ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೀಲ್‌ನಲ್ಲಿ ರಿಯಾಲಿಟಿ

Last Updated 25 ಜನವರಿ 2020, 19:30 IST
ಅಕ್ಷರ ಗಾತ್ರ

ಸಿನಿಮಾ ನಿರ್ದೇಶಕನೊಬ್ಬ ಪಾತ್ರಗಳ ಸಂಬಂಧಗಳು ಮತ್ತು ಭಾವನೆಗಳ ಅಭಿವ್ಯಕ್ತಿಯನ್ನು ನಟನೆ, ಫೋಟೊಗ್ರಫಿ, ವಿಡಿಯೊ, ಧ್ವನಿಗಳ ಮೂಲಕ ಪರಿಣಾಮಕಾರಿಯಾಗಿ ರೂಪಿಸುತ್ತಾನೆ. ಹಾಗಾಗಿ ಮಾತನಾಡುವ -ಸಂಗೀತ, ನೃತ್ಯ, ಚಿತ್ರಕಲೆ, ಸಾಹಿತ್ಯ ಎಂಬ ಕಲೆಗಳಿಗಿಂತ ಏಕಕಾಲದಲ್ಲಿ ಹೆಚ್ಚು ಜನರನ್ನು ಪ್ರಭಾವಶಾಲಿಯಾಗಿ ತಲುಪಲು ಸಿನಿಮಾ ಯಶಸ್ವಿಯಾಗುತ್ತಿದೆ. ಜೊತೆಗೆ, ಎಲ್ಲಾ ವರ್ಗದ, ಎಲ್ಲಾ ಹಂತದ ಬೌದ್ಧಿಕ, ಭಾವನಾತ್ಮಕ ಸ್ತರಗಳನ್ನು ಮುಟ್ಟುತ್ತದೆ.

ಮನಸ್ಸನ್ನೇ ಮೂಲದ್ರವ್ಯವಾಗಿ ಉಳ್ಳ ಇನ್ನೊಂದು ಕ್ಷೇತ್ರ ಮನೋವಿಜ್ಞಾನ. ಸಮಾಜದ ರೂಢಿಗತ ಧೋರಣೆಗಳು, ಸಂಸ್ಕೃತಿ, ಧಾರ್ಮಿಕತೆಯೊಂದಿಗೆ ಬಲವಾದ ನಂಟನ್ನು ಹೊಂದಿ ಚಿಕಿತ್ಸಾಶಾಸ್ತ್ರವೂ ಆಗಿದೆ– ಮನೋವೈದ್ಯಕೀಯ ಕ್ಷೇತ್ರ. ಇದು ಮನೋವಿಜ್ಞಾನ ವನ್ನು ಒಳಗೊಂಡಿದ್ದರೂ, ಅದನ್ನೂ ಮೀರಿ ರೋಗ, ಚಿಕಿತ್ಸೆ, ಗುಣಮುಖದ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಕ್ಷೇತ್ರ ಎಂಬುದು ಗಮನಾರ್ಹ.

ಮನೋವೈದ್ಯಕೀಯದೆಡೆಗೆ ಸಿನಿಮಾದ ಆಕರ್ಷಣೆ ಬಲವಾಗಿಯೇ ಇದೆ. ಇದಕ್ಕೆ ಕಾರಣವೂ ಉಂಟು. ಜನಸಾಮಾನ್ಯರಲ್ಲಿ ಪ್ರಚಲಿತವಿರುವ ಮನೋವೈದ್ಯಕೀಯವೆಂದರೆ ನಿಗೂಢ, ಕುತೂಹಲಕರ ಹಾಗೂ ಆಸಕ್ತಿ ಕೆರಳಿಸುವಂತಹದ್ದು. ಮನೋರೋಗಿಗಳೆಂದರೆ ವಿಚಿತ್ರವಾಗಿ ವರ್ತಿಸುವವರು. ಕ್ರೌರ್ಯ, ತಮಾಷೆ, ಹಾಸ್ಯಾಸ್ಪದ ನಡವಳಿಕೆ ಅವರಲ್ಲಿ ಸಾಮಾನ್ಯ. ಮನೋವೈದ್ಯರೆಂದರೆ ವಿಚಿತ್ರವಾಗಿರುವವರು, ವಿಲಕ್ಷಣ ವ್ಯಕ್ತಿತ್ವದವರು, ಮನಸ್ಸನ್ನು ತಕ್ಷಣ ಓದಿ ಬಿಡುವ ಅತಿಮಾನುಷ ಸಾಮರ್ಥ್ಯ ಅವರದ್ದು. ಈ ತಪ್ಪು ನಂಬಿಕೆಗಳೇ ನಮ್ಮ ಸಿನಿಮಾಗಳಿಗೆ ಮೂಲಾಧಾರ!

ಕಳೆದ 70 ವರ್ಷಗಳಲ್ಲಿ ಕನ್ನಡ-ತಮಿಳು- ತೆಲುಗು- ಮಲಯಾಳ, ಬಾಲಿವುಡ್‌ ಸಿನಿಮಾಗಳಲ್ಲಿ ಬಂದುಹೋದ ಸಿನಿಮಾಗಳಲ್ಲಿ ಈ ಅಂಶವನ್ನು ನಿರಂತರವಾಗಿ ನೋಡಬಹುದು. ಅದೇಕೋ ಸಿನಿಮಾಗಳು ತಮ್ಮ ಹಳೆಯ ಜ್ಞಾನ, ತಪ್ಪುನಂಬಿಕೆಗಳನ್ನು ಬದಲಿಸುವ ಪ್ರಯತ್ನಕ್ಕೇ ಕೈಹಾಕಿಲ್ಲ.

ಮನೋವೈದ್ಯಕೀಯ ಕ್ಷೇತ್ರವು ಜಗತ್ತಿನಾದ್ಯಂತ ಸಿನಿಮಾರಂಗದ ಬಗ್ಗೆ ಹಲವು ಸಂಶೋಧನಾ ಅಧ್ಯಯನಗಳನ್ನು ಕೈಗೊಂಡಿದೆ. ಜಾಗತಿಕ ಮನೋವೈದ್ಯಕೀಯ ಸಂಘದ ಈಗಿನ ಅಧ್ಯಕ್ಷ ಡಾ.ದಿನೇಶ್ ಭುಗ್ರಾ ಈ ಬಗ್ಗೆ ಗಮನಾರ್ಹ ಅಧ್ಯಯನ ಮಾಡಿದ್ದಾರೆ. ಆದರೆ, ಈ ವೈಜ್ಞಾನಿಕ ಅಧ್ಯಯನಗಳು ಉಪಯುಕ್ತ ಎನಿಸಬೇಕಾದರೆ ಅವುಗಳು ತಲುಪಬೇಕಾದ್ದು ಸಿನಿಮಾಗಳನ್ನು ನಿರ್ಮಿಸುವ ನಿರ್ದೇಶಕರು ಮತ್ತು ನೋಡುವ ಪ್ರೇಕ್ಷಕರನ್ನು. ಪ್ರೇಕ್ಷಕನ ಅರಿವನ್ನು ಹೆಚ್ಚಿಸದೆ, ಆತನ ಮನೋಭಾವ ಬದಲಿಸದೆ, ಸಿನಿಮಾಗಳು ರೂಪುಗೊಳ್ಳುವ ಬಗೆಯನ್ನು ಬದಲಿಸುವುದು ಅಸಾಧ್ಯ. ಹಾಗೆಯೇ, ಮನರಂಜನೆಯ ಹೆಸರಿನಲ್ಲಿ ಸತ್ಯಕ್ಕೆ ದೂರವಾದ ಸಂಗತಿಗಳನ್ನು ಸಿನಿಮಾಗಳು ನೀಡುವುದನ್ನು ತಪ್ಪಿಸದೆ, ಪ್ರೇಕ್ಷಕನ ಮನೋಧರ್ಮ ಬದಲಾಗಲು ಸಾಧ್ಯವಿಲ್ಲ.

ಮೂರು ಮುಖ್ಯ ಶಾಖೆಗಳಲ್ಲಿ ಸಿನಿಮಾಗಳಲ್ಲಿ ಮನೋವೈದ್ಯಕೀಯದ ಬಗೆಗಿನ ಅಂಶಗಳನ್ನು ನೋಡಬಹುದು. ಮನೋರೋಗಗಳ ಸರಿಯಾದ ವಿವರಣೆ ಮತ್ತು ಚಿತ್ರಣ ಮೊದಲನೆಯ ಮುಖ್ಯ ಭಾಗ. ಮನೋವೈದ್ಯರು, ಮನೋವೈದ್ಯಕೀಯಕ್ಕೆ ಸಂಬಂಧಿಸಿದ ಇತರ ವೃತ್ತಿಪರರ ಚಿತ್ರಣ, ಮನೋವೈದ್ಯಕೀಯ ಕೇಂದ್ರಗಳನ್ನು ತೋರಿಸುವ ರೀತಿ ಎರಡನೆಯದು. ಇವುಗಳ ಧನಾತ್ಮಕ ಮತ್ತು ಋಣಾತ್ಮಕ ಪ್ರಭಾವ ಮೂರನೆಯದ್ದು. ಅಂದರೆ ಚಿಕಿತ್ಸೆಗೆ ಸಂಬಂಧಿಸಿದ ಅಂಶಗಳು ಒಬ್ಬ ರೋಗಿ ಚಿಕಿತ್ಸೆಗೆ ಬರುವುದನ್ನು ಪ್ರೋತ್ಸಾಹಿಸುವಲ್ಲಿ, ತಡೆಯುವಲ್ಲಿ, ರೋಗವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಸಿನಿಮಾವೇ ಚಿಕಿತ್ಸೆಯ ವಿಧವಾಗಿ ಕೆಲಸ ಮಾಡುವಲ್ಲಿ, ತಪ್ಪುನಂಬಿಕೆಗಳನ್ನು ಹುಟ್ಟುಹಾಕುವಲ್ಲಿ, ತೊಡೆದುಹಾಕುವಲ್ಲಿ ಸಿನಿಮಾದ ಪಾತ್ರ ಮಹತ್ವದ್ದು.

ಸಿನಿಮಾಗಳ ಸುತ್ತ...

ಮಾನವೀಯ ಸಂಬಂಧಗಳ ಭಾವನಾತ್ಮಕತೆಯನ್ನು ಹೆಚ್ಚಿನ ಸಿನಿಮಾಗಳು ಕೇಂದ್ರವಾಗಿಟ್ಟುಕೊಳ್ಳುತ್ತವೆ. ಹಾಗಾಗಿ ಮನುಷ್ಯನ ಮನಸ್ಸನ್ನು ಸಂಬಂಧಗಳತ್ತ ಸೆಳೆಯುವ ಗುರುತರವಾದ ಜವಾಬ್ದಾರಿ ನಿರ್ವಹಿಸುತ್ತಾ ನಿರ್ದಿಷ್ಟ ಮಾನಸಿಕ ಕಾಯಿಲೆಗಳನ್ನೇ ಮುಖ್ಯವಸ್ತುವಾಗಿ ಇಟ್ಟುಕೊಂಡ ಚಿತ್ರಗಳು ಸಂಖ್ಯೆಯಲ್ಲಿ ಕಡಿಮೆ ಇವೆ.

1971ರಲ್ಲಿ ತೆರೆಗೆ ಬಂದ ‘ಶರಪಂಜರ’ ಸಿನಿಮಾ ಬಾಣಂತಿಯರಲ್ಲಿ ಬರುವ ಮಾನಸಿಕ ಕಾಯಿಲೆಯನ್ನು, ಅದಕ್ಕೆ ಸಂಬಂಧಿಸಿದ ಒತ್ತಡಗಳ ಚಿತ್ರಣವನ್ನು ನೀಡುತ್ತದೆ.ನಾಯಕಿ ಗುಣಮುಖಳಾದ ಮೇಲೂ ಹೇಗೆ ಆಕೆಯನ್ನು ಸಹಜವಾಗಿ ಸ್ವೀಕರಿಸದ ಸಮಾಜ- ಕುಟುಂಬ ಮತ್ತೆ ಮಾನಸಿಕ ಕಾಯಿಲೆಯನ್ನು ಉಲ್ಬಣಗೊಳಿಸುತ್ತವೆ ಎಂಬುದೇ ಇದರ ಹೂರಣ. ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಇದ್ದ ಚಿಕಿತ್ಸೆ-ಮನೋವೈದ್ಯಕೀಯ ಪರಿಸ್ಥಿತಿಯ ವಿವರಗಳನ್ನು ಸಿನಿಮಾದಂಥ ಮನರಂಜನಾ ಮಾಧ್ಯಮದಲ್ಲಿ ಸರಿಯಾಗಿಯೇ ಚಿತ್ರಿಸಲಾಗಿದೆ ಎನ್ನುವುದು ಪ್ರಶಂಸಾರ್ಹ.

ಆ ಬಳಿಕ ಬಂದ ‘ಮಾನಸ ಸರೋವರ’ ಚಿತ್ರ ನಿಜವಾಗಿ ಚಿತ್ರಿಸುವುದು ಮನೋವೈದ್ಯಕೀಯ ಚಿಕಿತ್ಸೆಯಲ್ಲಿ ಒಂದು ಅಂಶವಾದ transference- counter transference ಎಂಬ ರೋಗಿ– ವೈದ್ಯನ ನಡುವಣ ಕಲ್ಪಿತ ಪ್ರೇಮದ ಅಂಶವನ್ನು. ಆದರೆ, ಅದನ್ನು ಕಲ್ಪನೆಯ ಮೂಲಕ ಮತ್ತಷ್ಟು ಹಿಗ್ಗಿಸಿ ಸಿನಿಮಾ ಕೊನೆಗೊಳ್ಳುವಾಗ ಮನೋವೈದ್ಯನೇ ಮನೋರೋಗಿ ಆಗುವಂತೆ ಮಾಡಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದು ಖಾಸಗಿತನದ ಎಲ್ಲೆಯನ್ನು ಮೀರಬಾರದೆನ್ನುವ, ಮೀರಿದರೆ ಆಗುವ ಅಪಾಯದ ಪಾಠ ಎನ್ನಬಹುದಾದರೂ, ಪ್ರೇಕ್ಷಕನಿಗೆ ನೀಡುವ ಸಂದೇಶ ಗೊಂದಲಮಯ.

ಖಿನ್ನತೆ ಬಹು ಪ್ರಚಲಿತ ಮಾನಸಿಕ ಸಮಸ್ಯೆಯಾದರೂ ಸಿನಿಮಾ ರಂಗಕ್ಕೆ ಅದರ ಬಗ್ಗೆ ಆಸಕ್ತಿಯಿಲ್ಲ. ಆತ್ಮಹತ್ಯೆಗಳೂ ಅಷ್ಟೆ. ಜೀವನದ ಘಟನೆ- ಸನ್ನಿವೇಶವೊಂದಕ್ಕೆ ಪ್ರತಿಕ್ರಿಯೆಯಾಗಿ ಅವುಗಳನ್ನು ಚಿತ್ರಿಸಲಾಗುತ್ತಿದೆ.

ಭಾರತದಲ್ಲಿ ಪ್ರಚಲಿತವಾಗಿರದ, ಬಹುಅಪರೂಪವಾದ, ಬಹುವ್ಯಕ್ತಿತ್ವದ ದೋಷ ಮಲ್ಟಿಪಲ್‌ ಪರ್ಸನಾಲಿಟಿ ಡಿಸಾರ್ಡರ್‌. ಹೆಚ್ಚಿನ ಮನೋವೈದ್ಯರು ತಮ್ಮ ವೃತ್ತಿಯಲ್ಲಿ ಈ ದೋಷದ ಒಬ್ಬ ರೋಗಿಯನ್ನೂ ನೋಡಿರದಷ್ಟು ಅಪರೂಪ. ಆದರೆ, ಇದರ ಪರಿಕಲ್ಪನೆ ಆಕರ್ಷಕ. ಹಾಲಿವುಡ್‌ನಲ್ಲಿ ಇಂತಹ ಚಿತ್ರಗಳು ಜನಪ್ರಿಯ. ‘ಎರಡು ಮುಖ’ (1969) ಮತ್ತು ದಕ್ಷಿಣದ ಹಲವು ಭಾಷೆಗಳಲ್ಲಿ ಬಂದ ‘ಆಪ್ತಮಿತ್ರ’ (2004) ಇದರ ಉದಾಹರಣೆ. ಮನೋವೈದ್ಯನನ್ನು ಹಾಸ್ಯಸ್ಪದವಾಗಿ ಚಿತ್ರಿಸುವುದರ ಜೊತೆಗೆ, ಮನೋವೈದ್ಯರು ದೆವ್ವ, ಮೂಢನಂಬಿಕೆ, ಮಾಂತ್ರಿಕ ಚಿಕಿತ್ಸೆ ಇಂಥ ತಪ್ಪುನಂಬಿಕೆಗಳನ್ನು ತೊಡೆಯಲು ಶ್ರಮಿಸುತ್ತಿದ್ದಾರೆ. ಆದರೆ, ಅದೇ ವೇಳೆ ಕೇವಲ ಮನರಂಜನೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರಗಳು ಜನಪ್ರಿಯವಾಗಿವೆ. 1969ರಿಂದ 2004 ಅಂದರೆ, ಸುಮಾರು 40 ವರ್ಷಗಳಲ್ಲಿ ‘ಅಪ್‌ಡೇಟ್’ ಆಗದ ನಮ್ಮ ಸಿನಿಮಾ ನಿರ್ದೇಶಕರ ನಿಷ್ಕ್ರಿಯತೆಗೆ ಇದು ಕನ್ನಡಿ ಹಿಡಿಯುತ್ತದೆ.

ಚಿತ್ತವಿಕಲತೆ (ಸ್ಕಿಜೋಫ್ರಿನಿಯಾ) ಸಮಸ್ಯೆಯನ್ನು ಸಿನಿಮಾಗಳಲ್ಲಿ ಈವರೆಗೆ ಯಾವ ಕನ್ನಡ ಚಿತ್ರವೂ ಸರಿಯಾಗಿ ಚಿತ್ರಿಸಿಲ್ಲ. ವಿಚಿತ್ರ, ಕ್ರೂರ ಚಿತ್ರಣದ ಜೊತೆಗೆ ಹುಚ್ಚ ಎಂಬ ಪದದ ಬಳಕೆ ಈ ಸಮಸ್ಯೆಯನ್ನು ಚಿತ್ರಿಸುವ ಪ್ರಯತ್ನ ವ್ಯಾಪಕವಾಗಿದೆ. ಕಾನೂನು ಮತ್ತು ವೈದ್ಯಕೀಯ ಜಗತ್ತು ಅವೈಜ್ಞಾನಿಕ ಚಿಕಿತ್ಸಾ ಪದ್ಧತಿಗಳನ್ನು ನಿಷೇಧಿಸಿದ್ದರೆ, ಸಿನಿಮಾ ಜಗತ್ತು ಮನೋರೋಗಿಗಳನ್ನು ಹುಚ್ಚ ಎನ್ನುವುದು, ಸರಪಣಿಗಳಿಂದ ಬಂಧಿಸುವುದು, ಎಣ್ಣೆಯಿಂದ ಮಾಲೀಸು ಮಾಡಿ ಮಾನಸಿಕ ಕಾಯಿಲೆಯನ್ನು ಗುಣಪಡಿಸುವುದು ಮೊದಲಾದ ತಪ್ಪುಕಲ್ಪನೆಗಳನ್ನು ವ್ಯಾಪಕವಾಗಿ ಹರಡುತ್ತಿದೆ.

ಗಂಡು-ಹೆಣ್ಣಿನ ಪ್ರೇಮದ ಬಗೆಗೆ ಇರುವ ಸಿನಿಮಾಗಳು ಹೇರಳವಾಗಿದ್ದರೂ, ಮನೋಲೈಂಗಿಕ ಸಮಸ್ಯೆಗಳ ಬಗೆಗೆ ಬಂದಿರುವ ಚಿತ್ರಗಳು ಕಡಿಮೆಯೇ. ಕನ್ನಡದಲ್ಲಿ ಮನೋವೈದ್ಯ ಡಾ.ಅಶೋಕ ಪೈ ನಿರ್ಮಿಸಿದ, ನಾ.ಡಿಸೋಜ ಕಾದಂಬರಿ ಆಧಾರಿತ ‘ಕಾಡಿನ ಬೆಂಕಿ’ ಅಂತಹ ಒಂದು ಚಿತ್ರ. ಕಾದಂಬರಿಯ ಅಂತ್ಯವನ್ನು ಪ್ರೇಕ್ಷಕನಲ್ಲಿ ಮನೋವೈದ್ಯಕೀಯ ದೃಷ್ಟಿಯಿಂದ ಆಶಾವಾದ ಮೂಡಿಸಲು ಸುಖಾಂತವಾಗಿ ಬದಲಿಸಿರುವುದು ಒಂದು ಸ್ವಾಗತಾರ್ಹ ಬದಲಾವಣೆ. ‘ಎಡಕಲ್ಲು ಗುಡ್ಡದ ಮೇಲೆ’, ‘ಅಂತರಾಗ್ನಿ’, ‘ಆಗಂತುಕ’ ಮೊದಲಾದ ಕೆಲವು ಚಿತ್ರಗಳನ್ನೂ ಈ ದೃಷ್ಟಿಯಿಂದ ಗಮನಿಸಬಹುದು.

ಮಾದಕದ್ರವ್ಯಗಳ ಬಳಸುವಿಕೆ ಸಿನಿಮಾಗಳಲ್ಲಿ ದೃಶ್ಯವಾಗಿ ಬಂದಾಗ ಅದು ಹಾನಿಕಾರಕ ಎಂಬುದು ಬರಹದಲ್ಲಿ ತೆರೆಯ ಮೇಲೆ ಪ್ರದರ್ಶಿಸಬೇಕು ಎಂಬ ನಿಯಮವಿದೆ. ಆದರೆ, ವ್ಯಸನವನ್ನು ಸಾಮಾಜಿಕ ಸಂಗತಿಯಾಗಿ ನೋಡಲಾಗಿದೆಯೇ ಹೊರತು, ಅದೊಂದು ಮಾನಸಿಕ ಅನಾರೋಗ್ಯದ ಅಂಶ ಎಂಬ ಅರಿವು ಚಿತ್ರರಂಗದಲ್ಲಿಲ್ಲ. ಅದಕ್ಕೆ ಹೊಂದಿಕೊಂಡಂತೆ ವ್ಯಕ್ತಿತ್ವದ ದೋಷಗಳಾದರೂ ಅಷ್ಟೆ.

ಈ ನಿಟ್ಟಿನಲ್ಲಿ ಹಿಂದಿಯ ‘ತಾರೇ ಜಮೀನ್ ಪರ್‌’ ಅತ್ಯುತ್ತಮ ಚಿತ್ರ. ಮಕ್ಕಳಲ್ಲಿರುವ ನಿರ್ದಿಷ್ಟ ಕಲಿಕೆಯ ತೊಂದರೆ (learning disability) ಬಗ್ಗೆ ಪೋಷಕರು, ಶಿಕ್ಷಕರಿಗೆ ಅರ್ಥ ಮಾಡಿಸಲು ಮನೋವೈದ್ಯಕೀಯ ಕ್ಷೇತ್ರ ಕಷ್ಟಪಡುತ್ತಲೇ ಇದೆ. ಈ ಪ್ರಯತ್ನವನ್ನು ಅನಾಯಾಸವಾಗಿ ಸುಲಭ ಮಾಡಿದ ಕೀರ್ತಿ ಈ ಚಿತ್ರದ್ದು. ಇದು ಬಿಡುಗಡೆಯಾದ ಹತ್ತೇ ದಿನದೊಳಗೆ ಸಿಬಿಎಸ್ಇ ಮಂಡಳಿ ಕಲಿಕೆಯ ಅಸಮರ್ಥತೆಯಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಹೆಚ್ಚು ಸಮಯವನ್ನು ನೀಡುವ ಆದೇಶ ನೀಡಿದ್ದು ಗಮನಾರ್ಹ.

ಮಹಾರಾಷ್ಟ್ರ ಸರ್ಕಾರವು ಚಿತ್ರ ಬಿಡುಗಡೆಯಾದ ಕೆಲವು ತಿಂಗಳುಗಳಲ್ಲಿ ಆಟಿಸಂ ಮಕ್ಕಳಿಗಾಗಿ ವಿಶೇಷ ತರಗತಿಗಳನ್ನು ಆರಂಭಿಸಿತು. ಚಂಡೀಗಢದ ಆಡಳಿತ ಅಸಮರ್ಥತೆಯಿರುವ ಮಕ್ಕಳಿಗೆ ಕಲಿಸುವ ಶಿಕ್ಷಣದ ರೂಪರೇಷೆ ಬಗೆಗೆ ತರಬೇತಿ ನೀಡುವ ಕೋರ್ಸ್‌ವೊಂದನ್ನು ಶಿಕ್ಷಕರಿಗಾಗಿ ಆರಂಭಿಸಿತು. ಒಂದು ಚಿತ್ರದ ಯಶಸ್ಸು ಅಂದರೆ ಇದು! ‘ಮೈ ಐಸಾ ಹೀ ಹೂ’ ಮತ್ತು ‘ಸ್ಪರ್ಶ್’ ಸಿನಿಮಾಗಳಲ್ಲಿಯೂ ಈ ರೀತಿಯ ಗುಣಾತ್ಮಕ ಧೋರಣೆ ಇದೆ.

‘ಗೋಲ್‌ಮಾಲ್ 3’ ಸಿನಿಮಾದಲ್ಲಿ ಉಗ್ಗು ಇರುವಾತನನ್ನು ತಮಾಷೆ ಮಾಡುವುದು, ಸಿನಿಮಾಕ್ಕೆ ‘ಮೆಂಟಲ್ ಹೈ ಕ್ಯಾ’ ಎಂಬ ಶೀರ್ಷಿಕೆ ನೀಡುವುದು ನಿರ್ದೇಶನದ ಅಜ್ಞಾನದ ಪ್ರತೀಕವೇ. ವಿದ್ಯುತ್ ಕಂಪನ ಚಿಕಿತ್ಸೆ (ಎಲೆಕ್ಟ್ರೋ ಕನ್‌ವಲ್ಸಿವ್ ಥೆರಪಿ)ಯನ್ನಂತೂ ಸಿನಿಮಾಗಳು ಒಂದು ಶಿಕ್ಷೆಯಾಗಿಯೇ ಚಿತ್ರಿಸಿವೆ. ನಿಜವಾಗಲೂ ಅದೊಂದು ನಿರಾಪಾಯಕಾರಿ ಹಾಗೂ ಪರಿಣಾಮಕಾರಿಯಾದ ಚಿಕಿತ್ಸೆ.

ನಿರ್ದೇಶಕರ ಗಮನ ಏನಿದ್ದರೂ ಮನರಂಜನೆಯ ಕಡೆಗೆ. ಪ್ರೇಕ್ಷಕ ಬಯಸುವುದು ಮನಸ್ಸಿನ ಸಂತೋಷವನ್ನು. ಹೀಗಿರುವಾಗ ರೀಲ್ ಅನ್ನೂ, ರಿಯಲ್ ಅನ್ನೂ ಭಿನ್ನವೆಂದು ವಿಮರ್ಶಿಸಿ ನೋಡುವ ಪ್ರಜ್ಞೆ ಪ್ರೇಕ್ಷಕನಿಗೆ ಇರಬೇಕು. ಅಂತಹ ಪ್ರಜ್ಞೆಯುಳ್ಳವರ ಸಂಖ್ಯೆ ನಮ್ಮಲ್ಲಿ ಕಡಿಮೆಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT