ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್‌ ಮಾಕ್ಟೇಲ್‌–2: ಕೋವಿಡ್‌ ನಿರ್ಬಂಧ ಹಿಂಪಡೆದರೆ ಫೆ.11ಕ್ಕೇ ಚಿತ್ರ ತೆರೆಗೆ

ನಟ, ನಿರ್ಮಾಪಕ ಡಾರ್ಲಿಂಗ್‌ ಕೃಷ್ಣ ಹೇಳಿಕೆ
Last Updated 1 ಫೆಬ್ರುವರಿ 2022, 12:27 IST
ಅಕ್ಷರ ಗಾತ್ರ

‘ಲವ್‌ ಮಾಕ್ಟೇಲ್‌–2’ ಸಿನಿಮಾ ಈಗಾಗಲೇ ಘೋಷಿಸಿದಂತೆ ಫೆ.11ಕ್ಕೇ ಬಿಡುಗಡೆಯಾಗುತ್ತದೆಯೇ ಅಥವಾ ಚಿತ್ರ ಬಿಡುಗಡೆ ಮುಂದೂಡಲ್ಪಡುತ್ತದೆಯೇ ಎನ್ನುವುದಕ್ಕೆ ನಟ, ನಿರ್ಮಾಪಕ ಡಾರ್ಲಿಂಗ್‌ ಕೃಷ್ಣ ಉತ್ತರಿಸಿದ್ದಾರೆ.

‘ಸರ್ಕಾರ ಕೋವಿಡ್‌ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿ ಶುಕ್ರವಾರ ಅಥವಾ ಶನಿವಾರದೊಳಗೆ ಚಿತ್ರಮಂದಿರಗಳಲ್ಲಿ ಶೇ 100 ಆಸನ ಭರ್ತಿಗೆ ಅವಕಾಶ ನೀಡಿ ಆದೇಶ ಹೊರಡಿಸಿದರೆ, ಫೆ.11ಕ್ಕೇ ‘ಲವ್‌ ಮಾಕ್ಟೇಲ್‌–2’ ಸಿನಿಮಾ ತೆರೆ ಕಾಣಲಿದೆ. ಇಲ್ಲವಾದಲ್ಲಿ ಶೇ 100 ಆಸನ ಭರ್ತಿಗೆ ಸರ್ಕಾರ ಯಾವಾಗ ಆದೇಶ ಹೊರಡಿಸುತ್ತದೆಯೋ ಅದೇ ವಾರ ಬಿಡುಗಡೆ ಮಾಡುತ್ತೇವೆ’ ಎಂದು ನಟ ಡಾರ್ಲಿಂಗ್‌ ಕೃಷ್ಣ ಸುದ್ದಿಗಾರರಿಗೆ ಹೇಳಿದ್ದಾರೆ.

ಡಾರ್ಲಿಂಗ್‌ ಕೃಷ್ಣ, ರಾಚೆಲ್‌ ಡೇವಿಡ್‌, ಮಿಲನ ನಾಗರಾಜ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಡಾರ್ಲಿಂಗ್‌ ಕೃಷ್ಣ ಹಾಗೂ ಅವರ ಪತ್ನಿ, ನಟಿ ಮಿಲನಾ ನಾಗರಾಜ್‌ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಗಳವಾರ ಎರಡನೇ ಭಾಗದ ಟ್ರೇಲರ್‌ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ‘ನಿಧಿ’ಯನ್ನು ಕಳೆದುಕೊಂಡ ‘ಆದಿ’ಯ ಕಥೆ ಎರಡನೇ ಭಾಗದಲ್ಲಿ ಸಾಗುತ್ತದೆ. ‘ಎರಡನೇ ಭಾಗದಲ್ಲಿ ನಿಧಿ ಪಾತ್ರ ಇರುತ್ತದೆ. ಆದಿ ನೆನಪುಗಳಲ್ಲಿ ನಿಧಿ ಜೀವಂತವಾಗಿರುತ್ತಾಳೆ. ಮೊದಲ ಭಾಗದಲ್ಲಿ ಹೇಳದೇ ಇರುವ ವಿಷಯಗಳು, ಪಾತ್ರಗಳು ಎರಡನೇ ಭಾಗದಲ್ಲಿ ಬರುತ್ತವೆ. ಪೋಸ್ಟರ್‌ ಅಲ್ಲಿ ಇರೋ ಹುಡುಗಿ ಯಾರು ಎನ್ನುವುದೇ ಸಸ್ಪೆನ್ಸ್‌’ ಎಂದರು ಡಾರ್ಲಿಂಗ್‌ ಕೃಷ್ಣ.

ಡಾರ್ಲಿಂಗ್‌ ಕೃಷ್ಣ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದ ‘ಲವ್‌ ಮಾಕ್ಟೇಲ್‌’ 2020ರ ಜ.31ರಂದು ತೆರೆಕಂಡಿತ್ತು. ಪ್ರೇಮಕಥೆಯಾದರೂ ಚಿತ್ರವು ಭಿನ್ನವಾಗಿದ್ದ ಕಾರಣ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದಾಗಿ ಚಿತ್ರಮಂದಿರಗಳಿಗೆ ಬೀಗಬಿದ್ದ ಕಾರಣ, ಕೇವಲ 43 ದಿನ ಚಿತ್ರವು ತೆರೆಮೇಲೆ ಪ್ರದರ್ಶನ ಕಂಡಿತ್ತು. ನಂತರದಲ್ಲಿ ಚಿತ್ರವು ಒಟಿಟಿಯಲ್ಲಿ ತೆರೆಕಂಡು, ಮತ್ತಷ್ಟು ಪ್ರೇಕ್ಷಕರನ್ನು ತಲುಪಿತ್ತು. ತೆಲುಗಿಗೂ ಈ ಸಿನಿಮಾ ರಿಮೇಕ್‌ ಆಗಿತ್ತು.

ಮೊದಲನೇ ಭಾಗಕ್ಕೆ ರಘು ದೀಕ್ಷಿತ್‌ ಸಂಗೀತ ನೀಡಿದ್ದರು. ಎರಡನೇ ಭಾಗಕ್ಕೆ ನಕುಲ್‌ ಅಭ್ಯಂಕರ್‌ ಸಂಗೀತ ನಿರ್ದೇಶನವಿದೆ. ರಾಘವೇಂದ್ರ ಕಾಮತ್‌ ಸಾಹಿತ್ಯವಿರುವ ಎರಡನೇ ಭಾಗದ ಚಿತ್ರದ ಹಾಡುಗಳು ಈಗಾಗಲೇ ಹಿಟ್‌ ಆಗಿವೆ. ಸಕಲೇಶಪುರ, ಮಡಿಕೇರಿ, ಲಡಾಖ್‌, ಚಿಕ್ಕಮಗಳೂರು ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT