‘ಅರಣ್ಯಕಾಂಡ’ದ ಸಂದೇಶ ಮತ್ತು ತಮಾಷೆ

7

‘ಅರಣ್ಯಕಾಂಡ’ದ ಸಂದೇಶ ಮತ್ತು ತಮಾಷೆ

Published:
Updated:
ಅಮರ್

‘ನಿಧಿ ಶೋಧದ ಕಥಾಹಂದರ ಇರುವ ಸಿನಿಮಾ ಕನ್ನಡದಲ್ಲಿ ಬಂದು ಹಲವು ವರ್ಷಗಳೇ ಕಳೆದಿರುವ ಕಾರಣ ನಾವು ಆ ಕಥೆ ಇಟ್ಟುಕೊಂಡು ಒಂದು ಸಿನಿಮಾ ಮಾಡಿದ್ದೇವೆ’ ಎಂದು ‘ಅರಣ್ಯಕಾಂಡ’ ಚಿತ್ರತಂಡ ಹೇಳಿಕೊಂಡಿತ್ತು. ಹಾಗೆಯೇ, ‘ಈ ಚಿತ್ರದಲ್ಲಿ ಕಥೆ ಇದೆ’ ಎಂದೂ ಅದು ಹೇಳಿಕೊಂಡಿತ್ತು.

ರಘುನಂದನ್ ಎಸ್. ನಿರ್ದೇಶನದ ಸಿನಿಮಾ ಇದು. ಕಾಡಿನಲ್ಲಿ ಅಡಗಿಸಿಟ್ಟಿರುವ ನಿಧಿಯನ್ನು (ಅಂದರೆ ಹಣ) ಆರು ಜನರ ತಂಡವೊಂದು ಹುಡುಕಲು ಹೋಗುವ ಕಥೆ ಇದು. ಚಿತ್ರದ ನಾಯಕ ಅಮರ್‌ ಚೋರನ ಮನಸ್ಥಿತಿ ಹೊಂದಿರುವ ವ್ಯಕ್ತಿ. ನಾಯಕಿ ಸುಗುಣಾ (ಅರ್ಚನಾ ಕೊಟ್ಟಿಗೆ) ಪತ್ರಿಕಾ ಸಂಸ್ಥೆಯೊಂದರಲ್ಲಿ ಪತ್ರಕರ್ತೆಯಾಗಿ ತರಬೇತಿ ಪಡೆಯುತ್ತಿರುವವಳು. ಇನ್ನೊಬ್ಬ ಪೊಲೀಸ್‌ ಸಿಬ್ಬಂದಿ ಕೆಂಪಣ್ಣ (ಗುರುರಾಜ್‌ ಶೆಟ್ಟಿ).

ಅಮರ್‌ಗೆ ದಿಢೀರ್‌ ಎಂದು ಹಣ ಮಾಡಿ, ಹಾಯಾಗಿ ಇರಬೇಕು ಎನ್ನುವ ಹಂಬಲ. ಸುಗುಣಾ ಕೂಡ ‘ದುಡ್ಡು ಬೇಕಾದಷ್ಟು ಇದ್ದರೆ ಬೇಕಿದ್ದನ್ನೆಲ್ಲಾ ಖರೀದಿಸಬಹುದು’ ಎನ್ನುವ ಮನಸ್ಥಿತಿಯವಳು. ಕೆಂಪಣ್ಣ ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು, ಖದೀಮರಿಂದ ‘ಮಾಮೂಲಿ’ ಪಡೆದು ಅವರಿಗೆ ಚೂರುಪಾರು ಅನುಕೂಲ ಮಾಡಿಕೊಡುವವ. ಚಿತ್ರ ಆರಂಭವಾದ ಕೆಲವೇ ನಿಮಿಷಗಳಲ್ಲಿ ನಿರ್ದೇಶಕರು ಈ ಮೂರು ಪಾತ್ರಗಳ ವ್ಯಕ್ತಿತ್ವ ಏನು ಎಂಬುದನ್ನು ಕಟ್ಟಿಕೊಡುತ್ತಾರೆ.

ವೀರಪ್ಪನ್‌ ತನ್ನ ಬಳಿ ಇದ್ದ ಕೋಟ್ಯಂತರ ರೂಪಾಯಿ ಹಣವನ್ನು ತಮಿಳುನಾಡು ಗಡಿ ಪ್ರದೇಶದ ಅರಣ್ಯದಲ್ಲೆಲ್ಲೋ ಬಚ್ಚಿಟ್ಟಿದ್ದಾನೆ ಎನ್ನುವ ಮಾಹಿತಿ ಅಮರ್‌ಗೆ ಗೊತ್ತಾಗುತ್ತದೆ. ಈ ಕೆಲಸಕ್ಕೆ ಅವನು ಕೆಂಪಣ್ಣ ಮತ್ತು ಸುಗುಣಾ ಸಹಾಯ ಪಡೆಯುತ್ತಾನೆ. ವೀರಪ್ಪನ್ ಬಚ್ಚಿಟ್ಟಿರುವ ಹಣ ಹುಡುಕುವ ಇವರ ಕೆಲಸಕ್ಕೆ ಸೇರಿಕೊಳ್ಳುವವರು ಸೆಲ್ವ ಮತ್ತು ಜೇಮ್ಸ್‌ ನಾರಾಯಣ. ಸೆಲ್ವ ಹಾಗೂ ಜೇಮ್ಸ್‌ಗೆ ದುಡ್ಡಿನ ಹಪಾಹಪಿ ಅಷ್ಟೇನೂ ಇಲ್ಲವಾದರೂ, ಚೋರರ ಕೂಟ ಸೇರಿಬಿಡುತ್ತಾರೆ.

ನಿಧಿಯನ್ನು ಈ ಕೂಟ ಹುಡುಕುವುದು ದಟ್ಟ ಅಡವಿಯಲ್ಲಿ. ನಿಧಿ ಹುಡುಕುವ ಪ್ರಕ್ರಿಯೆಯು ಸಾಮಾನ್ಯವಾಗಿ ಥ್ರಿಲ್‌ ಹುಟ್ಟಿಸುವಂಥದ್ದು ಎನ್ನಬಹುದಾದರೂ, ಸಿನಿಮಾದ ದೃಶ್ಯಗಳು ನಿರೀಕ್ಷಿತ ಮಟ್ಟದಲ್ಲಿ ಆ ಭಾವ ಕಟ್ಟಿಕೊಡುವುದಿಲ್ಲ. ನಿಧಿಗಾಗಿ ಒಂದಾದ ನಂತರ ಒಂದರಂತೆ ಜಾಗಗಳನ್ನು ತಡಕಾಡುತ್ತ ಸಾಗುವ ಕೊನೆಯಲ್ಲಿ ಇಡೀ ಸಿನಿಮಾದ ನಡಿಗೆಯನ್ನು ಬದಲಿಸುವ ಹಂತ ತಲುಪುತ್ತದೆ.

ತಮ್ಮದಲ್ಲದ ಹಣದ ಹಿಂದೆ ಓಡುವವರ ಪರಿಸ್ಥಿತಿ ಏನಾಗುತ್ತದೆ ಎಂಬ ಸಂದೇಶವನ್ನು ಈ ಸಿನಿಮಾ ನೀಡುತ್ತದೆ. ಕಳ್ಳರ ಕೂಟದಲ್ಲಿ ಒಬ್ಬರಿಗೆ ಇನ್ನೊಬ್ಬರ ಮೇಲೆ ನಂಬಿಕೆ ಇರುವುದಿಲ್ಲ ಎನ್ನುವ ಸಂದೇಶ ಕೂಡ ಇದರಲ್ಲಿದೆ. ಆದರೆ, ಕೇಂದ್ರ ಸರ್ಕಾರ ಘೋಷಿಸಿದ ನೋಟು ಅಮಾನ್ಯೀಕರಣವನ್ನು ಈ ಚಿತ್ರದ ಕಥೆಯ ಹರಿವಿನೊಂದಿಗೆ ಕೊನೆಯಲ್ಲಿ ಜೋಡಿಸಿರುವುದು ಕೆಲವರಿಗೆ ತಮಾಷೆಯಾಗಿ ಕಾಣುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !