ಸೋಮವಾರ, ಆಗಸ್ಟ್ 2, 2021
28 °C
ನಟ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳ ಕೀಟಲೆ

ನಟಿ ಮೀರಾ ಚೋಪ್ರಾಗೆ ಸಾಮೂಹಿಕ ಅತ್ಯಾಚಾರದ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮೀರಾ ಚೋಪ್ರಾ ಎಂದಾಕ್ಷಣ ಈಕೆ ಪ್ರಿಯಾಂಕಾ ಚೋಪ್ರಾ ಸಂಬಂಧಿಯೇ ಎಂದು ಊಹಿಸುವವರೇ ಹೆಚ್ಚು. ಹೌದು, ಈಕೆ ಪ್ರಿಯಾಂಕಾಳ ಸೋದರ ಸಂಬಂಧಿ. 2008ರಲ್ಲಿ ತೆರೆಕಂಡ ದರ್ಶನ್‌ ನಟನೆಯ ಕನ್ನಡದ ‘ಅರ್ಜುನ್’ ಚಿತ್ರದಲ್ಲಿ ಬಬ್ಲಿ ಹುಡುಗಿಯಾಗಿ ನಟಿಸಿದ್ದೂ ಈ ಬೆಡಗಿಯೇ. ಆ ಚಿತ್ರದ ಬಳಿಕ ಆಕೆ ಚಂದನವನದತ್ತ ಮತ್ತೆ ಇಳಿಯಲಿಲ್ಲ.

ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್‌ನ ಹಲವು ಸಿನಿಮಾಗಳಲ್ಲಿ ನಟಿಸಿರುವ ಈಕೆ, ಸದ್ಯಕ್ಕೆ ಹಿಂದಿಯ ‘ನಾಸ್ಟಿಕ್’ ಮತ್ತು ‘ಮೊಗಾಲಿ ಪುವ್ವು’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಮೀರಾ, ನಿನ್ನೆ ಸಂಜೆ #askmeera ಹ್ಯಾಷ್‌ಟ್ಯಾಗ್‌ ಮೂಲಕ ಟ್ವಿಟರ್‌ನಲ್ಲಿ ಅಭಿಮಾನಿಗಳೊಟ್ಟಿಗೆ ಸಂವಾದ ನಡೆಸುತ್ತಿದ್ದರು. ಈ ನಡುವೆ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಯೊಬ್ಬ ತೆಲುಗಿನಲ್ಲಿ ನಿಮ್ಮ ಇಷ್ಟದ ನಟ ಯಾರು? ಎಂದು ಪ್ರಶ್ನಿಸಿದ್ದಾನೆ. ಆತ ಅಷ್ಟಕ್ಕೆ ಸುಮ್ಮನಾಗಿಲ್ಲ. ‘ನಿಮಗೆ ಜೂನಿಯರ್‌ ಎನ್‌ಟಿಆರ್‌ ಇಷ್ಟವೇ’ ಎಂದು ಪ್ರಶ್ನಿಸಿದ್ದಾನೆ.

ಆಗ ಮೀರಾ ‘ನನಗೆ ಆತ ಯಾರೆಂದು ಗೊತ್ತಿಲ್ಲ. ನಾನು ಆ ನಟನ ಅಭಿಮಾನಿಯೂ ಅಲ್ಲ’ ಎಂದು ಉತ್ತರಿಸಿದ್ದಾರೆ. ಇದೇ ಈಗ ಮೀರಾ ಮತ್ತು ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳ ನಡುವೆ ಸಂಘರ್ಷಕ್ಕೆ ಮುನ್ನುಡಿ ಬರೆದಿದೆ.

ಮೀರಾ ಉತ್ತರಕ್ಕೆ ಕೋಪಗೊಂಡಿರುವ ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ಆಕೆಯ ವಿರುದ್ಧ ಆಂದೋಲನ ಆರಂಭಿಸಿದ್ದಾರೆ. ಅಭಿಮಾನಿಯೊಬ್ಬ, ‘ಜೂನಿಯರ್‌ ಎನ್‌ಟಿಆರ್‌ ನಟಿಸಿರುವ ‘ಶಕ್ತಿ’ ಮತ್ತು ‘ಧಮ್ಮು’ ಸಿನಿಮಾಗಳನ್ನು ನೋಡು. ಆಗ ನೀನು ಅವರ ಅಭಿಮಾನಿಯಾಗುತ್ತೀಯಾ’ ಎಂದು ಸಲಹೆ ನೀಡಿದ್ದಾನೆ.

ಮತ್ತೆ ಕೆಲವರು ಅಶ್ಲೀಲ ಶಬ್ದಗಳಿಂದ ನಿಂದಿರುವ ಜೊತೆಗೆ, ಸಾಮೂಹಿಕ ಅತ್ಯಾಚಾರ ಎಸಗುತ್ತೇವೆ. ಮುಖಕ್ಕೆ ಆಸಿಡ್‌ ಎರಚಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಈ ಬೆದರಿಕೆಯಿಂದ ಆತಂಕಗೊಂಡಿರುವ ಆಕೆ, ‘ಸಂವಾದದಲ್ಲಿ ನಾನು ಟಾಲಿವುಡ್‌ ನಟ ಮಹೇಶ್‌ಬಾಬು ನನಗಿಷ್ಟ ಎಂದು ಉತ್ತರಿಸಿದ್ದಕ್ಕೆ ನಿಮ್ಮ ಅಭಿಮಾನಿಗಳು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಪೋಷಕರಿಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇಂತಹ ಅಭಿಮಾನಿಗಳು ನಿಮಗೆ ಬೇಕೇ. ನನ್ನ ಟ್ವೀಟ್‌ ಅನ್ನು ಇನ್ನಾದರೂ ನಿರ್ಲಕ್ಷಿಸುತ್ತೀರಿ ಎಂದು ಭಾವಿಸುತ್ತೇನೆ’ ಎಂದು ಜೂನಿಯರ್‌ ಎನ್‌ಟಿಆರ್‌ಗೆ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ಈ ನಡುವೆಯೇ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಮೀರಾ ಬೆಂಬಲಕ್ಕೆ ನಿಂತಿದ್ದಾರೆ. ಅಶ್ಲೀಲ ಟ್ವೀಟ್‌ಗಳ ಸ್ಕ್ರೀನ್‌ ಶಾಟ್‌ಗಳ ಜೊತೆಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸುವಂತೆ ಅವರು ಸಲಹೆ ನೀಡಿದ್ದಾರೆ.

ಮೀರಾ ಕೂಡ ಅಶ್ಲೀಲ ಟ್ವೀಟ್‌ಗಳ ಸ್ಕ್ರೀನ್‌ ಶಾಟ್‌ಗಳನ್ನು ಹೈದರಾಬಾದ್‌ನ ಸೈಬರ್‌ ಪೊಲೀಸ್‌ ವಿಭಾಗಕ್ಕೆ ಕಳುಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು