ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮಾಡ್ರಿ ಸರಿ ಹೋಗ್ತಾನೆ ಹಾಡುಗಳ ಸುರಿಮಳೆ

Last Updated 23 ಜನವರಿ 2020, 19:30 IST
ಅಕ್ಷರ ಗಾತ್ರ

‘ರಂಕಲ್‌ ರಾಟೆ’ ಚಿತ್ರ ನಿರ್ದೇಶಿಸಿದ್ದ ಗೋಪಿ ಕೆರೂರ್‌ಗೆ ‘ಮದುವೆ ಮಾಡ್ರಿ ಸರಿಹೋಗ್ತಾನೆ’ ಎರಡನೇಸಿನಿಮಾ. ಈ ಚಿತ್ರದಲ್ಲಿ ಹನ್ನೊಂದು ಹಾಡುಗಳಿರುವುದು ವಿಶೇಷ. ‘ಪ್ರೇಮಲೋಕ’ದಂತೆ ಇದುಸಂಪೂರ್ಣ ಸಂಗೀತಮಯ ಚಿತ್ರವೆನ್ನುವ ಅಗ್ಗಳಿಕೆಗೆ ಇದು ಪಾತ್ರವಾಗಲಿದೆ ಎನ್ನುವ ನಿರೀಕ್ಷೆ ಅವರದ್ದು.ಅವಿನಾಶ್‌ ಬಾಸೂತ್ಕರ್‌ ಸಂಗೀತ ನಿರ್ದೇಶನ ಮತ್ತು ಗೋಪಿ ಕೆರೂರ್‌ ಸಾಹಿತ್ಯ ರಚನೆಯ ಹಾಡುಗಳನ್ನು ಸುಖ್ವಿಂದರ್‌ ಸಿಂಗ್‌, ಶಾನ್‌, ಸಂಚಿತ್‌ ಹೆಗಡೆ, ಅನನ್ಯ ಭಟ್‌,ರಾಮಚಂದ್ರ ಹಡಪದ್ ಅವರಂತಹ ಗಾಯಕರು ಹಾಡಿದ್ದು, ಹಾಡುಗಳು ಕೇಳಲು ಹಿತವಾಗಿವೆ.

‘ವ್ಯಕ್ತಿ ಪ್ರೀತಿಯ ಬಲೆಯಲ್ಲಿ ಬಿದ್ದರೆ‌ ಅದು ಹೇಗೆ ಆತನನ್ನು ದಡ ಸೇರಿಸುತ್ತದೆ ಎನ್ನುವುದು ಈಚಿತ್ರದ ಕಥಾಹಂದರ.ಸಂಬಂಧಗಳು ಹೇಗಾಗುತ್ತಿವೆ, ಹಬ್ಬಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ಉತ್ತರ ಕರ್ನಾಟಕದ ಸೊಗಡಿನ ಶೈಲಿಯಲ್ಲಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಎಲ್ಲ ಚಿತ್ರಗಳಲ್ಲೂ ಸಂಭಾಷಣೆ ಮೂಲಕ ಚಿತ್ರದ ಕಥೆ ಹೇಳಿದರೆ, ಇದರಲ್ಲಿ ಹಾಡಿನ ಮೂಲಕವೇ ಕಥೆ ಹೇಳಲಾಗುತ್ತದೆ. ಸಂಭಾಷಣೆ ಕಡಿಮೆ ಇಟ್ಟು, ಸಂಗೀತಕ್ಕೆ ಹೆಚ್ಚು ಆದ್ಯತೆ ಕೊಟಿದ್ದೇವೆ. ಇದೊಂದು ಪಕ್ಕಾ ಸಂಗೀತಮಯ’ ಚಿತ್ರ ಎನ್ನುವ ಮಾತು ಸೇರಿಸಿದರು ಗೋಪಿ.

ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿರುವ ಹಿರಿಯ ನಟ ರಮೇಶ್‌ ಭಟ್‌, ‘ನನಗೆ ಸಂಗೀತ ಗೊತ್ತಿಲ್ಲದಿದ್ದರೂ, ಹಾಡಲು ಬಾರದಿದ್ದರೂ ನಾನು ನಾಲ್ಕೈದು ಚಿತ್ರಗಳಲ್ಲಿ ಸಂಗೀತ ನಿರ್ದೇಶಕ, ಸಂಗೀತ ಪಾಠ ಮಾಡುವ ಮೇಷ್ಟ್ರು ಪಾತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲೂ ನಾನು ಸುಖ್ವಿಂದರ್‌ ಸಿಂಗ್‌ ಹಾಡಿರುವ ಹಾಡನ್ನು ಆಲಾಪ ಮಾಡುವ ಪಾತ್ರ ಮಾಡಿದ್ದೇನೆ.ಸಿನಿಮಾ ಮತ್ತು ವಾಸ್ತವ ಬದುಕಿನ ನಡುವೆ ಇರುವ ವಿಪರ್ಯಾಸವಿದು’ ಎಂದರು.

ಚಿತ್ರದ ನಾಯಕ ಶಿವಚಂದ್ರಕುಮಾರ್‌ಗೆ ಇದು ಚೊಚ್ಚಲ ಚಿತ್ರ. ಎಂಬಿಎ ಪದವೀಧರನಾಗಿದ್ದು, ಐಸಿಐಸಿಐ ಬ್ಯಾಂಕಿನಲ್ಲಿ ಡೆಪ್ಯುಟಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ನಟನಾಗಬೇಕೆಂಬ ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆರಂಭದಲ್ಲಿ ತಂದೆ ವಿರೋಧಿಸಿದರೂ ತಾಯಿಯ ಬೆಂಬಲ,ಪ್ರೋತ್ಸಾಹದಿಂದ ನಟನಾಗುವ ಕನಸು ಕೈಗೂಡಿದೆ ಎಂದು ಶಿವಚಂದ್ರಕುಮಾರ್‌ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು. ‘ಚಿತ್ರದಲ್ಲಿ ನಾನು ಉಂಡಾಡಿ ಗುಂಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಭಾವುಕತೆ, ಹಾಸ್ಯ ಸಮಪ್ರಮಾಣದಲ್ಲಿ ಬೆರೆತಿದೆ’ ಎಂಬ ಮಾತು ಸೇರಿಸಿದರು.

ನಾಯಕಿ ಆರಾಧ್ಯಗೂ ಇದು ಚೊಚ್ಚಲ ಚಿತ್ರ. ‘ಮೊದಲ ಚಿತ್ರದಲ್ಲೇ ನಾಯಕಿಯಾಗಿರುವುದಕ್ಕೆ ತುಂಬಾ ಖುಷಿಯಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸಿರುವ ತೃಪ್ತಿ ಇದೆ. ಪ್ರೇಕ್ಷಕರು ಆಶೀರ್ವದಿಸಿ, ಪ್ರೋತ್ಸಾಹಿಸಬೇಕು’ ಎಂಬ ಕೋರಿಕೆ ಇಟ್ಟರು ಆರಾಧ್ಯ.

ನಾಯಕನ ತಾಯಿ ಪಾತ್ರ ನಿಭಾಯಿಸಿರುವಅರುಣ್ ಬಾಲರಾಜ್, ಈ ಪಾತ್ರ ನಿಭಾಯಿಸಲು ನನ್ನಿಂದ ಸಾಧ್ಯವೇ ಎನ್ನುವ ಅನುಮಾನ ಕಾಡಿತ್ತು. ಪಾತ್ರ ಸಹಜವಾಗಿ ಮೂಡಿ ಬಂದಿದ್ದು, ನ್ಯಾಯ ದಕ್ಕಿಸಿಕೊಟ್ಟಿರುವ ತೃಪ್ತಿ ಇದೆ ಎಂದರು.

ಸಂಗೀತ ನಿರ್ದೇಶಕ ಅವಿನಾಶ್‌ ಬಾಸೂತ್ಕರ್‌, ‘ಹನ್ನೊಂದು ಹಾಡುಗಳನ್ನು ಪ್ರೇಕ್ಷಕ ಅರಗಿಸಿಕೊಳ್ಳಲು ಸಾಧ್ಯವೇ ಎನ್ನುವ ಅನುಮಾನ, ಗೊಂದಲ ಆರಂಭದಲ್ಲಿ ಕಾಡಿದ್ದು ಸಹಜ. ಆದರೆ, ನಿರ್ದೇಶಕರು ನಮ್ಮ ಅನುಮಾನ, ಗೊಂದಲ ನಿವಾರಿಸಿದರು. ಜಾನಪದ ಸೊಗಡು ಹೆಚ್ಚಿರುವ ಈ ಹಾಡುಗಳಿಗೆ ಒಳ್ಳೆಯ ಸಂಗೀತ ಸಂಯೋಜಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಈ ಹಾಡುಗಳು ಜನರಿಗೆ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ’ ಎನ್ನುವ ಭರವಸೆ ವ್ಯಕ್ತಪಡಿಸಿದರು.

ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ ಅವರದ್ದು.ಚಿತ್ಕಲಾ ಬಿರಾದಾರ್, ಕೃಷ್ಣಮೂರ್ತಿ ಕವತ್ತಾರ್‌,ಸದಾನಂದ ಕಾಳೆ ತಾರಾಗಣದಲ್ಲಿದ್ದಾರೆ.

ಸಿನಿಮಾಕ್ಕೆ ಬದುಕು ಬದಲಿಸುವ ಶಕ್ತಿ ಇದೆ

ಚಿತ್ರದ ಹಾಡುಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್‌ಪಿ ರವಿ ಡಿ.ಚನ್ನಣ್ಣನವರ್, ಜನರ ಬದುಕನ್ನು ಬದಲಿಸುವ, ಸಮಾಜವನ್ನು ಸುಧಾರಿಸುವ ಶಕ್ತಿ ರಂಗಭೂಮಿ, ಜಾನಪದ ಹಾಗೂ ಸಾಹಿತ್ಯಕ್ಕೆ ಇರುವಂತೆ ಸಿನಿಮಾ ಮಾಧ್ಯಮಕ್ಕೂ ಇದೆ. ಸಮಾಜದ ಆಗುಹೋಗುಗಳಿಗೆ, ಸಮಾಜದಲ್ಲಿ ತಲೆದೋರುವ ಸಮಸ್ಯೆಗಳಿಗೆ ಪರಿಹಾರ ತೋರಿಸುವ ಜತೆಗೆ ಜನಜಾಗೃತಿಯನ್ನು ಸಿನಿಮಾ ಮಾಧ್ಯಮ ಮಾಡುತ್ತಿದೆ. ಈ ರಂಗದಲ್ಲಿರುವ ಸೃಜನಶೀಲತೆ ಮತ್ತು ಹೊಸಬರ ಪ್ರಯತ್ನವನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ. ಸಿನಿಮಾ ರಂಗ ನನಗೆ ಗೊತ್ತಿಲ್ಲದ ಜಗತ್ತು. ನನಗೂ ಸಿನಿಮಾ ನೋಡುವ ಹವ್ಯಾಸ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT