ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆರಳೆಣಿಕೆಯಷ್ಟು ಮಂದಿ: ಚಿತ್ರಪ್ರದರ್ಶನ ಪ್ರಾರಂಭ

ಮಹದೇವಪುರದಲ್ಲಿ ಒಬ್ಬನೇ ಪ್ರೇಕ್ಷಕ!
Last Updated 15 ಅಕ್ಟೋಬರ್ 2020, 20:22 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಾಲ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಗುರುವಾರ ಬೆರಳೆಣಿಕೆಯಷ್ಟು ಮಾತ್ರ ಪ್ರೇಕ್ಷಕರು ಕಂಡು ಬಂದರು. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಾಮಾನ್ಯ ಎನ್ನುವಂತಿರುತ್ತಿದ್ದ ಜನಜಂಗುಳಿ, ನೂಕು–ನುಗ್ಗಲು ಕಂಡು ಬರಲಿಲ್ಲ.

ಸುಮಾರು ಏಳು ತಿಂಗಳ ನಂತರ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಪ್ರಾರಂಭವಾಗಿದ್ದರೂ, ಹೊಸ ಚಿತ್ರಗಳು ಬಿಡುಗಡೆಯಾಗದೇ ಇರುವುದರಿಂದ ಪ್ರೇಕ್ಷಕರ ಸಂಖ್ಯೆ ವಿರಳವಾಗಿತ್ತು. ಏಳೆಂಟು ತಿಂಗಳು ಹಿಂದೆ ಬಿಡುಗಡೆಯಾಗಿದ್ದ ಚಿತ್ರಗಳನ್ನೇ ಈ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಯಿತು.

ಮಹದೇವಪುರ ಬಳಿಯ ಬ್ರೂಕ್‌ ಲಿಡೋ ಮಾಲ್‌ನಲ್ಲಿರುವ ಐನಾಕ್ಸ್‌ನಲ್ಲಿ ‘ಥಪ್ಪಡ್‌’ ಸಿನಿಮಾ ವೀಕ್ಷಿಸಲು ಬಂದಿದ್ದು ಒಬ್ಬರೇ ಪ್ರೇಕ್ಷಕ. ಅವರೊಬ್ಬರಿಗಾಗಿಯೇ ಚಿತ್ರವನ್ನು ಪ್ರದರ್ಶಿಸಲಾಯಿತು. ಮೊದಲ ಪ್ರೇಕ್ಷಕನನ್ನು ಸಿಬ್ಬಂದಿ ಸಂಭ್ರಮದಿಂದ ಸ್ವಾಗತಿಸಿದರು.

ಪಿವಿಆರ್ ಸಿನಿಮಾಸ್, ಐನಾಕ್ಸ್, ಸಿನಿಪೋಲ್‌ನಂತಹ ಮಲ್ಟಿಪ್ಲೆಕ್ಸ್‌ಗಳು ಮತ್ತು ಕೆಲವು ಥಿಯೇಟರ್‌ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಎರಡಂಕಿಯನ್ನೂ ದಾಟಿರಲಿಲ್ಲ. ಟಿಕೆಟ್‌ ದರದಲ್ಲಿ ರಿಯಾಯಿತಿ ಘೋಷಿಸಿದ್ದರೂ ಹೆಚ್ಚು ಜನ ಚಿತ್ರಮಂದಿರಗಳತ್ತ ಸುಳಿಯಲಿಲ್ಲ.

‘ಹೊಸ ಚಿತ್ರಗಳು ಬಿಡುಗಡೆ ಆಗಿಲ್ಲದೇ ಇರುವುದರಿಂದ ಮತ್ತು ಬಹಳಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಇರದ ಕಾರಣ ಪ್ರೇಕ್ಷಕರ ಸಂಖ್ಯೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚು ಪ್ರೇಕ್ಷಕರು ಚಿತ್ರಮಂದಿರಗಳತ್ತ ಹೆಜ್ಜೆ ಹಾಕಬಹುದು’ ಎಂದು ಐನಾಕ್ಸ್‌ನ ಮಾರುಕಟ್ಟೆ ವಿಭಾಗದ ದಕ್ಷಿಣ ಭಾರತ ಪ್ರಾದೇಶಿಕ ವ್ಯವಸ್ಥಾಪಕ ಎಂ.ಎಸ್. ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

‘ಒಬ್ಬರೇ ಪ್ರೇಕ್ಷಕ ಬಂದರೂ ನಾವು ಸಿನಿಮಾ ಪ್ರದರ್ಶನ ಮಾಡಲೇ ಬೇಕಾಗುತ್ತದೆ. ಪ್ರೇಕ್ಷಕರ ಸುರಕ್ಷತೆಗೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಯಾವುದೇ ಆತಂಕವಿಲ್ಲದೆ ಜನ ಸಿನಿಮಾ ವೀಕ್ಷಣೆಗೆ ಬರಬಹುದು’ ಎಂದು ಅವರು ಹೇಳಿದರು.

‘ಮಲ್ಟಿಪ್ಲೆಕ್ಸ್‌ ಹೊರತುಪಡಿಸಿ, ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನ ಪ್ರಾರಂಭ ವಾಗಿದೆ. ಅ.23ರ ನಂತರ ಎಲ್ಲ ಥಿಯೇಟರ್‌ಗಳಲ್ಲಿ ಪ್ರದರ್ಶನ ಪ್ರಾರಂಭವಾಗಬಹುದು. ಆಗ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಚಿತ್ರಮಂದಿರದ ಮಾಲೀಕರೊಬ್ಬರು ಹೇಳಿದರು.

ಚಿತ್ರವೀಕ್ಷಿಸಲು ಬರುವ ಪ್ರೇಕ್ಷಕರು ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಆಸನಗಳ ನಡುವೆ ಅಂತರ ಪಾಲನೆ ಮಾಡಲಾಗಿತ್ತು. ಚಿತ್ರಮಂದಿರಗಳ ಆವರಣದಲ್ಲಿಯೂ ವ್ಯಕ್ತಿಗಳ ನಡುವೆ ಆರು ಅಡಿ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗಿತ್ತು. ಸ್ಯಾನಿಟೈಸರ್‌ಗಳನ್ನು ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT