ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸ್ಟರ್‌ ವರ್ಲ್ಡ್‌ ಓಟ

Last Updated 28 ಮಾರ್ಚ್ 2019, 19:30 IST
ಅಕ್ಷರ ಗಾತ್ರ

‘ನಾನು ಕಾಲೇಜಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ ಜರ್ನಿ ಮಾಡುತ್ತಿರುತ್ತೇನೆ. ಆ ಪಯಣದಲ್ಲಿ ಹುಡುಗಿಯೊಬ್ಬಳು ಜೊತೆಯಾಗುತ್ತಾಳೆ’ ಎಂದು ಹೇಳಿ ನಕ್ಕರು ನಾಯಕ ನಟ ಪವ‌ನ್‌ ಶೆಟ್ಟಿ.

ನಾಲ್ಕು ವರ್ಷದ ಹಿಂದೆ ಇಟಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ‘ಮಿಸ್ಟರ್‌ ವರ್ಲ್ಡ್‌’ ಆಗಿ ಅವರು ವಿಜೇತರಾ‌ಗಿದ್ದರು. ಸಿನಿಮಾದಲ್ಲಿ ನಟಿಸಬೇಕು ಎನ್ನುವ ಅವರ ಕನಸನ್ನು ನಿರ್ದೇಶಕ ಬಿ.ಎಸ್‌. ಸಂಜಯ್‌ ‘ರನ್‌ 2’ ಚಿತ್ರದಲ್ಲಿ ಈಡೇರಿಸಿದ್ದಾರಂತೆ.

‘ನಾನು ಪ್ರಶಸ್ತಿ ಗೆದ್ದಾಗ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಮೂಡಿದ್ದು ನಿಜ. ಆದರೆ, ಅವಕಾಶಗಳು ದೊರೆಯಲಿಲ್ಲ. ಕೊನೆಗೆ, ಜಿಮ್‌ ತರಬೇತುದಾರನಾಗಿ ವೃತ್ತಿ ಮುಂದುವರಿಸಿದೆ. ಕೊನೆಗೆ, ನಿರ್ದೇಶಕರು ಈ ಪಾತ್ರ ಮಾಡುವಂತೆ ಕೋರಿದಾಗ ಒಪ್ಪಿಕೊಂಡೆ. ಚಿತ್ರದಲ್ಲಿ ನಾನು ನಿಸರ್ಗಪ್ರಿಯ. ಕಾಡಿನಲ್ಲಿ ನಡೆದ ಘಟನೆಯೊಂದು ಬದುಕಿಗೆ ಹೇಗೆ ಹೊಸ ತಿರುವು ನೀಡುತ್ತದೆ ಎನ್ನುವುದೇ ಕಥಾಹಂದರ’ ಎಂದು ಮಾಹಿತಿ ನೀಡಿದರು.

‘ಸಾಗರಿ’, ‘ಬ್ಯಾಡಗಿ ಮಿರ್ಚಿ’ ಸೇರಿದಂತೆ 12ಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವ ಸಂಜಯ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ಈ ಹಿಂದೆ ಅವರು ‘ರನ್‌’ ಎಂಬ ಚಿತ್ರ ನಿರ್ದೇಶಿಸಿದ್ದರು. ಆದರೆ, ಅದು ಬಿಡುಗಡೆ ಕಾಣಲಿಲ್ಲವಂತೆ. ಹಾಗಾಗಿ, ಈ ಸಿನಿಮಾಕ್ಕೆ ಅವರು ‘ರನ್‌ 2’ ಎಂದು ಹೆಸರಿಟ್ಟಿದ್ದಾರೆ.

‘ನನ್ನ ಹಿಂದಿನ ಚಿತ್ರಕ್ಕೂ, ಈ ಸಿನಿಮಾದ ಕಥೆಗೂ ಯಾವುದೇ ಹೋಲಿಕೆ ಇಲ್ಲ. ಭಿನ್ನವಾದ ಕಥೆ ಇದು’ ಎಂದು ಹೇಳಿದರು.

ಕುಮಟಾ, ಹೊನ್ನಾವರ ಮತ್ತು ಯಾಣದ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ.

ಮುಂಬೈ ಬೆಡಗಿ ತಾರಾ ಶುಕ್ಲ ಈ ಚಿತ್ರದ ನಾಯಕಿ. ಹಲವು ಚಿತ್ರಗಳಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿರುವ ಅವರು ಈ ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ‘ನಾನು ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದಷ್ಟೇ ಹೇಳಿದರು.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಂಜೀವ್ ರಾವ್‌ ಸಂಗೀತ ಸಂಯೋಜಿಸಿದ್ದಾರೆ. ರಮೇಶ್‌ ಕೊಟ್ಟಾ ಅವರ ಛಾಯಾಗ್ರಹಣವಿದೆ. ಇದೇ ವೇಳೆ ಸಿನಿಮಾದ ಟ್ರೇಲರ್‌ಅನ್ನು ಬಿಡುಗಡೆ ಮಾಡಲಾಯಿತು. ಕುರಿರಂಗ, ಮಹದೇವ, ಜನಾರ್ದನ್, ಮಹೇಶ್‌ ನಾಯಕ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT