‘ಲಂಬೋದರ’ಮಾರ್ಚ್‌ 29ಕ್ಕೆ

ಶುಕ್ರವಾರ, ಏಪ್ರಿಲ್ 26, 2019
34 °C

‘ಲಂಬೋದರ’ಮಾರ್ಚ್‌ 29ಕ್ಕೆ

Published:
Updated:
Prajavani

ಲಂಡನ್‌ ವಾಸಿ ಲಂಬೋದರ ಕಳೆದ ಒಂದು ವರ್ಷದಿಂದ ‘ಚಂದನವನ’ದಲ್ಲಿ ಸದ್ದು ಮಾಡುತ್ತ ಇದ್ದಾನೆ. ಕನ್ನಡದ ಸಿನಿಮಾ ವೀಕ್ಷಕರ ಎದುರು ಯಾವಾಗ ಬರುತ್ತಾನೆ ಈತ ಎಂಬ ಪ್ರಶ್ನೆ ಇತ್ತು. ಈಗ ಆ ಪ್ರಶ್ನೆಗೆ ಉತ್ತರ ಕೊಟ್ಟಿರುವ ಲಂಬೋದರ, ಮಾರ್ಚ್‌ 29ರಂದು ಬರುವುದಾಗಿ ಮಾತು ಕೊಟ್ಟಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ತನ್ನ ಟ್ರೇಲರ್‌ ಬಿಡುಗಡೆ ಮಾಡಿದ್ದಾನೆ.

ಈ ಸುದ್ದಿ ‘Londonalli ಲಂಬೋದರ’ ಚಿತ್ರದ್ದು. ಚಿತ್ರದ ಬಿಡುಗಡೆಗೂ ಮೊದಲು ಟ್ರೇಲರ್‌ ಬಿಡುಗಡೆ ಮಾಡಿ, ಸಿನಿಮಾ ಬಗ್ಗೆ ಒಂದಿಷ್ಟು ಮಾಹಿತಿ ನೀಡಲು ಸಿನಿತಂಡ ಸುದ್ದಿಗೋಷ್ಠಿ ಕರೆದಿತ್ತು. ಟ್ರೇಲರ್‌ ಬಿಡುಗಡೆ ಮಾಡಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಷ್ಟ್ರು (!) ರಿಷಬ್ ಶೆಟ್ಟಿ ಅವರನ್ನು ಆಹ್ವಾನಿಸಿತ್ತು.

ಟ್ರೇಲರ್‌ ಬಿಡುಗಡೆ ಮಾಡಿದ ರಿಷಬ್, ‘ಇದನ್ನು ಕೆಲವು ದಿನಗಳ ಹಿಂದೆಯೇ ವೀಕ್ಷಿಸಿದ್ದೆ. ಚಿತ್ರವನ್ನು ಲಂಡನ್‌ನಲ್ಲಿ ಚಿತ್ರೀಕರಿಸಿರುವುದು ನಿಜಕ್ಕೂ ದೊಡ್ಡ ಕೆಲಸ. ಅನುಭವಿ ನಿರ್ದೇಶಕರ ಸಿನಿಮಾ ಇದ್ದಂತೆ ಕಾಣುತ್ತಿದೆ ಇದು’ ಎಂದು ಮೆಚ್ಚಿಕೊಂಡರು. ನಂತರ ಸಿನಿಮಾ ತಂಡದವರಿಗೆ ಒಂದೆರಡು ಕಿವಿಮಾತು ಕೂಡ ಹೇಳಿದರು.

‘ಇದು ನಗರವಾಸಿ ವೀಕ್ಷಕರಿಗೆ ಹೆಚ್ಚು ತಲುಪುತ್ತದೆ. ಸಿನಿಮಾದಲ್ಲಿ ಒಂದಿಷ್ಟು ಥ್ರಿಲ್ಲರ್ ಅಂಶಗಳೂ ಇರುವಂತೆ ಕಾಣುತ್ತಿದೆ. ಕನ್ನಡದ ಹಲವು ಸಿನಿಮಾಗಳು ಪ್ರಚಾರ ಕಾರ್ಯದಲ್ಲಿ ಸೋಲುತ್ತಿವೆ. ಇಂತಹ ಸಿನಿಮಾಗಳ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ತಲುಪಿರಬೇಕು. ಆಗ ಮಾತ್ರ ಅವರು ಚಿತ್ರಮಂದಿರಗಳತ್ತ ಬರುತ್ತಾರೆ. ಈ ಸಿನಿಮಾ ಬಗ್ಗೆ ಇಷ್ಟು ಹೊತ್ತಿಗೆ ಇನ್ನಷ್ಟು ಪ್ರಚಾರ ಆಗಿರಬೇಕಿತ್ತು’ ಎಂದರು ರಿಷಬ್.

ಚಿತ್ರದ ನಾಯಕ ಸಂತೋಷ್ ಅವರಿಗೆ ಶಾಲೆ ಮತ್ತು ಕಾಲೇಜಿನಲ್ಲಿ ಕಲಿಯಲು ಸಾಧ್ಯವಾಗದ್ದನ್ನು ಈ ಸಿನಿಮಾದಿಂದಾಗಿ ಕಲಿಯಲು ಸಾಧ್ಯವಾಯಿತಂತೆ. ‘ನಾವು ಆಯ್ಕೆ ಮಾಡಿಕೊಂಡ ಎಲ್ಲ ಲೋಕೇಷನ್‌ಗಳೂ ಚೆನ್ನಾಗಿವೆ. ಇದು ಹಾಸ್ಯಮಯ ಸಿನಿಮಾ. ಆರಂಭದಿಂದ ಅಂತ್ಯದವರೆಗೂ ಇದರಲ್ಲಿ ಹಾಸ್ಯ ಕಾಣಿಸುತ್ತದೆ’ ಎಂದರು ಸಂತೋಷ್. ಅವರಿಗೆ ಎಲ್ಲ ಕಡೆಯೂ ಲಂಬೋದರನಂತೆ ವರ್ತಿಸಲು ನಿರ್ದೇಶಕ ರಾಜ್ ಸೂರ್ಯ ಸೂಚಿಸಿದ್ದಾರಂತೆ.

ನಾಯಕಿ ಶ್ರುತಿ ಪ್ರಕಾಶ್ ಅವರದ್ದು ಇದರಲ್ಲಿ ರಶ್ಮಿ ಎನ್ನುವ ಪಾತ್ರ. ಆಕೆ ಸಿಕ್ಕಾಪಟ್ಟೆ ಪ್ರ್ಯಾಕ್ಟಿಕಲ್‌ ಹುಡುಗಿ. ರಾಜ್‌ ಸೂರ್ಯ ಅವರು ಮೈಕ್‌ ಕೈಗೆತ್ತಿಕೊಂಡರಾದರೂ ಹೆಚ್ಚೇನೂ ಮಾತನಾಡಲಿಲ್ಲ. ‘ಸಿನಿಮಾವನ್ನು ಜನ ವೀಕ್ಷಿಸಬೇಕು’ ಎಂದಷ್ಟೇ ಹೇಳಿದರು.

ಚಿತ್ರದಲ್ಲಿ ಐದು ಹಾಡುಗಳಿವೆ. ಸಿಂಪಲ್ ಸುನಿ, ವಾಸುಕಿ ವೈಭವ್, ಜಯಂತ ಕಾಯ್ಕಿಣಿ ಅವರೆಲ್ಲ ಹಾಡುಗಳನ್ನು ಬರೆದಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿದವರು ಪ್ರಣವ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !