ಲತಾ ಮಂಗೇಶ್ಕರ್: ರಾಯಲ್ ಅಲ್ಬರ್ಟ್ ಹಾಲ್‌ನಲ್ಲಿ ಹಾಡಿದ ಮೊದಲ ಹಿಂದೂಸ್ತಾನಿ

ಲಂಡನ್: 'ಭಾರತದ ಕೋಗಿಲೆ' ಎಂಬ ಖ್ಯಾತಿ ಹೊಂದಿರುವ ಗಾಯಕಿ ಲತಾ ಮಂಗೇಶ್ಕರ್ ಅವರು ಲಂಡನ್‌ನ ಪ್ರತಿಷ್ಠಿತ ರಾಯಲ್ ಅಲ್ಬರ್ಟ್ ಹಾಲ್‌ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಕಲಾವಿದೆಯಾಗಿದ್ದಾರೆ.
ಸಂಗೀತ ಲೋಕದ ದಂತಕತೆ ಲತಾ ಮಂಗೇಶ್ಕರ್ ಅವರು 1974ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನ ನೀಡಿದರು. ಆಯ್ದ ಸುಮಧುರ ಗೀತೆಗಳನ್ನು ಹಾಡುವ ಮೂಲಕ ವಿದೇಶಿಗರನ್ನು ರಂಜಿಸಿದರು.
'ಭಾರತದ ಹೊರಗೆ ಪ್ರದರ್ಶನ ನೀಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ಆತ್ಮೀಯವಾಗಿ ಬರಮಾಡಿಕೊಂಡಿದ್ದಕ್ಕೆ ಕೃತಜ್ಞಳು' ಎಂದು ವೇದಿಕೆಯಲ್ಲಿ ಚುಟುಕಾಗಿ ಹಿಂದಿಯಲ್ಲಿ ಹೇಳಿದ್ದರು.
ಕಾರ್ಯಕ್ರಮದ ವೇಳೆ ಬಾಲಿವುಡ್‌ನ ಸಮಕಾಲೀನ ಕಲಾವಿದರಾದ ಕಿಶೋರ್ ಕುಮಾರ್ ಮತ್ತು ಹೇಮಂತ್ ಕುಮಾರ್ ಅವರ ಜೊತೆಗೆ ಹಾಡಿದ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ, ಎಸ್.ಡಿ. ಬರ್ಮನ್ ಮತ್ತು ನೌಷಾದ್ ಅವರಂತಹ ಪ್ರಮುಖ ಸಂಗೀತಗಾರರ ಜೊತೆಗೆ ಕೆಲಸ ಮಾಡಿದ ಅನುಭವಗಳನ್ನು ಪ್ರೇಕ್ಷಕರ ಜೊತೆ ಹಂಚಿಕೊಂಡರು.
ಗಾನ ಕೋಗಿಲೆ ಲತಾ ಮಂಗೇಶ್ಕರ್ ಎಂದಾಕ್ಷಣ ನೆನಪಾಗುವ ಜನಪ್ರಿಯ ಚಲನಚಿತ್ರ ಗೀತೆಗಳು
ನಟ ದಿಲೀಪ್ ಕುಮಾರ್ ಅವರು ಲತಾ ಮಂಗೇಶ್ಕರ್ ಅವರನ್ನು ಪರಿಚಯಿಸಿದ ಬಗೆ ಪ್ರೇಕ್ಷಕರಿಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ದಿಲೀಪ್ ಕುಮಾರ್ ಅವರನ್ನು ಲತಾ ಅವರು ತಮ್ಮ ಸಹೋದರ 'ಯೂಸುಫ್ ಭಾಯಿ' ಎಂದು ಉಲ್ಲೇಖಿಸಿದ್ದರು.
'ಹೂವಿನ ಪರಿಮಳಕ್ಕೆ ಹೇಗೆ ಬಣ್ಣವಿಲ್ಲವೋ, ಹರಿವ ನೀರಿಗೆ ಹೇಗೆ ಕೊನೆಯೆಂಬುದು ಇಲ್ಲವೋ, ಸೂರ್ಯನ ಕಿರಣಗಳಿಗೆ ಹೇಗೆ ಧರ್ಮಗಳೆಂಬ ಭೇದಭಾವ ಇಲ್ಲವೋ ಹಾಗೆ ಲತಾ ಮಂಗೇಶ್ಕರ್ ಅವರ ಸ್ವರವು ಪ್ರಕೃತಿಯ ಪವಾಡ' ಎಂದು ದಿಲೀಪ್ ಕುಮಾರ್ ಅವರು ಉರ್ದುವಿನಲ್ಲಿ ಲತಾ ಮಂಗೇಶ್ಕರ್ ಅವರನ್ನು ಪರಿಚಯಿಸಿದ್ದರು. ಲತಾ ಅವರು ವೇದಿಕೆಗೆ ಆಗಮಿಸಿದಂತೆ ಭಾರಿ ಕರತಾಡನ ಪ್ರೇಕ್ಷಕರ ಕಡೆಯಿಂದ ಕೇಳಿಬಂದಿತ್ತು.
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸ್ಮರಣೆಯ ಭಾಗವಾಗಿ 'ನೆಹರೂ ಮೆಮೋರಿಯಲ್ ಫಂಡ್' ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಲತಾ ಮಂಗೇಶ್ಕರ್: 'ಬೆಳ್ಳನೆ ಬೆಳಗಾಯಿತು..' ಎಂದು ಹಾಡಿದ್ದ ಗಾನ ಕೋಗಿಲೆ
'ಮಧುಮತಿ' ಸಿನಿಮಾದಿಂದ 'ಆಜಾ ರೇ ಪರದೇಶಿ', 'ಪಾಕೀಝಾ' ಸಿನಿಮಾದಿಂದ 'ಇನ್ಹಿ ಲೋಗೋ ನೆ' ಮತ್ತು 'ಮಹಾಲ್' ಚಿತ್ರದಿಂದ 'ಆಯೇಗಾ ಆನೆವಾಲಾ' ಗೀತೆಗಳನ್ನು ಲೈವ್ ಶೋನಲ್ಲಿ ಹಾಡಿದ್ದರು. ಈ ಕಾರ್ಯಕ್ರಮದ ಸುಮಾರು 1,33,000 ಕ್ಕೂ ಹೆಚ್ಚು ರೆಕಾರ್ಡೆಡ್ ಕಾಪಿಗಳು ಮಾರಾಟವಾಗಿದ್ದವು.
1871ರಿಂದ ಆರಂಭಗೊಂಡಿರುವ ಹಾಲ್‌ನಲ್ಲಿ ವಿಶ್ವದ ಪ್ರಸಿದ್ಧ ಗಾಯಕರು, ನೃತ್ಯ ಕಲಾವಿದರು, ಕ್ರೀಡಾಪಟುಗಳು ಮತ್ತು ರಾಜಕಾರಣಿಗಳು ಈ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.