ಮಂಗಳವಾರ, ಸೆಪ್ಟೆಂಬರ್ 28, 2021
22 °C

ಸೆಟ್ಟೇರಿತು ‘ಲವ್‌ ಮಿ ಆರ್‌ ಹೇಟ್‌ ಮಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಡಾರ್ಲಿಂಗ್‌ ಕೃಷ್ಣ ಹಾಗೂ ನಟಿ ರಚಿತಾ ರಾಮ್‌ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ‘ಲವ್‌ ಮಿ OR ಹೇಟ್‌ ಮಿ’ ಚಿತ್ರದ ಮುಹೂರ್ತ ಇತ್ತೀಚೆಗೆ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ನಟಿ ಮಿಲನ ನಾಗರಾಜ್ ಕ್ಲ್ಯಾಪ್‌ ಮಾಡಿದರು.‌ ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ ಮಾಡಿದರು.

ತೂಗುದೀಪ ಸಂಸ್ಥೆಯ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ, ದೀಪಕ್ ಗಂಗಾಧರ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಸೋಮವಾರದಿಂದ(ಸೆ.13) ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಇದೊಂದು ಪಕ್ಕಾ ಲವ್ ಸ್ಟೋರಿ ಎನ್ನುತ್ತಾರೆ ದೀಪಕ್ ಗಂಗಾಧರ್.

ಚಿತ್ರದಲ್ಲಿನ ಪಾತ್ರದ ಕುರಿತು ಮಾತನಾಡಿದ ಡಾರ್ಲಿಂಗ್‌ ಕೃಷ್ಣ, ‘ಈ ಚಿತ್ರದಲ್ಲಿ ನನ್ನದು ಎರಡು ರೀತಿಯ ಪಾತ್ರ. ಕಾಲೇಜು ಹುಡುಗನಾಗಿ ಹಾಗೂ ಕಾಲೇಜು ನಂತರದ ದಿನಗಳದ್ದು. ಲವ್ ಸಬ್ಜೆಕ್ಟ್ ನನಗೆ ಇಷ್ಟ. ಹೀಗಾಗಿ ಹೆಚ್ಚಾಗಿ ಅದನೇ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದೇವೆ. ನಾವಿಬ್ಬರು ಒಂದೇ ದಿನ ಚಿತ್ರರಂಗ ಪ್ರವೇಶಿಸಿದವರು. ಎಂಟು ವರ್ಷಗಳ ಹಿಂದೆ ನನ್ನ ‘ಮದರಂಗಿ’ ಚಿತ್ರ ಹಾಗೂ ರಚಿತಾ ಅವರ ‘ಬುಲ್ ಬುಲ್’ ಒಂದೇ ದಿನ ತೆರೆಕಂಡಿತ್ತು. ಇಷ್ಟು ವರ್ಷಗಳ ನಂತರ ಒಂದೇ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕೂಡಿ ಬಂದಿದೆ’ ಎಂದರು. 

‘ಚಿತ್ರದಲ್ಲಿ ಐದು ಹಾಡುಗಳಿವೆ. ಅಣ್ಣಾವ್ರ ಜನಪ್ರಿಯ ಹಾಡೇ ಚಿತ್ರದ ಗೀತೆಯಾಗಿದೆ. ತುಂಬಾ ಸುಮಧುರ ಗೀತೆಗಳು ಈ ಪ್ರೇಮಕಾಥಾನಕದಲಿರಲ್ಲಿದೆ’ ಎಂದರು ಚಿತ್ರದ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್. ದೀಪಕ್ ಗಂಗಾಧರ್ ಮೂವೀಸ್ ಲಾಂಛನದಲ್ಲಿ ಸುನೀಲ್ ಬಿ.ಎನ್ ಹಾಗೂ ಮದನ್ ಗಂಗಾಧರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ‌ಶ್ರೀಧರ್ ಸಂಭ್ರಮ್ ಹಾಗೂ ಚಂದನ್ ಈ ಚಿತ್ರದ ಸಹ ನಿರ್ಮಾಪಕರು. ಕೆ.ಎಂ.ಪ್ರಕಾಶ್ ಸಂಕಲನ, ‌ಈಶ್ವರಿ ಕುಮಾರ್ ಕಲಾ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಅಣ್ಣಯ್ಯ ಸಹ ನಿರ್ದೇಶನ ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ವಿಷ್ಣು ಹೆಬ್ಬಾರ್ ಸಂಭಾಷಣೆ ಬರೆದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು