‘ಲೌಡ್‌ ಸ್ಪೀಕರ್’ ಹಿಡಿದ ಅನುಷಾ

7

‘ಲೌಡ್‌ ಸ್ಪೀಕರ್’ ಹಿಡಿದ ಅನುಷಾ

Published:
Updated:
Deccan Herald

‘ಧಾರಾವಾಹಿಯಲ್ಲಿ ಪ್ರತಿದಿನವೂ ನಮ್ಮ ತಪ್ಪು ತಿದ್ದಿಕೊಳ್ಳಲು ಸಮಯ ಸಿಗುತ್ತದೆ. ಸಿನಿಮಾದಲ್ಲಿ ಒಂದೇ ದಿನಕ್ಕೆ ಪ್ರೇಕ್ಷಕರು ನಮ್ಮ ಭವಿಷ್ಯ ಬರೆಯುತ್ತಾರೆ’ ಎಂದು ವೃತ್ತಿಬದುಕಿನ ಕಥನ ಶುರುವಿಟ್ಟುಕೊಂಡರು ನಟಿ ಅನುಷಾ.

ಅನುಷಾ ಕೊಡಗಿನವರು. ಎಂ.ಬಿ.ಎ ಪದವಿ ಪಡೆದಿದ್ದಾರೆ. ಬಾಲ್ಯದಿಂದಲೇ ಬಣ್ಣದ ಜಗತ್ತು ಪ್ರವೇಶಿಸುವ ಬಗ್ಗೆ ಕನಸು ಕಂಡವರು. ಅದಕ್ಕೆ ತಕ್ಕಂತೆಯೇ ತರಬೇತಿ ಪಡೆದು ಮೊದಲಿಗೆ ಕಿರುತೆರೆಗೆ ಕಾಲಿಟ್ಟರು. ‘ಶ್ರೀಮಾನ್‌ ಶ್ರೀಮತಿ’ ಧಾರಾವಾಹಿಯ ‘ಮಧುರ’ ಪಾತ್ರದ ಮೂಲಕ ಜನರ ಮನದಲ್ಲಿ ಗಟ್ಟಿಯಾಗಿ ಉಳಿದ ಹೆಮ್ಮೆ ಅವರಿಗಿದೆ. ಕಿರುತೆರೆಯಲ್ಲಿನ ಅವರ ಮನೋಜ್ಞ ಅಭಿನಯವೇ ಬೆಳ್ಳಿತೆರೆಯ ಪ್ರವೇಶಕ್ಕೂ ಬಾಗಿಲು ತೆರೆಯಿತು. 

ಕಾಲೇಜು ಹಂತದಲ್ಲಿಯೇ ಅವರು ಮಾಡೆಲಿಂಗ್‌ ಕ್ಷೇತ್ರದ ಸೆಳೆತಕ್ಕೆ ಸಿಲುಕಿದರು. ಓದಿನ ಜೊತೆಗೆ ಸಂಗೀತ ನಿರ್ದೇಶಕ ಹಂಸಲೇಖ ಅವರ ದೇಸಿ ಶಾಲೆಯಲ್ಲಿ ನೃತ್ಯದ ಅಭ್ಯಾಸವನ್ನೂ ಮಾಡತೊಡಗಿದರು. ಮಾಲೂರು ಶ್ರೀನಿವಾಸ್‌ ಬಳಿ ಸಿನಿಮಾಕ್ಕೆ ಅಗತ್ಯವಿರುವ ನೃತ್ಯ ಕಲಿತಿರುವ ಅವರು, 2014ರ ‘ಮಿಸ್‌ ಸೌತ್‌ ಇಂಡಿಯಾ’ ಸ್ಪರ್ಧೆಯ ವಿಜೇತೆಯೂ ಹೌದು.

ಈ ಸ್ಪರ್ಧೆಯು ಚಿತ್ರರಂಗ ಪ್ರವೇಶಿಸುವ ಅವರ ಕನಸಿಗೆ ವೇದಿಕೆಯಾಯಿತು. ನಿರ್ದೇಶಕ ಶಶಾಂಕ್‌ ‘ಕೃಷ್ಣಲೀಲಾ’ ಚಿತ್ರದಲ್ಲಿ ನಟನೆಗೆ ಅವಕಾಶ ಕಲ್ಪಿಸಿದರು. ಬಳಿಕ ‘ಜಲ್ಸಾ’ ಚಿತ್ರದ ನಾಯಕಿಯಾಗಿ ನಟಿಸಿದರು. ಅನುಷಾ ನಾಯಕಿಯಾಗಿ ನಟಿಸಿರುವ ‘ಲೌಡ್‌ ಸ್ಪೀಕರ್’ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಕಿರುತೆರೆಯಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ ಅವರು, ಇದರಲ್ಲಿ ಪತಿಯ ಪ್ರೀತಿಗಾಗಿ ಹಂಬಲಿಸುವ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಚಂದನವನದಲ್ಲೂ ಗಟ್ಟಿಯಾಗಿ ನೆಲೆಯೂರಲು ಲೌಡ್‌ ಸ್ಪೀಕರ್‌ ಹಿಡಿದು ನಿಂತಿದ್ದಾರೆ. 

‘ಪ್ರೇಕ್ಷಕರನ್ನು ನಗಿಸುವುದು ಇಷ್ಟ. ಅಳಿಸುವುದು ಕಷ್ಟ. ‘ಶ್ರೀಮಾನ್ ಶ್ರೀಮತಿ’ ಧಾರಾವಾಹಿಯಲ್ಲಿ ನಗಿಸುವುದು ನನ್ನ ಕಾಯಕವಾಗಿತ್ತು. ಈ ಚಿತ್ರದಲ್ಲಿ ತದ್ವಿರುದ್ಧದ ಪಾತ್ರ. ನಾನು ಗಂಡ ಪ್ರೀತಿಗಾಗಿ ಹಂಬಲಿಸುತ್ತೇನೆ. ಆದರೆ, ಅದು ಸಿಗುವುದಿಲ್ಲ. ನನಗಿದು ಸವಾಲಿನ ಪಾತ್ರ. ಜೊತೆಗೆ, ಸಾಕಷ್ಟು ಸಾಮರ್ಥ್ಯವನ್ನೂ ಬೇಡುತ್ತದೆ. ಚಿತ್ರದಲ್ಲಿ ನನ್ನನ್ನು ನೋಡಿದ ಪ್ರೇಕ್ಷಕರು ಖಂಡಿತ ಮರುಕಪಡುವುದು ನಿಶ್ಚಿತ’ ಎಂದು ವಿವರಿಸುತ್ತಾರೆ.

ಕಿರುತೆರೆ ಮತ್ತು ಹಿರಿತೆರೆ ನಡುವೆ ಅಷ್ಟೇನು ವ್ಯತ್ಯಾಸವಿಲ್ಲ ಎನ್ನುವುದು ಅವರ ಅನುಭವದ ಮಾತು. ‘ಧಾರಾವಾಹಿಯಲ್ಲಿ ಭಾವನಾತ್ಮಕ ಸನ್ನಿವೇಶಗಳೇ ಮೇಳೈಸಿರುತ್ತವೆ. ಪಾತ್ರದಲ್ಲಿ ಏಕತಾನತೆ ಇರುತ್ತದೆ. ಆದರೆ, ನಾನು ನಟಿಸಿದ ಧಾರಾವಾಹಿಯು ಕೊಂಚ ಭಿನ್ನವಾಗಿತ್ತು. ಪ್ರತಿ ಸಂಚಿಕೆಯಲ್ಲೂ ನೋಡುಗರಿಗೆ ಹೊಸತನ ನೀಡುವ ಸವಾಲಿತ್ತು. ಅದು ಸಿನಿಮಾ ಮಾದರಿಯಲ್ಲಿಯೇ ಮೂಡಿಬಂತು. ಹಾಗಾಗಿ, ನನಗೆ ಧಾರಾವಾಹಿ ಮತ್ತು ಸಿನಿಮಾದ ನಡುವೆ ಅಷ್ಟು ವ್ಯತ್ಯಾಸವಿಲ್ಲ ಎನಿಸುತ್ತದೆ’ ಎನ್ನುತ್ತಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಡಾನ್ಸ್‌ ಕರ್ನಾಟಕ ಡಾನ್ಸ್‌ ಫ್ಯಾಮಿಲಿ ವಾರ್‌’ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು, ಅವರಿಗೆ ಖುಷಿ ಕೊಟ್ಟಿದೆಯಂತೆ. ಈಗ ಅವರು ‘ಡಾನ್ಸ್‌ ಕರ್ನಾಟಕ ಡಾನ್ಸ್‌ ಲಿಟ್ಲ್‌ ಮಾಸ್ಟರ್‌’ ಸ್ಪರ್ಧೆಯ ತೀರ್ಪುಗಾರ ಮಂಡಳಿಯ ಸದಸ್ಯೆಯಾಗಿದ್ದಾರೆ. 

ಹೊಸ ಧಾರಾವಾಹಿಗಳಲ್ಲಿ ನಟಿಸಲು ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ಆದರೆ, ರಿಯಾಲಿಟಿ ಶೋನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ, ಸಮಯದ ಹೊಂದಾಣಿಕೆಯ ಸಮಸ್ಯೆ ತಲೆದೋರಿದೆಯಂತೆ. ‘ಒಮ್ಮೆ ಧಾರಾವಾಹಿಯ ಪಾತ್ರಕ್ಕೆ ಒಪ್ಪಿಕೊಂಡರೆ ಸಿನಿಮಾದಲ್ಲಿ ಅವಕಾಶ ಸಿಕ್ಕಿದರೂ ನಟಿಸುವುದು ಕಷ್ಟ. ಹಾಗಾಗಿ, ಹೊಸ ಧಾರಾವಾಹಿಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕಿರುತೆರೆ ಮತ್ತು ಹಿರಿತೆರೆಗೆ ಸಮಯ ಹೊಂದಾಣಿಕೆಯಾಗುವಂತಹ ಧಾರಾವಾಹಿ ಸಿಕ್ಕಿದರೆ ಅಭಿನಯಿಸಲು ಈಗಲೂ ಸಿದ್ಧ’ ಎನ್ನುವುದು ಅವರ ದೃಢ ನಿರ್ಧಾರ.

ಎರಡು ಹೊಸ ಚಿತ್ರಗಳಲ್ಲಿ ನಟಿಸಲು ಅವರಿಗೆ ಅವಕಾಶ ಬಂದಿದೆ. ಅದು ಮಾತುಕತೆಯ ಹಂತದಲ್ಲಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !