿಗೆ ತಿರುಗುಬಾಣವಾಗುತ್ತವೆ. ಸ್ನೇಹಿತರ ಜೊತೆ ಸೇರಿ ಅವನು ಸೃಷ್ಟಿಸುವ ಅವಾಂತರಕ್ಕೆ ಅಪ್ಪ, ಅಮ್ಮ ಹೈರಾಣಾಗುತ್ತಾರೆ. ತೆರೆಯ ಮೇಲೆ ನಗಿಸಲು ಪ್ರಯತ್ನಿಸುವ ಅವರ ಮೇಲಾಟವನ್ನೂ ನೋಡಿ ನೋಡುಗರು ಸುಸ್ತಾಗುತ್ತಾರೆ.

ಚಪಲ ಚೆನ್ನಿಗ ಹುಡುಗನ ಮನಸ್ಥಿತಿ ಮತ್ತು ಮಧ್ಯಮ ವರ್ಗದ ಬದುಕಿನ ಕಥೆ ಇಟ್ಟುಕೊಂಡು ‘ಲಂಬೋದರ’ ಚಿತ್ರದಲ್ಲಿ ಕಾಮಿಡಿ ಕಥೆ ಹೇಳಲು ಹೊರಟಿದ್ದಾರೆ ನಿರ್ದೇಶಕ ಕೆ. ಕೃಷ್ಣರಾಜ್. ಜವಾಬ್ದಾರಿ ಮರೆತ ಯುವಜನಾಂಗ, ಪೋಷಕರ ಅಸಹಾಯಕ ಸ್ಥಿತಿಯ ಎಳೆಯನ್ನೂ ಇದರಲ್ಲಿ ಪೋಣಿಸಿದ್ದಾರೆ. ಆದರೆ ಗಟ್ಟಿಯಾದ ಚಿತ್ರಕಥೆ, ಬಿಗಿಯಾದ ನಿರೂಪಣೆ ಇದ್ದಾಗಲಷ್ಟೇ ಸಾಧಾರಣವಾದ ಕಾಮಿಡಿ ಕಥೆಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತವೆ. ಇಲ್ಲಿ ದ್ವಂದ್ವಾರ್ಥದ ಸಂಭಾಷಣೆ ನಂಬಿಕೊಂಡೇ ನಿರ್ದೇಶಕರು ಪ್ರೇಕ್ಷಕರಿಗೆ ಕಥೆ ದಾಟಿಸಲು ಪ್ರಯತ್ನಪಟ್ಟಿದ್ದಾರೆ. ಲಂಬೋದರ ಪೇಲವವಾಗಿ ಕಾಣುವುದು ಇಲ್ಲಿಯೇ.

ನಟ ಯೋಗೇಶ್‌ ಒಂದು ವರ್ಷದ ಬಳಿಕ ತೆರೆಯ ಮೇಲೆ ಕಾಣಿಸಿಕೊಂಡಿದ್ದರಿಂದ ಲಂಬೋದರನ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದರೆ, ಅವರು ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡಲು ದ್ವಂದ್ವಾರ್ಥದ ಸಂಭಾಷಣೆಗೆ ಜೋತುಬಿದ್ದಿರುವುದು ಚೋದ್ಯ. ಚಿತ್ರದ ಮುಕ್ಕಾಲು ಭಾಗ ನಾಯಕ ಹುಡುಗಿಯರನ್ನು ಪಟಾಯಿಸುವುದರಲ್ಲಿಯೇ ಮುಗಿದುಹೋಗುತ್ತದೆ. ಅದಕ್ಕಾಗಿ ಸ್ನೇಹಿತರ ಜೊತೆಗೆ ಸೇರಿ ನಡೆಸುವ ವ್ಯರ್ಥ ಕಸರತ್ತು, ಬಳಸುವ ಭಾಷೆ ಕೆಲವೊಮ್ಮೆ ನೋಡುಗರಿಗೂ ಇರುಸುಮುರುಸು ತರುತ್ತದೆ.

ಸಮಾಜ ಸೇವೆಗೆ ಜೀವನ ಮುಡಿಪಿಟ್ಟ ನಾಯಕಿ(ಆಕಾಂಕ್ಷಾ). ಮತ್ತೊಂದೆಡೆ ಹುಡುಗಿಯರು ಕಂಡಾಕ್ಷಣ ಅವರ ಮೋಹಕ್ಕೆ ಹಾತೊರೆಯುವ ನಾಯಕ. ಇದಕ್ಕಾಗಿ ಆತ ನಡೆಸುವ ಪ್ರಯತ್ನವೇ ಕಥೆಯ ತಿರುಳು. ಪ್ರತಿಯೊಂದು ಹುಡುಗಿಯಲ್ಲೂ ತಾಯಿ ಇರುತ್ತಾಳೆ ಎಂಬ ಸಂದೇಶ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕರು. ಪಾತ್ರಗಳ ಪೋಷಣೆಯಲ್ಲಿ ಗಟ್ಟಿತನ ಇಲ್ಲ. ಹೈಸ್ಕೂಲ್ ಹಂತದಲ್ಲಿ ಹುಡುಗರು ಮತ್ತು ಹುಡುಗಿಯರು ವಯಸ್ಕರ ಚಿತ್ರಗಳ ಸೆಳೆತಕ್ಕೆ ಸಿಲುಕುವ ದೃಶ್ಯವನ್ನು‌‌ ಫ್ಲಾಷ್‌ಬ್ಯಾಕ್‌ ಮೂಲಕ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿರುವುದು ಚಿತ್ರಕಥೆಗೆ ಅಷ್ಟೇನು ಪೂರಕವಾಗಿಲ್ಲ.

ಅಚ್ಯುತ್‌ಕುಮಾರ್, ಅರುಣಾ ಬಾಲರಾಜ್, ಧರ್ಮಣ್ಣ ಅವರದು ಅಚ್ಚುಕಟ್ಟಾದ ನಟನೆ. ಅರವಿಂದ್‌ ಎಸ್‌. ಕಶ್ಯಪ್ ಅವರ ಛಾಯಾಗ್ರಹಣ ಸಿನಿಮಾಕ್ಕೆ ಹೊಸದೇನನ್ನೂ ನೀಡಿಲ್ಲ. ಕಾರ್ತಿಕ್‌ ಶರ್ಮ ಸಂಗೀತ ಸಂಯೋಜನೆಯ ಎರಡು ಹಾಡುಗಳು ಕೇಳಲು ಇಂಪಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT