ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ| ಮನೆ ಮಾರಾಟಕ್ಕಿದೆ: ಮಧ್ಯಂತರದ ನಂತರ ಕಥೆ ಆರಂಭವಾಗುತ್ತದೆ!

Last Updated 15 ನವೆಂಬರ್ 2019, 12:41 IST
ಅಕ್ಷರ ಗಾತ್ರ

ಸಿನಿಮಾ: ಮನೆ ಮಾರಾಟಕ್ಕಿದೆ

ತಾರಾಗಣ: ಚಿಕ್ಕಣ್ಣ, ಶ್ರುತಿ ಹರಿಹರನ್, ಕುರಿ ಪ್ರತಾಪ್, ರಾಜೇಶ್ ನಟರಂಗ

ನಿರ್ದೇಶನ: ಮಂಜು ಸ್ವರಾಜ್

ನಿರ್ಮಾಣ: ಎಸ್.ವಿ. ಬಾಬು

ಮನೆಯೊಂದು ಮಾರಾಟಕ್ಕಿದೆ. ಆ ಮನೆಯ ಮಾರಾಟಕ್ಕೆ ತೊಂದರೆ ಕೊಡುವುದು ಒಂದಿಷ್ಟು ಭೂತಗಳು. ಮನೆ ಮಾರಾಟದ ಸೊಗಸು ವೀಕ್ಷಕನಿಗೆ ಅರ್ಥವಾಗುವುದು ಮಧ್ಯಂತರದ ಬಿಡುವಿನ ನಂತರ.

ಇದು ಮಂಜು ಸ್ವರಾಜ್ ನಿರ್ದೇಶನದ ‘ಮನೆ ಮಾರಾಟಕ್ಕಿದೆ’ ಚಿತ್ರದ ಚಿತ್ರಣ. ಹೆಸರಾಂತ ನಟ–ನಟಿಯರ ದಂಡೇ ಇರುವ ಈ ಚಿತ್ರವು ಹೆಣೆದುಕೊಂಡಿರುವುದು ಕೊಲೆ, ಪ್ರೀತಿ, ಹಾಸ್ಯ ಮತ್ತು ಭೂತಚೇಷ್ಟೆಗಳ ಸುತ್ತ. ಆರಂಭದಲ್ಲಿ ಸಂಕಟದ ಸನ್ನಿವೇಶಗಳನ್ನು ತೋರಿಸುವ ಮೂಲಕ ಕಥೆಯೊಳಗೆ ವೀಕ್ಷಕರನ್ನು ಕರೆದೊಯ್ಯಲು ಮುಂದಾಗಿದ್ದಾರೆ ನಿರ್ದೇಶಕರು.

ಆ ಸಂಕಟಗಳ ಪರಿಣಾಮವಾಗಿ, ಶ್ರವಣ (ರಾಜೇಶ್‌ ನಟರಂಗ) ತನ್ನ ಮನೆ ಮಾರಾಟಕ್ಕಿಡುವ ತೀರ್ಮಾನಕ್ಕೆ ಬರುತ್ತಾನೆ. ಭೂತಗಳ ಚೇಷ್ಟೆಗೆ ತುತ್ತಾಗಿರುವ ಮನೆಯ ಮಾರಾಟ ಶ್ರವಣನ ಪಾಲಿಗೆ ಸುಲಭದ ಕೆಲಸ ಆಗಿರುವುದಿಲ್ಲ. ಆ ಹೊತ್ತಿನಲ್ಲಿ ಆಗುವುದು ರಘುಪತಿ (ಚಿಕ್ಕಣ್ಣ), ರಾಘವ (ಸಾಧು ಕೋಕಿಲ), ರಾಜಾ (ಕುರಿ ಪ್ರತಾಪ್) ಮತ್ತು ರಾಮ್‌ (ರವಿಶಂಕರ್ ಗೌಡ) ಪಾತ್ರಗಳ ಪ್ರವೇಶ.

ಚಿತ್ರದ ಮೊದಲಾರ್ಧದಲ್ಲಿ ಇರುವುದು ಮಾರಾಟಕ್ಕಿರುವ ಮನೆಯಲ್ಲಿ ಭೂತಗಳ ಕಾಟ ಇದೆ ಎಂಬ ವಿವರಣೆ. ರಘುಪತಿ, ರಾಘವ, ರಾಜಾ ಮತ್ತು ರಾಮ್‌ ಪಾತ್ರಗಳ ಗುಣ–ಸ್ವಭಾವಗಳ ಚಿತ್ರಣ. ಹಾಗೂ, ಕೋಟ್ಯಂತರ ರೂಪಾಯಿ ಬೆಲೆಬಾಳುವ ಆ ಮನೆಯನ್ನು ಕಬಳಿಸಲು ನಡೆಯುವ ಸಂಚಿನ ಸುಳಿವು. ಸಿನಿಮಾ ಕಥೆ ನಿಜವಾಗಿ ಆರಂಭ ಆಗುವುದು ದ್ವಿತೀಯಾರ್ಧದಲ್ಲಿ.

ಆಂತರ್ಯದಲ್ಲಿ ಪುಕ್ಕಲರಾಗಿರುವ ನಾಲ್ಕು ಜನ, ಅ ಮನೆಯನ್ನು ಭೂತಗಳ ಕಾಟದಿಂದ ಮುಕ್ತವಾಗಿಸುತ್ತಾರೆಯೇ ಎನ್ನುವುದು ದ್ವಿತೀಯಾರ್ಧದ ಕಥೆ. ಭೂತಗಳ ಕಾಟಕ್ಕೆ ಕ್ರೌರ್ಯ ಹಾಗೂ ದುರಾಸೆಯ ಆಯಾಮವೊಂದು ಇರುವುದನ್ನು ದ್ವಿತೀಯಾರ್ಧ ವಿವರಿಸುತ್ತದೆ. ಭೂತಗಳನ್ನು ಸಾಮಾನ್ಯ ಮನುಷ್ಯರಂತೆಯೂ, ಸಾಮಾನ್ಯರನ್ನು ಭೂತಗಳಂತೆಯೂ ಬಿಂಬಿಸಿ ವೀಕ್ಷಕರನ್ನು ಕೆಲವು ನಿಮಿಷಗಳವರೆಗೆ ಗೊಂದಲದಲ್ಲಿ ಇರಿಸುವುದು ನಿರ್ದೇಶಕರು ಈ ಚಿತ್ರದಲ್ಲಿ ಹೆಣೆದ ಯಶಸ್ವಿ ತಂತ್ರ.

ಚಿಕ್ಕಣ್ಣ, ಸಾಧು ಕೋಕಿಲ ಮತ್ತು ಪ್ರತಾಪ್ ಅವರ ಹಾಸ್ಯ ಚಿತ್ರದ ಪ್ಲಸ್‌ ಪಾಯಿಂಟ್‌. ಶ್ರುತಿ ಹರಿಹರನ್‌ ಅವರು ಇದರಲ್ಲಿ ಪ್ರಧಾನ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಆದರೆ, ಅವರ ವಿಶಿಷ್ಟ ಅಭಿನಯ ಬಯಸುವ ಸಿನಿಪ್ರೇಮಿಗಳಿಗೆ ನಿರಾಸೆ ಆಗಬಹುದು. ಖ್ಯಾತ ನಟ–ನಟಿಯರ ದಂಡೇ ಇದ್ದರೂ ಸಿನಿಮಾ ವೀಕ್ಷಕಣೆಯ ತೃಪ್ತಿಕರ ಅನುಭವ ಕೆಲವರಿಗೆ ಸಿಗದೆಯೂ ಇರಬಹುದು.

ಒಂದು ಮನೆಯ ಸುತ್ತ ನಡೆದ ಕಥೆ ಇದಾಗಿರುವ ಕಾರಣ, ಛಾಯಾಗ್ರಹಣದ ವಿಚಾರವಾಗಿ ಪ್ರತ್ಯೇಕವಾಗಿ ಹೇಳುವಂಥದ್ದು ಏನೂ ಇಲ್ಲ. ಅಭಿಮಾನ್ ರಾಯ್ ಸಂಗೀತ ಚಿತ್ರದ ಹರಿವಿಗೆ ಪೂರಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT