ಸಂದರ್ಶನ | ಹಲೊ, ನಾನು ‘ಮಂಡ್ಯದ ಗಂಡು’ ಅಂಬರೀಷ್ ಮಗ ಅಭಿಷೇಕ್

ಸೋಮವಾರ, ಜೂನ್ 17, 2019
22 °C

ಸಂದರ್ಶನ | ಹಲೊ, ನಾನು ‘ಮಂಡ್ಯದ ಗಂಡು’ ಅಂಬರೀಷ್ ಮಗ ಅಭಿಷೇಕ್

Published:
Updated:

ಲೋಕಸಭೆ ಚುನಾವಣೆಗೆಂದು ಮಂಡ್ಯದಲ್ಲಿ ಬೀಡುಬಿಟ್ಟಿದ್ದ ಸುಮಲತಾ ಅಂಬರೀಷ್ ಮತ್ತು ಅವರ ಮಗ ಅಭಿಷೇಕ್ ಗೌಡ ಇದೀಗ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಅಭಿಷೇಕ್ ಅಭಿನಯದ ಮೊದಲ ಚಿತ್ರ ‘ಅಮರ್’ ಇದೇ ಶುಕ್ರವಾರ (ಮೇ 31) ತೆರೆ ಕಾಣಲಿದೆ. ಅಭಿಷೇಕ್ ಅಭಿನಯದ ಚೊಚ್ಚಿಲ ಚಿತ್ರಕ್ಕೆ ಸ್ವತಃ ಅಂಬರೀಷ್ ಚಿತ್ರಕಥೆ ಆರಿಸಿದ್ದರು ಎನ್ನುವುದು ಭಾವುಕ ತಂತು. ತಿಂಗಳಿಡೀ ರಾಜಕೀಯದ ಗುಂಗಿನಲ್ಲಿದ್ದ ಅಭಿಷೇಕ್ ‘ಪ್ರಜಾವಾಣಿ’ಯೊಂದಿಗೆ ಭಾವಲಹರಿ ತೇಲಿ ಬಿಟ್ಟಿದ್ದಾರೆ.

***

ನಿಮ್ಮ ಅಧಿಕೃತ ರಾಜಕಾರಣ ಪ್ರವೇಶ ಎಂದು?

ರಾಜಕಾರಣ ನನ್ನ ಆಸಕ್ತಿಯ ವಿಷಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಪದವಿಯಲ್ಲಿಯೂ ರಾಜ್ಯಶಾಸ್ತ್ರ ಓದಬೇಕು ಎಂದುಕೊಂಡಿದ್ದು ಓದುವ ಖುಷಿಗಾಗಿ ಮಾತ್ರ. ಆ ಪದವಿಯನ್ನು ನಾನು ನನ್ನ ರೆಸ್ಯೂಮೆಯಲ್ಲಿ (ಸ್ವ–ವಿವರ) ಉಲ್ಲೇಖಿಸಬೇಕು ಎಂದು ಎಂದಿಗೂ ಯೋಚಿಸಲಿಲ್ಲ. ನಿಮಗೆ ನನ್ನ ಕುಟುಂಬದ ಹಿನ್ನೆಲೆ ಗೊತ್ತೇ ಇದೆ. ಅವರಲ್ಲಿ ಯಾರೊಬ್ಬರೂ ರಾಜಕಾರಿಣಿಗಳಾಗಿ ಹುಟ್ಟಲಿಲ್ಲ. ಅಧಿಕಾರಕ್ಕಾಗಿ ಆಸೆಯನ್ನೂ ಪಡಲಿಲ್ಲ. ಸನ್ನಿವೇಶ ಅವರನ್ನು ಬೆಳೆಸಿತು. ಹುಟ್ಟುವಾಗಲೇ ಯಾರೂ ನಾಯಕರಾಗಿರುವುದಿಲ್ಲ. ಸಮಾಜದಲ್ಲಿ ಅನಿವಾರ್ಯತೆ ಸೃಷ್ಟಿಯಾದಾಗ ನಮ್ಮೊಳಗಿರುವ ನಾಯಕ ಹೊರಗೆ ಬರುತ್ತಾನೆ. ನನ್ನೊಳಗೆ ನಿಜವಾದ ನಾಯಕತ್ವದ ಗುಣ ಇದ್ದಲ್ಲಿ ಕಾಲವೇ ಅದನ್ನು ಹೊರಗೆ ತರುತ್ತದೆ. ತೋರುತ್ತದೆ. ಅದನ್ನು ಜನರ ಮೇಲೆ ನಾನು ಬಲವಂತವಾಗಿ ಹೇರಲು ಆಗುವುದಿಲ್ಲ.

ಇದನ್ನೂ ಓದಿ: ಸಂದರ್ಶನ– ಅಪ್ಪ ಹೇಳಿದ ನಟನೆ ಗುಟ್ಟು

ಮಂಡ್ಯದ ಜನರಿಗಾಗಿ ನಿಮ್ಮ ತಾಯಿ ಏನು ಮಾಡಬೇಕು ಎಂದು ನೀವು ಅಪೇಕ್ಷಿಸುತ್ತೀರಿ? 

ಸಂಸದೆಯಾಗಿರುವ ಅವರು ತಮ್ಮ ಮಿತಿಯಲ್ಲಿ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡಬೇಕಿದೆ. ರೈತರ ಸಾಲಬಾಧೆಯ ಸಮಸ್ಯೆ ನಿವಾರಿಸಲು ಪ್ರಯತ್ನಿಸಬೇಕು. ಅವರ ಕೈಯಲ್ಲಿ ಸಾಧ್ಯವಾಗುವುದೆಲ್ಲವನ್ನೂ ಅವರು ಮಾಡಲಿದ್ದಾರೆ. ಕೇಂದ್ರದಿಂದ ಅಗತ್ಯವಿರುಷ್ಟು ಅನುದಾನವನ್ನು ಅವರು ತರಲು ಪ್ರಯತ್ನಿಸಲಿದ್ದಾರೆ.

ಇದನ್ನೂ ಓದಿ: ಸುಮಲತಾ ಗೆಲುವಿಗೆ ಸಂಭ್ರಮ; ಬೆನ್ನತುಂಬಾ ದರ್ಶನ್ ಟ್ಯಾಟು ಹಾಕಿಸಿಕೊಂಡ ಅಭಿಮಾನಿ 

ಮಂಡ್ಯದಲ್ಲಿ ಪ್ರಚಾರ ಮಾಡುತ್ತಿದ್ದ ದಿನಗಳು ಹೇಗಿದ್ದವು?

ದೈಹಿಕ ಮತ್ತು ಮಾನಸಿಕವಾಗಿ ನಾನು ಸಾಕಷ್ಟು ಬಳಲಿದೆ. ದೊಡ್ಡ ಸ್ಥಾನವನ್ನು ಗಳಿಸಬೇಕಾಗದ ಕಾರಣಕ್ಕಾಗಿ ಹೆಚ್ಚು ಪರಿಶ್ರಮ ಪಡಬೇಕಾಗಿತ್ತು. ಹೆಚ್ಚಿನ ಒತ್ತಡ ಅನುಭವಿಸಿದೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂದು ನಮಗೆ ತಿಳಿದಿತ್ತು. ಜನ ಸೂಕ್ತವಾದ ನಿರ್ಧಾರವನ್ನೇ ಕೈಗೊಳ್ಳುತ್ತಾರೆ ಎಂದು ನಮಗೆ ಗೊತ್ತಾಗಿತ್ತು. ಈ ಜಯ ಜನ ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ. ನಿದ್ರಾಹೀನ ರಾತ್ರಿಗಳು, ಒತ್ತಡದ ಬದುಕು ಈಗ ಸಾರ್ಥಕ ಅನ್ನಿಸುತ್ತೆ.

ಇದನ್ನೂ ಓದಿ: ಮಂಡ್ಯ ಫಲಿತಾಂಶ ವಿಶ್ಲೇಷಣೆ– ಸುಮಲತಾ ಅಂಬರೀಷ್‌ಗೆ ಗೆಲುವು


‘ಅಮರ್’ ಚಿತ್ರದ ದೃಶ್ಯ

ನಿಮ್ಮ ಅಪ್ಪ–ಅಮ್ಮ ಇಬ್ಬರೂ ಆಭಿನಯ ಜಗತ್ತಿನಲ್ಲಿ ನೆಲೆ ನಿಂತವರು. ನಿಮಗೂ ನಟನಾಗಬೇಕು ಎನ್ನುವ ತುಡಿತ ಇತ್ತೆ?

ನಾನು ಇತ್ತೀಚಿನವರೆಗೆ ಸಿನಿಮಾಗಳಲ್ಲಿ ನಟಿಸಬೇಕು ಎಂದು ಯೋಚಿಸಿದವನಲ್ಲ. ಅಪ್ಪ–ಅಮ್ಮನಿಗೆ ನಾನು ಚೆನ್ನಾಗಿ ಓದಬೇಕು ಎನ್ನುವ ಆಸೆಯಿತ್ತು. ನನಗೆ ಇಷ್ಟವಾದ ವಿಷಯ ಆರಿಸಿಕೊಂಡು ಓದಲು ಅವಕಾಶ ಮಾಡಿಕೊಟ್ಟರು. ‘ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಪ್ರಜಾತಾಂತ್ರಿಕ ರಾಜಕೀಯ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಸಿನಿಮಾ ಕ್ಷೇತ್ರಕ್ಕೆ ಬರುವ ನಿರ್ಧಾರವನ್ನು ನಂತರದ ದಿನಗಳಲ್ಲಿ ತೆಗೆದುಕೊಂಡೆ.

ಅಭಿನಯಕ್ಕೆ ಬರಲು ಇಷ್ಟು ದೀರ್ಘ ಅವಧಿ ಬೇಕಾಯಿತೆ?

ಸ್ನಾತಕೋತ್ತರ ಪದವಿ ಪಡೆದ ನಂತರ ಒಂದು ವರ್ಷ ಬಿಡುವು ಪಡೆದುಕೊಂಡು ‘ಮುಂದೇನು ಮಾಡಬೇಕು’ ಎಂದು ಯೋಚಿಸುತ್ತಿದ್ದೆ. ಫಿಟ್‌ನೆಸ್ ಬಗ್ಗೆ ಹೆಚ್ಚು ಗಮನ ಕೊಟ್ಟೆ. ಈ ಸಂದರ್ಭ ನನಗೆ ಸಿನಿಮಾದಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು. ನಂತರ ನಾನೂ ಸಿನಿಮಾದಲ್ಲಿ ಅಭಿನಯಿಸುವ ಕುರಿತು ಯೋಚಿಸಲು ಶುರುಮಾಡಿದೆ.

ಇದನ್ನೂ ಓದಿ: ಅಂಬಿ ಪುತ್ರ ಅಭಿಷೇಕ್ ಸಿನಿಮಾ 31ಕ್ಕೆ ತೆರೆಗೆ

ನಿಮ್ಮ ಮೊದಲ ಚಿತ್ರ ‘ಅಮರ್‌’ ಚಿತ್ರಕಥೆಯ ಬಗ್ಗೆ ಏನಾದರೂ ಹೇಳುವುದಿದೆಯೇ?

ಈ ಚಿತ್ರದ ಸ್ಕ್ರಿಪ್ಟ್‌ ಅಪ್ಪನಿಗೆ ತುಂಬಾ ಇಷ್ಟವಾಗಿತ್ತು. ಚಿತ್ರದ ಕತೆಯನ್ನು ಅವರು ಅಸ್ವಾದಿಸುತ್ತಾ ಕೇಳಿದ್ದರು. ಪ್ರೇಮಕತೆಯೇ ನನ್ನ ಮೊದಲ ಸಿನಿಮಾ ಆಗಲಿದೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಆದರೆ, ಈ ಚಿತ್ರವನ್ನು ನಾನೇ ಮಾಡಬೇಕೆಂಬುದು ಅಪ್ಪನ ಆಸೆಯಾಗಿತ್ತು. ಚಿತ್ರರಂಗದಲ್ಲಿ ಅಪಾರ ಅನುಭವ ಇರುವ ಅಪ್ಪನ ಮಾತನ್ನು ನಾನೇಕೆ ತಳ್ಳಿಹಾಕಲಿ?


‘ಅಮರ್’ ಚಿತ್ರದ ದೃಶ್ಯ

ನಿಮ್ಮ ಪಾತ್ರದ ಬಗ್ಗೆ ಹೇಳುವಿರಾ?

ಇದೊಂದು ಪ್ರೇಮ ಕತೆ. ಈ ಚಿತ್ರದ ಕತೆಯಲ್ಲಿರುವಂತೆ ಯಾರ ಬದುಕಿನಲ್ಲಾದರೂ ಆಗಿರಬಹುದು. ಇದು ಬಹಳ ಹಳೇ ಲವ್‌ ಸ್ಟೋರಿ. ಆದರೆ, ಹೊಸದಾಗಿ ಪ್ರಸ್ತುತಪಡಿಸಲಾಗುತ್ತಿದೆ. ನನ್ನ ಕಾಲೇಜು ಜೀವನದ ಮೂಲಕ ಆರಂಭವಾಗುವ ಈ ಚಿತ್ರ, ನಾನು ಪದವೀಧರನಾದ ನಂತರ ಏನಾಗಲಿದೆ ಎಂಬುದನ್ನು ತೋರಿಸುತ್ತದೆ.

ನಿಮ್ಮಿಷ್ಟದ ಪಾತ್ರಗಳು ಯಾವುವು? ನಿಮ್ಮ ತಂದೆ ಮಾಡಿದಂಥದ್ದೇ ಪಾತ್ರಗಳನ್ನು ನಿರ್ವಹಿಸಲು ಬಯಸುವಿರಾ? 

ಅಪ್ಪ ಎಲ್ಲ ರೀತಿಯ ಪಾತ್ರಗಳನ್ನೂ ಮಾಡಿದ್ದಾರೆ. ಶಂಕರ್‌ನಾಗ್‌, ರಾಜಕುಮಾರ್‌, ಉಪೇಂದ್ರ, ವಿಷ್ಣುವರ್ಧನ್‌, ದರ್ಶನ್‌, ಯಶ್‌, ಸುದೀಪ್‌, ಶಿವರಾಜ್‌ಕುಮಾರ್‌ ಅವರಿಗಿಂತಲೂ ವಿಶಿಷ್ಟವಾದ ನಟನಾ ಶೈಲಿ ಅವರದು. ಅವರು ನಿಭಾಯಿಸಿದ ಪಾತ್ರಗಳನ್ನು ಬೇರೆ ನಾಯಕ ನಟ ಅವರಂತೆ ನಿಭಾಯಿಸಲಾರ. ನಾಯಕನಟನಾಗಿ ಮುಂಚೂಣಿಯಲ್ಲಿದ್ದ ಕಾಲದಲ್ಲಿಯೇ ಪೋಷಕ ಪಾತ್ರಗಳಲ್ಲೂ ಅವರು ಕಾಣಿಸಿಕೊಂಡರು. ‘ರಂಗನಾಯಕಿ’ ಚಿತ್ರದಲ್ಲಿನ ಅವರ ಪೋಷಕ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು.  ಅವರು ತಮ್ಮ ಕೆಲಸದಲ್ಲಿ ಯಾವತ್ತೂ ಅಹಂ, ಸ್ಥಾನಮಾನಗಳ ವಿಚಾರವನ್ನು ತರಲಿಲ್ಲ. ನನ್ನ ತಂದೆ ಪಡೆದ ಪ್ರೀತಿಯಲ್ಲಿ ಅರ್ಧ ಭಾಗವನ್ನು ನಾನು ಪಡೆದುಕೊಂಡರೆ ಅದೇ ನನ್ನ ಪುಣ್ಯ. ನಾನು ಅನುಭವಿಸುವ ಸಿನಿಮಾಗಳಲ್ಲಿ ಕಥೆಯೇ ನಿಜವಾದ ನಾಯಕನಾಗಿರಬೇಕು. ಕಥೆ ಚೆನ್ನಾಗಿರದಿದ್ದರೆ ಉಳಿದುದೆಲ್ಲವೂ ಗೌಣವಾಗುತ್ತವೆ.

ಇದನ್ನೂ ಓದಿ: ಅಂಬರೀಷ್‌ಗೆ ನುಡಿನಮನ– ಅಂಬಿ ಕೇವಲ ನಟನಷ್ಟೇ ಅಲ್ಲ

ಯಾರ ನಟನೆ ನಿಮಗೆ ಮಾದರಿ?

ನಿರ್ದಿಷ್ಟವಾಗಿ ಇಂಥವರೊಬ್ಬರ ನಟನೆ ನನಗೆ ಮಾದರಿ ಎಂದು ಅಂದುಕೊಂಡಿಲ್ಲ. ಡಾ.ರಾಜ್‌ಕುಮಾರ್‌ ಅವರ ಪರಿಶ್ರಮ ಮತ್ತು ಸಮರ್ಪಣಾ ಭಾವ, ನನ್ನ ತಂದೆಯ ಗತ್ತು ಮತ್ತು ಪರದೆಯ ಮೇಲೆ ಭಾವನೆಗಳನ್ನು ಪ್ರಸ್ತುತಪಡಿಸುವ ರೀತಿ, ವಿಷ್ಣುವರ್ಧನ್‌ ಅವರ ಸ್ಟೈಲ್‌ ನನಗೆ ಇಷ್ಟವಾಗುತ್ತದೆ.


‘ಅಮರ್’ ಚಿತ್ರದ ದೃಶ್ಯ

ನಿಮ್ಮ ತಂದೆ ಕಾರು ಮತ್ತು ಬೈಕ್‌ಗಳನ್ನು ಇಷ್ಟಪಡುತ್ತಿದ್ದರು. ನಿಮ್ಮ ವಿಚಾರ ಹೇಗೆ?

ನನಗೆ ಬೈಕ್‌ಗಳಿಗಿಂತಲೂ ಕಾರುಗಳೆಂದರೆ ಇಷ್ಟ. ಯಾಕೆಂದರೆ, ನಾನು ತೀರ ಇತ್ತೀಚಿನ ವರೆಗೆ ಬೈಕ್‌ ಓಡಿಸುವುದನ್ನೇ ಕಲಿತಿರಲಿಲ್ಲ. ನಾನು ಬೈಕ್‌ ಕಲಿತದ್ದು ‘ಅಮರ್‌’ ಚಿತ್ರಕ್ಕಾಗಿ. ರಾಜಕಾರಣ ಪ್ರವೇಶಕ್ಕೂ ಮೊದಲು ನನ್ನಪ್ಪ ಎಲ್ಲ ಬಗೆಯ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದರು. ಕಾರನ್ನು ಹೆಚ್ಚು ಪ್ರೀತಿಸುತ್ತಿದ್ದ ಅವರ ಪ್ರಭಾವ ನನ್ನ ಮೇಲೆಯೂ ಆಗಿದೆ. ಹೀಗಾಗಿ ನನಗೂ ಕಾರುಗಳು ಹೆಚ್ಚು ಇಷ್ಟವಾಗುತ್ತವೆ. ಹೊಸ ಮಾದರಿಯ ಕಾರುಗಳನ್ನು ಖರೀದಿಸಬೇಕು ಎಂದು ನನಗೂ ಆಸೆಯಾಗುತ್ತೆ. ಆದರೆ, ಕೊಳ್ಳಲು ಆಗಬೇಕಲ್ಲ...?

ಇದನ್ನೂ ಓದಿ: ಪುತ್ರನ ಹೆಸರಿಗೆ ಆಸ್ತಿ ವಿಲ್‌ ಬರೆದ ಅಂಬರೀಷ್‌

ನಿಮ್ಮ ತಂದೆ ಅಂಬರೀಷ್ ಕೇವಲ ನಾಯಕನಟರಷ್ಟೇ ಆಗಿರಲಿಲ್ಲ. ಅವರೊಂದು ರೀತಿಯ ಐಕಾನ್‌. ಕನ್ನಡ ಸಿನಿಮಾ ರಂಗ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಿದ್ದರು. ಈಗಿನ ಯಾರು ಈ ಸಮಸ್ಯೆಗಳಿಗೆ ಅಂಬರೀಷ್‌ ಅವರಂತೆ ನಿಲ್ಲಬಲ್ಲರು? 

ಕನ್ನಡ ಚಿತ್ರರಂಗದ ಸಮಗ್ರತೆಯನ್ನು ಕಾಪಾಡಲು ಯಾರಾದರೊಬ್ಬರು ನಾಯಕತ್ವ ವಹಿಸಿಕೊಳ್ಳಬೇಕು. ನನ್ನ ತಂದೆ ಎಲ್ಲರನ್ನೂ ಬೆಸೆಯುತ್ತಿದ್ದರು. ಅತ್ಯಂತ ನಾಜೂಕಾಗಿ ಸಮಸ್ಯೆಗಳನ್ನು ನಿವಾರಿಸುತ್ತಿದ್ದರು. ಸರ್ಕಾರ ಹಸ್ತಕ್ಷೇಪ ಮಾಡದಂತೆ  ನೋಡಿಕೊಳ್ಳುತ್ತಿದ್ದರು. ಅವರಂತೆ ಈಗ ಚಿತ್ರರಂಗದೊಳಗಿನ ಯಾರಾದರೂ ಒಬ್ಬರು ನಾಯಕತ್ವ ವಹಿಸಿಕೊಳ್ಳಬೇಕು.

ನಿಮಗೆ ಎಂಥ ಚಿತ್ರಗಳನ್ನು ಮಾಡಲು ಇಷ್ಟ?

ನಾನು ಅಂಬರೀಷ್ ಮಗ ಎನ್ನುವ ಕಾರಣಕ್ಕೆ ಜನ ನನ್ನ ಸಿನಿಮಾ ಬಗ್ಗೆ ಒಂದು ಮಟ್ಟದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅಪ್ಪನ ಚಿತ್ರಗಳಿಗೆ ಇಂದಿಗೂ ದೊಡ್ಡ ಪ್ರೇಕ್ಷಕ ವರ್ಗವಿದೆ. ಕಥೆ ಚೆನ್ನಾಗಿದೆ ಎಂದರೆ, ನನ್ನ ತಂದೆಯ ಅಭಿಮಾನಿಗಳು ಒಪ್ಪುತ್ತಾರೆ ಎಂದಾದರೆ ಸದಭಿರುಚಿಯ ಚಿತ್ರಗಳನ್ನು ನಾನೇಕೆ ಮಾಡಬಾರದು. ನಟನಾದ ಮೇಲೆ ಎಲ್ಲ ಬಗೆಯ ಚಿತ್ರಗಳನ್ನೂ ಮಾಡಲು ಆತ ತಯಾರಾಗಿರಬೇಕು. ಯಾವುದೋ ಒಂದು ಬಗೆಯ ಪಾತ್ರಗಳಿಗೆ ಮಾತ್ರ ನಟ ಅಂಟಿ ಕೂರಬಾರದು. ನಾನು ಏನು ಮಾಡುತ್ತಿದ್ದೇನೋ ಅದನ್ನು ಪ್ರೀತಿಯಿಂದ ಮಾಡುತ್ತೇನೆ. ನನ್ನಿಂದ ಬಗೆ ಬಗೆಯ ಪಾತ್ರಗಳನ್ನು ಪ್ರೇಕ್ಷಕರು ನಿರೀಕ್ಷಿಸಬಹುದು. ಅದಂತೂ ಸತ್ಯ.

ನಿಮಗೆ ಎಂಥ ಸಂಗೀತ ಇಷ್ಟ?

ಕನ್ನಡದ ಎಲ್ಲ ಹಾಡುಗಳನ್ನು ನಾನು ಹೆಚ್ಚಾಗಿ ಕೇಳುತ್ತೇನೆ. ಆದರೆ, ನಾನು ಒಳ್ಳೆಯ ಗಾಯಕನಲ್ಲ. ಆದರೂ, ನಾನು ನನ್ನ ತಂದೆ, ನಮ್ಮ ಆಪ್ತ ವರ್ಗದ ಬಳಿ ಆಗಾಗ ಹಾಡುತ್ತಿದ್ದೆ.

ಓದು ನಿಮಗೆ ಇಷ್ಟವಾಗುತ್ತದೆಯೇ? ಯಾವ ಲೇಖಕ ನಿಮಗೆ ಇಷ್ಟ? 

ಹೌದು ನಾನು ಓದುಗ. ಕಾದಂಬರಿಗಳನ್ನು ಹೆಚ್ಚಾಗಿ ಓದುತ್ತೇನೆ. ಹ್ಯಾರಿಪಾಟರ್‌, ಜೇಫ್ರಿ ಆರ್ಚರ್‌ ಅವರ ಕತೆಗಳನ್ನು ಈಗಲೂ ಓದುತ್ತೇನೆ. ಅವರ ಕೃತಿಗಳು ನನ್ನನ್ನು ವಾಸ್ತವ ಜಗತ್ತನ್ನು ಮರೆಸಿ, ಹೊಸದೊಂದು ಜಗತ್ತಿಗೆ ಕೊಂಡೊಯ್ಯುತ್ತವೆ.


ಅಮ್ಮ ಸುಮಲತಾ, ಅಪ್ಪ ಅಂಬರೀಷ್ ಜೊತೆಗೆ ಸಂಭ್ರಮದ ಕ್ಷಣ. (ಏಪ್ರಿಲ್ 11, 2014ರ ಚಿತ್ರ)

ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಏನೆಲ್ಲಾ ಆಗಬೇಕಿದೆ?

ನಾವು ಉತ್ತಮ ಚಿತ್ರಗಳನ್ನು ನೀಡಿದರೆ, ಪ್ರೇಕ್ಷಕರಿಗೆ ಇಷ್ಟವಾಗುವುದನ್ನು ಕೊಟ್ಟರೆ ಅವುಗಳನ್ನು ಜನ ತೆಗೆದುಕೊಳ್ಳುತ್ತಾರೆ. ಉತ್ತಮ ಕತೆಗಳುಳ್ಳ ಚಿತ್ರಗಳನ್ನು ಜನ ಒಪ್ಪಿದ್ದಾರೆ. ದೊಡ್ಡ ಬಜೆಟ್‌, ದೊಡ್ಡ ಸ್ಟಾರ್‌ಗಳು ಇರಬೇಕು ಎಂದೇನೂ ಇಲ್ಲ. ನೀವು ಉತ್ತಮ ಕಥೆ ಇರುವ ಸಿನಿಮಾ ಮಾಡಿದರೆ, ಅದನ್ನು ನೋಡಲು ಜನ ಸಮಯ ಮಾಡಿಕೊಳ್ಳುತ್ತಾರೆ. ಹೀಗೆ ಮಾಡುವುದರ ಮೂಲಕವೇ ಚಿತ್ರರಂಗ ಬೆಳೆಯಬೇಕಷ್ಟೇ.


ಆಹಾ ಚೆಲುವ... ಬೆಂಗಳೂರು ವಿಂಟರ್ ಡರ್ಬಿಯಲ್ಲಿ ಮಿಂಚಿದ ಅಭಿಷೇಕ್ (ಜನವರಿ 23, 2016ರ ಚಿತ್ರ)

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !