ಗುರುವಾರ , ಆಗಸ್ಟ್ 22, 2019
27 °C
ಸಿನಿ ಚಾಟ್ಸ್

ನಮ್ ಸಿನಿಮಾ ನಮ್‌ ಹೋಟೆಲ್‌ ತರಹ

Published:
Updated:
Prajavani

‘ಸಿನಿಮಾ ಸಖತ್ತಾಗಿತ್ತು ಯಾಕೋ ಓಡ್ಲಿಲ್ಲ. ಈ ಸಿನಿಮಾ ಏನಾದರೂ ತೆಲುಗಲ್ಲೋ ತಮಿಳಲ್ಲೋ ಬಂದಿದ್ದಿದ್ರೆ ಕಿತ್ಕೊಂಡು ಓಡಿರೋದು. ಆ ಸಿನಿಮಾ ಇದೇ ಥರ ಇರಲಿಲ್ವಾ ಹೆಂಗ್ ಓಡ್ತು..’ ಇಂಥ ಮಾತುಗಳನ್ನು ಸಿನಿ ಉದ್ಯಮ ವಲಯದಲ್ಲಿ ತುಂಬ ಸಲ ಕೇಳುತ್ತೇವೆ.

ಒಂದು ಸಿನಿಮಾ ಥಿಯೇಟರ್‌ಗಳಲ್ಲಿ ಹಲವಾರು ಪ್ರದರ್ಶನಗಳನ್ನು ಕಂಡು ಗೆದ್ದಿದೆ ಅನ್ನೋದಕ್ಕೆ ಸಿನಿಮಾ ಚೆನ್ನಾಗಿದೆ ಎನ್ನುವುದು ಒಂದು ಕಾರಣ. ಆದರೆ, ಸಿನಿಮಾ ಸೋತಿದೆ ಅನ್ನೋದಕ್ಕೆ ನಮ್ಮಲ್ಲಿ ತುಂಬ ಕಾರಣಗಳಿರುತ್ತವೆ. ಮಳೆಗಾಲ, ಎಲ್ಲರಿಗೂ ಎಕ್ಸಾಮ್ ಟೈಂ, ದೊಡ್ಡ ಬ್ಯಾನರ್‌ ಸಿನಿಮಾಗಳು ಇದೇ ಟೈಮಿಗೆ ರಿಲೀಸ್ ಆಗಿದ್ದು, ಪಬ್ಲಿಸಿಟಿ ಕೊರತೆ, ಎಲೆಕ್ಷನ್ ಟೈಂ, ರಾಂಗ್ ರಿಲೀಸ್‌, ಒಳ್ಳೆಯ ಥಿಯೇಟರ್‌ ಸಿಗಲಿಲ್ಲ.. ಹೀಗೆ ನಾನಾ ಕಾರಣಗಳನ್ನು ಗಾಂಧಿನಗರ ಪಂಡಿತರು ಮುಂದಿಡುತ್ತಾರೆ.

ಒಂದು ಒಳ್ಳೆಯ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ, ಪತ್ರಿಕೆಗಳಿಂದ ಉತ್ತಮ ವಿಮರ್ಶೆ, ಮೆಚ್ಚುಗೆ ಪಡೆದಿದ್ದರೂ ಒಮ್ಮೊಮ್ಮೆ ಥಿಯೇಟರ್‌ಗಳಲ್ಲಿ ಉಳಿದು ಓಡುವುದು ಕಷ್ಟ. ಕಾರಣ ಕೇಳಿದರೆ ಸಿನಿಮಾ ಸ್ವಲ್ಪ ಕ್ಲಾಸ್ ಆಗಿದ್ದರಿಂದ ಒಂದು ವರ್ಗಕ್ಕೆ ಮಾತ್ರ ಇಷ್ಟ ಆಗುವಂತಿದೆ, ಸ್ವಲ್ಪ ಕಮರ್ಶಿಯಲ್‌ ಆಗಿರಬೇಕಾಗಿತ್ತು.. ಹೀಗೆ ಅವರದ್ದೇ ಆದ ಹಲವಾರು ವ್ಯವಹಾರಿಕ ಕಾರಣಗಳನ್ನು ಕೊಡುತ್ತಾರೆ.

ಹೋಲಿಕೆ ಮಾಡುವುದು ಇದೆಯಲ್ಲಾ ಅದು ನಮ್ಮ ಮನೋಧರ್ಮದ ಒಂದು ಭಾಗವೇ ಆದಂತಿದೆ. ಚಿಕ್ಕ ವಯಸ್ಸಲ್ಲಿ ಇರುವಾಗ ಪೋಷಕರು ತಮ್ಮ ಮಕ್ಕಳು ಓದಿನಲ್ಲಿ ಸ್ವಲ್ಪ ಹಿಂದೆ ಇದ್ದರೆ, ಉತ್ತಮವಾಗಿ ಓದುವ ಹುಡುಗರನ್ನು ತೋರಿಸಿ, ‘ಹೋಗು, ಅವನ ಕಾಲ್‌ ಕೆಳಗೆ ನಾಲಕ್ ಸಲ ನುಗ್ಗು’ ಇಲ್ಲವೇ ‘ನೋಡು ಅವನ್ನ ನೋಡಿ ಕಲಿ’ ಎನ್ನುವುದು. ಪ್ರತಿಯೊಂದಕ್ಕೂ ಇನ್ನೊಬ್ಬರನ್ನು ಹೋಲಿಕೆ ಮಾಡಿ ಹೀಯಾಳಿಸೋದು. ಹೋಲಿಕೆ ಎನ್ನುವುದು ಕೆಟ್ಟ ಕಾಯಿಲೆ.

ಮಲಯಾಳಂ ಸಿನಿಮಾ ಇಂಡಸ್ಟ್ರಿ ಮಲಯಾಳಂ ಹೋಟೆಲ್‌ ಥರ. ಅವರು ಅವರದೇ ಆದ ಖಾದ್ಯಗಳನ್ನ ತಯಾರಿಸ್ಕೋತಾರೆ. ಬಾಯ್ತುಂಬ ಚಪ್ಪರಿಸುತ್ತಾರೆ. ಚೆನ್ನಾಗಿದೆ ಅಂತಾರೆ. ಅವರು ತಲೆಗೆ ಉಪಯೋಗಿಸುವ ಕೊಬ್ಬರಿ ಎಣ್ಣೆಯನ್ನು ಅಡುಗೆಗೆ ಹಾಕ್ತಾರೆ ಅಂತ ನಾವು ತಿನ್ನೋದಕ್ಕೆ ಹೋಗಲ್ಲ. ಇನ್ನು ತಮಿಳು ಸಿನಿಮಾಗಳು ತಮಿಳು ಹೋಟೆಲ್‌ಗಳ ತರಹ. ಬಿಸಿ ಬಿಸಿ ಇಡ್ಲಿ, ಸಾಂಬಾರು, ದೋಸೆ, ಮೀನು, ಆಮ್ಲೆಟ್‌.. ಅಂದುಕೊಂಡಿದ್ದು ಸಿಗುತ್ತೆ. ಹೋಗಿ ತಿಂದು ಬರುತ್ತೇವೆ. ಸಮಸ್ಯೆ ಇಲ್ಲ. ಇಂಥಲ್ಲಿ ಏನಿರುತ್ತೆ, ಏನಿರಲ್ಲ ಅಂತ ಊಹಿಸಬಹುದು. ಈ ತೆಲುಗು ಸಿನಿಮಾಗಳಂತೂ ಪಕ್ಕಾ ಆಂಧ್ರ ಸ್ಟೈಲ್ ಹೋಟೆಲ್ ತರಹ. ಅನ್ನ, ಪಪ್ಪು, ಸಾಂಬಾರು ಉಪ್ಪಿನಕಾಯಿ, ಬಿರಿಯಾನಿ, ಕಬಾಬ್‌, ಚಿಲ್ಲಿ ಚಿಕನ್‌.. ಮೆನ್ಯು ನೋಡದೆಯೇ ಆರ್ಡರ್‌ ಹೇಳಬಹುದು. ಇದಿಷ್ಟು ಗ್ಯಾರಂಟಿ ಎನ್ನುವರ್ಥದಲ್ಲಿ.

ನಮ್ಮ ಸಿನಿಮಾಗಳೋ ಥೇಟ್‌ ನಮ್ಮ ಹೋಟೆಲ್‌ಗಳ ತರಹ. ಟೊಮೋಟೋ ಬಾತ್ ಕೇಳಿದರೆ ಅವರು ವಾಂಗಿಬಾತ್ ಕೊಡ್ತಾರೆ. ಉದ್ದಿನ ವಡೆ ಕೇಳಿದ್ರೆ ಮದ್ದೂರ್ ವಡೆ ಇದೆ ಅಂತಾರೆ. ಖಾರಾಬಾತ್ ಕೇಳಿದ್ರೆ ಕೇಸರಿಬಾತ್ ಕೊಡ್ತಾರೆ. ‘ನೆನ್ನೆ ಮಾಡಿದ್ರಲ್ಲಾ ಇವತ್ತು ಮಾಡ್ಲಿಲ್ವಾ’ ಅಂತ ಯಾರಾದರೂ ಕೇಳಿದರೆ, ‘ಇಲ್ಲ ಆ ಭಟ್ಟರು ಕೆಲಸ ಬಿಟ್ಟರು’ ಅಂತಾರೆ. ಏನು ತಿನ್ನಬೇಕು ಅಂತ ನಮಗೂ ಗೊತ್ತಿಲ್ಲ. ಏನು ಮಾಡಬೇಕು ಅಂತ ಅವರಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಏನೋ ಒಂದು ತಿನ್ಕೊಂಡು ಬರ್ತಾ ಇರ್ತೀವಿ.

ಈಗೀಗ ನಮ್ಮ ಹೋಟೆಲ್‌ಗಳೂ ಬದಲಾಗಿವೆ. ಹಾಗೆಯೇ ಸಿನಿಮಾಗಳೂ. ಒಳ್ಳೆಯದನ್ನು ನಿರೀಕ್ಷಿಸೋಣ.

 - ಮಾಸ್ತಿ (ಕನ್ನಡ ಚಿತ್ರರಂಗದ ಹೆಸರಾಂತ ಸಂಭಾಷಣಕಾರ)

Post Comments (+)