ಶುಕ್ರವಾರ, ಡಿಸೆಂಬರ್ 13, 2019
26 °C

ಲತಾ ದೀದಿ ಆರೋಗ್ಯ ಸ್ಥಿರ: ಊಹಾಪೋಹ ಹರಡದಿರಿ ಎಂದ ಕುಟುಂಬದ ಸದಸ್ಯರು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Lata Mangeshkar

ಮುಂಬೈ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಸುಧಾರಿಸುತ್ತಿದೆ. ಗಾಳಿಸುದ್ದಿಗೆ ದಯವಿಟ್ಟು ಕಿವಿಗೊಡದಿರಿ. ಅವರಿಗೆ ದೀರ್ಘಾಯುಷ್ಯ ಸಿಗಲೆಂದು ಪ್ರಾರ್ಥಿಸಿ ಎಂದು ಲತಾ ಮಂಗೇಶ್ಕರ್‌ ಕುಟುಂಬದ ಸದಸ್ಯರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಲತಾ ಮಂಗೇಶ್ಕರ್ ಅವರ ಟ್ವೀಟ್ ಹ್ಯಾಂಡಲ್‌ನಿಂದ ಶೇರ್ ಮಾಡಿರುವ ಟ್ವೀಟ್‌ನಲ್ಲಿಯೂ ‘ಲತಾ ದೀದಿ ಆರೋಗ್ಯ ಸುಧಾರಿಸುತ್ತಿದೆ. ನಿಮ್ಮೆಲ್ಲರ ಕಾಳಜಿ, ಪ್ರಾರ್ಥನೆಗಾಗಿ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಹೇಳಲಾಗಿದೆ.

ಚಿತ್ರ ನಿರ್ಮಾಪಕ ಮಧುರ್‌ ಭಂಡಾರ್‌ಕರ್‌ ಸಹ ‘ತಳಬುಡವಿಲ್ಲದ ಗಾಳಿಸುದ್ದಿಗಳನ್ನು ಹರಡಬೇಡಿ. ಲತಾ ದೀದಿ ಬೇಗ ಹುಷಾರಾಗಲೆಂದು ಪ್ರಾರ್ಥಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಲತಾ ಮಂಗೇಶ್ಕರ್‌ ಅವರ ಆರೋಗ್ಯ ಸುಧಾರಿಸುತ್ತಿರುವ ಸುದ್ದಿ ತಿಳಿದು ಸಾಕಷ್ಟು ಅಭಿಮಾನಿಗಳು ಖುಷಿ ಹಂಚಿಕೊಂಡಿದ್ದಾರೆ. ‘ಲತಾ ದೀದಿ ಬೇಗ ಹುಷಾರಾಗಲಿ, ಇನ್ನಷ್ಟು ವರ್ಷ ನಮ್ಮ ಜೊತೆಗೆ ಇರಲಿ’ ಎಂದು ಹಾರೈಸಿದ್ದಾರೆ.

ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದ ಕಾರಣ ಕಳೆದ ಸೋಮವಾರ ನಸುಕಿನಲ್ಲಿ ಲತಾ ಮಂಗೇಶ್ಕರ್ ಅವರನ್ನು ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ‘ಅವರ ಆರೋಗ್ಯ ಸುಧಾರಿಸುತ್ತಿದೆ. ಆದರೆ ಪೂರ್ಣ ಹುಷಾರಾಗಲು ಸಾಕಷ್ಟು ಸಮಯ ಬೇಕಾಗುತ್ತೆ. ಜ್ವರ ಮತ್ತು ಶ್ವಾಸಕೋಶ ಸೋಂಕಿನಿಂದ ಅವರು ಬಳಲುತ್ತಿದ್ದಾರೆ’ ಎಂದು ಆಸ್ಪತ್ರೆಯ ವಕ್ತಾರರು ಹೇಳಿದ್ದರು.

1942ರಿಂದ ಚಿತ್ರಗೀತೆಗಳಿಗೆ ದನಿಯಾಗಿರುವ ಲತಾ ಮಂಗೇಶ್ಕರ್‌ ಅವರಿಗೆ ಭಾರತ ರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳ ಗೌರವ ಸಂದಿದೆ. 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಅವರು ಹಾಡಿದ್ದಾರೆ.

ಶಬಾನಾ ಅಜ್ಮಿ, ಹೇಮಾ ಮಾಲಿನಿ ಸೇರಿದಂತೆ ಹಲವು ಬಾಲಿವುಡ್ ನಟ–ನಟಿಯರು ಲತಾ ಮಂಗೇಶ್ಕರ್ ಆರೋಗ್ಯ ಸುಧಾರಿಸಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದರು.

ಇನ್ನಷ್ಟು...

ಹಾಡನ್ನು ಚಿರಂತನಗೊಳಿಸಿದ ಲತಾ ಮಂಗೇಶ್ಕರ್ 

ಲತಾ ಮಂಗೇಶ್ಕರ್ ಅವರನ್ನು ಭೇಟಿಯಾದ ರಾಷ್ಟ್ರಪತಿ 

ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು