ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರಗಳಲ್ಲಿ ನಾಲ್ಕು ವಾರ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ: ಸುಧಾಕರ್

ಪ್ರೇಕ್ಷಕರಿಗೆ, ಚಿತ್ರಮಂದಿರಗಳಿಗೆ ಕಠಿಣ ಮಾರ್ಗಸೂಚಿ
Last Updated 3 ಫೆಬ್ರುವರಿ 2021, 13:59 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ನಾಲ್ಕು ವಾರದ ಅವಧಿಗೆ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.

ಚಿತ್ರೋದ್ಯಮ ಪ್ರಮುಖರ ಮನವಿಯಂತೆ ಈ ಅವಕಾಶ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದರು.

‘ನಾಲ್ಕು ವಾರಗಳ ಅವಧಿಯಲ್ಲಿ ಪ್ರೇಕ್ಷಕರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗಲಿರುವುದು ಪತ್ತೆಯಾದರೆ ಈ ತೀರ್ಮಾನದಿಂದ ಅನಿವಾರ್ಯವಾಗಿ ಹಿಂದೆಸರಿಯಬೇಕಾಗಬಹುದು’ ಎಂದೂ ಅವರು ಎಚ್ಚರಿಕೆ ನೀಡಿದರು.

ಚಿತ್ರನಟ ಶಿವರಾಜ್‌ಕುಮಾರ್‌, ಚಲನಚಿತ್ರ ಮಂಡಳಿಯ ಪದಾಧಿಕಾರಿಗಳು, ಕೋವಿಡ್‌ ತಾಂತ್ರಿಕ ಸಲಹಾ ಮಂಡಳಿಯ ಸದಸ್ಯರ ಜೊತೆ ಬುಧವಾರ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಸುಧಾಕರ್‌ ಮಾತನಾಡಿದರು.

‘ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಿದ ಆದೇಶವನ್ನು ಗುರುವಾರವೇ ಹೊರಡಿಸಲಾಗುವುದು. ಅದರ ಜೊತೆಗೇ ತಾಂತ್ರಿಕ ಸಲಹಾ ಸಮಿತಿಯ ಸೂಚನೆಯಂತೆ ಕಠಿಣವಾದ ಮಾರ್ಗಸೂಚಿಯನ್ನೂ ಹೊರಡಿಸಲಾಗುವುದು. ಪ್ರೇಕ್ಷಕರು ಮತ್ತು ಚಿತ್ರಮಂದಿರಗಳ ಮಾಲೀಕರು ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸರ್ಕಾರದ ಜೊತೆ ಕೈಜೋಡಿಸಬೇಕು’ ಎಂದೂ ಅವರು ಹೇಳಿದರು.

ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಅಬ್ಬರ ಕಡಿಮೆಯಾಗಿದ್ದರೂ ಸೋಂಕು ಹರಡುವ ಅಪಾಯ ಇನ್ನೂ ಇರುವುದರಿಂದ ನಿರ್ದಿಷ್ಟ ಸಂದರ್ಭಗಳಲ್ಲಿ ಜನರು ಸೇರುವುದಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಿ ರಾಜ್ಯ ಸರ್ಕಾರ ಮಂಗಳವಾರ ಮಾರ್ಗಸೂಚಿ ಹೊರಡಿಸಿತ್ತು. ಚಿತ್ರಮಂದಿರಗಳಲ್ಲಿ ಫೆ. 1ರ ನಂತರ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದ್ದರೂ ರಾಜ್ಯದಲ್ಲಿ ಎರಡನೇ ಅಲೆ ಬರುವ ಸಾಧ್ಯತೆ ಪರಿಗಣಿಸಿ ಫೆ. 28ರವರೆಗೆ ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿತ್ತು. ಇದರ ಬಗ್ಗೆ ಚಿತ್ರೋದ್ಯಮ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಈ ಕಾರಣದಿಂದ ಮುಖ್ಯಮಂತ್ರಿ ಸೂಚನೆಯಂತೆ, ಚಿತ್ರೋದ್ಯಮದ ಪ್ರಮುಖರು, ವಾರ್ತಾ ಸಚಿವ ಸಿ.ಸಿ. ಪಾಟೀಲ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಜೊತೆ ಸುಧಾಕರ್‌ ಸಭೆ ನಡೆಸಿದರು.

ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಏನಿದೆ?
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಅಂತರವನ್ನು ಕಾಪಾಡಿಕೊಳ್ಳುವುದು (ಕನಿಷ್ಠ 1 ಮೀಟರ್), ಆಗಾಗ ಸ್ಯಾನಿಟೈಸರ್‌ ಬಳಕೆ, ಸೋಪು ಹಾಗೂ ನೀರಿನಿಂದ ಕೈಗಳನ್ನು ಶುಚಿಗೊಳಿಸುವುದು. ಥರ್ಮಲ್ ಸ್ಕ್ರೀನಿಂಗ್, ಜ್ವರ ಹಾಗೂ ಸೋಂಕಿನ ಲಕ್ಷಣಗಳಿರುವವರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುವುದು ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಮುಂದುವರೆಸುವಂತೆ ಮಂಗಳವಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರ ತಿಳಿಸಿದೆ.

ಈ ಮಾರ್ಗಸೂಚಿ ಪ್ರಕಾರ, ಮದುವೆಗಳು, ಜನ್ಮ ದಿನಾಚರಣೆ, ಮರಣ, ಶವ ಸಂಸ್ಕಾರ ಕಾರ್ಯಕ್ರಮಗಳಲ್ಲಿ ಗರಿಷ್ಠ 500 ಜನರಿಗೆ ಭಾಗವಹಿಸಲು ಅನುಮತಿ ನೀಡಲಾಗಿದೆ. ಕಚೇರಿಗಳಲ್ಲಿ ಎಲ್ಲರೂ ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಬಹುದು. ಮನೆಯಿಂದಲೇ ಕೆಲಸ ನಿರ್ವಹಿಸುವ ವ್ಯವಸ್ಥೆ ಅಥವಾ ಪಾಳಿಗಳಲ್ಲಿ ಕೆಲಸ ನಿರ್ವಹಣೆಗೂ ಅವಕಾಶ ನೀಡಬಹುದು. ಕೈಗಾರಿಕಾ ಪ್ರದೇಶಗಳು ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿಯೂ ಸಿಬ್ಬಂದಿಯ ಸಂಪೂರ್ಣ ಹಾಜರಾತಿ ಅಥವಾ ಪಾಳಿಗಳಲ್ಲಿ ಕೆಲಸ ನಿರ್ವಹಣೆಯನ್ನೂ ಮುಂದುವರೆಸಲು ಅವಕಾಶ ನೀಡಲಾಗಿದೆ.

ಮೆಟ್ರೊ ರೈಲುಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಿಗದಿಪಡಿಸಿದ ಪ್ರಯಾಣಿಕರ ಸಂಖ್ಯೆ ಮೀರಲು ಅವಕಾಶ ಇಲ್ಲ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆಯನ್ನು ಮೀರಬಾರದು. ಅಂಗಡಿಗಳು, ಮಾಲ್ಗಳು, ಮಲ್ಟಿಪ್ಲೆಕ್ಸ್ ಹಾಗೂ ಮನರಂಜನಾ ಪಾರ್ಕ್‌ಗಳ ಒಳಗೆ ಜನರು ಗುಂಪು ಸೇರದಂತೆ ಕ್ರಮ ವಹಿಸಬೇಕು.ಈ ಕಾರಣಕ್ಕೆ ಸಾರ್ವಜನಿಕರ ಪ್ರವೇಶ ನಿಯಂತ್ರಿಸಬೇಕುಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವ ಆಚರಣೆಗಳನ್ನು ದೂರವಿಡಬೇಕು.

ಯೋಗ ಕೇಂದ್ರಗಳು ಹಾಗೂ ಜಿಮ್ಗಳಲ್ಲಿಯೂ ಹೆಚ್ಚು ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಪಾಳಿ ವ್ಯವಸ್ಥೆ ಪಾಲಿಸಬೇಕು. ಶಾಲೆಗಳು ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಎಸ್‌ಒಪಿ ಅನುಸರಿಸಬೇಕು. ವಿಧಾನವನ್ನು ಅನುಸರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಸೇರುವುದನ್ನು ತಪ್ಪಿಸಲು, ಸಾಮಾನ್ಯವಾಗಿ ವಿವಿಧ ಆಚರಣೆಗಳನ್ನು ವರ್ಚುವಲ್ ಮೂಲಕ ಕೈಗೊಳ್ಳುವಂತೆ ಅಥವಾ ತೆರೆದ, ಸೂಕ್ತ ಗಾಳಿ - ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ ನಡೆಸಬೇಕು ಎಂದೂ ಮಾರ್ಗಸೂಚಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT