ಮಸಾಲಾ ಟೀ ಪ್ರಿಯೆ

7

ಮಸಾಲಾ ಟೀ ಪ್ರಿಯೆ

Published:
Updated:
Deccan Herald

ವಿದ್ಯಾಬಾಲನ್‌ ಬಾಲಿವುಡ್‌ನ ಮುಂಚೂಣಿ ನಾಯಕಿಯರಲ್ಲಿ ಒಬ್ಬರು. ಸೌಂದರ್ಯ ಹಾಗೂ ಸಹಜ ಅಭಿನಯದಿಂದ ಅಭಿಮಾನಿಗಳನ್ನು ಸಂಪಾದಿಸಿರುವ ಅವರ ನಗುವೇ ಆಕರ್ಷಕ. ಡರ್ಟಿ ಪಿಕ್ಚರ್, ಕಹಾನಿ, ಬೇಗಂಜಾನ್, ತುಮ್ಹಾರಿ ಸುಲು ಅವರ ಇತ್ತೀಚಿನ ಪ್ರಮುಖ ಚಿತ್ರಗಳು. ಈ ಪ್ರತಿಭಾನ್ವಿತ ನಟಿಗೆ ಅನೇಕ ಪ್ರಶಸ್ತಿಗಳು ಸಂದಿವೆ.

‘ಡರ್ಟಿ ಪಿಕ್ಚರ್‌’ ಚಿತ್ರಕ್ಕಾಗಿ ವಿದ್ಯಾ ಮೈ ತೂಕವನ್ನು ಕೊಂಚ ಏರಿಸಿಕೊಂಡಿದ್ದರು. ತುಮ್ಹಾರಿ ಸುಲು, ಕಹಾನಿ ಚಿತ್ರಗಳಲ್ಲೂ ದಪ್ಪ ಇದ್ದರೂ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ದೇಹತೂಕದ ಬಗ್ಗೆ ವಿದ್ಯಾ ತಲೆಕೆಡಿಸಿಕೊಳ್ಳದೇ ಉತ್ತಮ ಅಭಿನಯ ಹಾಗೂ ಸಿನಿಮಾದ ಬಗ್ಗೆ ಮಾತ್ರ ಯೋಚಿಸಿದ್ದರು. ಹಾಗೇ ಆರೋಗ್ಯಯುತ ದೇಹಕ್ಕಾಗಿ ಡಯೆಟ್‌ ಹಾಗೂ ಫಿಟ್‌ನೆಸ್‌ ಕಾಯ್ದುಕೊಳ್ಳುತ್ತಾರೆ. 

ತಮ್ಮ ಪರ್ಸನಲ್‌ ಟ್ರೈನರ್‌ ವಿಲಾಯತ್‌ ಹುಸೇನ್‌ ಅವರ ಸಲಹೆಯಂತೆ ವಿದ್ಯಾ ವ್ಯಾಯಾಮ, ವರ್ಕೌಟ್‌ ಮಾಡುತ್ತಾರೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅನೇಕ ಕಸರತ್ತುಗಳನ್ನು ಮಾಡಿಸುತ್ತಾರೆ. ಇದು ಶರೀರವನ್ನು ಸದೃಢವಾಗಿಸುತ್ತದೆಯಂತೆ. ಹಾಗಂತ ವಿದ್ಯಾ ತೀರಾ ಕಠಿಣವಾದ ವರ್ಕೌಟ್‌ಗಳನ್ನು ಮಾಡುವುದಿಲ್ಲ. ಬೆನ್ನು ಬಾಗಿಸುವುದು, ಜಂಪ್‌ ಮಾಡುವುದು, ಕಿಕ್‌, ಟ್ವಿಸ್ಟಿಂಗ್‌ ಈ ರೀತಿಯ ವ್ಯಾಯಾಮಗಳನ್ನು ದಿನಾ ಮನೆಯಲ್ಲಿಯೇ ಮಾಡುತ್ತಾರೆ.

ಅವರು ದಿನದಲ್ಲಿ ಆರು ಗಂಟೆ ನಿದ್ದೆ ಮಾಡುತ್ತಾರೆ. ವಾರದಲ್ಲಿ 5 ದಿನ ವ್ಯಾಯಾಮ ಮಾಡುತ್ತಾರೆ. ಎರಡು ದಿನ ಬಿಡುವು. ಗುಂಡು ಗುಂಡಾಗಿ ಇರುವುದು ವಿದ್ಯಾಗೆ ಇಷ್ಟ. ಹಾಗಾಗಿ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುವುದಿಲ್ಲ.

ಈ ಹಿಂದೆ ಜಿಮ್‌ಗೆ ಹೋಗಿ ಅಧಿಕ ತೂಕ ಎತ್ತಿ ತರಬೇತಿ ಪಡೆಯುತ್ತಿದ್ದರು. ಆದರೆ ಅಲ್ಲಿ ಅವರು ಅದನ್ನು ತಪ್ಪಾಗಿ ಅಭ್ಯಾಸ ಮಾಡಿದ್ದರಿಂದ ಭುಜದ ನೋವು ಕಾಣಿಸಿಕೊಂಡಿತು. ಅದಕ್ಕೆ ತಿಂಗಳುಗಟ್ಟಲೆ ಫಿಸಿಯೋಥೆರಪಿ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಈಗ ಆರಾಮವೆನಿಸುವ ಹಾಗೂ ಸರಳ ವ್ಯಾಯಾಮಗಳನ್ನೇ ಮಾಡಿ ತೂಕ ಕಡಿಮೆಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರಂತೆ. 

ವಿದ್ಯಾ ಡಯೆಟ್‌ ಪ್ಲಾನ್

ವಿದ್ಯಾ ಬಾಲನ್‌ ಅವರ ಡಯೆಟ್‌ ಸಲಹೆಗಾರ್ತಿ ಡಯೆಟಿಷಿಯನ್‌ ಪೂಜಾ ಮುಖರ್ಜಿ. ಅವರ ಸಲಹೆಯಂತೆ ವಿದ್ಯಾ ಪ್ರತಿ ಎರಡು ಗಂಟೆಗೊಮ್ಮೆ ಏನಾದರೂ ಸೇವಿಸುತ್ತಾರೆ. ಸಣ್ಣ ಪ್ರಮಾಣದಲ್ಲಿ ಆಗಾಗ ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭ ಹಾಗೂ ಅತಿ ಹೆಚ್ಚು ತಿನ್ನುವ ಚಪಲಕ್ಕೆ ಕಡಿವಾಣ ಹಾಕುತ್ತದೆ. ಹೀಗಾಗಿ ದೇಹ ಹೆಚ್ಚಿನ ಕ್ಯಾಲೊರಿ ಕಳೆದುಕೊಳ್ಳುತ್ತದೆ.

ಸಸ್ಯಾಹಾರಿಯಾಗಿರುವ ಕಾರಣ ಮೊಟ್ಟೆಯ ಬಿಳಿಭಾಗವನ್ನು ತಿನ್ನುತ್ತಾರೆ. ವಿದ್ಯಾಗೆ ಮಿಶ್ರ ಹಣ್ಣುಗಳನ್ನು ತಿನ್ನಲು ಇಷ್ಟವಾಗುವುದಿಲ್ಲವಂತೆ. ಒಂದು ಬಾರಿ ಒಂದು ಬಗೆಯ ಹಣ್ಣನ್ನಷ್ಟೇ ತಿನ್ನುತ್ತಾರೆ. ಆಹಾರದಲ್ಲೂ ಹಾಗೇ, ರೋಟಿ ಇದ್ದರೆ ಅನ್ನ ತಿನ್ನುವುದಿಲ್ಲ. ಆಗಾಗ ಚಾಕಲೇಟ್‌ ತಿನ್ನುತ್ತಾರೆ. ದಿನಕ್ಕೆ 4 ಲೀಟರಿಗಿಂತಲೂ ಹೆಚ್ಚು ನೀರು ಕುಡಿಯುತ್ತಾರೆ.

ವಿದ್ಯಾ ಬಾಲನ್‌ ಅವರು ಯಾವಾಗಲೂ ತಾಜಾ ಆಹಾರವನ್ನೇ ಸೇವಿಸುತ್ತಾರೆ. ಮೈದಾ ಹಾಕಿರುವ ಯಾವ ಪದಾರ್ಥವನ್ನೂ ತಿನ್ನುವುದಿಲ್ಲ. ಆಗಾಗ ತರಕಾರಿ ಜ್ಯೂಸ್‌ಗಳನ್ನು ಕುಡಿಯುತ್ತಾರೆ. ತಾಜಾ ಹಣ್ಣುಗಳನ್ನು ತಿನ್ನುತ್ತಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಮಸಾಲಾ ಟೀ  ಕುಡಿಯುವ ಅಭ್ಯಾಸವನ್ನು ಬಿಡಲು ಅವರಿಗೆ ಸಾಧ್ಯವಾಗಿಲ್ಲವಂತೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !