ಮಂಗಳವಾರ, ಅಕ್ಟೋಬರ್ 15, 2019
29 °C

ಪ್ರೇಮ ಕಹಾನಿ ಪ್ರಾರಂಭ

Published:
Updated:
Prajavani

ಮೃದು ಮನಸ್ಸಿನ ‘ಸಾಹೇಬ’ನಾಗಿ ಪ್ರೇಕ್ಷಕರ ಮನದೊಳಕ್ಕೆ ಅಡಿಯಿಟ್ಟವರು ನಟ ಮನೋರಂಜನ್. ಅಪ್ಪ ರವಿಚಂದ್ರನ್‌ ಅವರ ಸಲಹೆ ಮೇರೆಗೆಯೇ ಅವರು ಕೌಟುಂಬಿಕ ಚಿತ್ರದ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಿದ್ದು. ಆದರೆ, ಅವರೊಳಗಿನ ನಟನೆಯ ತುಡಿತಕ್ಕೆ ಸಾಹೇಬನ ಸಾಮರ್ಥ್ಯ ಸಾಕಾಗಲಿಲ್ಲ. ಹಾಗೆಂದು ಪ್ರಯೋಗಕ್ಕೆ ಒಗ್ಗಿಕೊಳ್ಳಲು ಅವರು ಹಿಂದೇಟು ಹಾಕಲಿಲ್ಲ. 

ಪೋಕರಿ ಹುಡುಗನಾಗಿ, ಜವಾಬ್ದಾರಿಯುತ ಎಂಜಿನಿಯರ್‌ ಆಗಿ ಎರಡನೇ ಚಿತ್ರದಲ್ಲಿ ‘ಬೃಹಸ್ಪತಿ’ಯ ವೇಷತೊಟ್ಟರು. ಅದೃಷ್ಟ ಮಾತ್ರ ಅವರ ಕೈಹಿಡಿಯಲಿಲ್ಲ. ಆದರೆ, ಮೊದಲ ಚಿತ್ರಕ್ಕಿಂತಲೂ ಇದರಲ್ಲಿನ ಅವರ ಮಾಗಿದ ನಟನೆ ಪ್ರೇಕ್ಷಕರ ಮನ ಸೆಳೆಯಿತು.

‘ಪ್ರಾರಂಭ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರಿಗೆ ಮೋಡಿ ಮಾಡಲು ಮನೋರಂಜನ್‌ ಸಜ್ಜಾಗಿ ನಿಂತಿದ್ದಾರೆ. ಮನು ಕಲ್ಯಾಡಿ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ ಮತ್ತು ಮೈಸೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಸಮಾಜದಿಂದ ಪ್ರತ್ಯೇಕವಾಗಿರುವ ಯುವಕ ಮತ್ತು ಯುವತಿಯರಿಗೆ ಒಂದು ಒಳ್ಳೆಯ ಸಂದೇಶ ಹೇಳುವ ಚಿತ್ರ ಇದು. ಇದೊಂದು ನವಿರು ಪ್ರೇಮ ಕಥನ ಎಂದು ಚಿತ್ರತಂಡ ಹೇಳಿಕೊಂಡಿದೆ. 

ಇತ್ತೀಚೆಗೆ ಮೈಸೂರಿನ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಚಿತ್ರದ ಟೈಟಲ್ ಟ್ರ್ಯಾಕ್‌ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ಪ್ರಜ್ವಲ್ ಪೈ ಈ ಹಾಡು ಹಾಡಿದ್ದಾರೆ. ಸಂತೋಷ್ ನಾಯಕ್‌ ಸಾಹಿತ್ಯ ಒದಗಿಸಿದ್ದಾರೆ.

ಮನೋರಂಜನ್ ಮೂರು ಶೇಡ್‌ಗಳಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಕೀರ್ತಿ ಕಲಕೇರಿ ಇದರ ನಾಯಕಿ. ಐದು ಹಾಡುಗಳಿಗೆ ಪ್ರಜ್ವಲ್ ಪೈ ಸಂಗೀತ ಸಂಯೋಜಿಸಿದ್ದಾರೆ. ಥ್ರಿಲ್ಲರ್ ಮಂಜು ಹಾಗೂ ವಿಕ್ರಂ ಮೋರ್ ಸಾಹಸ ನಿರ್ದೇಶಿಸಿದ್ದಾರೆ. ಸುರೇಶ್‍ಬಾಬು ಅವರ ಛಾಯಾಗ್ರಹಣವಿದೆ.‌ ಚಿತ್ರಕ್ಕೆ ಬಂಡವಾಳ ಹೂಡಿರುವುದು ಜಗದೀಶ್ ಕಲ್ಯಾಡಿ.

ಇದನ್ನೂ ಓದಿ: ರವಿಚಂದ್ರನ್‌ ಮಗ ಮನೋರಂಜನ್ ಬಳಿ ಕ್ಷಮೆ ಯಾಚಿಸಿದ ನಿರ್ದೇಶಕ ಮನು!

Post Comments (+)