ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಜೀವನ ಪಾತ್ರ' ಮುಗಿಸಿದ ಬಂಗಾಳಿ ನಟ ಸೌಮಿತ್ರ ಚಟರ್ಜಿ

Last Updated 15 ನವೆಂಬರ್ 2020, 12:01 IST
ಅಕ್ಷರ ಗಾತ್ರ

ಕೋಲ್ಕತ್ತ: ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಸಿದ್ಧ ಬಂಗಾಳಿ ನಟ ಸೌಮಿತ್ರ ಚಟರ್ಜಿ(85) ಅವರು ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು.

ಚಟರ್ಜಿ ಅವರಲ್ಲಿ ಕೋವಿಡ್‌ ದೃಢಪಟ್ಟಿತ್ತು. ಈ ಬಳಿಕ ಅ.6 ರಂದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದರು. ಆದರೆ, ಹಲವು ಕಾಯಿಲೆಗಳಿದ್ದರಿಂದ ಬಳಲುತ್ತಿದ್ದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ.

ಸೌಮಿತ್ರ ಚಟರ್ಜಿ ಅವರು ಭಾನುವಾರ ಮಧ್ಯಾಹ್ನ 12.15ಕ್ಕೆ ಬಿಲೆ ವ್ಯೂವ್‌ ಕ್ಲಿನಿಕ್‌ನಲ್ಲಿ ನಿಧನರಾದರು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಸತ್ಯಜಿತ್‌ ರೇ ನಿರ್ದೇಶನದ ಅಪೂರ್‌ ಸಂಸಾರ್‌ನಲ್ಲಿ ವಯಸ್ಕ ಅಪುವಿನ ಪಾತ್ರ ನೋಡಿದವರಿಗೆ ಸೌಮಿತ್ರ ಚಟರ್ಜಿಯ ಪ್ರತಿಭೆ ಕಣ್ಣಮುಂದೆ ಬರುತ್ತದೆ. ಅಪುವಿನ ಕಥೆಮುಂದುವರಿದ ಮೂರನೇ ಭಾಗವಿದು. ರೇ ಅವರ14 ಚಿತ್ರಗಳಲ್ಲಿ ಚಟರ್ಜಿ ಅವರು ನಟಿಸಿದ್ದಾರೆ.

‘ಅಭಿಜಾನ್‌’ (1962), ‘ಚಾರುಲತಾ’ (1964), ‘ಅರಣ್ಯೆರ್‌ ದಿನ್‌ ರಾತ್ರಿ’ (1964), ‘ಆಶಾನಿ ಸಂಕೇತ್’‌ (1972), ‘ಸೋನರ್‌ ಕೆಲ್ಲಾ’ (1974) ‘ಜೋಯ್‌ ಬಾಬಾ ಫೇಲುನಾಥ್‌’ (1978)ಸೇರಿದಂತೆ ಬಂಗಾಳಿ, ಹಿಂದಿಯಒಟ್ಟು 105ಚಿತ್ರಗಳಲ್ಲಿ ಚಟರ್ಜಿ ನಟಿಸಿದ್ದಾರೆ. ‘ಸ್ತ್ರೀ ಕಾ ಪಾತ್ರ’ ಅವರು ನಿರ್ದೇಶಿಸಿದ ಚಿತ್ರ. ಹೀಗೆ ಸೌಮಿತ್ರ ಚಟರ್ಜಿ (ಸೌಮಿತ್ರ ಚಟ್ಟೋಪಾಧ್ಯಾಯ)ಭಾರತೀಯ ಚಿತ್ರರಂಗದಲ್ಲಿ ಸಾಧನೆ ಮತ್ತು ಕೀರ್ತಿಯ ಶಿಖರವೇರಿದ ನಟ.

ಸಾಧನೆಗೆ ತಕ್ಕಂತೆ ಪ್ರಶಸ್ತಿ, ಪುರಸ್ಕಾರಗಳೂ ಅವರನ್ನು ಹುಡುಕಿಕೊಂಡು ಬಂದಿವೆ. 1999ರಲ್ಲಿ ಫ್ರಾನ್ಸ್‌ ಸರ್ಕಾರದಿಂದ ಆರ್ಡ್ರೆ ಡೆಸ್‌ ಆರ್ಟ್ಸ್‌ ಅಟ್‌ ಡೆಸ್‌ ಲೆಟ್ರೆಸ್‌ (1999) (l' Ordre des Arts et des Lettres), ಪದ್ಮಭೂಷಣ (2004), ಸಂಗೀತ ನಾಟಕ ಅಕಾಡೆಮಿಯಿಂದ ಟಾಗೋರ್‌ ರತ್ನ (2012), ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ (2012), ಫ್ರಾನ್ಸ್‌ ಸರ್ಕಾರದಿಂದ ‘ಲೀಜನ್‌ ದ ಹಾನರ್’‌ (2018) ಪುರಸ್ಕಾರಗಳು ಸಂದಿವೆ. ಇವುಗಳಲ್ಲದೇ ಮೂರು ರಾಷ್ಟ್ರಪ್ರಶಸ್ತಿ, ಬಂಗಾಳಿ ಚಲನಚಿತ್ರ ಪತ್ರಕರ್ತರ ಸಂಘದಿಂದ 8ಪ್ರಶಸ್ತಿಗಳು ಅವರಿಗೆ ಸಂದಿವೆ. ಅವರಿಗೆ ಪತ್ನಿ ದೀಪಾ ಚಟರ್ಜಿ, ಇಬ್ಬರು ಮಕ್ಕಳಿದ್ದಾರೆ.

ಅವರು ಈ ವರ್ಷ ನಟಿಸಿದ ಕೊನೆಯ ಚಿತ್ರ ಸ್ರೋಬ್ನೇರ್‌ ಧಾರಾ. ಅದರಲ್ಲಿ ಅಮಿತವ ಸರ್ಕಾರ್‌ ಪಾತ್ರ ನಿರ್ವಹಿಸಿದ ಚಟರ್ಜಿ ಸಾಧನೆಯ ನೆನಪುಗಳನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT