ಹೊಸ ರೂಪದಲ್ಲಿ ‘ಮಹಾದೇವಿ’

7

ಹೊಸ ರೂಪದಲ್ಲಿ ‘ಮಹಾದೇವಿ’

Published:
Updated:
Prajavani

ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಮಹಾದೇವಿ’ ಧಾರಾವಾಹಿಯು ಹೊಸ ತಿರುವು ಪಡೆದುಕೊಳ್ಳುತ್ತಿದೆ. 900 ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿಯಲ್ಲಿ ಪುಟಾಣಿ ಹಿರಣ್ಮಯಿಯ ಅಧ್ಯಾಯ ಮುಕ್ತಾಯಗೊಳ್ಳುತ್ತಿದೆಯಂತೆ. ಸೋಮವಾರದಿಂದ 20 ವರ್ಷದ ತರುಣಿ ಹಿರಣ್ಮಯಿಯ ಪ್ರವೇಶವಾಗುತ್ತಿದೆ. ಮಾತ್ರವಲ್ಲ ಹಳೆಯ ಕಥೆ ಹಾಗೂ ಪಾತ್ರಗಳ ಪರ್ವ ಮುಗಿದು ಹೊಸ ಪಾತ್ರಗಳು ತೆರೆದುಕೊಳ್ಳಲಿವೆಯಂತೆ.

ತನ್ನವರನ್ನೆಲ್ಲ ಕಳೆದುಕೊಂಡ ಪುಟ್ಟ ಹಿರಣ್ಮಯಿಯು ಒಂಟಿಯಾಗಿ ಊರು ಬಿಟ್ಟು ದೂರ ಹೋಗುತ್ತಾಳೆ. ಅರ್ಚಕರೊಬ್ಬರ ನೆರವಿನಿಂದ ಅಪಾಯಕಾರಿ ಸರ್ಪವನ ದಾಟುತ್ತಾಳೆ. ಕಾಡುದಾರಿಯಲ್ಲಿ ಮುಳ್ಳು ಚುಚ್ಚಿ ತೊಂದರೆ ಅನುಭವಿಸುತ್ತಿದ್ದ ಆನೆ ಮರಿಯನ್ನು ಕಂಡು, ಅದರ ಕಾಲಿಗೆ ಚುಚ್ಚಿದ್ದ ಮುಳ್ಳು ತೆಗೆದು ಉಪಚರಿಸುತ್ತಾಳೆ. ಆ ಆನೆ ಮರಿಯು  ಆಕೆಯನ್ನು ಹಿಂಬಾಲಿಸಿ ಬರುತ್ತದೆ. ದೂರ ದಾರಿಯನ್ನು ಕ್ರಮಿಸಿ ಹಿರಣ್ಮಯಿಯು ಮೂಕಾಂಬಿಕೆ ದೇವಸ್ಥಾನಕ್ಕೆ ಬರುತ್ತಾಳೆ. ಅಲ್ಲಿ ಭಕ್ತಿಪರವಶಳಾಗಿ ಹಾಡುತ್ತಾಳೆ. ಆಕೆಯ ಗಾನ ಮಾಧುರ್ಯಕ್ಕೆ ಮನಸೋತ ಆ ದೇಗುಲದ ನಾದಸ್ವರ ವಾದಕ ವರದರಾಜ, ಆಕೆಯನ್ನು ದತ್ತುಪಡೆದು ಸಾಕುತ್ತಾರೆ. ತಮ್ಮ ಸಂಗೀತ ಜ್ಞಾನವನ್ನು ಧಾರೆ ಎರೆಯುತ್ತಾರೆ. ಬೆಳೆದು ದೊಡ್ಡವಳಾಗುತ್ತ ಹಿರಣ್ಮಯಿಯು ನಾದಸ್ವರ ವಾದಕಿಯಾಗಿ ಹೆಸರು ಗಳಿಸುತ್ತಾಳೆ.

ಹಿರಣ್ಮಯಿಯನ್ನು ಹಿಂಬಾಲಿಸಿ ಬಂದ ಆನೆಮರಿಯೂ ಅದೇ ದೇವಸ್ಥಾನದಲ್ಲಿ ಬೆಳೆದು, ಹಿರಣ್ಮಯಿಯ ಸುಖ ದುಃಖ ಹಂಚಿಕೊಳ್ಳುವ ಸ್ನೇಹಿತನಾಗಿ, ಕಾಪಾಡುವ ಸೋದರನಾಗಿ ದೇವಸ್ಥಾನದ ಆನೆಯಾಗಿ, ಹಿರಣ್ಮಯಿಯ ಜೀವನದ ಏಳುಬೀಳುಗಳಿಗೆ ಮೂಕಸಾಕ್ಷಿಯಾಗಿರುತ್ತದೆ. ಕಥೆ ಹೀಗೆ ಹೊಸ ಹೊಸ ಅಧ್ಯಾಯಗಳಲ್ಲಿ ತೆರೆದುಕೊಳ್ಳಲಿದೆಯಂತೆ.

ತರುಣಿ ಹಿರಣ್ಮಯಿಯ ಪಾತ್ರದಲ್ಲಿ ಹೊಸ ನಟಿ ಗಗನಾ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕ ಸೂರ್ಯನ ಪಾತ್ರದಲ್ಲಿ ವಿವೇಕ್ ಸಿಂಹ, ಸಾಕುತಂದೆ ವರದರಾಜ್ ಪಾತ್ರದಲ್ಲಿ ರಂಗನಟ ಧರ್ಮೇಂದ್ರ ಅರಸ್ ನಟಿಸುತ್ತಿದ್ದಾರೆ. ಇದಲ್ಲದೆ ದೊಡ್ಡ ತಾರಾಗಣವೇ ‘ಮಹಾದೇವಿ’ ಧಾರಾವಾಹಿಯಲ್ಲಿದೆ.

‘ಜೀ ಕನ್ನಡದ ಧಾರಾವಾಹಿಗಳಲ್ಲಿ ‘ಮಹಾದೇವಿ’ ತನ್ನದೇ ಛಾಪು ಮೂಡಿಸಿದೆ. ವೀಕ್ಷಕರ ಭಾವನೆಗಳನ್ನು ಅರಿತು ಹಿರಣ್ಮಯಿಯ ಕಥೆಯನ್ನು ಮುಂದುವರಿಸಲು ವಾಹಿನಿ ನಿರ್ಧರಿಸಿತು’ ಎನ್ನುತ್ತಾರೆ ಚಾನೆಲ್‍ನ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.

‘ಮಹಾದೇವಿ ಧಾರಾವಾಹಿಯನ್ನು ಹೊಸ ರೂಪದಲ್ಲಿ ಕಟ್ಟಿಕೊಡುವುದು ಒಂದು ಸವಾಲಿನ ಕೆಲಸ. ಈ ಸವಾಲನ್ನು ಎದುರಿಸಿ ವೀಕ್ಷಕರ ಮನ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ನಿರ್ದೇಶಕ ರಮೇಶ್ ಇಂದಿರಾ. ಸೋಮವಾರದಿಂದ (ಫೆ. 4) ಶುಕ್ರವಾರದವರೆಗೆ ರಾತ್ರಿ 8:30 ಕ್ಕೆ ಹೊಸ ರೂಪದಲ್ಲಿ ‘ಮಹಾದೇವಿ’ ಪ್ರಸಾರವಾಗಲಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !