ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರಿನ ಮಧ್ಯಕಾಲದ ಚರಿತ್ರೆಯ ಮೆಲುಕು

ಮಾಮಾಂಕಂ, ಮರಕ್ಕಾರ್ ಸಿನಿಮಾ
Last Updated 12 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಪದ್ಮಕುಮಾರ್ ನಿರ್ದೇಶನದ ‘ಮಾಮಾಂಕಂ’ ಮತ್ತು ಪ್ರಿಯದರ್ಶನ್ ನಿರ್ದೇಶನದ ‘ಕುಞಾಲಿ ಮರಕ್ಕಾರ್ - ಅರಬ್ಬೀಕಡಲಿಂಡೆ ಸಿಂಹಂ’ ಮಲಯಾಳದ ಬಹುನಿರೀಕ್ಷಿತ ಸಿನಿಮಾಗಳು. ‘ಮಾಮಾಂಕಂ’ ಗುರುವಾರ ತೆರೆಗೆ ಬಂದಿದೆ. ಇನ್ನೊಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಎರಡೂ ಸಿನಿಮಾಗಳಲ್ಲಿ ಮಲಯಾಳ ಚಿತ್ರರಂಗದ ಮಹಾನಟರು ನಟಿಸುತ್ತಿರುವುದು ವಿಶೇಷ. ಮಾಮಾಂಕಂ ಸಿನಿಮಾದಲ್ಲಿ ಸೂಪರ್‌ಸ್ಟಾರ್ ಮಮ್ಮೂಟ್ಟಿ ಹಾಗೂ ‘ಕುಞಾಲಿ ಮರಕ್ಕಾರ್’ ಚಿತ್ರದಲ್ಲಿ ಮೋಹನ್‌ಲಾಲ್ನಾಯಕರಾಗಿದ್ದಾರೆ.

‘ಮಾಮಾಂಕಂ’ ಸಿನಿಮಾ ಮಲಯಾಳ ಮಾತ್ರವಲ್ಲ ತಮಿಳು, ತೆಲುಗು, ಹಿಂದಿ ಅವತರಣಿಕೆಯಲ್ಲಿ ತೆರೆಕಾಣಲಿದ್ದು, ‘ಕುಞಾಲಿ ಮರಕ್ಕಾರ್’ ತಮಿಳು, ತೆಲುಗು, ಹಿಂದಿ, ಅರೇಬಿಕ್, ಚೈನೀಸ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

‘ಮಾಮಾಂಕಂ’, ‘ಕುಞಾಲಿ ಮರಕ್ಕಾರ್’ ಎಂಬ ಹೆಸರುಗಳಲ್ಲಿ ಈ ಹಿಂದೆಯೂ ಸಿನಿಮಾ ಬಂದಿತ್ತು. 1964ರಲ್ಲಿ ಪ್ರೇಮ್ ನಸೀರ್, ಸುಕುಮಾರಿ ನಟಿಸಿದ ‘ಕುಞಾಲಿ ಮರಕ್ಕಾರ್’ ಎಂಬ ಸಿನಿಮಾ ತೆರೆಕಂಡಿತ್ತು. ಕೊಟ್ಟಾರಕ್ಕರ ಶ್ರೀಧರನ್ ನಾಯರ್ ಅವರು ಮರಕ್ಕಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 1979ರಲ್ಲಿ ಪ್ರೇಮ್ ನಸೀರ್, ಜಯನ್ ನಟಿಸಿದ ಸಿನಿಮಾ ಹೆಸರು ‘ಮಾಮಾಂಕಂ’.

ಮಲಯಾಳ ಚಿತ್ರ ರಂಗದಲ್ಲಿ ಪೌರಾಣಿಕ ಚಿತ್ರಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಹೊಸ ತಲೆಮಾರಿನವರೂ ಇಲ್ಲಿ ಪೌರಾಣಿಕ ಚಿತ್ರಗಳನ್ನು ಇಷ್ಟಪಡುತ್ತಾರೆ. ಹಳೆಯ ಕಾಲದ ಕಥೆಗಳನ್ನು ನಾಟಕ, ಸಿನಿಮಾಗಳ ಮೂಲಕ ಜನರು ಇಷ್ಟಪಟ್ಟು ವೀಕ್ಷಿಸುತ್ತಾರೆ. ದೈನಂದಿನ ಜೀವನದ ಕಥೆಗಳನ್ನೇ ಸಿನಿಮಾದಲ್ಲಿ ಸುಂದರವಾಗಿ ನಿರೂಪಿಸುವ ಶೈಲಿಯನ್ನು ಮಲಯಾಳ ಸಿನಿಮಾಗಳಲ್ಲಿ ಕಾಣಬಹುದು.

‘ಮಾಮಾಂಕಂ’ ಚಿತ್ರದ ಬಜೆಟ್ ₹ 45 ಕೋಟಿ. ‘ಕುಞಾಲಿ ಮರಕ್ಕಾರ್’ ಚಿತ್ರದ ಬಜೆಟ್ ₹ 100 ಕೋಟಿ. ಇದು ಮುಂದಿನ ವರ್ಷ ತೆರೆಗೆ ಬರಲಿದೆ.ಮಲಬಾರಿನ ಮಧ್ಯಕಾಲ ಇತಿಹಾಸವನ್ನು ಹೇಳುವ ಚಿತ್ರಗಳಾಗಿವೆ ಇವು.

ಮಾಮಾಂಕಂ ಚಿತ್ರ

‘ಮಾಮಾಂಕಂ’ ಎಂದರೆ ಭಾರತಪ್ಪುಳಂ ನದಿ ತೀರ ತಿರುನವಯದಲ್ಲಿ 12 ವರ್ಷಕೊಮ್ಮೆ ನಡೆದು ಬರುತ್ತಿದ್ದ ಅತಿದೊಡ್ಡ ಹಬ್ಬ. ಮಧ್ಯಕಾಲದಲ್ಲಿ ತಮಿಳುನಾಡು ಮತ್ತು ಕೇರಳದ ವಿವಿಧ ಪ್ರದೇಶಗಳಿಂದ ವ್ಯಾಪಾರಿಗಳು ಬಂದು 28 ದಿನಗಳ ಈ ಹಬ್ಬದಲ್ಲಿ ವ್ಯಾಪಾರ ನಡೆಸುತ್ತಿದ್ದರು. ಆಗ ಕೇರಳ ಹಲವಾರು ತುಂಡುಗಳಾಗಿ ಹಲವಾರು ರಾಜರ ಆಳ್ವಿಕೆಯಲ್ಲಿತ್ತು. 1353 ಮತ್ತು 1361ರಲ್ಲಿ ಕೋಯಿಕ್ಕೋಡ್ (ಮಲಬಾರ್)‌ ರಾಜ ಸಾಮೂದಿರಿ ‘ತಿರುನಾವಾಯ ಯುದ್ಧ’ದ ಮೂಲಕ ತಿರುನಾವಾಯ ಪ್ರದೇಶವನ್ನು ವಶಪಡಿಸಿಕೊಳ್ಳುತ್ತಾನೆ. ಆಮೇಲೆ ಸಾಮೂದಿರಿ ನೇತೃತ್ವದಲ್ಲಿ ಮಾಮಾಂಕಂ ನಡೆಯುತ್ತದೆ. ಆಗ ವಳ್ಳುವನಾಡಿನ ರಾಜ ಸಾಮೂದಿರಿಯನ್ನು ಹತ್ಯೆ ಮಾಡುವುದಕ್ಕಾಗಿ ಆತ್ಮಾಹುತಿ ದಳ ಕಳುಹಿಸಿದರೂ ಆ ಸಂಚು ವಿಫಲವಾಗುತ್ತದೆ. 1755ರಲ್ಲಿ ಮಾಮಾಂಕಂ ನಡೆದಾಗ ಸಾಮೂದಿರಿ ಕೂದಲೆಳೆಯ ಅಂತರದಲ್ಲಿ ಶತ್ರುಗಳ ದಾಳಿಯಿಂದ ತ‍ಪ್ಪಿಸಿಕೊಳ್ಳುತ್ತಾನೆ. 1765ರಲ್ಲಿ ಮೈಸೂರು ರಾಜ ಹೈದರಾಲಿ ಸಾಮೂದಿರಿಯನ್ನು ಪರಾಭವಗೊಳಿಸಿದ್ದು, ಅಲ್ಲಿಗೆ ಮಾಮಾಂಕಂ ಆಚರಣೆಯೂ ನಿಂತು ಹೋಗುತ್ತದೆ.

ಕುಞಾಲಿ ಮರಕ್ಕಾರ್

16ನೇ ಶತಮಾನದಲ್ಲಿ ಕೋಯಿಕ್ಕೋಡ್‌ನ ಸಾಮೂದಿರಿಯ ನೌಕಾಪಡೆಯ ಮುಸ್ಲಿಂ ನಾಯಕನಾಗಿದ್ದವನು ಮೊಹಮ್ಮದ್ ಕುಞಾಲಿ ಮರಕ್ಕಾರ್. ಪೋರ್ಚುಗೀಸರ ವಿರುದ್ದ ನೌಕಾಯುದ್ಧ ಮಾಡಿದ ಧೀರರಾಗಿದ್ದರು ಇವರು. ಮರಕ್ಕಾರ್ ಕುಟುಂಬ ಸಾಮೂದಿರಿಯ ನೌಕಾಪಡೆಯಾಗಿತ್ತು. ಇದರಲ್ಲಿ ಕುಂಞಾಲಿ ಮರಕ್ಕಾರ್ 1, 2, 3, 4 ಹೀಗೆ ನಾಲ್ವರು ಪ್ರಮುಖ ಮರಕ್ಕಾರ್ ಆಗಿದ್ದಾರೆ. ಮರಕ್ಕಾರ್ ಎಂದರೆ ಹಡಗಿನ ಒಡೆಯರು ಎಂಬ ಅರ್ಥವಿದೆ. ಕ್ರಮೇಣ ಅದೊಂದು ವರ್ಗವಾಗಿ ಮಾರ್ಪಟ್ಟಿತು. ಮರಕ್ಕಾಳಂ ಎಂದರೆ ದೋಣಿ, ದೋಣಿ ಬಳಸುವ ಮೀನು ಕಾರ್ಮಿಕರೇ ಮರಕ್ಕಾರ್ ಆದರು ಎಂಬ ಪ್ರತೀತಿ ಇದೆ.

1507 ಮತ್ತು 1600ರ ನಡುವಿನಲ್ಲಿ 4 ಮರಕ್ಕಾರ್‌ರು ಪೋರ್ಚುಗೀಸರ ವಿರುದ್ಧ ಹೋರಾಡಿದ್ದರು. ಆದರೆ ಸಾಮೂದಿರಿ ಮತ್ತು ಪೋರ್ಚುಗೀಸರು ಕೈಜೋಡಿಸಿದಾಗ 4ನೇ ಕುಞಾಲಿ ಮರಕ್ಕಾರ್ ಬಂಧನಕ್ಕೊಳಗಾದನು. ಪೋರ್ಚುಗೀಸರು ಕುಞಾಲಿ ಮರಕ್ಕಾರ್‌ನ್ನು ಗೋವಾದಲ್ಲಿ ಹತ್ಯೆ ಮಾಡಿದ್ದರು ಎಂದು ಹೇಳುತ್ತವೆ ಇತಿಹಾಸದ ಪುಟಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT