ಗುರುವಾರ , ಡಿಸೆಂಬರ್ 5, 2019
20 °C

ಬಾಲಿವುಡ್‌ಗೆ ಮತ್ತೊಬ್ಬ ವಿಶ್ವ ಸುಂದರಿ

Published:
Updated:
Prajavani

ಹರಿಯಾಣದ ಚೆಲುವೆ, 2017ರಲ್ಲಿ ವಿಶ್ವ ಸುಂದರಿಯ ಕಿರೀಟ ಮುಡಿಗೇರಿಸಿಕೊಂಡ ಮಾನುಷಿ ಚಿಲ್ಲರ್‌ ಈಗ ಬಾಲಿವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಅಕ್ಷಯ್‌ಕುಮಾರ್‌ ನಟನೆಯ ಸಾಮ್ರಾಟ್‌ ಪೃಥ್ವಿರಾಜ್‌ ಚೌಹಾಣ್‌ ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ಚಿತ್ರರಂಗಕ್ಕೆ ಅಡಿ ಇಡುತ್ತಿದ್ದಾರೆ. ಪೃಥ್ವಿರಾಜ್‌ ಚೌಹಾಣ್‌ನ ಪತ್ನಿ ರಾಣಿ ಸಂಯೋಗಿತಾ (ಸಂಯುಕ್ತ) ಪಾತ್ರದಲ್ಲಿ ಮಾನುಷಿ ಕಾಣಿಸಿಕೊಳ್ಳಲಿದ್ದಾರೆ.

ವಿಶ್ವಸುಂದರಿ ಕಿರೀಟ ಧರಿಸಿದ ನಂತರ ಬಾಲಿವುಡ್‌ನಲ್ಲಿ ಈ ಚೆಲುವೆಗೆ ಸಾಕಷ್ಟು ಅವಕಾಶಗಳು ಅರಸಿಬಂದಿದ್ದರೂ ಬಣ್ಣದ ಬದುಕಿನತ್ತ ಅವರು ಮುಖಮಾಡಿರಲಿಲ್ಲ. ಸಾಮಾಜಿಕ ಕಾರ್ಯಗಳಲ್ಲಿ  ಹೆಚ್ಚು ತೊಡಗಿಸಿಕೊಂಡಿದ್ದ ಈ ಚೆಲುವೆ ಈಗ ತೂಗಿ ಅಳೆದು, ಜತೆಗೆ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಂಡೇ ಚಿತ್ರರಂಗಕ್ಕೆ ಅಡಿ ಇಡುತ್ತಿರುವಂತಿದೆ. 

ಬಾಲಿವುಡ್‌ನ ದೊಡ್ಡ ಬ್ಯಾನರ್‌ ಆದ ಯಶ್‌ರಾಜ್‌ ಫಿಲ್ಮ್ಸ್‌ನಡಿ ಆದಿತ್ಯ ಚೋಪ್ರಾ ಅವರ ನಿರ್ಮಾಣದ ಚಿತ್ರದಲ್ಲಿ ಮಾನುಷಿ ಚಿತ್ರರಂಗಕ್ಕೆ ಪರಿಚಿತರಾಗಲು ಮತ್ತು ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಸೌಂದರ್ಯವತಿಯಷ್ಟೇ ಅಲ್ಲ, ಅತ್ಯಂತ ಶಕ್ತಿಶಾಲಿ ಹಾಗೂ ಆತ್ಮವಿಶ್ವಾಸದ ಖನಿಯಂತಿದ್ದ ರಾಣಿ ಸಂಯೋಗಿತಾ ಪಾತ್ರಕ್ಕೆ ಚಿತ್ರತಂಡ ಸಾಕಷ್ಟು ನಟಿಯರ ಆಡಿಷನ್‌ ನಡೆಸಿತ್ತಂತೆ.  ಸಂಯೋಗಿತಾ ಪಾತ್ರಕ್ಕೆ ಆಯ್ಕೆಯಾಗುವ ಸುಯೋಗ ಮಾನುಷಿ ಚಿಲ್ಲರ್‌ಗೆ ಒಲಿದು ಬಂದಿದೆ. ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ ಎನ್ನುವ ಕಾರಣಕ್ಕೆ ಮಾನುಷಿಯನ್ನು ಚಿತ್ರದ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆಯಂತೆ. ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಮಾನುಷಿ ಕೂಡ ತುಂಬಾ ಕಾತರ ಮತ್ತು ಖುಷಿಯಿಂದ ಕಾಯುತ್ತಿದ್ದಾರಂತೆ.

ಪೃಥ್ವಿರಾಜ್ ಚೌಹಾಣ್ ದೆಹಲಿ ರಾಜ್ಯ ಆಳಿದ ಕೊನೆಯ ದೊರೆ. ಸಂಯೋಗಿತಾ ಕನೌಜ್ ಸಾಮ್ರಾಟ ರಾಥೋಡನ ಪುತ್ರಿ. ತನ್ನ 20ರ ಹರೆಯದಲ್ಲೇ ದೆಹಲಿ ಗದ್ದುಗೆ ಏರಿ ರಾಜ್ಯಭಾರ ನಡೆಸಿದ ರಾಜ ಪೃಥ್ವಿರಾಜನ ಮತ್ತು ರಾಣಿ ಸಂಯೋಗಿತಾಳ ಪ್ರೇಮಕಥೆ ಕುತೂಹಲಕಾರಿಯಾಗಿದ್ದು, ಇದನ್ನು ತೆರೆಯ ಮೇಲೆ ತರಲಾಗುತ್ತಿದೆ. 

ಈ ಚಿತ್ರಕ್ಕೆ ಟಿವಿ ಸೀರಿಯಲ್‌ಗಳ ನಿರ್ದೇಶಕ ಡಾ.ಚಂದ್ರಪ್ರಕಾಶ್ ದ್ವಿವೇದಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೃಥ್ವಿರಾಜ್ ಚೌಹಾಣ್‌ನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. 2020ರ ಡಿಸೆಂಬರ್‌ನಲ್ಲಿ ದೀಪಾವಳಿ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು