ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆದಂಡದಲ್ಲಿನ ನಟನೆಗೂ ವಿಜಯ್‌ಗೆ ರಾಷ್ಟ್ರಪ್ರಶಸ್ತಿ ಸಿಗುತ್ತಿತ್ತು: ಮಂಡ್ಯ ರಮೇಶ್

Last Updated 15 ಜೂನ್ 2021, 6:47 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌, ‘ಸಂಚಾರಿ’ ಎಂಬ ನಾಟಕ ತಂಡದ ಹಿನ್ನೆಲೆಯಿಂದ ಬಂದವರು. ಅವರನ್ನು ಬಹಳ ಹತ್ತಿರದಿಂದ ಕಂಡ, ಅವರ ಜೊತೆ ಅಭಿನಯಿಸಿದ ನಟ ಮಂಡ್ಯ ರಮೇಶ್‌ ಅವರು, ವಿಜಯ್‌ ಅವರ ಜೊತೆಗಿನ ಒಡನಾಟವನ್ನು ಹೀಗೆ ನೆನಪಿಸಿಕೊಂಡಿದ್ದಾರೆ.

‘ಸಂಚಾರಿ ವಿಜಯ್‌ ನಿರ್ಗಮನ ವಿಧಿಯ ಕ್ರೂರ ವ್ಯಂಗ್ಯದ ತಲೆದಂಡ.ಕಳೆದ ಎರಡು ದಿನಗಳಿಂದ ಎಲ್ಲರೂ ವಿಜಯ್‌ ಪವಾಡ ನಡೆದು ಗುಣಮುಖವಾಗಿ ಬರಲಿದ್ದಾನೆ ಎನ್ನುವ ಭರವಸೆ ಹೊಂದಿದ್ದೆವು. ಹೀಗಾಗದೇ ಇದ್ದಿದ್ದು ಆತನ ಒಡನಾಡಿಗಳಿಗೆ, ಸಮೀಪದವರಿಗೆ, ಅವನ ಜೊತೆ ಕಾರ್ಯನಿರ್ವಹಿಸಿದವರಿಗೆ ಹಾಗೂ ಅವನನ್ನು ಅರ್ಥ ಮಾಡಿಕೊಂಡವರಿಗೆ ಇವತ್ತು ಇಷ್ಟೊಂದು ಆಘಾತವಾಗಲು ಕಾರಣ. ಆದರೆ ವೈದ್ಯಕೀಯ ವಿಜ್ಞಾನಕ್ಕೂ ಮಿತಿ ಇದೆ ಅಲ್ಲವೇ. ನನ್ನನ್ನು ಸೇರಿಸಿ ಹಲವರು ಈಗ ಪರಿತಪಿಸುತ್ತಿರಲು ಒಂದು ಕಾರಣವಿದೆ. ನಮಗೆಲ್ಲರಿಗೂ ಮೊದಲಿನಿಂದಲೂ ಆತನ ಗುಣಗಳು ಪ್ರಭಾವ ಬೀರಿತ್ತು. ರಾಷ್ಟ್ರಪ್ರಶಸ್ತಿ ಬಂದರೂ ವಿಜಯ್‌ ಎಲ್ಲರೊಂದಿಗೂ ಸರಳವಾಗಿದ್ದರು. ಗ್ರಾಮೀಣ ಭಾಗದಿಂದ ಬಂದಿರುವುದು ಹಾಗೂ ರಂಗಭೂಮಿ ನೆಲೆಯಿಂದ ಬಂದ ಕಾರಣದಿಂದ ತುಂಬಾ ಸಹಜವಾಗಿ, ಆಪ್ತನಾಗಿ ಸಜ್ಜನಿಕೆಯಿಂದ ನಡೆದುಕೊಂಡಿದ್ದ ಸರಳ ವ್ಯಕ್ತಿ ಸಂಚಾರಿ ವಿಜಯ್‌. ಯಾರನ್ನೂ ನೋಯಿಸದೇ ಇರುವ ಅವನ(ಒಡನಾಡಿ ಆದ ಕಾರಣ ಏಕವಚನ ಬಳಸುತ್ತಿದ್ದೇನೆ) ಮಾತಿನಲ್ಲಿ ಮುಗ್ಧ ಮಗುವಿನ ನಗು ನನಗೆ ಕಾಣಿಸುತ್ತಿತ್ತು. ಮಿತ ಭಾಷಿ, ಮೃದು ಭಾಷಿ ಆತ.’

‘ರಂಗಭೂಮಿಯಲ್ಲಿ ಇದ್ದ ಕಾರಣದಿಂದಾಗಿ ಒಂದು ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ, ನಾವು ಯಾರೂ ಮಾಡದೇ ಇದ್ದ ಪಾತ್ರವನ್ನು ಆತ ಮಾಡಿದ. ಒಳ್ಳೆಯ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಆತ ಸೃಷ್ಟಿಸಿಕೊಂಡ. ‘ಸಣ್ಣ ವಯಸ್ಸಿನಲ್ಲೇ ನಿನಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ, ಮುಂದೆ ನಿನಗೆ ಆಸ್ಕರ್‌’ ಎಂದು ನಾನು ಹೇಳಿದಾಗ ‘ಸಾರ್‌, ರಾಷ್ಟ್ರಪ್ರಶಸ್ತಿ ತೆಗೆದುಕೊಂಡರೂ, ನಿಮ್ಮ ಹಾಗೆ ರಂಗಮಂದಿರ ಕಟ್ಟಿಸೋಕೆ, ಶಾಲೆ ಕಟ್ಟಿಸಲು ಅದನ್ನು ವರ್ಷದಿಂದ ನಡೆಸುಕೊಂಡು ಹೋಗಲು ಸಾಧ್ಯವೇ. ನೀವು ಗ್ರೇಟ್‌’ ಎನ್ನುವವನು. ‘ನಿನಗೂ ಈ ಸಾಮರ್ಥ್ಯವಿದೆ, ನನಗೆ ಸಂಘಟನೆಯಲ್ಲಿ ಶಕ್ತಿ ಇದ್ದರೆ ನಿನಗೆ ಆ ಶಕ್ತಿ ನಟನೆಯಲ್ಲಿದೆ’ ಎಂದು ನಾನು ಹೇಳುತ್ತಿದೆ. ಆತ ಬದುಕಿದ್ದರೆ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತಿದ್ದ.’

‘ಅಭಿನಯದ ಸೂಕ್ಷ್ಮಗಳನ್ನು ಮುಂದಿನ ತಲೆಮಾರಿಗೆ ಕೊಡಲು ಆತ ಮಾಡುತ್ತಿದ್ದ ಪ್ರಯತ್ನವನ್ನು ಇತ್ತೀಚೆಗೆ ನಾವು ನಡೆಸಿದ ಆನ್‌ಲೈನ್‌ ಶಿಬಿರದಲ್ಲಿ ನಾನು ಕಂಡಿದ್ದೆ.’

‘ಹಿಂದೆ ‘ಒಗ್ಗರಣೆ’ ಸಿನಿಮಾದಲ್ಲಿ ನಾನು ವಿಜಯ್‌ ಜೊತೆ ನಟಿಸಿದ್ದೆ. ಆಗನಿಂದಲೂ ಆತನ ನಟನೆ ನೋಡುತ್ತಿದ್ದೇನೆ. ‘ದಾಸ್ವಾಳ’ ಚಿತ್ರದಲ್ಲಿನ ವಿಜಯ್‌ ಪಾತ್ರವನ್ನು ನೋಡಿ ನಾನು ಪ್ರಭಾವಿತನಾಗಿದ್ದೆ. ಇತ್ತೀಚೆಗೆ ‘ತಲೆದಂಡ’ ಚಿತ್ರದಲ್ಲಿ ವಿಜಯ್‌ ಜೊತೆ ನಟಿಸಿದ್ದೆ. ವಿಜಯ್‌ ಅವರದು ಇದರಲ್ಲಿ ಬುದ್ಧಿಮಾಂದ್ಯನ ಪಾತ್ರ. ಪಾತ್ರಕ್ಕಾಗಿ ನಾಲ್ಕೈದು ದಿನ ವಿಶೇಷ ಮಕ್ಕಳ ಶಾಲೆಯಲ್ಲೇ ಇದ್ದ. ಈ ಚಿತ್ರವು ಬೇರೆ ಬೇರೆ ಸ್ಪರ್ಧೆಗಳಿಗೆ ಹೋದರೆ, ಅವಕಾಶ ಸಿಕ್ಕರೆ ಆತನ ನಟನೆಗೆ ರಾಜ್ಯ, ರಾಷ್ಟ್ರಪ್ರಶಸ್ತಿಯೂ ಸಿಗುವ ಅವಕಾಶವಿದೆ. ವಿಜಯ್‌ ಸುಂದರಾಂಗ, ಅಷ್ಟು ಚೆನ್ನಾಗಿದ್ದಾನೆ ನೋಡಲು. ಆದರೆ ಈ ಚಿತ್ರದಲ್ಲಿ ಆತ ತನ್ನನ್ನು ತಾನೇ ಬದಲಾಯಿಸಿಕೊಂಡ ರೀತಿ ಅದ್ಭುತ. ನಾನು ಆ ಚಿತ್ರದಲ್ಲಿ ಶಾಸಕನ ಪಾತ್ರ ಮಾಡಿದ್ದೇನೆ. ಪ್ರತಿ ದೃಶ್ಯದ ಬಳಿಕವೂ ಆತ ಆ ಪಾತ್ರದೊಳಗೆ 15 ನಿಮಿಷ ಜೀವಿಸುತ್ತಿದ್ದ. ಅಭಿನಯದ ವಿದ್ವತ್ತು ಇದ್ದರೂ ಆತ ಸರಳವಾಗಿದ್ದ, ಈಚಿನ ತಲೆಮಾರಿನಲ್ಲಿ ಇಂತಹ ಗುಣ ಬಹಳ ವಿರಳ. ಅವನಂತೆ ನಾನು ಆಗಬೇಕೆಂದು ಆಸೆ ಪಡುತ್ತಿದ್ದೆ. ಹೊಟ್ಟೆ ಹಸಿವನ್ನು ಮೀರಿ, ತನ್ನ ಜ್ಞಾನ, ಕಲಿಕೆಯ ಹಸಿವಿಗೆ ಬೆಲೆ ನೀಡಿದವನು ವಿಜಯ್‌.’

‘ತಲೆದಂಡ ಚಿತ್ರ ಮತ್ತೊಂದು ಮೈಲಿಗಲ್ಲಾಗುತ್ತದೆ. ಸತ್ತ ಮೇಲೂ ವಿಜಯ್‌ ಈ ಚಿತ್ರದ ಮುಖಾಂತರ ಚಿರಾಯುವಾಗಿರಲಿದ್ದಾರೆ ಎನ್ನುವ ನಂಬಿಕೆ ನನಗಿದೆ. ಆದರೆ ಅದಕ್ಕಾಗಿ ವಿಧಿಯ ಈ ಕ್ರೂರ ತಲೆದಂಡ ಬೇಕಾಗಿರಲಿಲ್ಲ.’

‘ಒಗ್ಗರಣೆ’ ಚಿತ್ರದಲ್ಲಿನ ವಿಜಯ್‌ ಅಭಿನಯ ಅನುಭವಿಸಿದ್ದ ನಟ ಪ್ರಕಾಶ್‌ ರಾಜ್‌, ವಸುಧೇಂದ್ರ ಅವರ ‘ಮೋಹನಸ್ವಾಮಿ’ ಕೃತಿ ಆಧರಿಸಿ ವಿಜಯ್‌ ಅವರನ್ನು ಇಟ್ಟುಕೊಂಡು ಚಿತ್ರ ಮಾಡಬೇಕು ಎಂದು ನನ್ನ ಜೊತೆ ಚರ್ಚಿಸಿದ್ದರು. ಆದರೆ, ಇದೇ ಸಂದರ್ಭದಲ್ಲಿ ‘ನಾನು ಅವನಲ್ಲ, ಅವಳು’ ಚಿತ್ರ ಬಂತು. ಒಂದೇ ರೀತಿಯ ಪಾತ್ರ ಬರುತ್ತದೆ ಎಂದು ಪ್ರಕಾಶ್‌ ನಂತರ ಸುಮ್ಮನಾದರು.

‘ಮದ್ವೆ ಜಗಳ’

ನಾನೂ ಅವನೂ ಜಗಳ ಮಾಡಿದ್ದು ಒಂದೇ ವಿಚಾರಕ್ಕೆ. ‘ಲೇ ಮಗಾ ಬೇಗ ಮದ್ವೆ ಆಗ್ಬಿಡು’ ಎಂದು ನಾನು ಕಾಲೆಳೆಯುತ್ತಿದ್ದೆ. ಆತ ‘ಯಾಕ್‌ ಗುರೂ’ ಎಂದು ಪ್ರಶ್ನಿಸಿದ್ದ. ಇದಕ್ಕೆ ನಾನು ‘ಲಗಾಮ್‌ ಬೇಕು. ಇಲ್ಲವಾದರೆ ಕಷ್ಟವಾಗುತ್ತದೆ. ಹೀಗೆ ಸುತ್ತಾಡಿಕೊಂಡು ಜೀವನ ಕಳೆದುಬಿಡುವೆ’ ಎಂದು ಹೇಳುತ್ತಿದ್ದೆ. ಈ ತಮಾಷೆ ಹಿಂದೆ ಕುಹಕ, ಲೇವಡಿ ಇರಲಿಲ್ಲ. ಇದು ಪ್ರೀತಿಯ ಮಾತಾಗಿತ್ತು. ಅಭಿನಯವನ್ನು ಒಂದು ಆಧ್ಯಾತ್ಮ ಎಂದು ಗ್ರಹಿಸುವುದಕ್ಕೆ ಸಾಧ್ಯವಾಗಬಹುದಾದ ಎಂದು ಉದಾಹರಣೆಯನ್ನುಎಳೆಯ ತಲೆಮಾರಿಗೆ ಕೊಡುವುದಾದರೆ ಸಂಚಾರಿ ವಿಜಯ್‌ ಅವರನ್ನು ಉಲ್ಲೇಖಿಸಬಹುದು. ವಿಜಯ್‌ ಒಳ್ಳೆಯ ನಟ ಆಗಿದ್ದರೆ ನನಗೆ ವಿಶೇಷ ಎನಿಸುತ್ತಿರಲಿಲ್ಲ. ವಿಜಯ್‌ ಅವರ ವಿನಯವಂತಿಕೆ, ಆಪ್ತಭಾವ, ಸಜ್ಜನಿಕೆ ನಮ್ಮನ್ನು ಸೆಳೆದಿತ್ತು. ‘ಉಸಿರು’ ಎಂಬ ಸಂಸ್ಥೆಯ ಜೊತೆ ಕೆಲಸ ಮಾಡುತ್ತಿದ್ದ ಆತನ ಉಸಿರೇ ನಿಂತು ಹೋಗಿದ್ದ ವಿಪರ್ಯಾಸ. ಇದು ತೀರಾ ಅನ್ಯಾಯ.

=============

ಭಾವುಕರಾದ ಸುಂದರ್‌ ವೀಣಾ

‘ನಾನು ವಿಜಯ್‌ ಕಳೆದ ಹತ್ತುಹನ್ನೆರಡು ವರ್ಷಗಳಿಂದ ಸ್ನೇಹಿತರು. ಅವರ ರಂಗಭೂಮಿ ದಿನಗಳಿಂದ ನೋಡಿಕೊಂಡು ಬರುತ್ತಿದ್ದೇನೆ. ‘ನಾನು ಅವನಲ್ಲ, ಅವಳು’ ಚಿತ್ರದಲ್ಲಿ ಜೊತೆಗೆ ಕಾರ್ಯನಿರ್ವಹಿಸಿದ್ದು ಅತಿ ದೊಡ್ಡ ಅನುಭವ. ಜೊತೆಗೆ ಸಿಕ್ಕಾಗಲೆಲ್ಲ ಹೊಟ್ಟೆಹುಣ್ಣಾಗುವಷ್ಟು ನಗುತ್ತಿದ್ದೆವು. ಇದಕ್ಕೆ ನಮ್ಮ ಚಿತ್ರದ ಅನುಭವಗಳೇ ಕಾರಣವಾಗಿದ್ದವು. ಹಲವಾರು ಜನ ನಮ್ಮಿಬ್ಬರನ್ನೂ ತೃತೀಯಲಿಂಗಿಗಳು ಎಂದೇ ಪರಿಗಣಿಸಿ ಪ್ರತಿಕ್ರಿಯೆ ನೀಡಿರುವುದನ್ನೇ ನೆನೆಸಿಕೊಂಡು ನಗುತ್ತಿದ್ದೆವು. ಚಿತ್ರೀಕರಣ ಸಂದರ್ಭದಲ್ಲಿ ನಾನು ₹25 ಸಂಗ್ರಹ ಮಾಡಿದ್ದೆ, ವಿಜಯ್‌ ನನ್ನದೇ ಹೆಚ್ಚಿದೆ ಎಂದು ಕಾಲೆಳೆಯುತ್ತಿದ್ದ. ಇವತ್ತೇ ಮೊದಲ ಬಾರಿ ಅವನು ನಗದೇ ಇರುವುದನ್ನು ನೋಡುತ್ತಿದ್ದೇನೆ ಎಂದು ಭಾವುಕರಾದರು ನಟ ಸುಂದರ್‌ ವೀಣಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT