ಮದವರಿಯದ ಮದನ್‌

ಮಂಗಳವಾರ, ಮಾರ್ಚ್ 19, 2019
33 °C

ಮದವರಿಯದ ಮದನ್‌

Published:
Updated:
Prajavani

ಮದನ್ ಕರ್ಕಿ ವೈರಮುತ್ತು ಎಂದರೆ ಹೊಸ ಕಾಲದ ತಮಿಳು ಸಿನಿಮಾ ಸಂಗೀತ ಪ್ರೇಮಿಗಳಿಗೆ ಸುಲಭವಾಗಿ ಗೊತ್ತಾಗುತ್ತದೆ. ಈ ಹೆಸರಲ್ಲಿ ಎರಡು ತಲೆಮಾರುಗಳು ಸೇರಿವೆ. ಒಂದು ಮದನ್ ಕರ್ಕಿ, ಇನ್ನೊಂದು ಅವರ ತಂದೆ ವೈರಮುತ್ತು. ಇಬ್ಬರೂ ಚಿತ್ರಸಾಹಿತಿಗಳಾಗಿ ರುಜು ಹಾಕಿರುವುದು ಗಮನಾರ್ಹ. 

ಸಿನಿಮಾ ಸಾಹಿತ್ಯಕ್ಕೇ ಏಳು ರಾಷ್ಟ್ರಪ್ರಶಸ್ತಿಗಳನ್ನು ಪಡೆದವರು ವೈರಮುತ್ತು. ಅವರ ಮೊದಲ ಮಗ ಮದನ್. ಚಿಕ್ಕಂದಿನಲ್ಲಿ ಓದಿನಲ್ಲಿ ಅಷ್ಟೇನೂ ಜಾಣ ಎನಿಸಿಕೊಂಡಿರಲಿಲ್ಲ. ಆದರೆ, ತಮಿಳು ಹಾಗೂ ಇಂಗ್ಲಿಷ್‌ನಲ್ಲಿ ಕಂಡಾಪಟ್ಟೆ ಅಂಕಗಳು ಸಿಗುತ್ತಿದ್ದವು. ಅಪ್ಪನ ರಕ್ತ ಮೈಯಲ್ಲಿ ಇತ್ತಲ್ಲ?

ಹೈಸ್ಕೂಲಿನಲ್ಲಿದ್ದಾಗ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಆಸಕ್ತಿ ಮೂಡಿತು. ಅಣ್ಣಾ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್‌ ವಿಷಯದಲ್ಲಿಯೇ ಎಂಜಿನಿಯರಿಂಗ್ ಪದವಿ ಪಡೆಯುವಷ್ಟರ ಮಟ್ಟಿಗೆ ಈ ಆಸಕ್ತಿ ಮುಂದುವರಿಯಿತು. ಕಲಿಯುವ ಹಂತದಲ್ಲಿ ‘ತಮಿಳು ವಾಯ್ಸ್ ಎಂಜಿನ್‌’ ಅನ್ನು ಮದನ್ ಕರ್ಕಿ ಅಭಿವೃದ್ಧಿಪಡಿಸಿದರು. ಇದಕ್ಕೆ ಮಾರ್ಗದರ್ಶನ ನೀಡಿದವರು ಪ್ರೊ. ಟಿ.ವಿ. ಗೀತಾ. ಈ ಯೋಜನೆಯು ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದ ತಮಿಳು ಇಂಟರ್ನೆಟ್‌ ಸಮಾವೇಶಕ್ಕಾಗಿ ಆಯ್ಕೆಯಾಯಿತು.

ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ಗೆ ಸಂಬಂಧಿಸಿದ ವಿಷಯದಲ್ಲಿಯೇ ಡಾಕ್ಟರೇಟ್‌ ಮಾಡಿದ ಮದನ್ ಕರ್ಕಿ, ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಪಾಠ ಮಾಡತೊಡಗಿದರು. ಬಿಡುವಿನಲ್ಲಿ ಕವನಗಳನ್ನು ಬರೆಯುವ ಹವ್ಯಾಸ ಇತ್ತು. ಹಾಗೆ ಬರೆದ ಕೆಲವು ಕವನಗಳನ್ನು ತಮಿಳು ಸಿನಿಮಾ ನಿರ್ದೇಶಕ ಶಂಕರ್‌ಗೆ ತೋರಿಸಿದರು. ‘ಎಂದಿರನ್’ (ರೋಬೊ) ತಮಿಳು ಸಿನಿಮಾ ತಯಾರಿಯಲ್ಲಿದ್ದ ಶಂಕರ್‌ಗೆ ಇವರ ಭಾಷಾಸೂಕ್ಷ್ಮ ಹಾಗೂ ಹೊಸಕಾಲದ ಪ್ರತಿಮೆಗಳು ಇಷ್ಟವಾದವು.

ಕಂಪ್ಯೂಟರ್‌ ಸೈನ್ಸ್‌ ಹಾಗೂ ತಮಿಳು ಭಾಷಾಪ್ರೇಮ ಎರಡರ ಹದವರಿತ ವ್ಯಕ್ತಿತ್ವದಂತೆ ಇವರು ಕಂಡರು. ಅದಕ್ಕೇ ಸಿನಿಮಾಗೆ ಸಂಭಾಷಣೆ ಬರೆಯುವ ಕೆಲಸವನ್ನೂ ಶಂಕರ್‌ ಹಚ್ಚಿದರು. ‘ಎಂದಿರನ್‌’ ಸಿನಿಮಾಗೆ ಮೂರು ‘ವರ್ಶನ್‌’ನ ಸಂಭಾಷಣೆಗಳು ಸಿದ್ಧಗೊಂಡವು. ಒಂದನ್ನು ಖುದ್ದು ಶಂಕರ್ ಬರೆದಿದ್ದರು. ಇನ್ನೊಂದನ್ನು ಸುಜಾತಾ ರಂಗರಾಜನ್ (ಅವರೀಗ ಬದುಕಿಲ್ಲ) ಬರೆದಿದ್ದರು. ಮೂರನೆಯದನ್ನು ಬರೆಯುವ ಅವಕಾಶ ಮದನ್ ಕರ್ಕಿ ಅವರಿಗೆ ಸಿಕ್ಕಿತು. ಯಾವ ದೃಶ್ಯಕ್ಕೆ ಯಾವ ‘ವರ್ಶನ್’ ಹೊಂದಿತೋ ಅದನ್ನು ಶಂಕರ್ ಬಳಸಿಕೊಂಡರು. ಕ್ಲ್ಯೈಮ್ಯಾಕ್ಸ್‌ ಸಂಭಾಷಣೆ ಬರೆಯುವ ಹೊಣೆಗಾರಿಕೆಯನ್ನು ಮದನ್‌ ಅವರಿಗೇ ಬಿಟ್ಟುಕೊಟ್ಟಿದ್ದು ವಿಶೇಷ. ಅಷ್ಟೇ ಅಲ್ಲದೆ ‘ಎಂದಿರನ್’ ಸಿನಿಮಾಗೆ ಎರಡು ಹಾಡುಗಳನ್ನೂ ಮದನ್ ಬರೆದುಕೊಟ್ಟರು.

ಸಿನಿಮಾ ನಂಟು ಬೆಳೆದದ್ದೇ 2013ರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಕೆಲಸಕ್ಕೆ ಮದನ್ ರಾಜೀನಾಮೆ ಕೊಟ್ಟರು. ‘ಕರ್ಕಿ ರಿಸರ್ಚ್ ಫೌಂಡೇಷನ್’ ಪ್ರಾರಂಭಿಸಿದರು. ತಮಿಳು ಭಾಷಾ ಕಂಪ್ಯೂಟಿಂಗ್‌ಗೆ ಸಂಬಂಧಿಸಿದಂತೆ ಈ ಫೌಂಡೇಷನ್‌ ಕೆಲಸ ಮಾಡುತ್ತಿದೆ. ‘ಮೆಲಿನಮ್ ಎಜುಕೇಷನ್’ ಎಂಬ ಇನ್ನೊಂದು ಸಂಸ್ಥೆಯನ್ನೂ ಮದನ್ ಹುಟ್ಟುಹಾಕಿದರು. ಅದು ಮಕ್ಕಳಲ್ಲಿ ಕಲಿಕೆಗೆ ಅನುವು ಮಾಡಿಕೊಡುವ ಶೈಕ್ಷಣಿಕ ಆಟಗಳು ಹಾಗೂ ಕಥಾ ಪುಸ್ತಕಗಳನ್ನು ವಿನ್ಯಾಸ ಮಾಡುತ್ತಿದೆ. ‘ಡೂಪಾಡೂ’ ಎಂಬ ಆನ್‌ಲೈನ್‌ ಸಂಗೀತ ವೇದಿಕೆಯನ್ನೂ ಅವರು ಸೃಷ್ಟಿಸಿದ್ದು, ಹೊಸಕಾಲದ ತರುಣ–ತರುಣಿಯರ ಸಂಗೀತಾಸಕ್ತಿಗೆ ನೀರು–ಗೊಬ್ಬರ ಹಾಕುತ್ತಿದೆ. 
ಸಿನಿಮಾಸಕ್ತಿ, ಗೀತಾಸಕ್ತಿ, ಕಾವ್ಯಾಸಕ್ತಿ, ಭಾಷಾಸಕ್ತಿ, ಶಿಕ್ಷಣ ಪ್ರೇಮವನ್ನು ಈ ಕಾಲದ ತಂತ್ರಜ್ಞಾನದ ಜತೆ ಜತೆಗೇ ತೆಗೆದುಕೊಂಡು ಹೋಗುತ್ತಿರುವ ಮದನ್ ಕರ್ಕಿ ಅವರಿಗೆ ಈಗ 38 ವರ್ಷ. ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಇಷ್ಟಪಡುವ ಚಿತ್ರಸಾಹಿತಿಗಳಲ್ಲಿ ಇವರೂ ಒಬ್ಬರೆನ್ನುವುದು ಅಗ್ಗಳಿಕೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !