ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಢಚಾರಿಣಿ 'ಮಹಿರ' ಈ ವಾರ ತೆರೆಗೆ

Last Updated 22 ಜುಲೈ 2019, 12:50 IST
ಅಕ್ಷರ ಗಾತ್ರ

ಲಂಡನ್ ಫಿಲಂ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಮಹೇಶ್ ಗೌಡ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ‘ಮಹಿರ’ ಈ ವಾರ (ಜುಲೈ 26) ತೆರೆಗೆ ಬರುತ್ತಿದೆ. ಮಾಜಿ ಗೂಢಚಾರಿಣಿಯೊಬ್ಬಳು ತನ್ನ ಮಗಳನ್ನು ರಕ್ಷಿಸಿಕೊಳ್ಳಲು ನಡೆಸುವ ಹೋರಾಟದ ಕಥೆ ಇರುವ ಚಿತ್ರ ಇದು.

‘ಒಂದು ಮೊಟ್ಟೆಯ ಕಥೆ’ ಚಿತ್ರದ ಬೋಳು ಮಂಡೆಯ ಹೀರೊ ರಾಜ್‌ ಬಿ. ಶೆಟ್ಟಿ ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕನ್ನಡತಿ ವರ್ಜಿನಿಯಾ ರಾಡ್ರಿಗಸ್ ಮಾಜಿ ಗೂಢಚಾರಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಮಗಳ ಪಾತ್ರದಲ್ಲಿ ಚೈತ್ರಾ ನಟಿಸಿದ್ದಾರೆ.

ಚಿತ್ರದ ಬಿಡುಗಡೆ ಕುರಿತು ಮಾಹಿತಿ ನೀಡಲು ಮಹೇಶ್ ಗೌಡ ಸುದ್ದಿಗೋಷ್ಠಿ ಕರೆದಿದ್ದರು. ‘ಇದರಲ್ಲಿ ಮಾಸ್ ಚಿತ್ರಗಳಲ್ಲಿ ಇರುವ ಆ್ಯಕ್ಷನ್ ದೃಶ್ಯಗಳು ಇಲ್ಲ. ಆದರೆ, ತಾಯಿಯೊಬ್ಬಳು ತನ್ನ ಮಗಳನ್ನು ಉಳಿಸಿಕೊಳ್ಳಲು ಏನೆಲ್ಲ ಮಾಡಬಹುದೋ ಅಷ್ಟರಮಟ್ಟಿಗಿನ ಆ್ಯಕ್ಷನ್ ದೃಶ್ಯಗಳು ಇವೆ’ ಎಂದರು ಮಹೇಶ್.

ಕನ್ನಡದ ವೀಕ್ಷಕರು ಇವತ್ತಿನವರೆಗೆ ನೋಡಿರದ ಅಮ್ಮ–ಮಗಳ ಸಂಬಂಧದ ಕಥೆಯನ್ನು, ಹೊಸ ಬಗೆಯ ನಿರೂಪಣೆಯನ್ನು ಈ ಚಿತ್ರದಲ್ಲಿ ವೀಕ್ಷಿಸಬಹುದು ಎಂಬ ಭರವಸೆ ನೀಡಿದರು. ‘ಮನೆಯವರೆಲ್ಲ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ಚಿತ್ರ ಇದು’ ಎಂದು ಸಿನಿತಂಡ ಹೇಳಿದೆ.

ಈ ಚಿತ್ರಕ್ಕೆ ಬಂಡವಾಳ ಹೂಡಿರುವವರು ಲಂಡನ್‌ ನಿವಾಸಿ ಕನ್ನಡಿಗ ವಿವೇಕ್ ಕೋಡಪ್ಪ. ‘ಮಹಿರ ಚಿತ್ರದ ಕಥೆ ಇಷ್ಟವಾಯಿತು. ಇದು ನನ್ನ ಸ್ನೇಹಿತರಿಗೆ ಕೂಡ ಇಷ್ಟವಾಗಿ, ಅವರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಬಂತು. ಹಾಗಾಗಿ, ಚಿತ್ರಕ್ಕೆ ಹಣ ಹೂಡಿಕೆ ಮಾಡಿದೆ’ ಎಂದರು ವಿವೇಕ್.

ವರ್ಜಿನಿಯಾ ಅವರಿಗೆ ನಟನೆ ಹೊಸದಲ್ಲವಾದರೂ, ಆ್ಯಕ್ಷನ್ ದೃಶ್ಯಗಳಲ್ಲಿ ಅಭಿನಯಿಸುವುದು ಸವಾಲಿನ ಕೆಲಸ ಆಗಿತ್ತಂತೆ. ಕೆಲವು ದೃಶ್ಯಗಳ ಚಿತ್ರೀಕರಣದ ನಂತರ ಮೈಯೆಲ್ಲ ನೋವು ಬರುತ್ತಿದ್ದರೂ, ಹೊಸ ಹುರುಪಿನಿಂದ ಮುಂದಿನ ದೃಶ್ಯಗಳ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದುದನ್ನು ನೆನಪು ಮಾಡಿಕೊಂಡರು ವರ್ಜಿನಿಯಾ.

ತಾಯಿಯ ಶಕ್ತಿಯನ್ನು ತೋರಿಸುವ ಕಥೆ ಇದರಲ್ಲಿರುವ ಕಾರಣ ‘ಮಹಿರ’ ಎಂಬ ಹೆಸರಿಡಲಾಗಿದೆ. ‘ಮಹಿರ’ ಅಂದರೆ ನಾರಿಯ ಶಕ್ತಿ ಎಂಬ ಅರ್ಥ ಸಂಸ್ಕೃತದಲ್ಲಿ ಇದೆ ಎಂದು ಚಿತ್ರತಂಡ ಹೇಳಿದೆ. ಮಂಗಳೂರು, ಸಾಗರ, ಶಿವಮೊಗ್ಗ, ಬೆಂಗಳೂರು, ಹೊನ್ನಾವರದಲ್ಲಿ ಚಿತ್ರೀಕರಣ ನಡೆದಿದೆ.

ರಾಕೇಶ್ ಯು.ಪಿ. ಮತ್ತು ನೀಲಿಮಾ ರಾವ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT