ಶನಿವಾರ, ಡಿಸೆಂಬರ್ 7, 2019
22 °C

ಪ್ರೀತಿಯ ಕಥನದ ‘ರಾಜಲಕ್ಷ್ಮಿ’

Published:
Updated:
Prajavani

ಪ್ರೀತಿಯ ಕಥನದ ಜತೆಗೆ ಸಮಾಜಕ್ಕೆ ಹೇಳಬೇಕಾದ ಅರ್ಥಪೂರ್ಣ ಸಂದೇಶವೂ ಇದೆಯಂತೆ ‘ರಾಜಲಕ್ಷ್ಮಿ’ ಚಿತ್ರದಲ್ಲಿ. ಚಿತ್ರ ಬಹುತೇಕ  ಪೂರ್ಣಗೊಂಡಿದೆ. ಇದೇ 30ರಂದು ಟೀಸರ್ ಮತ್ತು ಅ.25ರಂದು ಚಿತ್ರ ಬಿಡುಗಡೆಗೆ ತಂಡವು ಸಿದ್ಧತೆ ಮಾಡಿಕೊಂಡಿದೆ. ಸದ್ಯ ಚಿತ್ರದ ಹಾಡುಗಳ ಧ್ವನಿ ಸುರಳಿ ಬಿಡುಗಡೆಯಾಗಿದೆ.

ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಸಹಾಯಕ ನಿರ್ದೇಶಕನಾಗಿದ್ದ ಕಾಂತರಾಜ್‍ಗೌಡ ಈ ಚಿತ್ರಕ್ಕೆ ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಎರಡು ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಈಗಾಗಲೇ ‘ಕೇಳೆ, ಕೇಳೇ’ ಮತ್ತು ‘ಎಣ್ಣೆ’ ಹಾಡುಗಳು ಜನಪ್ರಿಯಗೊಂಡಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ. 

ಕಥೆ ಬರೆಯುವ ಹವ್ಯಾಸವಿರುವ ಕಾಂತರಾಜ್‌ಗೌಡ, ನಿರ್ದೇಶನದ ಅವಕಾಶ ಗಿಟ್ಟಿಸಲು ನಿರ್ಮಾಪಕರಿಗೆ ಹದಿನೇಳು ಕಥೆಗಳನ್ನು ಹೇಳಿದ್ದರಂತೆ. ಆದರೆ, ಎಲ್ಲವನ್ನೂ ತಿರಸ್ಕರಿಸಿದ್ದ ನಿರ್ಮಾಪಕ ಎಸ್.ಕೆ.ಮೋಹನ್‍ಕುಮಾರ್, ಮಂಡ್ಯ ಶೈಲಿಯ ಸಕ್ಕರೆಯಂತಹ ಕಥೆ‌ಯೊಂದಕ್ಕೆ ಮಾರುಹೋದರು ಎಂದು ಖುಷಿಯಿಂದ ಹೇಳಿಕೊಂಡರು ಕಾಂತರಾಜ್‌ಗೌಡ.

ನಿರ್ಮಾಪಕರ ತಂದೆಯ ಹೆಸರು ರಾಜ ಮತ್ತು ತಾಯಿಯ ಹೆಸರು ಲಕ್ಷ್ಮಿಯಂತೆ. ಈ ಇಬ್ಬರ ಹೆಸರನ್ನು ಸೇರಿಸಿದ ಚಿತ್ರದ ಟೈಟಲ್‌ ಮಾಡಲಾಗಿದೆ. ಚಿತ್ರದ ಕಥೆಯಲ್ಲಿ ನಾಯಕ ಮತ್ತು ನಾಯಕಿಯೂ ಹೆಸರೂ ಅದೇ ರೀತಿ ಇರಲಿದೆ. ಕೆರಗೋಡು ಸಮೀಪದ ಸಿದ್ದಗೌಡನ ಹೋಬಳಿಯಲ್ಲಿ ನಡೆದ ನೈಜ ಘಟನೆ ಆಧರಿಸಿ, ಈ ಚಿತ್ರ ಮಾಡಲಾಗಿದೆ. ಹಳ್ಳಿಯ ರಾಜಕಾರಣದ ಮುಖದರ್ಶನವೂ ಇದರಲ್ಲಿರಲಿದೆ. ಮಂಡ್ಯ ಜಿಲ್ಲೆಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಎನ್ನುವ ಮಾಹಿತಿ ನೀಡಿದರು ನಿರ್ದೇಶಕರು.

ರಂಗಭೂಮಿ ನಟ ನವೀನ್‍ ತೀರ್ಥಹಳ್ಳಿ ನಾಯಕನಾಗಿ ನಟಿಸಿದ್ದು, ಇದರಲ್ಲಿ ರೈತ, ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ನವೀನ್‌ ಈಗಾಗಲೇ ನಟಿಸಿರುವ ಎರಡು ಚಿತ್ರಗಳು ಇನ್ನಷ್ಟೇ ತೆರೆ ಕಾಣಬೇಕಿವೆ.

ಈಗಾಗಲೇ ಕೆಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಟೆಕಿ, ನಿರೂಪಕಿ ಬೆಂಗಳೂರಿನ ರಶ್ಮಿಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಮಗಳ ಪಾತ್ರ ಅವರದ್ದು. ‘ನೋಡೋಕೆ ಸೈಲೆಂಟ್, ಮಾತಾಡಿದ್ರೆ ವೈಲೆಂಟ್ ಆಗುವ ಪಾತ್ರ’ವೆಂದು ಹೇಳಿಕೊಂಡರು.

ತಾರಾಗಣದಲ್ಲಿ ಕೆ.ಎಚ್.ಮೀಸೆಮೂರ್ತಿ, ಕಿರಣ್‍ಗೌಡ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮುತ್ತುರಾಜ್, ಹೊನ್ನವಳ್ಳಿ ಕೃಷ್ಣ, ಟೆನಿಸ್‍ ಕೃಷ್ಣ ಇದ್ದಾರೆ.

ನಾಲ್ಕು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದಾರೆ. ಸಂಭಾಷಣೆ ಮಾಗಡಿ ಯತೀಶ್, ಸಂಕಲನ ಡಿ.ಕೆ.ದಿನೇಶ್, ಛಾಯಾಗ್ರಹಣ ನಾಗರಾಜ್.ಎಸ್.ಮೂರ್ತಿ, ನೃತ್ಯ ಸಂಯೋಜನೆ ನವೀನ್ ಅವರದ್ದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು