ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿವುಡ್‌ಗೆ ‘ವೈರಸ್‌’

Last Updated 30 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಸುಸ್ತಾದ ವ್ಯಕ್ತಿ ಕೆಮ್ಮುತ್ತಾ ಆಟೊ ಹತ್ತಿ ಕುಳಿತುಕೊಳ್ಳುತ್ತಾನೆ. ಆಟೊ ಚಾಲಕ ತಕ್ಷಣ ಕೆಳಗಿಳಿದು ಆ ವ್ಯಕ್ತಿಯನ್ನು ಬೈಯುತ್ತಾನೆ. ತೊಲಗು ಇಲ್ಲಿಂದ…ಬೇಗ ತೊಲಗು ಎಂದು ಗದರಿಸುತ್ತಾನೆ. ಆ ವ್ಯಕ್ತಿ ಕೂಡು ರಸ್ತೆಗೆ ಹೋಗಿ ದೂರದಿಂದ ಬರುತ್ತಿರುವ ಬೈಕ್‌ಗೆ ಕೈ ತೋರಿಸಿ ಡ್ರಾಪ್ ಕೇಳುತ್ತಾನೆ. ಇನ್ನೇನು ಬೈಕ್ ಸವಾರ ಆತನಿಗೆ ಸಹಾಯ ಮಾಡಬೇಕು ಎನ್ನುವಷ್ಟರಲ್ಲಿ ಆಟೊ ಚಾಲಕ ಆಚೆ ಕಡೆಯಿಂದ ಜೋರಾಗಿ ಕೂಗುತ್ತಾನೆ ‘ಬೇಗ ತಪ್ಪಿಸಿಕೊ…ಆತನಿಗೆ ನಿಪಾ ಇದೆ…’ ಸವಾರ ಜೀವಭಯದಿಂದ ಅಡ್ಡಾದಿಡ್ಡಿ ಬೈಕ್‌ ಓಡಿಸುತ್ತಾ ಸಾಗುತ್ತಾನೆ.

ಕಳೆದ ವರ್ಷ ಕೇರಳದಲ್ಲಿ ಭೀತಿ ಹುಟ್ಟಿಸಿದ ’ನಿಫಾ‘ ವೈರಸ್ ಕುರಿತು ಮಲಯಾಳಂನಲ್ಲಿ ಸಿದ್ಧವಾಗಿರುವ ಚಿತ್ರದ ದೃಶ್ಯವಿದು.

ನೈಜ ಘಟನೆಗಳನ್ನು ಆಧರಿಸಿ ಮಲಯಾಳಂನಲ್ಲಿ ನಿರ್ಮಾಣವಾದ ಚಿತ್ರಗಳಿಗೆ ಲೆಕ್ಕವಿಲ್ಲ.ಅವುಗಳ ಪೈಕಿ ಹೆಚ್ಚಿನವು ಪತ್ತೇದಾರಿ ಕಾದಂಬರಿಯ ಮಾದರಿಯವು. ಕೊಲೆ ಪ್ರಕರಣಗಳ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಮಾಡುವ ಸಿನಿಮಾಗಳು. ಆದರೆನಿಫಾ ವೈರಸ್ ಹಿನ್ನೆಯಲ್ಲಿ ನಿರ್ಮಾಣವಾಗಿರುವ ‘ವೈರಸ್’ಚಿತ್ರ ತೀರಾ ಭಿನ್ನ. ಜೂನ್ ಮೊದಲವಾರದಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಟ್ರೇಲರ್ ನಿಫಾ ವೈರಸ್ ಸೃಷ್ಟಿಸಿದ್ದ ಭೀಕರತೆಯನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಸಿದ್ಧಗೊಂಡಿರುವ ‘ವೈರಸ್’ ಆಸ್ಪತ್ರೆಯಲ್ಲಿ ರೋಗಿಗಳ ನರಳಾಟ,ಅವರ ಸಂಬಂಧಿಕರ ಪರದಾಟ,ವೈದ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ನಿಪಾದ ಕುರಿತು ನೀಡುವ ಆಘಾತಕಾರಿ ವಿವರಣೆ ಮುಂತಾದ ಹೃದಯ ಕಲಕುವ ಸನ್ನಿವೇಶಗಳನ್ನು ಒಳಗೊಂಡಿದ್ದು ಮನಕಲಕುವಂತಿದೆ.

ನಿಫಾ ವೈರಸ್‌ಗೆ ಮೊದಲ ಬಲಿಯಾದ ಯುವತಿಯ ತಾಯಿ ಹೇಳುವ ‘ನನ್ನ ಮಗಳಿಂದಾಗಿ ಎಲ್ಲರಿಗೂ ಈ ರೋಗ ಬಂತಲ್ಲವೇ…’ ಎಂಬ ಮಾತು ನಮ್ಮನ್ನು ಅಲ್ಲಾಡಿಸುತ್ತದೆ. ಯುವ ನಟ–ನಟಿಯರೇ ಅಭಿನಯಿಸಿರುವುದು ಚಿತ್ರದ ಮತ್ತೊಂದು ವೈಶಿಷ್ಟ್ಯವಾಗಿದೆ.

ನಾಟಕೀಯ ಸನ್ನಿವೇಶಗಳನ್ನು ಒಳಗೊಂಡ, ಕ್ಷಣ ಕ್ಷಣವೂ ತಿರುವುಗಳು ಇರುವ ಚಿತ್ರದಲ್ಲಿ ಭಯ, ಹೋರಾಟ ಮತ್ತು ರಕ್ಷಣೆಯ ರಂಗಗಳನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ.ಭೀತಿಯ ಮಧ್ಯದಲ್ಲೇ ಜನರು ವೈರಸ್ ಕಾಟವನ್ನು ಮೀರಿ ನಿಂತ ಸಾಹಸದ ಕಥೆಯನ್ನೂ ಚಿತ್ರ ಹೇಳುತ್ತದೆ.

ಆಶಿಕ್ ಅಬು, ಚಿತ್ರದ ನಿರ್ದೇಶಕ. ಕುಂಜಾಕೊ ಬೋಬನ್, ಇಂದ್ರಜಿತ್, ಟೊವಿನೊ ಥಾಮಸ್, ಪಾರ್ವತಿ, ರೀಮಾ ಕಲ್ಲಿಂಗಲ್, ಆಸಿಫ್ ಅಲಿ, ಜೋಜು ಜಾರ್ಜ್, ರಮ್ಯಾ ನಂಬೀಶನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಅನುಭವ ಕಥನ

ಸಿನಿಮಾದ ಟ್ರೇಲರ್ ಬಿಡುಗಡೆಯಾದದ್ದೇ ತಡ, ಸಾಮಾಜಿಕ ತಾಣಗಳಲ್ಲಿ ನಿಫಾದ ಕುರಿತ ಅನುಭವ ಕಥನಗಳು ಸಾಲು ಸಾಲಾಗಿ ಬರುತ್ತಿವೆ. ವೈರಸ್‌ನ ಬಾಹುಗಳಲ್ಲಿ ಸಿಲುಕಿ ಕೇರಳ ನಡುಗುತ್ತಿದ್ದಾಗ ವೈಯಕ್ತಿಕವಾಗಿ ಅನುಭವಿಸಿದ ಸಂಕಟ, ಆತಂಕವನ್ನು ಅನೇಕರು ಹಂಚಿಕೊಂಡಿದ್ದಾರೆ.

ದೂರದ ಊರಲ್ಲಿ ಕಾಲೇಜು ಓದುತ್ತಿದ್ದ ಪೊನ್ನು ಉಮ, ಪರೀಕ್ಷೆ ಮುಗಿಸಿ ಕೋಯಿಕ್ಕೋಡ್‌ಗೆ ಬಂದಿಳಿದಾಗ ಕಂಡು ಬಂದ ದೃಶ್ಯಗಳನ್ನು ಮನಸ್ಸಿಗೆ ನಾಟುವಂತೆ ವರ್ಣಿಸಿದ್ದಾರೆ.

‘ಬಸ್ ನಿಲ್ದಾಣದಲ್ಲಿ ಜನರ ಓಡಾಟ ತೀರಾ ಕಡಿಮೆ ಇತ್ತು. ಎಲ್ಲಿ ನೋಡಿದರೂ ಆತಂಕದ ವಾತಾವರಣ. ಕೆಲವರು, ಪಕ್ಕದಲ್ಲಿ ನಿಂತವರು ಮಾತನಾಡಿದರೂ ದೂರ ಸರಿಯುತ್ತಿದ್ದರು. ಯಾರಾದರೂ ಕೆಮ್ಮಿದರೆ ಅಥವಾ ಉಗುಳಿದರೆ ಓಡಿ ಹೋಗುವಂಥ ಸ್ಥಿತಿ ಇತ್ತು…’ ಎಂದು ಉಮಾ ಬರೆದಿದ್ದಾರೆ. ಇಂಥ ಅನೇಕ ಬರಹಗಳು ಈಗ ಜನರ ಮನವನ್ನು ತಟ್ಟುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT