ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರಿಶಕ್ತಿ ಕಡೆಗೆ ಹೊರಳುನೋಟ

Last Updated 2 ಜುಲೈ 2020, 12:27 IST
ಅಕ್ಷರ ಗಾತ್ರ

ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್‌, ಕೆ. ಬಾಲಚಂದರ್‌ ತಮ್ಮ ಚಿತ್ರಗಳಲ್ಲಿ ಹೆಣ್ಣಿನ ಪಾತ್ರಗಳಿಗೆ ವಿಶೇಷ ಪ್ರಾಧಾನ್ಯ ನೀಡಿದ್ದಾರೆ. ಆದರೆ, ಇಂದಿನ ಬಹುತೇಕ ಸಿನಿಮಾಗಳಲ್ಲಿ ನಾಯಕಿಯ ಪಾತ್ರ ಆಟಕ್ಕುಂಟು; ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಧೈರ್ಯವಾಗಿ ನಿಂತರೆ ತನ್ನ ಬುದ್ಧಿವಂತಿಕೆಯಿಂದ ಸಮಾಜದಲ್ಲಿ ಏನನ್ನು ಬೇಕಾದರೂ ಜಯಿಸುವ ಶಕ್ತಿ ಹೆಣ್ಣಿಗಿದೆ. ಅದರ ತಳಹದಿ ಮೇಲೆಯೇ ‘ಲಾ’ ಚಿತ್ರದ ಕಥೆ ಹೆಣೆಯಲಾಗಿದೆ’

–ಇಷ್ಟನ್ನು ಹೇಳಿ ಕ್ಷಣಕಾಲ ಮೌನಕ್ಕೆ ಜಾರಿದರು ನಿರ್ದೇಶಕ ರಘು ಸಮರ್ಥ. ಅವರ ಮಾತಿನಲ್ಲಿ ತನ್ನ ಹೊಸ ಆಲೋಚನೆಯನ್ನು ಜನರಿಗೆ ತಲುಪಿಸುವ ಸುಳಿವು ಇತ್ತು. ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ಅವರು ಆ್ಯಕ್ಷನ್‌ ಕಟ್‌ ಹೇಳಿರುವ ‘ಲಾ’ ಚಿತ್ರ ಜುಲೈ 17ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಪ್ರಜ್ವಲ್‌ ದೇವರಾಜ್‌ ಅವರ ಪತ್ನಿ ರಾಗಿಣಿ ಚಂದ್ರನ್ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಕಥೆ, ಪಾತ್ರ ಪೋಷಣೆ, ಡೈಲಾಗ್‌ ಹಾಗೂ ಪರದೆ ಮೇಲಿನ ಚಿತ್ರಕಥೆಯ ನಿರೂಪಣೆಯು ಹೊಸತನದಿಂದ ಕೂಡಿರಬೇಕು ಎನ್ನುವ ಹಾದಿಯಲ್ಲಿದ್ದಾಗಲೇ ‘ಲಾ‘ ಕಥೆ ಅವರಿಗೆ ಹೊಳೆಯಿತಂತೆ.

ಈ ಸಿನಿಮಾ ಬಗ್ಗೆ ರಘು ಸಮರ್ಥ ವಿವರಿಸಿದ್ದು ಹೀಗೆ; ‘ಸ್ಮೈಲ್‌ ಪ್ಲೀಸ್‌’ ಚಿತ್ರದ ಬಳಿ ಶುರು ಮಾಡಿದ ಚಿತ್ರ ಇದು. ರೆಗ್ಯುಲರ್‌ ಫಾರ್ಮೆಟ್‌ನಿಂದ ಹೊರತಾದ ಸಿನಿಮಾ ಮಾಡಬೇಕೆಂದು ಹುಡುಕಾಟದಲ್ಲಿದ್ದಾಗ ಹುಟ್ಟಿದ್ದೇ ಈ ಕ್ರೈಮ್‌ ಥ್ರಿಲ್ಲರ್‌ ಕಥೆ. ಸಿನಿಮಾಗಳಲ್ಲಿ ನಾಯಕಿಯ ಪಾತ್ರಗಳ ಬಗ್ಗೆ ಒಂದು ರೀತಿಯ ಅವಜ್ಞೆ ಇದೆ. ಅದು ತಪ್ಪು ಅಥವಾ ಸರಿ ಎಂದು ನಾನು ಹೇಳುವುದಿಲ್ಲ. ಅದು ಅಂತಹ ಸಿನಿಮಾಗಳನ್ನು ನಿರ್ಮಿಸುವವರ ಮನೋಧರ್ಮವಷ್ಟೇ. ಅಂದಹಾಗೆ ಸಿನಿಮಾ ಅವರವರ ಅಭಿವ್ಯಕ್ತಿಯೂ ಹೌದು’. ‌

‘ಹೆಣ್ಣು ಎಂದಾಕ್ಷಣ ಆಕೆಯ ಮೇಲೆ ದೌರ್ಜನ್ಯ ನಡೆಯುತ್ತದೆ; ಆಕೆ ಅದನ್ನು ಸಹಿಸಿಕೊಂಡು ಬದುಕಬೇಕು, ಆಕೆ ಅಶಕ್ತಳು ಎಂಬ ಮನಸ್ಥಿತಿ ಸಮಾಜದಲ್ಲಿದೆ. ಆದರೆ, ಅವಳು ದೌರ್ಜನ್ಯದ ವಿರುದ್ಧ ತಿರುಗಿ ನಿಂತರೆ ಯಾವ ಮಟ್ಟಕ್ಕೆ ಧೈರ್ಯ ಪ್ರದರ್ಶನ ಮಾಡಬಹುದು ಎಂಬ ಬಗ್ಗೆ ನಮಗೆ ಅರಿವಿಲ್ಲ. ಚಿತ್ರದ ನಾಯಕಿ ಕಾನೂನು ಪದವೀಧರೆ. ಕಾನೂನು ಚೌಕಟ್ಟಿನಲ್ಲಿಯೇ ನ್ಯಾಯಕ್ಕಾಗಿ ಯಾವ ರೀತಿ ಹೋರಾಟ ನಡೆಸುತ್ತಾಳೆ ಎನ್ನುವುದೇ ಇದರ ಕಥಾಹಂದರ. ಆಕೆಯ ಹೋರಾಟದಲ್ಲಿ ವಿಶೇಷವಿದೆ. ಏತಕ್ಕಾಗಿ ಹೋರಾಟ ಮಾಡುತ್ತಾಳೆ ಎನ್ನುವುದೇ ಸಸ್ಪೆನ್ಸ್‌’ ಎಂದು ಸಿನಿಮಾದ ಕಥೆಯ ಬಗ್ಗೆ ಕುತೂಹಲ ಹೆಚ್ಚಿಸುತ್ತಾರೆ.

‘ಡೈರೆಕ್ಟರ್‌ ಸ್ಪೆಷಲ್‌’ ಚಿತ್ರಕ್ಕೆ ಕೋ–ಡೈರೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ನಿರ್ಮಾಪಕ ಎಂ. ಗೋವಿಂದ ಅವರ ಪರಿಚಯವಾಯಿಯಿತು. ಆಗ ಅವರಿಗೆ ‘ಲಾ’ ಚಿತ್ರದ ಕಥೆ ಹೇಳಿದರಂತೆ. ಅದೇ ವೇಳೆ ‘ಮಾಯಾಬಜಾರ್’ ಸಿನಿಮಾವೂ ಶುರುವಾಗಿತ್ತು. ಅವರ ಪರಿಚಯದಿಂದಲೇ ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ಸಿನಿಮಾ ಮಾಡುವಂತಾಯಿತಂತೆ. ‘ಪಿಆರ್‌ಕೆ ಪ್ರೊಡಕ್ಸನ್ಸ್‌ ಕನ್ನಡದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಪುನೀತ್‌ ರಾಜ್‌ಕುಮಾರ್‌ ಮತ್ತು ಅಶ್ವಿನಿ ರಾಜ್‌ಕುಮಾರ್‌ ಅವರಿಗೆ ಕಥೆ ಹೇಳಿದೆ. ಇಬ್ಬರೂ ಖುಷಿಪಟ್ಟು ಒಪ್ಪಿಗೆ ಸೂಚಿಸಿದರು’ ಎನ್ನುತ್ತಾರೆ.

‘ಮೈಸೂರು ಮತ್ತು ಬೆಂಗಳೂರಿನಲ್ಲಿ ಇದರ ಶೂಟಿಂಗ್‌ ನಡೆಸಲಾಗಿದೆ. ಅಚ್ಯುತ್‌ ಕುಮಾರ್‌, ‘ಮುಖ್ಯಮಂತ್ರಿ’ ಚಂದ್ರು, ಅವಿನಾಶ್‌, ಸುಧಾರಾಣಿ, ಕೃಷ್ಣ ಹೆಬ್ಬಾರ್‌, ನಟರಂಗ ರಾಜೇಶ್‌, ಮಂಡ್ಯ ರಮೇಶ್‌ ಹೀಗೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಪ್ರತಿಯೊಂದು ಪಾತ್ರಕ್ಕೂ ವಿಶೇಷತೆ ಇದೆ’ ಎಂದು ವಿವರಿಸುತ್ತಾರೆ.
ಈಗಾಗಲೇ, ಅವರು ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಸಿದ್ಧಪಡಿಸಿದ್ದಾರೆ. ಆದರೆ, ‘ಲಾ’ ಸಿನಿಮಾಗೆ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬ ಕುತೂಹಲ ಅವರಿಗಿದೆ. ‘ಈ ಚಿತ್ರದ ಫಲಿತಾಂಶ ನೋಡಿಕೊಂಡು ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ನಿರ್ಧರಿಸುತ್ತೇನೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT