ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಮ್ಮುಟ್ಟಿ ‘ರಾಜ’ ಗರ್ಜನೆ

Last Updated 29 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

‘ಞಾ ನ್ ರಾಜ…. ಅವನ್ ಸೂರ್ಯ. ಞಂಙಳ್ ರಂಡಲ್ಲ, ಒನ್ನಾನ್… ಒರೊಟ್ಟ ತಂದಯ್ಕ್ ಪಿರನ್ನ ಮಕ್ಕಳ್…ಎಂಡೆ ಸ್ವಂದಂ ಅನಿಯನ್…’

ಪೃಥ್ವಿರಾಜ್ ಬಗ್ಗೆ ಮಮ್ಮುಟ್ಟಿ ಹೇಳಿದ ಈ ಡಯಲಾಗ್ ಮಾಲಿವುಡ್‌ನಲ್ಲಿ ವರ್ಷಗಳ ಕಾಲ ಭಾರಿ ಸಂಚಲನ ಉಂಟುಮಾಡಿತ್ತು. ಒಂಬತ್ತು ವರ್ಷಗಳ ಹಿಂದೆ ಪ್ರದರ್ಶನ ಕಂಡ ‘ಪೋಕಿರಿ ರಾಜ’ ಎಂಬ ಸಿನಿಮಾದ ಇಂಥಅನೇಕ ಸಂಭಾಷಣೆಗಳ ತುಣುಕುಗಳು ಮಲಯಾಳಂ ಸಿನಿಮಾ ವೀಕ್ಷಕರಿಗೆ ಈಗಲೂ ನೆನಪಿವೆ. ತಮಿಳುನಾಡಿನಲ್ಲಿ ವಾಸವಾಗಿರುವ ‘ಸುಪಾರಿ ರಾಜ’ ತಮ್ಮನ (ಸೂರ್ಯ-ಪೃಥ್ವಿರಾಜ್) ರಕ್ಷಣೆಗಾಗಿ ಕೇರಳಕ್ಕೆ ಬಂದು ಮಾಡುವ ಆಟಾಟೋಪ, ಪೋಕಿರಿ ರಾಜ ಚಿತ್ರದ ಮುಖ್ಯ ವಾಹಿನಿ. ಅರೆ–ಬರೆ ಇಂಗ್ಲಿಷ್ ಮಾತನಾಡುವ ರಾಜ ಚೆನ್ನಾಗಿ ಇಂಗ್ಲಿಷ್ ಗೊತ್ತಿರುವವರಿಗೂ ‘ಪಾಠ’ ಮಾಡುವ ರೀತಿ ಇಡೀ ಚಿತ್ರವನ್ನು ರಸಮಯವಾಗಿಸಿತ್ತು.

ಇದೇ ಮಾದರಿಯಲ್ಲಿ, ಪೋಕಿರಿ ರಾಜ ಚಿತ್ರದ ಎರಡನೇ ಭಾಗ ‘ಮಧುರ ರಾಜ’ ಈಗ ಮಾಲಿವುಡ್‌ನಲ್ಲಿ ಮನೆ ಮಾತಾಗಿದೆ. ಒಂಬತ್ತು ವರ್ಷಗಳ ನಂತರವೂ ಮಮ್ಮುಟ್ಟಿ ಅತ್ಯುತ್ಸಾಹದಿಂದ ಪಾತ್ರವನ್ನು ನಿರ್ವಹಿಸಿದ್ದಾರೆ.ಪೋಕಿರಿ ರಾಜದಲ್ಲಿ ಮಮ್ಮುಟ್ಟಿ ಗೂಂಡಾ ಆಗಿದ್ದರೆ, ಮಧುರರಾಜದಲ್ಲಿ ರಾಜಕಾರಣಿ. ಪೋಕಿರಿ ರಾಜ ಐಪಿಎಸ್‌ಗಳ (ಇಂಡಿಯನ್ ಪೊಲೀಸ್ ಸರ್ವಿಸ್ ಮತ್ತು ಇಂಡಿಯನ್ ಪೋಕಿರಿ ಸರ್ವಿಸ್) ನಡುವಿನ ಸೆಣಸಾಟ ಆಗಿದ್ದರೆ, ಮಧುರ ರಾಜಚಿತ್ರದ ಕಥೆ ರಾಜಕೀಯ ಮೇಲಾಟದ್ದು.

ಮಾಸ್ ಸಿನಿಮಾಗಳಲ್ಲಿ ಕಥೆ ನಗಣ್ಯ ಆಗಿರುತ್ತದೆ. ಆದರೆ ಮಧುರರಾಜದಲ್ಲಿ ಕಥೆಗೂ ಆದ್ಯತೆ ಇದೆ. ಮೈನವಿರೇಳಿಸುವ ರೋಮಾಂಚಕ ದೃಶ್ಯಗಳು ತುಂಬಿರುವ ಚಿತ್ರದಲ್ಲಿ ಹಾಸ್ಯ ರಂಗಗಳಿಗೂ ಕೊರತೆ ಇಲ್ಲ. ಸಲೀಂ ಕುಮಾರ್, ಅಜು ವರ್ಗೀಸ್, ಪ್ರಶಾಂತ್ ಅಲೆಕ್ಸಾಂಡರ್ ಮುಂತಾದಅಪ್ಪಟ ಹಾಸ್ಯ ಕಲಾವಿದರ ಜೊತೆ ಮಮ್ಮುಟ್ಟಿ ಕೂಡ ತಮಾಷೆಯ ಹೊನಲು ಹರಿಸಿದ್ದಾರೆ.

ಪೃಥ್ವಿರಾಜ್ ಬದಲಿಗೆ ಈ ಚಿತ್ರದಲ್ಲಿ ಜಯ್ ಅವರಿಗೆ ಅವಕಾಶ ನೀಡಲಾಗಿದೆ. ನೆಡುಮುಡಿ ವೇಣು, ಸಿದ್ದಿಕ್, ವಿಜಯರಾಘವನ್, ಅನುಶ್ರೀ ಮುಂತಾದ ಪೋಕಿರಿ ರಾಜದ ತಂಡವನ್ನು ಉಳಿಸಿಕೊಳ್ಳಲಾಗಿದೆ.ಜಗಪತಿ ಬಾಬು ವಿಲನ್ ಪಾತ್ರವನ್ನು ನಿರ್ವಹಿಸಿದ ರೀತಿ ಗಮನಾರ್ಹ. ಪೋಕಿರಿ ರಾಜದಲ್ಲಿ ರಾಜನ ‘ಕಾಸ್ಟ್ಯೂಮ್‌ ಸೆನ್ಸ್‌’ ಪ್ರದರ್ಶಿಸಲು ಐಟಮ್‌ ಸಾಂಗ್‌ ಮಾದರಿಯ ಹಾಡಿನ ದೃಶ್ಯವಿದೆ. ಮಧುರ ರಾಜದಲ್ಲಿ ಒಂದಡಿ ಮುಂದಿಟ್ಟಿರುವ ನಿರ್ದೇಶಕರು ಸನ್ನಿ ಲಿಯೋನ್ ಅವರನ್ನು ಕರೆ ತಂದು ರಸಮಯ ಐಟಂ ಸಾಂಗನ್ನೇ ಉಣಬಡಿಸಿದ್ದಾರೆ.‘ಮೋಹ ಮುಂದಿರಿವಾಟ್ಟಿಯ ರ‍್ಯಾವ್‌...ಸ್ನೇಹ ನದಿಯುಡೆ ರಾಸ ನಿಲಾವ್‌...’ ಹಾಡು ಇಡೀ ಸಿನಿಮಾಗೆ ಕಚಗುಳಿಯ ಸ್ಪರ್ಶ ನೀಡಿದೆ.

ಸರಿಸುಮಾರು ಒಂದು ದಶಕದಲ್ಲಿ ಮಲಯಾಳಂ ಸಿನಿಮಾ ರಂಗದಲ್ಲಿ ಆಗಿರುವ ಬದಲಾವಣೆಗಳೂ ಈ ಚಿತ್ರದಲ್ಲಿ ಪ್ರತಿಫಲನಗೊಂಡಿವೆ. ತಂತ್ರಜ್ಞಾನ, ಸಂಗೀತ, ನೃತ್ಯ ಮುಂತಾದ ಎಲ್ಲ ವಿಭಾಗಗಳಲ್ಲೂ ಆಗಿರುವ ‘ಮೌಲ್ಯವರ್ಧನೆ’ಗೆ ಮಧುರ ರಾಜ ಸಾಕ್ಷಿಯಾಗಿದೆ.ಉದಯಕೃಷ್ಣಅವರ ಚಿತ್ರಕಥೆಗೆ ನ್ಯಾಯ ಒದಗಿಸುವಲ್ಲಿ ನಿರ್ದೇಶಕವೈಶಾಖ್ ಯಶಸ್ವಿಯಾಗಿದ್ದಾರೆ.

ಪೋಕಿರಿ ರಾಜದಲ್ಲಿ ಮಮ್ಮುಟ್ಟಿ ‘ನಾನು ಮತ್ತು ನನ್ನ ಪಡೆ ಸ್ಟ್ರಾಂಗ್ ಆಗಿದೆ. ಬರೀ ಸ್ಟ್ರಾಂಗ್‌ ಅಲ್ಲ; ಡಬಲ್ ಸ್ಟ್ರಾಂಗ್..’ ಎಂದು ಹೇಳುವ ಸನ್ನಿವೇಶ ಇದೆ. ಮಧುರ ರಾಜದಲ್ಲಿ ಇದೇ ಸಂಭಾಷಣೆಯನ್ನು ಬಳಸಿ ‘ನಾನು ಮತ್ತು ನನ್ನ ಪಡೆ ಸ್ಟ್ರಾಂಗ್‌ ಆಗಿದೆ. ಬರೀ ಸ್ಟ್ರಾಂಗ್ ಅಲ್ಲ; ತ್ರಿಬಲ್ ಸ್ಟ್ರಾಂಗ್‌...’ ಎಂದು ಹೇಳುವ ಸನ್ನಿವೇಶ ಸೃಷ್ಟಿಸಲಾಗಿದೆ. ಚಿತ್ರ ಕೂಡ ಪ್ರೇಕ್ಷಕರಿಗೆ ಪೋಕಿರಿ ರಾಜಕ್ಕಿಂತ ಮೂರು ಪಟ್ಟು ಕಿಕ್‌ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT