ಆರ್‌ಜಿವಿ ಕ್ಯಾಂಪ್‌ಗೆ ಕನ್ನಡದ ‘ಮಾಸ್ತಿ’

7
script writer Maasti, ramgopalvarma, rgv, bhairavageetha, tagaru, dialogue, writer

ಆರ್‌ಜಿವಿ ಕ್ಯಾಂಪ್‌ಗೆ ಕನ್ನಡದ ‘ಮಾಸ್ತಿ’

Published:
Updated:
ಸಂಭಾಷಣೆಕಾರ ಮಾಸ್ತಿ

ಮೊದಲೇ ಸ್ಪಷ್ಟಪಡಿಸುತ್ತೇನೆ ಕನ್ನಡದ ಕಥೆಗಾರ ಮಾಸ್ತಿ ಅವರಿಗೂ, ಸಂಭಾಷಣೆಕಾರ ಮಾಸ್ತಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಇಬ್ಬರ ನಡುವೆ ಬಾಂಧವ್ಯದ ಬೆಸುಗೆಯೊಂದಿದೆ ಅದುವೇ ಬರವಣಿಗೆ. ಮಾಲೂರು ಸಮೀಪದ ಉಪ್ಪಾರಹಳ್ಳಿಯ ಮಾಸ್ತಿ ಎನ್ನುವ ಕಡು ಸಿನಿಮಾಮೋಹಿ ಯುವಕ, ಚಂದನವನದಲ್ಲಿ ಸದ್ದಿಲ್ಲದೇ ಪರಿಮಳ ಬೀರುತ್ತಿರುವ ಸಂಭಾಷಣೆಕಾರ.

‘ಸುಂಟರಗಾಳಿ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದರೂ ಮಾಸ್ತಿ ಆರಂಭದ ದಿನಗಳಲ್ಲೇ ಸುಂಟರಗಾಳಿಯಂತೆ ಸದ್ದು ಮಾಡಲಿಲ್ಲ. ಆದರೆ, ‘ಟಗರು’ ಸಿನಿಮಾದಲ್ಲಿ ಮಾತ್ರ ಅವರ ಸಂಭಾಷಣೆಯ ಮೊನಚನ್ನು ಬಚ್ಚಿಡಲಾಗಲಿಲ್ಲ. ನಿರ್ದೇಶಕ ಸೂರಿ ಅವರ ಜತೆ ‘ಟಗರು’ ನೋಡುತ್ತಿದ್ದ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರ ಮನಸನ್ನು ತಾಗಿದ್ದು ಮಾಸ್ತಿ ಅವರ ಚುರುಕು ಮುಟ್ಟಿಸುವ ಸಂಭಾಷಣೆಯೇ. ಮಾಸ್ತಿ ಬರಹ ಶಿವಣ್ಣನ ಬಾಯಲ್ಲಿ ಸುಲಲಿತವಾಗಿ ಹರಿದ ಲಾಲಿತ್ಯಕ್ಕೆ ಪ್ರೇಕ್ಷಕರ ವಿಷೆಲ್, ಚಪ್ಪಾಳೆಯ ಸುರಿಮಳೆಗೆ ಅಚ್ಚರಿ ವ್ಯಕ್ತಪಡಿಸಿದ್ದ ಆರ್‌ಜಿವಿ ಯಾರೀ ಸಂಭಾಷಣೆಕಾರ ಅಂತ ಕಣ್ಣರಳಿಸಿ ಕೇಳಿದಾಗ ಸೂರಿ ಕೈತೋರಿದ್ದು ಮಾಸ್ತಿಯತ್ತ!

‘ಟಗರು’ ವೀಕ್ಷಣೆ ಬಳಿಕ ಆರ್‌ಜಿವಿ, ನಟಿ ಮಾನ್ವಿತಾ ಹರೀಶ್ ಹಾಗೂ ಧನಂಜಯ್ ಜತೆ ಒಂದು ಸುತ್ತು ಮಾತುಕತೆ ಮುಗಿಸಿದ್ದಷ್ಟೇ ತಡ, ಮತ್ತೊಂದು ಸುತ್ತಿಗೆ ವಿಮಾನದ ಟಿಕೆಟ್ ಸಹಿತ ಬುಕ್ ಮಾಡಿ ಸಂಭಾಷಣೆಕಾರ ಮಾಸ್ತಿ ಅವರಿಗೆ ಆಹ್ವಾನವಿತ್ತರು. ‘ಸತ್ಯ’, ‘ಕಂಪನಿ’, ‘ರಂಗೀಲಾ’ ನೋಡಿ ಬೆಳೆದಿದ್ದ ಮಾಸ್ತಿ ಅವರಿಗೆ ಆರ್‌ಜಿವಿ ಅವರನ್ನು ಭೇಟಿ ಮಾಡಿದ್ದು ಜೀವನದ ದೊಡ್ಡ ಪುಳಕ. ಆರ್‌ಜಿವಿ ಕ್ಯಾಂಪ್‌ನಡಿ ದ್ವಿಭಾಷೆಯಲ್ಲಿ ಸಿದ್ಧವಾಗುತ್ತಿರುವ ಸಿದ್ಧಾರ್ಥ್ ನಿರ್ದೇಶನದ ‘ಭೈರವಗೀತಾ’ದ ಕನ್ನಡ ಅವತರಣಿಕೆಗೆ ಸಂಭಾಷಣೆ ಬರೆಯುವ ಅವಕಾಶವಿತ್ತಾಗ ಮಾಸ್ತಿ ಅವರಿಗೆ ಮತ್ತೊಂದು ಪುಳಕ! ನೆಚ್ಚಿನ ನಿರ್ದೇಶಕನ ಬ್ಯಾನರಿನ ಸಿನಿಮಾಕ್ಕೆ ಸಂಭಾಷಣೆ ಬರೆಯುವ ಭಾಗ್ಯ ಅದೆಷ್ಟು ಜನರಿಗಿರುತ್ತೆ ಅನ್ನುತ್ತಾರೆ ಅವರು.


ರಾಮಗೋಪಾಲ್ ವರ್ಮಾ ಜತೆ ಮಾಸ್ತಿ ಮತ್ತು ಧನಂಜಯ್

ವರ್ಮಾ ಅವರಷ್ಟು ಕ್ರಿಯಾಶೀಲತೆಯುಳ್ಳ ನಿರ್ದೇಶಕರು ವಿರಳ. ಅವರ ಕಂಪನಿಯಲ್ಲಿ ಪ್ರತಿ ವಿಭಾಗಕ್ಕೂ ಒಂದೊಂದು ತಂಡವಿದೆ. ಪಕ್ಕಾ ವೃತ್ತಿಪರತೆ ಅಲ್ಲಿ ಎದ್ದು ಕಾಣುತ್ತೆ. ಅವರಿಗೆಲ್ಲಾ ಸಿನಿಮಾವೇ ಉಸಿರು. ಅಲ್ಲಿನ ಕೆಲಸದ ಸಂಸ್ಕೃತಿ ನಿಜಕ್ಕೂ ಅನುಕರಣೀಯ ಎನ್ನುವ ಮಾಸ್ತಿ, ಶಿವಣ್ಣ ಅಭಿನಯದ ‘ಕಡ್ಡಿಪುಡಿ’ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದರು. ಆನಂತರ ಶಿವಣ್ಣ ಅವರಿಗಾಗಿಯೇ ‘ಟಗರು’ ಸಿನಿಮಾಕ್ಕೆ ಮತ್ತೊಮ್ಮೆ ಸಂಭಾಷಣೆ ಬರೆಯುವ ಅವಕಾಶ ಸಿಕ್ಕಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ನಿರ್ದೇಶಕ ಸೂರಿ ಅವರು ನೀಡಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದ ಮಾಸ್ತಿ ಅವರನ್ನು ಆರ್‌ಜಿವಿ ಕ್ಯಾಂಪ್‌ನತ್ತ ತಲುಪುವಂತೆ ಮಾಡಿತು.

ಟೀ ಕುಡಿಯುತ್ತಾ ತಾವು ಹೇಳಿದ್ದ ಒಂದೆಳೆಯ ಕಥೆಯನ್ನೇ ‘ಪಂಚತಂತ್ರ’ ಸಿನಿಮಾ ಮಾಡುತ್ತಿರುವ ನಿರ್ದೇಶಕ ಯೋಗರಾಜ ಭಟ್ಟರಿಂದ ಅಪಾರವಾಗಿ ಕಲಿತೆ ಎನ್ನುವ ಮಾಸ್ತಿ, ಅದೇ ಸಿನಿಮಾಕ್ಕಾಗಿ ಕಥೆ ಬರೆಯುತ್ತಿದ್ದಾರೆ. ಮಾಸ್ತಿ ಕಥೆಗೆ ಭಟ್ಟರು ಸಂಭಾಷಣೆ ಬರೆಯುತ್ತಿರುವುದು ಈ ಸಿನಿಮಾದ ವಿಶೇಷ.

ನಾನು ಮೂಲತಃ ಕಥೆಗಾರ ಎನ್ನುವ ಮಾಸ್ತಿ ಅವರನ್ನು ಕಥಾ ಪ್ರಪಂಚಕ್ಕೆ ಕರೆತಂದದ್ದು ಅವರ ಬಾಲ್ಯದ ಶಾಲಾ ನೆನಪುಗಳೇ. ಹಳ್ಳಿಗಾಡಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಕೇಳಿದ್ದ ಕಥೆಗಳೇ ಇಂದಿಗೂ ನನ್ನ ಕೈಹಿಡಿದು ನಡೆಸುತ್ತಿವೆ. ಅಂಗನವಾಡಿಯ ಉಪ್ಪಿಟ್ಟಿನ ರುಚಿಯನ್ನು ನಾನಿನ್ನೂ ಮರೆತಿಲ್ಲ. ಪಾತ್ರವೇ ತಾನಾಗಿ ಸಂಭಾಷಣೆ ಬರೆಯುವ ಕೌಶಲ ಸಿದ್ಧಿಸುವಲ್ಲಿ ಬಾಲ್ಯದ ಅನುಭವ ಕಥನಗಳ ಪಾತ್ರ ಮಹತ್ವದ್ದು. ಹಾಗಾಗಿಯೇ ‘ಟಗರು’ ಸಿನಿಮಾದಲ್ಲಿ ರೌಡಿ ಎಸಿಪಿಯನ್ನು ಒರಟೊರಟಾಗಿ ಮಾತನಾಡಿಸುತ್ತಾನೆ. ನಾನು ಬರೀ ಸಂಭಾಷಣೆ ಅಷ್ಟೇ ಬರೆಯೋದಿಲ್ಲ. ಆ ಕಥೆಯೊಳಗಿರುತ್ತೇನೆ. ಹಾಗಾಗಿ, ಸೂರಿ, ಭಟ್ಟರಂಥ ನಿರ್ದೇಶಕರು ತಮ್ಮೊಳಗೆ ನನ್ನನ್ನೂ ಒಬ್ಬನಾಗಿಸಿಕೊಳ್ಳುತ್ತಾರೆ’ ಎಂದು ಭಾವುಕರಾಗುತ್ತಾರೆ ಮಾಸ್ತಿ.

‘ಸುಂಟರಗಾಳಿ’, ‘ಕಡ್ಡಿಪುಡಿ’, ‘ಕಾಲೇಜುಕುಮಾರ’, ‘ಬಾಲ್‌ಪೆನ್‌’, ‘ಪಂಚತಂತ್ರ’, ‘ಕಟ್ಟುಕಥೆ’ ಸಿನಿಮಾಗಳಿಗೆ ಕಥೆ, ಸಂಭಾಷಣೆ ಬರೆದಿರುವ ಮಾಸ್ತಿ ಅವರಿಗೆ ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ಇಷ್ಟವಂತೆ. ಸದ್ಯಕ್ಕೆ ಸೂರಿ ಅವರ ‘ಪಾಪ್‌ಕಾರ್ನ್–ಮಂಕಿ–ಟೈಗರ್’ ಸಿನಿಮಾಕ್ಕೆ ಸಂಭಾಷಣೆ ಬರೆಯುತ್ತಿರುವ ಮಾಸ್ತಿ ಅವರಿಗೆ ಸೂರಿ ಜತೆಗೆ ಗುರುಶಿಷ್ಯ, ಗೆಳೆಯ–ಗೆಳೆಯನಂಥ ಅನುಬಂಧವಿದೆ. ಸೂರಿ ಅವರ ಜತೆ ಸ್ನೇಹವಲಯದ ರೀತಿ ಕೆಲಸವಾಗುತ್ತದೆ. ನನ್ನನ್ನು ಶಾರ್ಪ್ ಮಾಡಿದ್ದೇ ಸೂರಿ. ನನಗೆ ಜವಾಬ್ದಾರಿ ಕೊಟ್ಟು ತಿದ್ದಿತೀಡಿದವರು ಅವರು. ಇನ್ನು ಭಟ್ಟರನ್ನು ಮರೆಯಲು ಸಾಧ್ಯವೇ? ಭಟ್ಟರು ಹೆಡ್ ಮಾಸ್ಟರ್, ಸೂರಿ ಮಾಸ್ಟರ್. ಇವರಿಬ್ಬರಿಗೆ ನಾನು ವಿದ್ಯಾರ್ಥಿ’ ಎಂದು ವಿನಮ್ರವಾಗಿಯೇ ನುಡಿಯುವ ಮಾಸ್ತಿ ಅವರಿಗೆ ಚಿತ್ರರಂಗದಲ್ಲಿ ಮಹತ್ತರವಾದದ್ದನ್ನು ಸಾಧಿಸುವ ಹಂಬಲವಿದೆ.

‘ತಿಥಿ’, ‘ಕಿರಿಕ್ ಪಾರ್ಟಿ’ಯಂಥ ಸಿನಿಮಾಗಳನ್ನು ಅನ್ಯಭಾಷಿಕರೂ ತಿರುಗಿ ನೋಡುವಂತಾಯಿತು. ಅಂತೆಯೇ ಕನ್ನಡದ ಸಿನಿಮಾ ಕಥೆಗಾರರನ್ನೂ ಅನ್ಯಭಾಷಿಕರು ಗಮನಿಸುವಂತಾಗಬೇಕು. ಆ ದಿನಗಳು ದೂರವಿಲ್ಲ. ಅದಕ್ಕೆ ನಾನೇ ತಾಜಾ ಉದಾಹರಣೆ. ಆರ್‌ಜಿವಿ ಕ್ಯಾಂಪ್‌ ಸೇರ್ಪಡೆಗಿಂತ ಮತ್ತೊಂದು ಸಾಕ್ಷಿ ಬೇಕೆ ಎನ್ನುತ್ತಾ ಮುಗುಳುನಗೆ ಚೆಲ್ಲುತ್ತಾರೆ ಮಾಸ್ತಿ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !