ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ದು ಮುಚ್ಚಿ ಕಥೆ ಹೇಳಿದ ಮೇಘಶ್ರೀ

Last Updated 21 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ನಟಿ ಮೇಘಶ್ರೀ ಅಭಿನಯದ ‘ಕದ್ದು ಮುಚ್ಚಿ’ ಚಿತ್ರ ಶುಕ್ರವಾರ (ಫೆ. 22) ತೆರೆಕಾಣುತ್ತಿದೆ. ‘ಮಾರ್ಚ್‌ 22’, ‘ಕೃಷ್ಣ ತುಳಸಿ’ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನಟಿ ಮೇಘಶ್ರೀ ಅವರಿಗೆ ಇದು ಮೂರನೇ ಚಿತ್ರ.

‘ನಿಜ ಜೀವನದಲ್ಲಿ ನನ್ನ ವ್ಯಕ್ತಿತ್ವವನ್ನು ಹೋಲುವ ಪಾತ್ರವನ್ನೇ ಈ ಚಿತ್ರದಲ್ಲಿ ಮಾಡಿದ್ದೇನೆ’ ಎಂದು ಖುಷಿ ಖುಷಿಯಿಂದ ಹೇಳಿಕೊಳ್ಳುತ್ತಲೇ ಅವರು, ಸಿನಿಮಾ ಪುರವಣಿಯ ಜೊತೆ ಮಾತಿಗಿಳಿದರು. ಅವರ ಜೊತೆ ನಡೆಸಿದ ಸಂವಾದದ ಸಂಗ್ರಹರೂಪ ಇಲ್ಲಿದೆ.

‘ತಮಿಳು, ತೆಲುಗು ಭಾಷೆಗಳಲ್ಲಿ ಈಗಲೂ ಕೌಟುಂಬಿಕ ಚಿತ್ರಗಳು ತೆರೆಕಾಣುತ್ತಿವೆ. ಜನರು ಅಂಥ ಚಿತ್ರಗಳನ್ನು ಇಷ್ಟಪಡುತ್ತಾರೆ. ಕನ್ನಡದಲ್ಲಿ ಹಿಂದೆ ಅಂಥ ಚಿತ್ರಗಳು ಬರುತ್ತಿದ್ದವು. ಈಗ ಅವುಗಳ ಸಂಖ್ಯೆ ತುಂಬಾ ವಿರಳವಾಗಿದೆ. ‘ಕದ್ದು ಮುಚ್ಚಿ’ ಸಿನಿಮಾ ಕೌಟುಂಬಿಕ ಕಥಾವಸ್ತುವನ್ನು ಆಧರಿಸಿದ್ದು. ತೀರ್ಥಹಳ್ಳಿಯ ತುಂಬು ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ಹುಡುಗಿಯೊಬ್ಬಳು, ಶಹರದ ಹುಡುಗನ ಪ್ರೀತಿಯಲ್ಲಿ ಬಿದ್ದಾಗ ಆಕೆಯ ಜೀವನದಲ್ಲಾಗುವ ಬದಲಾವಣೆಗಳೇ ಈ ಚಿತ್ರದ ಕಥಾವಸ್ತು.

‘ನನಗೆ ಎರಡು ಕಾರಣಗಳಿಗೆ ಈ ಚಿತ್ರ ಇಷ್ಟ. ನಾನು ಮೂಲತಃ ತೀರ್ಥಹಳ್ಳಿಯ ಹುಡುಗಿ. ಅಲ್ಲೇ ಚಿತ್ರದ ಬಹುಪಾಲು ಶೂಟಿಂಗ್‌ ಸಹ ನಡೆದಿದೆ ಎಂಬುದು ಈ ಚಿತ್ರ ಇಷ್ಟವಾಗಲು ಇರುವ ಮೊದಲ ಕಾರಣ. ಕನ್ನಡ ಚಿತ್ರೋದ್ಯಮದ ಬಹುಪಾಲು ಪ್ರಮುಖ ನಟರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೆಲ್ಲರ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂಬುದು ಇನ್ನೊಂದು ಕಾರಣ. ಸುಮಾರು 50ಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಹಂಸಲೇಖ ಅವರ ಸಂಗೀತ ನಿರ್ದೇಶನದ ಆರು ಹಾಡುಗಳ ಬೆಂಬಲವೂ ಈ ಸಿನಿಮಾಗೆ ಇದೆ.

‘ಕಿರುತೆರೆಯ ಸ್ಟಾರ್‌ ನಟ ವಿಜಯಸೂರ್ಯ ಈ ಚಿತ್ರದ ಹೀರೊ. ಅವರ ಜೊತೆ ಈವರೆಗೆ ನಾನು ಕೆಲಸ ಮಾಡಿರಲಿಲ್ಲ. ‘ಸ್ಟಾರ್‌’ ಪಟ್ಟ ಇರುವ ವಿಜಯಸೂರ್ಯ ಅವರ ಜೊತೆ ಕೆಲಸ ಮಾಡುವುದು ಹೇಗೋ ಎಂಬ ಅಳುಕು ಇತ್ತು. ಆದರೆ ಅವರು ತುಂಬ ಸರಳ ವ್ಯಕ್ತಿ ಎಂಬುದು ಶೂಟಿಂಗ್‌ ಆರಂಭವಾಗುತ್ತಿದ್ದಂತೆ ಅರಿವಾಯಿತು...

‘ಕದ್ದು ಮುಚ್ಚಿ’ ಚಿತ್ರದಲ್ಲಿ ನಟಿ ಅಶ್ವಿನಿ ಗೌಡ ಅವರೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘಶ್ರೀ ನಟನೆಯ ‘ದಶರಥ’ ಚಿತ್ರವೂ ಸಿದ್ಧವಾಗಿದ್ದು ಶೀಘ್ರದಲ್ಲೇ ಅದೂ ತೆರೆ ಕಾಣಲಿದೆ. ಇದಾದ ನಂತರ ಮೇಘಶ್ರೀ ಚಿರಂಜೀವಿ ಸರ್ಜಾ ಜೊತೆಗೆ ನಟಿಸಲಿರುವ ‘ರಾಜ ಮಾರ್ತಾಂಡ’ ಚಿತ್ರ ಸೆಟ್ಟೇರಲಿದೆಯಂತೆ.

ಮೇಘಶ್ರೀ ಈಗಾಗಲೇ ನಾಲ್ಕು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ಅಭಿನಯಿಸಿರುವ ತಮಿಳು ಚಿತ್ರವೊಂದರ ಶೂಟಿಂಗ್‌ ಸದ್ಯದಲ್ಲೇ ಆರಂಭವಾಗಲಿದೆಯಂತೆ. ಅದು ನಾಯಕಿ ಪ್ರಧಾನವಾಗಿರುವ ಪಾತ್ರ ಎನ್ನುತ್ತಾರೆ ಮೇಘಶ್ರೀ. ‘ಕನ್ನಡ ಚಿತ್ರ ರಂಗದ ಎಲ್ಲ ನಾಯಕ ನಟರ ಜೊತೆ ಮುಖ್ಯಪಾತ್ರದಲ್ಲಿ ನಟಿಸಬೇಕು ಎಂಬುದು ನನ್ನ ಆಸೆ’ ಎನ್ನುವ ಮೇಘಶ್ರೀ, ಪಾತ್ರದಲ್ಲಿ ತೂಕವಿದ್ದರೆ ಸಣ್ಣ ಪಾತ್ರದಲ್ಲಿ ಅಭಿನಯಿಸಲೂ ಸಿದ್ಧ ಎನ್ನುತ್ತಾರೆ.

ಮೇಘಶ್ರೀ ಅಂತಿಮ ವರ್ಷದ ಬಿ.ಎ. ಅಧ್ಯಯನ ಮಾಡುತ್ತಿದ್ದಾರೆ. ಬಿಡುವಾಗಿದ್ದಾಗ ಸಿನಿಮಾಗಳನ್ನು ನೋಡುವುದು ಇವರ ಹವ್ಯಾಸ. ‘ಮನರಂಜನೆಗಾಗಿ ಅಲ್ಲ, ಬೇರೆಬೇರೆ ನಟರ ಅಭಿನಯವನ್ನು ನೋಡಲು ಸಿನಿಮಾಗಳನ್ನು ನೋಡುತ್ತೇನೆ. ಹೆಚ್ಚಾಗಿ ಇಂಗ್ಲಿಷ್‌ ಹಾಗೂ ದಕ್ಷಿಣ ಭಾರತೀಯ ಭಾಷೆಗಳ ಸಿನಿಮಾಗಳನ್ನೇ ನೋಡುತ್ತೇನೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT