ಮಂಗಳವಾರ, ಜುಲೈ 27, 2021
26 °C

ಲಿಖಿತ್‌ ಶೆಟ್ಟಿಯ ಕಾಮಿಡಿ ಪ್ಯಾಕ್

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

‘ನಾನು ಮೊದಲಿಗೆ ಕ್ಯಾಮೆರಾ ಎದುರಿಸಿದ್ದು ಟಿ.ವಿ. ನಿರೂಪಕನಾಗಿಯೇ. ಬಳಿಕ ಬೆಳ್ಳಿತೆರೆ ಪ್ರವೇಶಿಸಲು ಹಲವು ವರ್ಷಗಳೇ ಬೇಕಾಯಿತು. ಪ್ರತಿಫಲ ಸಿಗಲು ಎಲ್ಲರೂ ತಾಳ್ಮೆಯಿಂದ ಕಾಯಬೇಕು’ –ಹೀಗೆಂದ ನಟ ಲಿಖಿತ್‌ ಶೆಟ್ಟಿ ಅವರ ಮಾತಿನಲ್ಲಿ ಪಿಆರ್‌ಕೆ ಪ್ರೊಡಕ್ಷನ್‌ನ ಹೊಸ ಸಿನಿಮಾ ‘ಫ್ಯಾಮಿಲಿ ಪ್ಯಾಕ್‌’ ತನ್ನ ವೃತ್ತಿಬದುಕಿಗೆ ಹೊಸ ತಿರುವು ನೀಡಲಿದೆ ಎಂಬ ಖಚಿತತೆ ಇತ್ತು.

ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್ ರೋಗದ ಸುತ್ತ ಹೆಣೆದ ‘ಸಂಕಷ್ಟಕರ ಗಣಪತಿ’ ಚಿತ್ರದಲ್ಲಿ ಒಂದಾಗಿದ್ದ ನಿರ್ದೇಶಕ ಎಸ್‌. ಅರ್ಜುನ್‌ ಕುಮಾರ್‌ ಮತ್ತು ಲಿಖಿತ್‌ ಶೆಟ್ಟಿ ಜೋಡಿ ಈಗ ‘ಫ್ಯಾಮಿಲಿ ಪ್ಯಾಕ್‌’ ಚಿತ್ರದ ಮೂಲಕ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಲು ತಯಾರಿಯಲ್ಲಿ ಮುಳುಗಿದೆ. ಲಾಕ್‌ಡೌನ್‌ ಮುಗಿದ ತಕ್ಷಣವೇ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಸಿನಿಮಾದ ಶೂಟಿಂಗ್‌ ಆರಂಭಿಸುವುದು ಚಿತ್ರತಂಡ ಇರಾದೆ.

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ಅವಕಾಶ ಸಿಕ್ಕಿದ ಬಗೆಯನ್ನು ಲಿಖಿತ್‌ ವಿವರಿಸುವುದು ಹೀಗೆ; ‘ಸಂಕಷ್ಟಕರ ಗಣಪತಿ ಚಿತ್ರದ ಆಡಿಯೊ ಬಿಡುಗಡೆ ಮಾಡಿದ್ದು ನಟ ಪುನೀತ್‌ ರಾಜ್‌ಕುಮಾರ್‌ ಅವರೇ. ನಮ್ಮ ತಂಡದ ಕೆಲಸ ಬಗ್ಗೆ ಅವರಿಗೆ ಗೊತ್ತಿತ್ತು. ಮೊದಲಿಗೆ ನಾನೇ ಅವರ ಬಳಿಗೆ ಹೋಗಿ ಕಥೆ ಹೇಳಿದೆ. ಬಳಿಕ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕಥೆ ಕೇಳಿದರು. ಬಳಿಕ ಇಬ್ಬರೊಟ್ಟಿಗೆ ಚರ್ಚಿಸಿದೆ. ಕೊನೆಗೆ ಇಬ್ಬರಿಂದಲೂ ಹಸಿರು ನಿಶಾನೆ ಸಿಕ್ಕಿತು. ಈಗ ಶೂಟಿಂಗ್‌ಗೆ ಸಿದ್ಧರಾಗಿದ್ದೇವೆ’.

‘ಸಿನಿಮಾ ಶುರುವಾದಾಗ ನನ್ನ ಪಾತ್ರ ಶಾಂತವಾಗಿಯೇ ಇರುತ್ತದೆ. ರಂಗಾಯಣ ರಘು ಅವರ ಪರಿಚಯವಾದಾಗ ಅದಕ್ಕೊಂದು ಹೊಸ ಸ್ವರೂಪ ಸಿಗುತ್ತದೆ. ಪರದೆ ಮೇಲೆ ಅದರ ತೀವ್ರತೆ ಹೆಚ್ಚಾಗುತ್ತದೆ. ಅಂದಹಾಗೆ ನಾಯಕಿ ಅಮೃತಾ ಅಯ್ಯಂಗಾರ್‌ ಮತ್ತು ನಾನು ಕಾಲೇಜಿನ ಸಹಪಾಠಿಗಳಾಗಿರುತ್ತೇವೆ. ಇಬ್ಬರ ಪ್ರೀತಿಗೂ ಸೇತುವೆ ಕಟ್ಟುವುದೇ ರಂಗಾಯಣ ರಘು ಕೆಲಸ’ ಎಂದು ತಮ್ಮ ಪಾತ್ರ ಕುರಿತು ವಿವರಿಸುತ್ತಾರೆ.

ಲಿಖಿತ್‌ ನಟಿಸಿದ್ದ ಕನ್ನಡದ ಮೊದಲ ಚಿತ್ರ ‘ಸಂಕಷ್ಟಕರ ಗಣಪತಿ’ ಮತ್ತು ಈ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆಯಂತೆ. ‘ಅರ್ಜುನ್‌ ಮತ್ತು ನಾನು ಒಟ್ಟಾಗಿಯೇ ಕುಳಿತು ಸ್ಕ್ರಿಪ್ಟ್‌ ಹೆಣೆದಿದ್ದೇವೆ. ಇದರ ಕಂಟೆಂಟ್‌ ಸಂಪೂರ್ಣ ಭಿನ್ನವಾಗಿದೆ. ಹೊಸತನದಿಂದ ಕೂಡಿದೆ. ಇದರಲ್ಲಿ ಕಾಮಿಡಿಗೆ ಹೆಚ್ಚಿನ ಪ್ರಾಧಾನ್ಯ ಸಿಕ್ಕಿದೆ. ನಾನೇ ಈ ಸ್ಕ್ರಿಪ್ಟ್‌ನಲ್ಲಿ ತೊಡಗಿಸಿಕೊಂಡಿರುವುದರಿಂದ ಪಾತ್ರಕ್ಕಾಗಿ ಹೆಚ್ಚಿನ ತಯಾರಿಯ ಅಗತ್ಯವಿರಲಿಲ್ಲ. ಪ್ರತಿ ದೃಶ್ಯದಲ್ಲಿ ಏನಾಗುತ್ತದೆ ಎಂಬುದು ನನಗೂ ಗೊತ್ತಿದೆ. ಅದು ನನ್ನ ನಟನೆಗೂ ಸಹಕಾರಿಯಾಗಲಿದೆ’ ಎಂದು ವಿವರಿಸುತ್ತಾರೆ ಅವರು.

ಬೆಂಗಳೂರಿನಲ್ಲಿಯೇ ‘ಫ್ಯಾಮಿಲಿ ಪ್ಯಾಕ್‌’ ಚಿತ್ರದ ಶೂಟಿಂಗ್‌ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಅಂದಹಾಗೆ ಲಿಖಿತ್‌ ಅವರು ಅನಿಲ್‌ ಮೆರವಣಿಗೆ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಜೊತೆಗೆ, ಇನ್ನೊಂದು ಸಿನಿಮಾದ ಮಾತುಕತೆಯೂ ನಡೆದಿದೆಯಂತೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು