ಮಾಧುರಿ: ಹಳತು ಹೊನ್ನು!

ಸೋಮವಾರ, ಜೂನ್ 24, 2019
30 °C

ಮಾಧುರಿ: ಹಳತು ಹೊನ್ನು!

Published:
Updated:
Prajavani

ಗೋವಿಂದ್‌ ಎನ್ನುವವರು ರಾಜಶ್ರೀ ಫಿಲ್ಮ್ಸ್‌ ನಿರ್ಮಾಣ ಸಂಸ್ಥೆಯವರಿಗೆ ಹತ್ತಿರದವರಾಗಿದ್ದರು. ಹೊಸ ಸಿನಿಮಾಗೆಂದು ಮುಗ್ಧ ಹುಡುಗಿಗಾಗಿ ಆ ನಿರ್ಮಾಣ ಸಂಸ್ಥೆ ಶೋಧ ನಡೆಸಿತ್ತು. ಮುಂಬೈನ ಅಂಧೇರಿಯ ಡಿವೈನ್‌ ಚೈಲ್ಡ್‌ ಹೈಸ್ಕೂಲ್‌ನಲ್ಲಿ ಕಲಿತಿದ್ದ ಹುಡುಗಿ ಮಾಧುರಿ ದೀಕ್ಷಿತ್‌ ಪ್ರತಿಭೆಯನ್ನು ಗೋವಿಂದ್ ನೋಡಿದ್ದರು. ಕಥಕ್ ನೃತ್ಯವನ್ನು ತಪಸ್ಸಿನಂತೆ ಕಲಿತಿದ್ದ ಹುಡುಗಿಯ ಹೆಸರನ್ನು ಸಿನಿಮಾ ಸಂಸ್ಥೆಯವರ ಕಿವಿಗೆ ಹಾಕಿದರು. 

ಮನೆಗೆ ಫೋನ್‌ ಕರೆ ಬಂದದ್ದೇ ಮೊದಲಿಗೆ ಮಾಧುರಿ ತಂದೆ–ತಾಯಿ ಆ ಅವಕಾಶವನ್ನು ನಿರಾಕರಿಸಿದರು. ಯಾವುದಕ್ಕೂ ಒಮ್ಮೆ ಹೋಗಿ ಭೇಟಿ ಮಾಡಿದರೆ ಕಳೆದುಕೊಳ್ಳುವುದು ಏನಿದೆ ಎಂದು ಗೋವಿಂದ್ ಕೊಟ್ಟ ಸಲಹೆಯನ್ನು ತಿರಸ್ಕರಿಸಲಿಲ್ಲ. ಕೊನೆಗೂ ಮಗಳನ್ನು ಕರೆದುಕೊಂಡು ಹೋದರು.

ರಾಜಶ್ರೀ ನಿರ್ಮಾಣ ಸಂಸ್ಥೆಯ ಮಾಲೀಕರ ಮನೆ ದೊಡ್ಡದಿತ್ತು; ಮನಸ್ಸೂ ದೊಡ್ಡದೇ ಎನ್ನುವುದು ಬೇಗ ಮಾಧುರಿಯ ತಂದೆ–ತಾಯಿಗೆ ಗೊತ್ತಾಯಿತು. ಮೇಜಿನ ಮೇಲೆ ಇದ್ದ ಪುಸ್ತಕವೊಂದನ್ನು ಕೊಟ್ಟು, ಓದುವಂತೆ ಮಾಧುರಿಗೆ ಸೂಚಿಸಿದರು. ಹುಡುಗಿಯ ಶಬ್ದಗಳಲ್ಲಿ ಮರಾಠಿ ಪಲುಕು ಇರಲಿಲ್ಲ. ನಿರ್ಮಾಪಕರಿಗೆ ಅದೇ ಬೇಕಿದ್ದುದು. ಮೊದಲಿಗೆ ತುಸು ನಿರಾಸೆಯಾಯಿತು. ಆಮೇಲೆ ಅವರು ಔಪಚಾರಿಕ ಸ್ಕ್ರೀನ್‌ಟೆಸ್ಟ್‌ ಆಯೋಜಿಸಿದರು. ಮಾಧುರಿ ಬಿಂದಾಸ್‌ ಆಗಿ ನೃತ್ಯ ಮಾಡಿದರು. ಕೊಟ್ಟ ಡೈಲಾಗು ಶೀಟಿನ ಮೇಲೆ ಕಣ್ಣಾಡಿಸಿ ಸಂಭಾಷಣೆಯನ್ನು ಓತಪ್ರೋತವಾಗಿ ಒಪ್ಪಿಸಿದರು. ಅದಮ್ಯ ಉತ್ಸಾಹ ಈ ಹುಡುಗಿಯಲ್ಲಿ ಇದೆ ಎಂದು ರಾಜಶ್ರೀ ಸಂಸ್ಥೆಯವರಿಗೆ ಅನ್ನಿಸಿದ್ದೇ ‘ಅಬೋಧ್’ ಸಿನಿಮಾ ಪಾತ್ರಕ್ಕೆ ಆಯ್ಕೆಯಾದರು.

1984ರ ಈ ಕಥೆಯನ್ನು ಮಾಧುರಿ ಪದೇ ಪದೇ ನೆನಪಿಸಿಕೊಳ್ಳುತ್ತಿರುತ್ತಾರೆ. 1980ರ ದಶಕದ ಕೊನೆಯಿಂದ 1990ರ ದಶಕದ ನಡುಘಟ್ಟದವರೆಗೆ ಮಾಧುರಿ ದೀಕ್ಷಿತ್‌ ಕಾಲ್‌ಷೀಟ್‌ ಸಿಗುವುದೇ ಕಷ್ಟವಿತ್ತು. ‘ಅಬೋಧ್’ ತೆರೆಕಂಡು ನಾಲ್ಕು ವರ್ಷಗಳ ನಂತರ ‘ತೇಜಾಬ್’ ಹಿಂದಿ ಸಿನಿಮಾ ಬಿಡುಗಡೆಯಾದ ಮೇಲೆ ಮಾಧುರಿ ತಾರಾಮೌಲ್ಯ ಗಗನಕ್ಕೆ ಏರಿದ್ದು.

‘ರಾಮ್‌ ಲಖನ್’, ‘ಕಿಶನ್‌ ಕನ್ಹಯ್ಯ’, ‘ತ್ರಿದೇವ್’, ‘ಬೇಟಾ’, ‘ಸಾಜನ್’, ‘ಪರಿಂದಾ’ ಹೀಗೆ ಶುರುವಾದ ಸಿನಿಪಯಣ ‘ಹಮ್‌ ಆಪ್‌ ಕೆ ಹೈ ಕೌನ್‌’ ಬರುವಷ್ಟರ ಹೊತ್ತಿಗೆ ದೊಡ್ಡ ತಿರುವಿನಲ್ಲಿತ್ತು. ಆ ಸಿನಿಮಾಗೆ ಸಲ್ಮಾನ್‌ ಖಾನ್‌ಗಿಂತ ಹೆಚ್ಚು ಸಂಭಾವನೆಯನ್ನು ಮಾಧುರಿ ಪಡೆದರೆನ್ನುವ ಸುದ್ದಿ ಅಂದಿನಿಂದಲೂ ಇದೆ. ಮದುವೆಯಾದ ಮೇಲೆ ಮಾಧುರಿ ಪದೇ ಪದೇ ಅಭಿನಯದಿಂದ ದೊಡ್ಡ ಬ್ರೇಕ್‌ ತೆಗೆದುಕೊಂಡರು. 2007ರಲ್ಲಿ ‘ಆಜಾ ನಾಚ್‌ಲೆ’ ಬಂದರೂ ಹೆಚ್ಚು ಜನರ ಮನ ಗೆಲ್ಲಲಿಲ್ಲ. 2014ರ ‘ಗುಲಾಬ್ ಗ್ಯಾಂಗ್‌’ ಕೂಡ ನಿರೀಕ್ಷೆಯನ್ನು ಮಕಾಡೆ ಮಾಡಿತು. ಈಗ ‘ಕಲಂಕ್’ ಸಿನಿಮಾ ಕೂಡ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. ಮಾಧುರಿ ಮುಖದ ಅಭಿನಯದ ಗೆರೆಗಳು ಮಾಯವಾಗಿವೆ ಎಂಬ ಬೇಸರವೂ ಅವರ ಅಭಿಮಾನಿಗಳಿಗೆ ಇದೆ.

ನಟಿ, ನಿರ್ಮಾಪಕಿ, ಟಿ.ವಿ. ಕಾರ್ಯಕ್ರಮಗಳ ಮುಖ–ಎಂದೆನಿಸಿಕೊಂಡಿರುವ ಮಾಧುರಿ ಬಾಲ್ಯದಲ್ಲಿ ಸಿನಿಮಾ ನಟಿಯಾಗಬೇಕು ಎಂದು ಯಾವತ್ತೂ ಭಾವಿಸಿರಲಿಲ್ಲವಂತೆ. ಅಕಸ್ಮಾತ್ತಾಗಿ ಸಿಕ್ಕ ಅವಕಾಶದ ಹಗ್ಗವನ್ನೇ ಅವರು ಕಾಮನಬಿಲ್ಲಾಗಿಸಿಕೊಂಡು ಜೀಕಿದ ಪರಿ ಅಭಿಮಾನಿಗಳಿಗೆ ಗೊತ್ತೇ ಇದೆ.

ಮೂರನೇ ವಯಸ್ಸಿನಲ್ಲಿ ಕಥಕ್ ನೃತ್ಯ ಕಲಿಯಲಾರಂಭಿಸಿದ ಮಾಧುರಿ, ಏಳನೇ ವಯಸ್ಸಿನಲ್ಲಿ ಪತ್ರಿಕೆಯಲ್ಲಿ ತನ್ನ ಫೋಟೊ ಹಾಗೂ ಪ್ರದರ್ಶನದ ಕುರಿತು ಮೆಚ್ಚುಗೆಯ ಮಾತುಗಳನ್ನು ಓದಿ ಪುಳಕಗೊಂಡಿದ್ದರು. ಒಂಬತ್ತನೇ ವಯಸ್ಸಿನಲ್ಲಿದ್ದಾಗ ಕಥಕ್ ನೃತ್ಯದ ಹೆಚ್ಚುವರಿ ಅಭ್ಯಾಸಕ್ಕೆಂದೇ ಅವರಿಗೆ ಶಿಷ್ಯವೇತನ ಲಭಿಸಿತ್ತು. ಇವತ್ತಿಗೂ ಮಾಧುರಿ ನೃತ್ಯದ ವರಸೆಗಳನ್ನು ಕಂಡು ಮೆಚ್ಚುವ ದೊಡ್ಡ ವರ್ಗವಿದೆ. ‘ನನ್ನ ಅಭಿನಯದ ಇನಿಂಗ್ಸ್‌ ಇನ್ನೂ ಬಾಕಿ ಇದೆ’ ಎಂದು ಮಾಧುರಿ 51ನೇ ವಯಸ್ಸಿನಲ್ಲೂ ಹೇಳುತ್ತಿರುವುದನ್ನು ಕೇಳಿದರೆ ಸೋಜಿಗ ಪಡಲೇಬೇಕು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !