ಸೋಮವಾರ, ಆಗಸ್ಟ್ 26, 2019
21 °C

ಮೂರನೇ ಚಿತ್ರದ ಆ್ಯಕ್ಷನ್‌ ಕಟ್‌ಗೆ ಸಜ್ಜಾದ ಮಂಸೋರೆ

Published:
Updated:
Prajavani

2018ರ ರಾಷ್ಟ್ರ ಪ್ರಶಸ್ತಿಗೆ ಭಾಜನವಾದ ‘ನಾತಿಚರಾಮಿ’ ಚಿತ್ರದ ಯಶಸ್ಸಿನ ಬೆನ್ನಲ್ಲೆ ನಿರ್ದೇಶಕ ಮಂಸೋರೆ ಅವರು ಮೂರನೇ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಬಾರಿ ಅವರು ಸೋಷಿಯಲ್‌ ಥ್ರಿಲ್ಲರ್‌ ಜಾಡಿಗೆ ಹೊರಳಿರುವುದು ವಿಶೇಷ.

2014ರಲ್ಲಿ ಅವರು ನಿರ್ದೇಶಿಸಿದ್ದ ತಂದೆ ಮತ್ತು ಮಗನ ಭಾವನಾತ್ಮಕ ಕಥೆ ಒಳಗೊಂಡ ‘ಹರಿವು’ ಸಿನಿಮಾ ಕೂಡ ರಾಷ್ಟ್ರ‍ ಪ್ರಶಸ್ತಿ ಪಡೆದಿತ್ತು. ಅವರ ಎರಡನೇ ಚಿತ್ರ ‘ನಾತಿಚರಾಮಿ’ಯಲ್ಲಿ ಆಧುನಿಕ ಜಗತ್ತಿನ ಮಹಿಳೆಯೊಬ್ಬಳ ದೈಹಿಕ ಮತ್ತು ಮಾನಸಿಕ ತಮುಲ, ತಳಮಳಗಳನ್ನು ಕಟ್ಟಿಕೊಟ್ಟಿದ್ದರು. 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಐದು ವಿಭಾಗಗಳಲ್ಲಿ ಈ ಸಿನಿಮಾ ಪ್ರಶಸ್ತಿ ಪಡೆದಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸ ದಾಖಲೆ.

ವರಮಹಾಲಕ್ಷ್ಮಿ ಹಬ್ಬದಂದು ತಾವು ನಿರ್ದೇಶಿಸುತ್ತಿರುವ ಮೂರನೇ ಚಿತ್ರಕ್ಕೆ ಮಂಸೋರೆ ಮುಹೂರ್ತ ನೆರವೇರಿಸಿದ್ದಾರೆ. ‘ಉದ್ಘರ್ಷ’ ಚಿತ್ರ ನಿರ್ಮಿಸಿದ್ದ ‘ಡಿ’ ಕ್ರಿಯೇಷನ್ಸ್‌ ಸಂಸ್ಥೆಯ ದೇವರಾಜ್‌ ಆರ್‌. ಈ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸುತ್ತಿದ್ದಾರೆ. ಛಾಯಾಗ್ರಹಣ ಸತ್ಯ ಹೆಗಡೆ ಅವರದು.

ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ನಾಗೇಂದ್ರ ಕೆ. ಉಜ್ಜನಿ ಈ ಸಿನಿಮಾ ಸಂಕಲನಕಾರರಾಗಿದ್ದಾರೆ. ಮಂಸೋರೆ, ದಯಾನಂದ ಟಿ.ಕೆ ಮತ್ತು ವೀರೇಂದ್ರ ಮಲ್ಲಣ್ಣ ಮೂವರೂ ಚಿತ್ರಕಥೆ ಮತ್ತು ಸಂಭಾಷಣೆಯ ನೊಗ ಹೊತ್ತಿದ್ದಾರೆ. 

ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸೆಪ್ಟೆಂಬರ್‌ನಿಂದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ. 

Post Comments (+)