ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ಗೆ ಮಣೆ ಹಾಕದವರು!

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಫೇಸ್‌ಬುಕ್‌ ಮತ್ತು ಅದರ ಮೆಸೆಂಜರ್ ಅಥವಾ ಅದು ಸ್ವಾಧೀನ ಪಡಿಸಿಕೊಂಡಿರುವ ವಾಟ್ಸ್‌ಆ್ಯಪ್ ಬಳಸದಿದ್ದರೆ ಬಹುತೇಕರಿಗೆ ಆ ದಿನದ ಮಟ್ಟಿಗೆ ಏನನ್ನೋ ಕಳೆದುಕೊಂಡಂತಹ ಅನುಭವ ಆಗಲಿದೆ. ವಿಶ್ವದಾದ್ಯಂತ   200 ಕೋಟಿಗಳಷ್ಟು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌ನ ವಿಶ್ವಾಸಾರ್ಹತೆ ಬಗ್ಗೆ ಹಲವು ದೇಶಗಳು ವಿಚಾರಣೆಗೆ ಆದೇಶಿಸಿರುವುದು, ಅದರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

25 ಕೋಟಿ ಬಳಕೆದಾರರು ಇರುವ ನಮ್ಮಲ್ಲೂ ಫೇಸ್‌ಬುಕ್‌ನ ವಿಶ್ವಾಸಾರ್ಹತೆ ಬಗ್ಗೆ ಹಿಂದೆಂದೂ ಇಲ್ಲದ ಚರ್ಚೆ ನಡೆಯುತ್ತಿದೆ. ಆದರೆ, ಕೆಲವು ದೇಶಗಳಲ್ಲಿನ ಅಂತರ್ಜಾಲ ಬಳಕೆದಾರರಿಗೆ ಫೇಸ್‌ಬುಕ್‌ ಯಾವ ಲೆಕ್ಕಕ್ಕೂ ಇಲ್ಲ. ಕಾರಣ ಆ ದೇಶದಲ್ಲೇ ಅಭಿವೃದ್ಧಿಪಡಿಸಿರುವ ಕೆಲವು ಸಾಮಾಜಿಕ ಮಾಧ್ಯಮಗಳ ಕಿರು ತಂತ್ರಾಂಶಗಳು ಫೇಸ್‌ಬುಕ್‌ ಜನಪ್ರಿಯತೆಯನ್ನು ಕುಗ್ಗಿಸಿವೆ. ಅಂತಹ ತಂತ್ರಾಂಶಗಳ ಮಾಹಿತಿ ಇಲ್ಲಿದೆ.

ಕಕಾವೊ ಟಾಕ್

ವಿಶ್ವದಲ್ಲೇ ಅತಿ ಹೆಚ್ಚು ವೇಗದ ಅಂತರ್ಜಾಲ ಸೌಲಭ್ಯ ದಕ್ಷಿಣ ಕೊರಿಯಾದಲ್ಲಿದೆ. ಈ ದೇಶದ ಒಟ್ಟು ಜನಸಂಖ್ಯೆ 5.62 ಕೋಟಿ. ಆದರೆ ಇವರಲ್ಲಿ ಸುಮಾರು 4.5 ಕೋಟಿ ಮಂದಿ ಕಕಾವೋ ಟಾಕ್ ತಂತ್ರಾಂಶವನ್ನು ಬಳಸುತ್ತಿದ್ದಾರೆ. ಅಂದರೆ ಶೇ 90ರಷ್ಟು ಜನರ ನೆಚ್ಚಿನ ಜಾಲತಾಣ ಕಕಾವೊ ಟಾಕ್. ಈ ಮಟ್ಟಿಗೆ ಮನ್ನಣೆ ಗಳಿಸಿರುವ ತಂತ್ರಾಂಶ ಉಳಿದ ಯಾವ ದೇಶದಲ್ಲೂ ಇಲ್ಲ.

ಇಲ್ಲೂ ಸಹ ಆರಂಭದಲ್ಲಿ ಫೇಸ್‌ಬುಕ್‌ ಪ್ರಭಾವ ಹೆಚ್ಚಾಗಿಯೇ ಇತ್ತು. ಆದರೆ 2010ರಲ್ಲಿ ಕಕಾವೋ ಟಾಕ್ ರಂಗಪ್ರವೇಶ ಮಾಡಿದ ನಂತರ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ 1.6ಕೋಟಿಗೆ ಇಳಿಯಿತು. ಈ ಕಕಾವೊ ಟಾಕ್ ತಂತ್ರಾಂಶ ವಾಟ್ಸ್‌ ಆ್ಯಪ್ ತಂತ್ರಾಂಶದಂತೆಯೇ ಇದೆ. ಆದರೆ ಇನ್ನೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ ಫೇಸ್‌ಬುಕ್‌ ಅನ್ನು ಮೂಲೆಗೆ ತಳ್ಳಿದೆ.

ವಿ ಕಾಂಟಾಕ್ಟೆ

ರಷ್ಯಾದ ಈ ಸಾಮಾಜಿಕ ಜಾಲತಾಣ ಬೆಳಕಿಗೆ ಬಂದಿದ್ದು, ಕಳೆದ ವರ್ಷ ಹಲವರನ್ನು ಕಾಡಿದ ಅಪಾಯಕಾರಿ ‘ಬ್ಲೂವೇಲ್’ ಆಟದಿಂದ. ಬ್ಲೂ ವೇಲ್‌ ವಿರುದ್ಧ ತನಿಖೆ, ವಿಚಾರಣೆ ನಡೆಯಬೇಕೆಂದು ಈ ತಂತ್ರಾಂಶ ಪಟ್ಟು ಹಿಡಿದು ಪ್ರಚಾರ ಮಾಡಿತು. ಫೇಸ್‌ಬುಕ್‌ನಂತೆಯೇ ಆರಂಭವಾದ ಈ ಸಂಸ್ಥೆ, ರಷ್ಯಾದ ಯುವ ಸಮುದಾಯವನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಸದ್ಯಕ್ಕೆ ರಷ್ಯಾದಲ್ಲಿ ಈ ತಂತ್ರಾಂಶವನ್ನು ಶೇ 65ರಷ್ಟು ಜನ ಬಳಸುತ್ತಿದ್ದರೆ, ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ ಶೇ 35ರಷ್ಟಿದೆ. 

ಫೇಸ್‌ಬುಕ್ ಎಂಬುದು ಬಹುದೊಡ್ಡ ಆಕರ್ಷಣೆ. ವಿನ್ಯಾಸದಿಂದ ಹಿಡಿದು ಅಕ್ಷರ ಸ್ವರೂಪದ ವರೆಗೆ ಪ್ರತಿಯೊಂದು ವಿಷಯದಲ್ಲೂ ಗಮನ ಸೆಳೆಯುತ್ತದೆ. ಈ ಆಕರ್ಷಣೆಯಿಂದ ಹೊರಬಂದು ಮತ್ತೊಂದು ತಂತ್ರಾಂಶದ ಕಡೆಗೆ ಗಮನ ಕೊಡಬೇಕೆಂದರೆ, ಈ ಆಕರ್ಷಣೆಗಿಂತಲೂ ಮಿಗಿಲಾದ ದೊಡ್ಡ ಮಾರುಕಟ್ಟೆ ತಂತ್ರಗಳನ್ನು ಹೆಣೆಯಬೇಕಾದ ಸವಾಲು ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವವರ ಮೇಲೆ ಇದೆ.

ವೀ ಚಾಟ್

ಇದು ಚೀನಾದ ತಂತ್ರಾಂಶ. 2009ರಲ್ಲಿ ಫೇಸ್‌ಬುಕ್ ಬಳಕೆ ಮೇಲೆ ಚೀನಾ ಸರ್ಕಾರ ನಿಷೇಧ ವಿಧಿಸಿದ ನಂತರ ಅದರಿಂದ ತೆರವಾದ ಸ್ಥಾನವನ್ನು ವೀ ಚಾಟ್ ಉತ್ತಮವಾಗಿ ಬಳಸಿಕೊಂಡಿತು. ಆದರೆ ಫೇಸ್‌ಬುಕ್ ಪ್ರತಿಬಿಂಬದಂತೆ ಕೆಲಸ ಮಾಡದೇ ತನ್ನದೇ ಆದ ಮುದ್ರೆ ಹಾಕಿದೆ. 

ಬಳಕೆದಾರರು ಕೇವಲ ತಮಗೆ ಇಷ್ಟವೆನಿಸಿದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಲು ಇದು ವೇದಿಕೆಯಾಗದೆ, ದಿನನಿತ್ಯದ ಸೇವೆಗಳನ್ನು ಪೂರೈಸುವ ತಾಣವಾಗಿ ಮಾರ್ಪಟ್ಟಿತು. ಕ್ಯಾಬ್ ಬುಕ್‌ನಿಂದ ಹಿಡಿದು, ಇಷ್ಟವಾದ ತಿಂಡಿ, ಆಹಾರವನ್ನೂ ಇದರ ಮೂಲಕ ಮನೆಗೆ ತರಿಸಿಕೊಳ್ಳಬಹುದು.

ಚೀನಾದಲ್ಲಿ ರಾಜಕೀಯ ನಾಯಕರಿಂದ ಹಿಡಿದು ಸಾಮಾನ್ಯರವರೆಗೆ ಎಲ್ಲರೂ ಇದನ್ನು ಬಳಸುತ್ತಿದ್ದಾರೆ. 2011ರಲ್ಲಿ ಬಳಕೆಗೆ ಬಂದ ವೀಚಾಟ್‌ ಕೇವಲ ಏಳು ವರ್ಷಗಳಲ್ಲಿ   100 ಕೋಟಿ ಬಳಕೆದಾರರನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ವೈವಿಧ್ಯಮಯ ಸೇವೆ ಒದಗಿಸುವ ಕಿರು ತಂತ್ರಾಂಶವಾಗಿ ಇದು ಜನಪ್ರಿಯತೆ ಗಳಿಸಿದೆ.

ಲೈನ್‌

ಫೇಸ್‌ಬುಕ್ 2005ರಲ್ಲೇ ಜಪಾನ್‌ನಲ್ಲಿ ಬಳಕೆಗೆ ಬಂತು. ಸುಮಾರು ಐದು ವರ್ಷ, ಸಾಮಾಜಿಕ ಮಾಧ್ಯಮ ಬಳಕೆ ಸಂತಸವನ್ನು ಅವರಿಗೆ ಪರಿಚಯಿಸಿಕೊಟ್ಟಿತು. ಜತೆಗೆ ಟಿಂಬ್ಲರ್‌ನಂತಹ ತಂತ್ರಾಂಶಗಳೂ ಇದ್ದವು. ಇವುಗಳ ಭರಾಟೆ ನಡುವೆಯೇ ‘ಲೈನ್‌’ ಸಾಮಾಜಿಕ ಮಾಧ್ಯಮ ಬಳಕೆಗೆ ಬಂತು. ಈ ಸಂಸ್ಥೆ ಪರಿಚಯಿಸಿದ ಚಾಟ್ ಸ್ಟಿಕ್ಕರ್‌ಗಳನ್ನು ಜಪಾನ್ ಯುವ ಸಮುದಾಯ ಬಾಚಿ ಅಪ್ಪಿಕೊಂಡಿತು.

ಈ ಸ್ಟಿಕ್ಕರ್‌ಗಳೇ ಲೈನ್‌ಗೆ ವಿಶೇಷ ಸ್ಥಾನ ಕಲ್ಪಿಸಿದವು. ನಾವು ಚಾಟ್‌ ಮಾಡುವಾಗ ಬಳಸುವ ಎಮೊಜಿಗಳ ಹಾಗೆಯೇ ಇದ್ದ ಈ ಸ್ಟಿಕ್ಕರ್‌ಗಳು ಜಪಾನ್ ಸಂಸ್ಕೃತಿ, ಭಾಷೆ ಪ್ರತಿಬಿಂಬಿಸುವಂತೆ ಇದ್ದವು. ಆದರೆ ಇವು ಉಚಿತವಾಗಿರಲಿಲ್ಲ. ಹಣ ಪಾವತಿಸಿ ಬಳಸಿಕೊಳ್ಳಬೇಕಿತ್ತು. ಕಾರಣ ವಾರಕ್ಕೊಮ್ಮೆ ಹೊಸ ಸ್ಟಿಕ್ಕರ್‌ಗಳನ್ನು ಸಂಸ್ಥೆ ಬಿಡುಗಡೆ ಮಾಡುತ್ತಿತ್ತು.

ಹೀಗಾಗಿ ಜಪಾನ್‌ ಜನತೆ ಲೈನ್‌ಗೆ ಉತ್ತೇಜನ ನೀಡಿದರು. ಕೇವಲ ಮೂರು ವರ್ಷಗಳಲ್ಲಿ ಅದಕ್ಕೆ ಅಗ್ರಸ್ಥಾನ ಕಲ್ಪಿಸಿದರು. ಸದ್ಯಕ್ಕೆ ಜಪಾನ್‌ನಲ್ಲಿ ಸುಮಾರು 2.2ಕೋಟಿ ಜನ ಲೈನ್ ಬಳಸುತ್ತಿದ್ದಾರೆ. ಆ ನಂತರದ ಸ್ಥಾನದಲ್ಲಿ ಟ್ವೀಟರ್ ಇದೆ. ಇವೆರಡೂ ಸೇರಿ ಫೇಸ್‌ಬುಕ್‌ ಅನ್ನು ಮೂರನೇ ಸ್ಥಾನಕ್ಕೆ ದೂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT