ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನಿಷ್ಟದ ಅಡುಗೆ ಮಾಡಿಕೊಂಡು ಕೂತರೆ ಹೋಟೆಲ್ ನಡೆಯೊಲ್ಲ.. : ಮಾಸ್ತಿ ಮನದಾಳ

’ಟಗರು’, ‘ಪಂಚತಂತ್ರ’ ಸಿನಿಮಾ ಸಂಭಾಷಣೆಗಾರ
Last Updated 8 ಜನವರಿ 2019, 11:11 IST
ಅಕ್ಷರ ಗಾತ್ರ

ಹಲವು ವರ್ಷಗಳಿಂದ ಗಾಂಧಿನಗರದಲ್ಲಿ ಕೆಲಸ ಮಾಡುತ್ತಿದ್ದರೂ, ಮಾಸ್ತಿ ಮುಖ್ಯವಾಹಿನಿಯ ಪ್ರಭೆಯಲ್ಲಿ ಕಾಣಿಸಿಕೊಂಡಿದ್ದು ‘ಟಗರು’ ಸಿನಿಮಾ ಸಂಭಾಷಣೆಯ ಮೂಲಕ. ಯೋಗರಾಜ ಭಟ್ಟರ ನಿರ್ದೇಶನದ ‘ಪಂಚತಂತ್ರ’ಕ್ಕೆ ಕಥೆಯನ್ನೂ ಬರೆದಿರುವ ಮಾಸ್ತಿ, ‘ಎಸ್‌ಆರ್‌ಕೆ’, ‘ನಾಥೂರಾಮ್‌’ ಮತ್ತು ‘ಮದಗಜ’ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ‘ಕಾಮಿಡಿ ನನ್ನ ಸ್ಟ್ರೆಂಥ್‌. ಆದ್ರೆ ಯಾವುದೇ ಒಂದು ಕೆಟಗೆರಿಗೆ ಸೇರಿಕೊಳ್ಳಲಾರೆ’ ಎಂದು ಸ್ಪಷ್ಟವಾಗಿ ಹೇಳುವ ಹೇಳುವ ಮಾಸ್ತಿ ಜತೆಗಿನ ಮಾತುಕತೆ ಇಲ್ಲಿದೆ.

* ಸಾಹಿತ್ಯ ಬರವಣಿಗೆಗೂ ಸಿನಿಮಾ ಸಂಭಾಷಣೆಗೂ ಇರುವ ವ್ಯತ್ಯಾಸವೇನು?

ನಾವು ಮನೆಯಲ್ಲಿ ಮಾತನಾಡುವುದಕ್ಕೂ ಟೀವಿ ಧಾರಾವಾಹಿಗಳಲ್ಲಿ ಬಳಸುವ ಭಾಷೆಗೂ ಎಷ್ಟು ವ್ಯತ್ಯಾಸವಿದೆಯೋ ಅಷ್ಟೇ ವ್ಯತ್ಯಾಸ ಸಾಹಿತ್ಯಿಕ ಬರವಣಿಗೆಗೂ ಸಿನಿಮಾ ಸಂಭಾಷಣೆಗೂ ಇದೆ. ನಾವು ನಮ್ಮ ಸುತ್ತಲಿನವರ ಜೊತೆ ಏನು ಮಾತಾಡ್ತೇವೋ ಅದನ್ನೇ ಸಂಭಾಷಣೆಯಾಗಿ ಕೊಟ್ಟಾಗ ಜನರಿಗೆ ರುಚಿಸುತ್ತದೆ. ಒಬ್ಬ ಆಟೊ ಡೈವರ್‌, ಸಾಫ್ಟ್‌ವೇರ್‌ ಎಂಜಿನಿಯರ್‌, ಡಾಕ್ಟರ್‌ ಎಲ್ಲರೂ ಒಟ್ಟಿಗೇ ಸಿನಿಮಾ ನೋಡುತ್ತಾರೆ. ಅವರವರ ದೃಷ್ಟಿಕೋನದಲ್ಲಿ ನೋಡುತ್ತಿರುತ್ತಾರೆ. ನೈಜತೆಗೆ ಹತ್ತಿರವಿರುವಂತೆ ಬರೆದಾಗ ಅವರಿಗೆಲ್ಲ ಒಗ್ಗುತ್ತದೆ.

* ನಿಮ್ಮ ಬರವಣಿಗೆಯ ಮೂಲದ್ರವ್ಯ ಒದಗಿಬರುವುದು ಎಲ್ಲಿಂದ?

ನಾನು ಪುಸ್ತಕಗಳನ್ನು ಓದುವುದು ಕಮ್ಮಿ. ಆದರೆ ಪ್ರತಿದಿನ ದಿನಪತ್ರಿಕೆಗಳನ್ನು ಓದುತ್ತೇನೆ. ಅಲ್ಲಿ ಬರುವ ಕ್ರೈಂ, ಕ್ರೀಡೆಯ ವರದಿಗಳು, ಭಾನುವಾರದ ಪುರವಣಿಗಳಲ್ಲಿ ಬರುವ ಸಣ್ಣ ಸಣ್ಣ ಕಥೆಗಳು ಇವೆಲ್ಲವನ್ನೂ ಓದುತ್ತೇನೆ. ದಿನಪತ್ರಿಕೆಗಳಲ್ಲಿಯೇ ನನ್ನ ಬರವಣಿಗೆಗೆ ಬಹುಮುಖ್ಯವಾದ ಮೂಲದ್ರವ್ಯ ದೊರಕುತ್ತದೆ.

* ಸಿನಿಮಾ ಸಂಭಾಷಣೆಗಾರ ನಿರ್ದೇಶಕನ ಉದ್ದೇಶಕ್ಕೆ ಹೊಂದುವ ಹಾಗೆ, ಪ್ರೇಕ್ಷಕನಿಗೆ ಇಷ್ಟವಾಗುವ ಹಾಗೆ ಬರೆಯಬೇಕು. ಅವರಿಬ್ಬರ ನಡುವೆ ತನಗೆ ಇಷ್ಟವಾಗುವುದನ್ನು ಬರೆಯಬೇಕು ಅನಿಸುವುದಿಲ್ಲವೇ?

ಖಂಡಿತ ಅನಿಸುತ್ತದೆ. ನಿರ್ದೇಶಕ ಟೀಚರ್ ಥರ. ಸಂಭಾಷಣೆಕಾರ ಅವರಿಗೆ ತುಂಬ ಇಷ್ಟವಾಗಿರುವ ಸ್ಟೂಡೆಂಟ್‌ ಥರ. ‘ನಾನು ಮಾಸ್ತಿಗೆ ಹೇಳಿಕೊಡ್ತೀನಿ; ಅವನು ಬರೆದಂಗೆ ಉಳಿದವರೆಲ್ಲರೂ ಬರೀರೋ’ ಎಂದು ಅವರು ಹೇಳುತ್ತಿರುತ್ತಾರೆ. ನಾವು ಮೇಸ್ಟ್ರು ಹೇಳಿದಂಗೆ, ಮೇಸ್ಟ್ರನ್ನು ಒಪ್ಪಿಸಿದರೆ ಸಾಕು ಎಂಬ ರೀತಿಯಲ್ಲಿಯೇ ಬರೆಯುತ್ತಿರುತ್ತೇವೆ. ಎಷ್ಟೋ ಸಲ ಛೇ, ನನಗೆ ಇಷ್ಟವಾದದ್ದೂ ಏನಾದ್ರೂ ಬರೀಬೇಕಾಗಿತ್ತಲ್ಲ ಅನಿಸುವುದಿದೆ. ಕೆಲವು ಸಲ ಮೇಸ್ಟ್ರು ‘ಐದರಲ್ಲಿ ಮೂರಕ್ಕೆ ಉತ್ತರಿಸಿ’ ಎಂದು ಹೇಳಿರುತ್ತಾರೆ. ನಾವು ಐದನ್ನೂ ಬರೆದಿರುತ್ತೇವೆ. ಮೂರು ಅವರಿಗೆ ಬೇಕಾದ ಹಾಗೆ, ಉಳಿದ ಎರಡು ನಮಗೆ ಇಷ್ಟವಾಗುವ ಹಾಗೆ ಇರುತ್ತದೆ. ಒಂದೊಂದು ಬಾರಿ ನಿರ್ದೇಶಕರಿಗೆ ಆ ಎರಡು ಉತ್ತರವೇ ಇಷ್ಟವಾಗಿಬಿಡುತ್ತದೆ.

ಸಂಭಾಷಣೆ ತುಂಬ ಸಮರ್ಥವಾಗಿ ಬರಬೇಕು ಎಂದರೆ ಚಿತ್ರಕಥೆಯಲ್ಲಿ ಕೂಡಬೇಕು. ‘ಟಗರು’ ಸಿನಿಮಾ ಚಿತ್ರಕಥೆಯಲ್ಲಿ ಕೂತಿದ್ದರಿಂದಲೇ ನನಗೆ ಅಷ್ಟು ಚೆನ್ನಾಗಿ ಸಂಭಾಷಣೆ ಬರೆಯುವುದಕ್ಕೆ ಸಾಧ್ಯವಾಗಿದ್ದು. ನಿರ್ದೇಶಕರ ಕಲ್ಪಿತ ಕಥೆಯಲ್ಲಿಯೇ ನಾವು ಪ್ರಯಾಣ ಮಾಡಿದಾಗ ಪರಿಪೂರ್ಣವಾದ ಸಂಭಾಷಣೆ ಹೊರಬೀಳುತ್ತದೆ.

* ಕನ್ನಡ ಚಿತ್ರರಂಗದಲ್ಲಿ ಬರಹಗಾರರ ಪಾಡು ಹೇಗಿದೆ?

ಸಿನಿಮಾ ಮೇಕರ್‌ಗಳು ಮೊದಲ ಪ್ರಾಶಸ್ತ್ಯ ಕಥೆಗೆ ಕೊಡಬೇಕು. ಆಗ ಅದರ ಸಂಭಾಷಣೆಗೂ ಮಹತ್ವ ಬರುತ್ತದೆ. ನಾವು ನಿರ್ದೇಶಕರ ಮನಸಲ್ಲಿರುವುದನ್ನು ವಿಷುವಲ್‌ ಆಗಿಯೇ ಯೋಚಿಸುತ್ತೇವೆಯೇ ಹೊರತು ಬರವಣಿಗೆಯತ್ತ ಗಮನ ಕೊಡುತ್ತಿಲ್ಲ. ಜ್ಞಾನ ಮೊದಲು; ತಂತ್ರಜ್ಞಾನ ಆಮೇಲೆ. ನಾವು ಮೊದಲೇ ತಂತ್ರಜ್ಞಾನಕ್ಕೆ ಹೋಗ್ತೀವಿ. ಗ್ರೀನ್‌ ಮ್ಯಾಟ್‌ ಹಾಕ್ಕೊಂಬಿಡ್ತೀವಿ. ಆ ಗ್ರೀನ್‌ ಮ್ಯಾಟ್‌ ಯಾಕೆ ಹಾಕ್ಕೊತೀವಿ ಅನ್ನೋದು ಮೊದಲು ತಿಳಿದಿರಬೇಕಲ್ವ? ನಾಯಕ ಐವತ್ತು ಜನಕ್ಕೆ ಹೊಡೀತಾನೆ ಅನ್ನೋದಷ್ಟೇ ಯೋಚಿಸ್ತೀವಿ. ಯಾಕೆ ಹೊಡೀತಾನೆ ಅನ್ನೋದನ್ನು ಯೋಚಿಸುವುದೇ ಇಲ್ಲ. ಅವನನ್ನು ಸಿಟ್ಟಿಗೇಳುವಂತೆ ಮಾಡುವಂಥದ್ದೇನನ್ನೋ ವಿಲನ್‌ ಹೇಳಿರಬೇಕಲ್ವಾ?

* ನೀವು ನಿರ್ದೇಶನಕ್ಕಿಳಿಯುವುದು ಯಾವಾಗ?

ಅದಕ್ಕೆಲ್ಲ ಕಾಲ ಕೂಡಿಬರಬೇಕು. ನಾನು ನನ್ನಿಷ್ಟದ ಒಂದು ಕಥೆ ಮಾಡಿಕೊಂಡು ನಿರ್ದೇಶನಕ್ಕೆ ಅಣಿಯಾಗಿದ್ದೆ. ಆದರೆ ನನಗೆ ಒಂದು ಪ್ರಶ್ನೆ ಎದುರಾಯಿತು. ನಿರ್ದೇಶಕ ಗೆಲ್ಲಬೇಕಾ ಅಥವಾ ಸಿನಿಮಾ ಗೆಲ್ಲಬೇಕಾ ಅಂತ. ಸಿನಿಮಾ ಗೆಲ್ಲಬೇಕು ಅಂದಾಗ ನಿರ್ದೇಶಕ ಒಮ್ಮೊಮ್ಮೆ ಸೋಲಬೇಕಾಗುತ್ತದೆ. ನಿರ್ದೇಶಕರು ಮೂಗಿನ ನೇರಕ್ಕೆ ಸಿನಿಮಾ ಮಾಡಿಕೊಂಡು ಇದು ನನ್ನ ಸಿನಿಮಾ ಅನ್ನುವ ಹಾಗಿಲ್ಲ. ಯಾಕೆಂದರೆ ಅದಕ್ಕೆ ಬಂಡವಾಳ ಹೂಡಿರುವವನು ಬೇರೆಯವನಾಗಿರುತ್ತಾನೆ. ಅವನು ಹೋಟೆಲ್‌ ಥರ ಕೆಲಸ ಮಾಡು ಎಂದು ಹೇಳುತ್ತಾನೆ. ನನ್ನಿಷ್ಟದ ಅಡುಗೆ ಮಾಡಿಕೊಂಡು ಕೂತರೆ ಹೋಟೆಲ್ ನಡೆಯುವುದಿಲ್ಲ. ಜನರು ಇಷ್ಟಪಡುವ ಅಡುಗೆ ಮಾಡಬೇಕು. ಅದಕ್ಕಾಗಿ ಎಲ್ಲ ಸಾಮಗ್ರಿಗಳನ್ನು ಇಟ್ಟುಕೊಂಡು ಕಾಯುತ್ತಿದ್ದೇನೆ.

ಚಿತ್ರಗಳು: ವಿಷ್ಣುಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT