ಗುರುವಾರ , ಏಪ್ರಿಲ್ 2, 2020
19 °C

‘ದಾಸ’ನ ಬದುಕಿನ‌ ಏಳುಬೀಳು: ನಟ ದರ್ಶನ್ ತೂಗುದೀಪ್ ಬದುಕು ಸಾಗಿಬಂದ ಹಾದಿ

ಓಬಳೇಶ ಕೆ.ಎಚ್. Updated:

ಅಕ್ಷರ ಗಾತ್ರ : | |

ನಟ ದರ್ಶನ್ ಅಭಿಮಾನಿಗಳ ಪಾಲಿಗೆ ಅಚ್ಚುಮೆಚ್ಚಿನ ‘ದಾಸ’. ‘ಡಿ ಬಾಸ್’ ಮತ್ತು ‘ಬಾಕ್ಸ್ ಆಫೀಸ್ ಸುಲ್ತಾನ್’ ಎಂಬುದು ಅವರಿಗೆ ಅಭಿಮಾನಿಗಳು‌ ನೀಡಿರುವ ಮತ್ತೆರಡು ಬಿರುದುಗಳು.

‘ದಚ್ಚು’ ಹುಟ್ಟಿದ್ದು 1977ರ ಫೆ.16ರ ಶಿವರಾತ್ರಿಯಂದು. ಅಪ್ಪ ಹಿರಿಯ ನಟ ತೂಗುದೀಪ ಶ್ರೀನಿವಾಸ್. ತಾಯಿ ಮೀನಾ ತೂಗುದೀಪ. ಅವರಿಗೆ ದಿವ್ಯಾ ಮತ್ತು ದಿನಕರ್‌ ತೂಗುದೀಪ ಎಂಬ ಸಹೋದರಿ ಮತ್ತು ಸಹೋದರ ಇದ್ದಾರೆ. ವಿಜಯಲಕ್ಷ್ಮಿ ಜೊತೆಗೆ ದರ್ಶನ್ ವೈವಾಹಿಕ ಜೀವನಕ್ಕೆ ಅಡಿ‌ಯಿಟ್ಟಿದ್ದು 2003ರಲ್ಲಿ. ಈ‌ ದಂಪತಿಗೆ ವಿನೇಶ್ ಎಂಬ ಪುತ್ರ.

ದರ್ಶನ್ ಜೀವನ ಬಣ್ಣದಲೋಕ ಪ್ರವೇಶಿಸುವ‌ ಮೊದಲು ಸಾಕಷ್ಟು ಏರಿಳಿತ‌‌‌‌ ಕಂಡಿದೆ. ಅಪ್ಪ ತೂಗುದೀಪ ಶ್ರೀನಿವಾಸ್ ಹೃದಯಾಘಾತದಿಂದ‌ ಸತ್ತಾಗ ಅವರ ಕುಟುಂಬ ಅಕ್ಷರಶಃ ಸಂಕಷ್ಟದ‌‌ ಕುಲುಮೆಗೆ‌ ಬಿದ್ದಿತ್ತು. ಆಗ ಇಡೀ ಕುಟುಂಬದ ಜವಾಬ್ದಾರಿ ದರ್ಶನ್ ಅವರ ಹೆಗಲಿಗೇರಿತು. ಹೋಟೆಲ್‌ಗಳಲ್ಲಿ ಕೆಲಸ ಮಾಡಿದರು. ಹಸು ಸಾಕಿ ಹೋಟೆಲ್‌ಗಳಿಗೆ ಹಾಲು ಪೂರೈಸಿ‌ ಬದುಕು‌ ಕಟ್ಟಿಕೊಳ್ಳಲು ಹರಸಾಹಸಪಟ್ಟರು.

ಹಾಗಾಗಿಯೇ, ಅವರು ಉನ್ನತ ಶಿಕ್ಷಣದಿಂದಲೂ ವಂಚಿತರಾದರು. ಕೊನೆಗೆ, ರಂಗ ಶಿಕ್ಷಣ ಪಡೆಯಲು‌‌‌ ನೀನಾಸಂಗೆ ಸೇರಿದರು. ಇದು ಅವರ ವೃತ್ತಿಬದುಕಿಗೆ‌ ಮೊದಲ ಅಡಿಗಲ್ಲಾಯಿತು.

ಸಿನಿಮಾಗಳಲ್ಲಿ ನಟನೆ ಅರಸಿಕೊಂಡು‌ ಬೆಂಗಳೂರಿಗೆ ಬಂದ ಅವರು ‌ಹೆಜ್ಜೆ‌ಹೆಜ್ಜೆಗೂ ಅವಮಾನ‌‌ ಎದುರಿಸಿದ್ದರು. ಮೊದಲು ಅವರು ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದ್ದು ಲೈಟ್ ಬಾಯ್ ಆಗಿ.‌‌ ಹಲವು ಸಿನಿಮಾಗಳಿಗೆ ಅವರು ಲೈಟ್ ಬಾಯ್ ದುಡಿದಿದ್ದಾರೆ.

ರಕ್ಷಿತಾ ಅಪ್ಪ, ಗೌರಿಶಂಕರ್ ಬಳಿ‌‌‌ ಕೆಲಸ

ನಟಿ ರಕ್ಷಿತಾ ಅವರ ತಂದೆ‌ ಸಿನಿಮಾ ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್ ಅವರ ಬಳಿ‌‌ ಸಹಾಯಕ ಛಾಯಾಗ್ರಾಹಕರಾಗಿ ದುಡಿದರು. ಈ‌ ನಡುವೆ ಅವರು ಮೈಸೂರಿನ‌ ಜಗನ್ ಮೋಹನ ಪ್ಯಾಲೇಸ್‌ನಲ್ಲಿ‌‌ ಮಾಡೆಲಿಂಗ್ ಕೂಡ ಮಾಡುತ್ತಿದ್ದರು. ಎಸ್. ನಾರಾಯಣ ಅವರ ಬಳಿ ನಟನೆ ಆರಂಭಿಸಿದರು. ಅವರು‌ ನಟಿಸಿದ‌ ಮೊದಲ‌ ಧಾರಾವಾಹಿ ‘ಡಿಟೆಕ್ಟಿವ್‌ ಚಂದ್ರಕಾಂತ್’. ನಾರಾಯಣ್ ನಿರ್ದೇಶನದ ‘ಅಂಬಿಕಾ’ ಧಾರಾವಾಹಿ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಹಲವು ಕಾರ್ಟೂನ್ಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಧ್ವನಿ ನೀಡಿರುವ ಅವರು ಐದು ಕನ್ನಡ ಚಿತ್ರಗಳಲ್ಲಿ ಸಹನಟನಾಗಿಯೂ ನಟಿಸಿದ್ದಾರೆ.

‘ಮೆಜೆಸ್ಟಿಕ್’ ಸಂಭ್ರಮ

ದರ್ಶನ್ ಅವರ ವೃತ್ತಿಬದುಕಿಗೆ ಹೊಸ‌ ತಿರುವು ನೀಡಿದ ಚಿತ್ರ ‘ಮೆಜೆಸ್ಟಿಕ್’. ಪಿ.ಎನ್.‌ ಸತ್ಯ ‌ನಿರ್ದೇಶನದ‌‌ ಈ‌ ಸಿನಿಮಾದ ಶೂಟಿಂಗ್ ಶುರುವಾಗಿದ್ದು 2001ರಲ್ಲಿ. 2002ರ ಫೆ. 8ರಂದು ತೆರೆಕಂಡ‌‌ ಈ ಸಿನಿಮಾ ದಚ್ಚು ಅವರ‌ ಅದೃಷ್ಟವನ್ನು ಬದಲಾಯಿಸಿತು. ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರವೇ ಶತದಿನೋತ್ಸವ ಆಚರಿಸಿತು.

ರಕ್ಷಿತಾ‌ ಜೊತೆಗೆ‌ ನಟಿಸಿದ ‘ಕಲಾಸಿಪಾಳ್ಯ’ ಸಹ ಸೂಪರ್‌‌ಹಿಟ್ ಆಯಿತು. ಗಜ, ನನ್ನ ಪ್ರೀತಿಯ ರಾಮು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. 2012ರಲ್ಲಿ ತೆರೆಕಂಡ ನಾಗಣ್ಣ‌ ನಿರ್ದೇಶನದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ದರ್ಶನ್ ಅವರ ಅಭಿನಯಕ್ಕೆ‌ ಕನ್ನಡಿ‌ ಹಿಡಿಯಿತು. ಪೌರಾಣಿಕ ಚಿತ್ರ ‘ಮುನಿರತ್ನ‌ ಕುರುಕ್ಷೇತ್ರ’ ದರ್ಶನ್ ನಟನೆಯ 50ನೇ ಚಿತ್ರ.


ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಅಭಿಮಾನಿ

ಪ್ರಸ್ತುತ ತರುಣ್‌ ಸುಧೀರ್‌ ನಿರ್ದೇಶನದ ‘ರಾಬರ್ಟ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ರಾಜ ವೀರ‌ ಮದಕರಿನಾಯಕ’ ಚಿತ್ರದಲ್ಲಿ ‌ಮದಕರಿ‌ ನಾಯಕನಾಗಿ‌ ದರ್ಶನ್ ‌ನಟಿಸುತ್ತಿದ್ದಾರೆ. ಬಿ.ಎಲ್. ವೇಣು ಅವರ ಕಾದಂಬರಿ ಆಧಾರಿತ ಚಿತ್ರ ಇದು.

ತೂಗುದೀಪ‌ ಪ್ರೊಡಕ್ಷನ್ ಮೂಲಕ ಹಲವು ಚಿತ್ರಗಳನ್ನು ಅವರು‌‌ ನಿರ್ಮಿಸಿದ್ದಾರೆ.‌ ಜೊತೆಗೆ ವಿತರಣೆ‌ ಕೂಡ‌ ಮಾಡಿದ್ದಾರೆ. ದರ್ಶನ್‌‌‌ ಪ್ರಾಣಿಪ್ರಿಯರು ಹೌದು. ‌ಕುದುರೆ ಸವಾರಿ‌ ಮಾಡುವುದೆಂದರೆ ಅವರಿಗೆ ಬಹುಪ್ರೀತಿ. ಮೈಸೂರು ಬಳಿಯ ಅವರ ಫಾರ್ಮ್ ಹೌಸ್‌ನಲ್ಲಿ‌‌ ನೂರಾರು ಪ್ರಾಣಿ-ಪಕ್ಷಿಗಳನ್ನು ಸಾಕಿದ್ದಾರೆ.

ಮೈಸೂರಿನ ಮೃಗಾಲಯದಲ್ಲಿ ಹುಲಿ, ಆನೆಯನ್ನು ದತ್ತು ಸ್ವೀಕರಿಸಿದ್ದಾರೆ. 2018ರಲ್ಲಿ ಅವರು ಅರಣ್ಯ ಇಲಾಖೆಯ ರಾಯಭಾರಿಯಾಗಿಯೂ‌ ಸೇವೆ ಸಲ್ಲಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು