ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಟನೆ ಪ್ರೀತಿಯ ಕಾಯಕ’: ಮೇಡ್ ಇನ್ ಚೈನಾ ಸಿನಿಮಾ ನಟ ನಾಗಭೂಷಣ ಸಂದರ್ಶನ

Last Updated 17 ಜೂನ್ 2022, 1:56 IST
ಅಕ್ಷರ ಗಾತ್ರ

ಎಂಜಿನಿಯರಿಂಗ್‌ ಪದವಿ, ಸರ್ಕಾರಿ ಕೆಲಸ, ಆರಾಮದಾಯಕ ಜೀವನ ಎಲ್ಲವನ್ನೂ ಬಿಟ್ಟು ತಾನು ಪ್ರೀತಿಸುವ ಕಲಾ ಕ್ಷೇತ್ರದತ್ತ ಬಂದವರು ನಾಗಭೂಷಣ್‌. ನಾಯಕ ಎನ್ನುವ ಕಲ್ಪನೆಯನ್ನೇ ಬದಲಾಯಿಸಿ ಸರಳ ಪಾತ್ರಗಳ ಮೂಲಕ ಗಮನ ಸೆಳೆದವರು. ಕೋವಿಡ್‌ ಕಾಲಘಟ್ಟದ ಕತೆಯ ‘ಮೇಡ್‌ ಇನ್‌ ಚೈನಾ’ ಇಂದು ಬಿಡುಗಡೆಯಾಗುವ ಹೊತ್ತಿನಲ್ಲಿ ನಾಗಭೂಷಣ್‌ ಅವರ ಮಾತುಕತೆ...

ಎಂಜಿನಿಯರಿಂಗ್‌ ಓದಿ, ಸರ್ಕಾರಿ ನೌಕರಿ ಪಡೆದವರು ಕಲಾ ಕ್ಷೇತ್ರಕ್ಕೆ ಹೊರಳಿದ ಬಗೆ?

ನಮಗೆ ಬೇಕಾದದ್ದು, ಇಷ್ಪಟ್ಟದ್ದು ನಮ್ಮ ಆಯ್ಕೆ ಆಗಿರಬೇಕಲ್ವಾ? ಕಲಾ ಕ್ಷೇತ್ರ ನನ್ನ ಆಸಕ್ತಿ. ಹಾಗಾಗಿ ರಂಗಭೂಮಿ, ಸಾಹಿತ್ಯ ಎಂದು ಈ ಕಡೆಗೆ ಬಂದೆ. ಇದೀಗ ಪೂರ್ಣಕಾಲಿಕ ಕಾಯಕವಾಗಿಬಿಟ್ಟಿದೆ. ಈ ಕ್ಷೇತ್ರಕ್ಕೆ ಬಂದಾಗ ಆರಂಭದಲ್ಲಿ ಆರ್ಥಿಕವಾಗಿ ಸ್ವಲ್ಪ ಕಷ್ಟವಾಯಿತು. ಈಗ ಪರ್ವಾಗಿಲ್ಲ. ಕಥೆಗಳೇ ನನ್ನನ್ನು ಹುಡುಕಿಕೊಂಡು ಬರುತ್ತಿರುವಾಗ ಖುಷಿ ಅನಿಸುತ್ತಿದೆ. ಇಲ್ಲಿ ಬದುಕುತ್ತೇನೆ ಎಂಬ ಧೈರ್ಯ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇತ್ತು. ಹಾಗಾಗಿ ನಾನು ಈ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡೆ.

ಕಲಾ ಬದುಕಿನ ಪ್ರಯಾಣ ಹೇಗಿದೆ?

ಹಂತಹಂತವಾಗಿ ಬೆಳೆಯುತ್ತಿದ್ದೇನೆ. ಸದ್ಯ ಚೆನ್ನಾಗಿದೆ. ಸಹನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದೇನೆ. ಲಘು, ಹಾಸ್ಯ ಪಾತ್ರಗಳು ಇಷ್ಟ. ‘ಇಕ್ಕಟ್‌’ ಮತ್ತು ‘ಮೇಡ್‌ ಇನ್‌ ಚೈನಾ’ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ. ‘ಹನಿಮೂನ್‌’ ಎಂಬ ವೆಬ್‌ ಸಿರೀಸ್‌ನಲ್ಲಿಯೂ ನಾಯಕನಾಗಿದ್ದೇನೆ. ಕುಟುಂಬ ಸಮೇತವಾಗಿ ಕುಳಿತು ನೋಡುವ, ನಗಿಸುವ ಕಂಟೆಂಟ್‌ ಕೊಡುವುದರಲ್ಲೇ ಖುಷಿ ಮತ್ತು ಸಾರ್ಥಕತೆ ಇದೆ.

ನಾಯಕ ಅನ್ನುವ ಪರಿಕಲ್ಪನೆಯನ್ನೇ ಮೀರಿಸಿದ ಕೆಲವೇ ಜನರ ಪೈಕಿ ನೀವೂ ಒಬ್ಬರು. ಏನು ಹೇಳುತ್ತೀರಿ?

ಪಾತ್ರ ಅಥವಾ ವ್ಯಕ್ತಿತ್ವ ಹೇಗಿದೆಯೋ ಹಾಗೇ ಪ್ರಸ್ತುತಪಡಿಸಬೇಕು. ನಾನು ಫಣಿ ರಾಮಚಂದ್ರ, ಅನಂತ್‌ನಾಗ್‌ ಅವರ ಚಿತ್ರಗಳನ್ನು ಈಗಲೂ ನೋಡುತ್ತೇನೆ. ಸಹಜವಾದ ಪಾತ್ರಗಳು ಮತ್ತು ಸನ್ನಿವೇಶಗಳ ಮೂಲಕವೇ ನಗಿಸುತ್ತಿದ್ದರಲ್ಲಾ. ಅದು ಸಾಧ್ಯವಾಗುವುದಾದರೆ ಒಂದು ಶಿಸ್ತುಬದ್ಧ ಆರೋಗ್ಯಕರ ಹಾಸ್ಯ ಏಕೆ ಸಾಧ್ಯವಾಗುವುದಿಲ್ಲ? ಇದನ್ನೇ ನಾನು ಮಾಡುತ್ತಿದ್ದೇನೆ.

ಹಾಸ್ಯಕ್ಕೆಂದೇ ಪ್ರತ್ಯೇಕ ಪಾತ್ರ ಸೃಷ್ಟಿಸುತ್ತಿರುವ ಕಥೆಗಳು ಮತ್ತು ಚಿತ್ರಗಳಿವೆ. ಇಲ್ಲಿ ನಾಯಕನೇ ಹಾಸ್ಯ ಮಾಡುತ್ತಿದ್ದಾನೆ. ನಾಯಕನ ಗಾಂಭೀರ್ಯ ಮಸುಕಾದಂತೆ ಅನಿಸುತ್ತಿಲ್ಲವೇ?

ನೋಡಿ, ಹಾಸ್ಯಪಾತ್ರ ಸೃಷ್ಟಿಸಿ ಆ ಪಾತ್ರವನ್ನು ನಾಯಕ ಅಥವಾ ಇತರ ಪಾತ್ರಗಳು ಹಿಯಾಳಿಸುವುದು, ಅದನ್ನೇ ಮನೋರಂಜನೆ ಎಂಬಂತೆ ತೋರಿಸುವುದು ನಡೆದಿದೆ. ಒಟ್ಟಿನಲ್ಲಿ ಹಾಸ್ಯ ಎಂದರೆ ತುಂಬಾ ತಾತ್ಸಾರಕ್ಕೊಳಗಾದ ಪಾತ್ರ ಎಂಬಂತೆ ಬಿಂಬಿತವಾಗಿದೆ. ಈಗ ಅದೆಲ್ಲಾ ಬದಲಾಗಿದೆ. ಬದಲಾಗಲೂಬೇಕು. ನಾಯಕನಿಗೆ ಹಾಸ್ಯಪ್ರಜ್ಞೆ ಇರಬಾರದೇ? ಕಥೆ ಹೇಳುತ್ತಲೇ ಆತ ನಗಿಸಬಲ್ಲ ತಾನೆ? ಆ ಪ್ರಯೋಗ ನನ್ನ ಚಿತ್ರಗಳಲ್ಲಿದೆ.

‘ಇಕ್ಕಟ್‌’, ‘ಮೇಡ್‌ ಇನ್‌ ಚೈನಾ’ ಎರಡೂ ಕೋವಿಡ್‌ ಕಾಲಘಟ್ಟದ ಕಥೆಗಳು... ಇದು ನಿಮ್ಮ ಆಯ್ಕೆಯೇ?

ಕೋವಿಡ್‌ ಕಾಲದಲ್ಲಿ ನಾವೆಲ್ಲಾ ಅನುಭವಿಸಿದ ಸನ್ನಿವೇಶಗಳೇ ಇವು. ಅದನ್ನು ತೆರೆಯ ಮೇಲೆ ತಂದಿದ್ದೇವೆ. ನನ್ನ ಆಯ್ಕೆಯೂ ಹೌದು. ಬಜೆಟ್‌ ಕೂಡಾ ನೋಡಬೇಕಲ್ವಾ. ಇವೆರಡರ ನಡುವೆ ಒಳ್ಳೆಯ ಕಥೆ ಹೇಳಬೇಕು. ಆ ಪ್ರಯತ್ನ ನಮ್ಮದು.

ಏನಿದು ‘ಮೇಡ್‌ ಇನ್‌ ಚೈನಾ’?

ಕೋವಿಡ್‌ ಲಾಕ್‌ ಡೌನ್‌ ಆದಾಗ ನಾಲ್ಕು ಗೋಡೆಗಳ ನಡುವೆ ಬಂಧಿಗಳಾದ ನಾವು ವರ್ಚುವಲ್‌ ಮಾಧ್ಯಮದಲ್ಲೇ ಸಂವಹನ ಮಾಡಿದೆವು. ಅದೇ ರೀತಿಯ ಫ್ರೇಮ್‌ಗಳಲ್ಲಿ ಈ ಚಿತ್ರ ಕಾಣಿಸುತ್ತದೆ. ನನಗೂ ಇದು ಸ್ವಲ್ಪ ಸವಾಲೆನಿಸಿತ್ತು. ಆದರೆ, ನಿರ್ದೇಶಕ ಪ್ರೀತಂ ತಗ್ಗಿನಮನೆ ಅವರಿಗೆ ಸ್ಪಷ್ಟತೆ ಇತ್ತು. ಹಾಗಾಗಿ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ.

ಕನ್ನಡದ ಮೊದಲ ವರ್ಚುವಲ್‌ ಚಿತ್ರ

ಕನ್ನಡದ ಮೊದಲ ವರ್ಚುವಲ್‌ ಸಿನಿಮಾ, ನಾಗಭೂಷಣ್‌ ಹಾಗೂ ಪ್ರಿಯಾಂಕಾ ತಿಮ್ಮೇಶ್‌ ಅಭಿನಯದ ‘ಮೇಡ್‌ ಇನ್‌ ಚೈನಾ’ ಇಂದು ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಬಿಡುಗಡೆಯಾಗಲಿದೆ. ‘ಅಯೋಗ್ಯ’, ‘ರತ್ನಮಂಜರಿ’ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿದ್ದ ಪ್ರೀತಮ್ ತೆಗ್ಗಿನಮನೆ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ.

ನಿರ್ದೇಶನದ ಜೊತೆಗೆ ಗ್ರಾಫಿಕ್ಸ್‌, ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನೂ ಪ್ರೀತಮ್‌ ನಿಭಾಯಿಸಿದ್ದಾರೆ.

ಚಿತ್ರದ ಕುರಿತು ಮಾಹಿತಿ ನೀಡಿದ ಪ್ರೀತಮ್‌, ‘ಮಲಯಾಳಂನಲ್ಲಿ ‘ಸಿ ಯೂ ಸೂನ್‌’ ಹಾಗೂ ಹಾಲಿವುಡ್‌ನಲ್ಲಿ ‘ಸರ್ಚಿಂಗ್‌’ ಎನ್ನುವ ವರ್ಚುವಲ್‌ ಸಿನಿಮಾಗಳು ಬಂದಿದ್ದವು. ಇವೆರೆಡೂ ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ನ ಸಿನಿಮಾಗಳಾಗಿದ್ದವು. ಇಂಥ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸೂಕ್ತವಾದುವು. ನಮ್ಮ ಸಿನಿಮಾವನ್ನು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಇದು ಫ್ಯಾಮಿಲಿ ಡ್ರಾಮಾ ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ’ ಎಂದರು.

ಎನ್. ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಸಿನಿಮಾಗೆ ಬಂಡವಾಳ ಹೂಡಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್‌ನಡಿ ಟಿ.ಆರ್.ಚಂದ್ರಶೇಖರ್ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT