ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠ ಹೇಳಿದ ನಟನೆಯ ಪಾಠ

Last Updated 25 ಜೂನ್ 2020, 19:30 IST
ಅಕ್ಷರ ಗಾತ್ರ

ಗಡಿಯಲ್ಲಿ ದೇಶ ಕಾಯುವ ಕನಸು ಹೊತ್ತ ಅವರು ಎಲ್ಲಾ ಅರ್ಹತಾ ಪರೀಕ್ಷೆಗಳಲ್ಲೂ ಉತ್ತೀರ್ಣರಾಗುತ್ತಾರೆ. ಆದರೆ, ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಆ ಕಾರಣಕ್ಕೆ ಸೈನ್ಯಕ್ಕೆ ಸೇರಲಾಗದೇ ಬಾಲ್ಯದ ಹವ್ಯಾಸವಾದ ನಾಟಕವನ್ನು ಬದುಕಿನ ಭಾಗವನ್ನಾಗಿಸಿಕೊಳ್ಳುತ್ತಾರೆ. ನಟನೆಯ ಹಾದಿಯಲ್ಲಿ ಸಾಗುತ್ತಿರುವಾಗ ಹಿರಿಯ ರಂಗ ಕಲಾವಿದ ಕಾಸರಗೋಡು ಚಿನ್ನ ಅವರ ಪರಿಚಯವಾಗುತ್ತದೆ. ಅವರ ಶಿಷ್ಯರಾಗುವ ಮೂಲಕ ಅವರೊಂದಿಗೆ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಅಲ್ಲಿಂದ ಟಿ.ಎಸ್‌. ನಾಗಾಭರಣ ಅವರ ಗರಡಿಯಲ್ಲಿ ಪಳಗುವ ಅವರು ನಾಗಾಭರಣ ನಿರ್ದೇಶನದ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಾರೆ. ಅವರೊಟ್ಟಿಗೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡುತ್ತಾರೆ. ಅವರೇ ‘ರಾಮಾ ರಾಮಾ ರೇ’ ಚಿತ್ರದ ಖ್ಯಾತಿಯ ಎಂ.ಕೆ. ಮಠ.

‘ನಟನೆ ಎಂದರೆ ನಾನು ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ನನ್ನನ್ನು ನಾನು ಮರೆಯುವುದು’ ಎನ್ನುವ ಮಠ ಅವರದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ. ಬಾಲ್ಯದಲ್ಲಿ ಮನೆಯ ಸಮೀಪದ ತೋಡಿನಲ್ಲಿ ಸಿನಿಮಾ ನಾಯಕರನ್ನು ಅನುಕರಣೆ ಮಾಡುತ್ತಾ, ನಾಟಕಗಳನ್ನು ಮಾಡುತ್ತಿದ್ದರು. ನಟ ರಾಜ್‌ಕುಮಾರ್ ಅವರನ್ನು ನಟನೆಯ ದೇವರು ಎಂದೇ ಭಾವಿಸಿರುವ ಅವರು ಬಾಲ್ಯದಿಂದಲೂ ಅವರನ್ನು ಅನುಕರಿಸುತ್ತಿದ್ದರು. ಅಂದೆಲ್ಲಾ ಸಹೋದರಿಯರು, ಅಕ್ಕಪಕ್ಕದ ಮನೆಯ ಮಕ್ಕಳೇ ಇವರ ನಾಟಕಕ್ಕೆ ಪ್ರೇಕ್ಷಕರು.

ಹೀಗೆ ನಾಟಕದ ಹುಚ್ಚಿನಿಂದಾಗಿ ಓದಿನಲ್ಲಿ ಹಿಂದುಳಿದ ಅವರನ್ನು ಸಕಲೇಶಪುರದ ಬಾಳುಪೇಟೆಗೆ ಅವರ ತಂದೆ ಕರೆದೊಯ್ದರು. ಅಲ್ಲಿ ಜೆಪಿ ಕಲಾ ಸಂಘದ ಮೂಲಕ ಪ್ರತಿವರ್ಷ ಗಣೇಶೋತ್ಸವ ಕಾರ್ಯಕ್ರಮ ನಡೆಸುತ್ತಿದ್ದರು. ಆ ಕಾರ್ಯಕ್ರಮದಲ್ಲೂ ನಾಟಕಗಳನ್ನು ಮಾಡುತ್ತಾರೆ. ನಂತರ ಮಿಲಿಟರಿಗೆ ಸೇರಲು ಹೋಗಿ ಅದು ವಿಫಲವಾಗುತ್ತದೆ. ಊರಿಗೆ ಬಂದ ಮೇಲೆ ಸೌದಿ ಅರೇಬಿಯಾಕ್ಕೆ ಹೋಗುವ ಅವಕಾಶ ಸಿಗುತ್ತದೆ. ಅಲ್ಲಿ ಮೂರು ವರ್ಷಗಳ ಕಾಲ ನೆಲೆಸಿ ಮತ್ತೆ ಊರಿಗೆ ಮರಳುತ್ತಾರೆ. ಅಲ್ಲಿಂದ ಕಾಸರಗೋಡಿಗೆ ತೆರಳಿ ಕಾಸರಗೋಡು ಚಿನ್ನ ಅವರ ಜೊತೆ ಲಾರಿ ನಾಟಕದಲ್ಲಿ ಭಾಗವಹಿಸುತ್ತಾರೆ. ಅದರಲ್ಲಿ ‘ಚೂರಿ ಚಿಕ್ಕಣ್ಣನ’ ಪಾತ್ರ ಮಾಡುತ್ತಾರೆ. ಆ ನಾಟಕದ 130 ಸಂಚಿಕೆಗಳಲ್ಲಿ ನಟಿಸುತ್ತಾರೆ. ಆ ನಾಟಕದ 100ನೇ ಪ್ರದರ್ಶನ ಮೈಸೂರಿನಲ್ಲಿ ನಡೆದಾಗ ಟಿ.ಎಸ್‌. ನಾಗಾಭರಣ ಅವರ ಪರಿಚಯವಾಗುತ್ತದೆ. ನಂತರ ಅವರ ಶಿಷ್ಯರಾಗಿ ಮುಂದುವರಿಯುತ್ತಾರೆ.

ಹೀಗೆ ನಾಟಕದಿಂದ ಕಿರುತೆರೆಗೆ ಹೊರಳುವ ಅವರು ‘ಓ ನನ್ನ ಬೆಳಕೇ’ ಧಾರಾವಾಹಿ ಮೂಲಕ ಟಿ.ವಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ. 2000ರಲ್ಲಿ ಬೆಂಗಳೂರಿಗೆ ಬರುವ ಅವರು ಸುಮಾರು 16 ವರ್ಷಗಳ ಕಾಲ ನಾಗಾಭರಣ ಅವರು ಮಾಡಿದ ಎಲ್ಲಾ ಧಾರಾವಾಹಿಗಳಲ್ಲೂ ನಟಿಸುವ ಜೊತೆಗೆ ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ.

ಈ ನಡುವೆ 2008ರಲ್ಲಿ ‘ಗಗ್ಗರ’ ಎಂಬ ತುಳು ಸಿನಿಮಾದಲ್ಲಿ ನಟಿಸುತ್ತಾರೆ. ಈ ಚಿತ್ರದಲ್ಲಿನ ನಟನೆಗಾಗಿ 2008–2009ನೇ ಸಾಲಿನ ಅತ್ಯುತ್ತಮ ಪೋಷಕ ನಟ ರಾಜ್ಯಪ್ರಶಸ್ತಿಗೂ ಭಾಜನರಾಗುತ್ತಾರೆ. ಚೇತನ್ ಮುಂಡಾಡಿ ನಿರ್ದೇಶನದ ‘ಮದಿಪು’ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ ಮಠ. ಇದಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ.

ಇವರು ನಟಿಸಿದ ಪ್ರಥಮ ಸಿನಿಮಾ ‘ಜನ್ಮದಾತ’. ಅದರಲ್ಲಿ ಅವರದು ಕಾನ್‌ಸ್ಟೆಬಲ್‌ ಪಾತ್ರ. ನಂತರ ‘ರಾಮಾ ರಾಮಾ ರೇ’, ‘ಗಜಕೇಸರಿ’, ‘ಕಲ್ಲರಳಿ ಹೂವಾಗಿ’, ‘ಒಂದಲ್ಲಾ ಎರಡಲ್ಲಾ’, ‘ರಾಜಕುಮಾರ’, ‘ಮಿಸ್ಟರ್ ಅಂಡ್ ಮಿಸೆಸ್ ರಾಜಕುಮಾರಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ‘ಮಣ್ಣು’ ಎಂಬ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ‘ಯುವರತ್ನ’, ‘ಮೇಲೊಬ್ಬ ಮಾಯಾವಿ’ ಹಾಗೂ ‘ಕನ್ನೇರಿ’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

‘ಸಂಕ್ರಾಂತಿ’, ‘ಗೆಳತಿ’, ‘ಮಹಾಮಾಯಿ’, ‘ದೂರ ತೀರ ಯಾನ’, ‘ಆ ಊರು ಈ ಊರು’, ‘ನೆಲಮುಗಿಲು‘, ‘ಕೆಳದಿ ಚೆನ್ನಮ್ಮ’ ಮುಂತಾದ ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯಕ್ಕೆ ಸ್ಟಾರ್ ಸುವರ್ಣ ವಾಹಿನಿಯ ‘ಮತ್ತೆ ವಸಂತ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

‘ನಟಿಸಲು ನನಗೆ ಇಂತಹದ್ದೇ ಪಾತ್ರ ಬೇಕು ಎಂಬ ಪರಿಧಿಯೊಳಗೆ ನಾನಿಲ್ಲ’ ಎನ್ನುವ ಅವರು, ಪ್ರತಿಯೊಂದು ಪಾತ್ರದಲ್ಲೂ ಪರಕಾಯ ಪ್ರವೇಶ ಮಾಡಿ ಜೀವ ತುಂಬುತ್ತೇನೆ. ನಾನು ಪ್ರತಿ ಪಾತ್ರಕ್ಕೆ ಹೊಂದಿಕೊಳ್ಳುವಂತೆ ಅಲ್ಲಿನ ಪರಿಸರಕ್ಕೂ ಹೊಂದಿಕೊಳ್ಳುತ್ತೇನೆ. ಪ್ರತಿಯೊಂದು ಪಾತ್ರವನ್ನು ಮನಸ್ಸಿಟ್ಟು ಮಾಡುತ್ತೇನೆ’ ಎನ್ನುತ್ತಾರೆ.

ದೇಶಪ್ರೇಮ ವಿಷಯದ ಬಗ್ಗೆ ಸಿನಿಮಾ ಮಾಡುವ ಕನಸು ಹೊಂದಿರುವ ಮಠ, ‘ತಿಮಿರ’ ಎಂಬ ಹೆಸರಿನ ಚಿತ್ರಕಥೆ ಬರೆದಿದ್ದಾರೆ.

‘ಒಬ್ಬ ಪ್ರಾಂಜಲ ಮನಸ್ಸಿನ ಯಾವುದೇ ಬೇಡಿಕೆ ಇಡದೆ ನಾನು ಹಾಕಿದ ದುಡ್ಡು ನನಗೆ ಬಂದರೆ ಸಾಕು ಎನ್ನುವ ನಿರ್ಮಾಪಕ ಸಿಕ್ಕರೆ ಖಂಡಿತ ನಾನು ಈ ಸಿನಿಮಾ ಮಾಡುತ್ತೇನೆ’ ಎಂಬುದು ಅವರ ಭರವಸೆಯ ನುಡಿ.

ಎಂ.ಕೆ. ಮಠ ಅವರ ಮಗಳು ಕೂಡ ಅಭಿಯನದ ಹಾದಿ ಹಿಡಿದಿದ್ದಾರೆ. ಅವರ 8 ವರ್ಷದ ಮಗಳು ಬ್ಯಾರಿ ಸಿನಿಮಾವೊಂದರಲ್ಲಿ ನಟಿಸಿದ್ದು, ಆ ಸಿನಿಮಾ ಕೋಲ್ಕತ್ತ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT