ಮಂಗಳವಾರ, ಜೂನ್ 28, 2022
25 °C

‘ಲವ್‌ ಮಿ ಆರ್‌ ಹೇಟ್‌ ಮಿ’ ಶೀರ್ಷಿಕೆ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂದನವನದಲ್ಲಿ ಚಿತ್ರದ ಶೀರ್ಷಿಕೆ ವಿವಾದ ಹೊಸದೇನಲ್ಲ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ನಟ ಡಾರ್ಲಿಂಗ್‌ ಕೃಷ್ಣ ಹಾಗೂ ನಟಿ ರಚಿತಾ ರಾಮ್‌ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಚಿತ್ರದ ‘ಲವ್‌ ಮಿ OR ಹೇಟ್‌ ಮಿ’ ಶೀರ್ಷಿಕೆಯೂ ಇದೀಗ ವಿವಾದಕ್ಕೆ ಕಾರಣವಾಗಿದೆ.

ದೀಪಕ್‌ ಗಂಗಾಧರ್‌ ನಿರ್ದೇಶನದ ‘ಲವ್‌ ಮಿ OR ಹೇಟ್‌ ಮಿ’ ಶೀರ್ಷಿಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ಈ ಶೀರ್ಷಿಕೆಯನ್ನು ನಾವು ನೋಂದಣಿ ಮಾಡಿಕೊಂಡಿದ್ದೇವೆ ಎಂದು ‘ಸೈಕೋ’ ಚಿತ್ರದ ನಿರ್ದೇಶಕ ವಿ.ದೇವದತ್ತ ಹೇಳಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ದೇವದತ್ತ ಅವರು ಈ ಶೀರ್ಷಿಕೆಯನ್ನು 2020ರ ನ.30ರಂದು ನೋಂದಣಿ ಮಾಡಿಕೊಂಡಿದ್ದರು. ‘ಶ್ರೀ ವೆಂಕಟೇಶ್ವರ ಇಂಟರ್‌ನ್ಯಾಷನಲ್’ ಎಂಬ ಸಂಸ್ಥೆಯಡಿ ರವಿಕಿರಣ್ ಬಿ.ಕೆ. ಎಂಬ ನಿರ್ಮಾಪಕರ ನಿರ್ಮಾಣದಲ್ಲಿ ಈ ಚಲನಚಿತ್ರವನ್ನು ನಿರ್ದೇಶಿಸಲು ಅಣಿಯಾಗಿದ್ದೆ. ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ತಯಾರಿಯಲ್ಲಿ ಇರುವಾಗ ಲಾಕ್‌ಡೌನ್‌ ಕಾರಣದಿಂದ ಚಿತ್ರೀಕರಣವನ್ನು ಮುಂದೂಡಬೇಕಾಯಿತು. ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2021 ಏ.1ರಂದು ಸೂಕ್ತ ಅನುಮತಿಯನ್ನು ಪಡೆದಿದ್ದೇವೆ. ಲಾಕ್‌ಡೌನ್‌ ಮುಗಿದ ಬಳಿಕ ಚಿತ್ರಕ್ಕೆ ಸಂಬಂಧಿಸಿದ ಚಟುವಟಿಕೆಯನ್ನು ಆರಂಭಿಸಲು ಹೊರಟಾಗ ಈ ಘಟನೆ ನಡೆದಿದೆ’ ಎಂದು ದೇವದತ್ತ ಹೇಳಿದರು.

ಶೀರ್ಷಿಕೆ ನೋಂದಣಿಗೆ ಬೇರೆ ಬೇರೆ ವಾಣಿಜ್ಯ ಮಂಡಳಿಗಳಲ್ಲಿ ಅವಕಾಶವಿರುವುದೇ ಈ ವಿವಾದಕ್ಕೆ ಕಾರಣವಾಗಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಂಬ ಪ್ರಮುಖ ಎರಡು ಮಂಡಳಿಗಳಿವೆ. ಒಂದು ಮಂಡಳಿಯಲ್ಲಿ ನೋಂದಣಿಯಾದ ಶೀರ್ಷಿಕೆ ಮತ್ತೊಂದಕ್ಕೆ ಸಿಗಲು ಯಾವುದೇ ವ್ಯವಸ್ಥೆ ಇಲ್ಲ. ‘ಈ ಸಮಸ್ಯೆಯನ್ನು ಮೊದಲು ಬಗೆಹರಿಸಿಕೊಳ್ಳಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೇ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಸಿನಿಮಾ ಮಾಡಲು ಆಸಕ್ತಿ ಇದ್ದವರಷ್ಟೇ ವಾರ್ತಾ ಇಲಾಖೆಯಿಂದ ಅನುಮತಿ ಪಡೆಯುತ್ತಾರೆ. ಶೀರ್ಷಿಕೆ ಬದಲಾಯಿಸಲು ದೀಪಕ್‌ ಅವರು ಮನವಿಮಾಡಿದ್ದು, ಈಗಾಗಲೇ ಸಿನಿಮಾದ ಸಿದ್ಧತೆ ಹಾಗೂ ವಿಭಿನ್ನವಾಗಿ ಶೀರ್ಷಿಕೆಯನ್ನು ವಿನ್ಯಾಸಗೊಳಿಸಿ ಪ್ರಚಾರಕ್ಕೆ ಅಣಿಯಾಗಿರುವ ಕಾರಣ ಶೀರ್ಷಿಕೆ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಿದ್ದೇನೆ ಎನ್ನುತ್ತಾರೆ ದೇವದತ್ತ. v

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು