ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ರಾಜಕೀಯದ ಬಗ್ಗೆ ಸಕ್ರಿಯವಾಗಿ ಯೋಚಿಸಿ, ಭಾಗವಹಿಸುವ ಪ್ರಕ್ರಿಯೆಯೇ ಚುನಾವಣೆ. ಇದರಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿದ ಪಕ್ಷವು ಸಮಾಜಮುಖಿಯಾಗಲು ಪ್ರಯತ್ನಿಸಲಿ.

ಯಾಕೆಂದರೆ, ಸರ್ವಾಧಿಕಾರಿಗಳನ್ನು ನಾಶ ಮಾಡಿ ಪ್ರಜಾಪ್ರತಿನಿಧಿಗಳ ಮೂಲಕ ಆಡಳಿತ ನಡೆಸುವ ಅತ್ಯುತ್ತಮ ವ್ಯವಸ್ಥೆ ಇದು. ಬಹುಮುಖಿ ಸಮಾಜವನ್ನು ಶ್ರೀಮಂತಗೊಳಿಸುವ ಅಪೂರ್ವ ಮಾದರಿ. ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆ ಯಾವುದೇ ಕಾರಣಕ್ಕೂ ಮುಗ್ಧ ಮನಸ್ಸುಗಳನ್ನು ಸದಾ ಆತಂಕದಲ್ಲಿಡಲು ಪ್ರಯತ್ನಿಸುವುದು ಅಪರಾಧ.

ಇದರಿಂದ ಬೇರೆ ಬೇರೆ ಸುಸಂಸ್ಕೃತ ಕ್ಷೇತ್ರಗಳ ಆರೋಗ್ಯಪೂರ್ಣ ಚಿಂತನೆಗಳಿಗೆ ಧಕ್ಕೆಯಾಗುವುದು. ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬೀಳುವವು.

ಪ್ರಜಾಪ್ರಭುತ್ವದ ನೆಲೆಯಲ್ಲಿ ರಾಜಕೀಯವು ತಾತ್ವಿಕವಾಗಿ ಬೆಳೆಯುತ್ತಾ ಹೋಗಬೇಕು. ಅದೇ ನಮ್ಮನ್ನುನಿರಂತರ ಕಾಪಾಡುವುದು ಎಂಬ ಅರಿವು ಮುಖ್ಯ. ಜನಸಾಮಾನ್ಯರ ಆಯಾ ಕ್ಷಣದ ಆಗುಹೋಗುಗಳಿಗೆ ಸ್ಪಂದಿಸಲು ಇದಕ್ಕಿಂತ ಉತ್ತಮ ಮಾದರಿಯಿಲ್ಲ. ಇತಿಹಾಸದಲ್ಲಿ ನಾವೆಲ್ಲರೂ ‌ನೆನಪು ಮಾಡಿಕೊಂಡರೆ ಗಾಬರಿಪಡಬಹುದಾದ ಘಟನೆಗಳೆಲ್ಲ ನಡೆದುಹೋಗಿವೆ.

ಹಾಗೆ ನೋಡಿದರೆ ನಮ್ಮ ಸ್ವಾತಂತ್ರ್ಯ ಚಳವಳಿಯು ಮೊದಲನೆಯ ಬಾರಿಗೆ ಜಾತಿ–ಮತ ಭೇದ ಮರೆತು ಎಲ್ಲಾ ಜನರು ಒಂದೆಡೆ ಸೇರುವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸದವಕಾಶ ಮಾಡಿಕೊಟ್ಟಿತು ಎಂಬುದು ಮಾರ್ಮಿಕವಾದ ಸಂಗತಿ‌. ಇದರಿಂದಾಗಿ ಮೇಲು– ಕೀಳೆಂಬ ಮಾನಸಿಕ ಕ್ಷುದ್ರತೆ ಕಡಿಮೆಯಾಗಲು ಸಾಧ್ಯವಾಯಿತು. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಇದು ಮಹತ್ವಪೂರ್ಣವಾದದ್ದು.

ನೂರಾರು ವರ್ಷಗಳಿಂದ ಸಾಧ್ಯವಾಗದೇ ಇದ್ದದ್ದು ಈ ಆರೇಳು ದಶಕಗಳಲ್ಲಿ ಸಾಧ್ಯವಾಗಿರುವುದಕ್ಕೆ ಮುಖ್ಯ ಕಾರಣ: ಸ್ವಾತಂತ್ರ್ಯದ ಬೆನ್ನಲ್ಲೇ ಹುಟ್ಟಿದ ಪ್ರಜಾಪ್ರಭುತ್ವದ ‌ವ್ಯವಸ್ಥೆ. ನೂರಾರು ವರ್ಷಗಳಿಂದ ಬಾಯಿಬಿಡದವರೆಲ್ಲ ನಿರ್ಭಿಡೆಯಿಂದ ಧ್ವನಿಯೆತ್ತಲು ಅವಕಾಶ ದೊರಕಿದೆ. ಇದಕ್ಕೆಲ್ಲ ರಕ್ಷಣಾತ್ಮಕವಾಗಿ ನಿಂತಿರುವುದು ನಮ್ಮ ಸಂವಿಧಾನ.

ಇಲ್ಲೆಲ್ಲ ಪ್ರತ್ಯಕ್ಷವಾಗಿ,ಪರೋಕ್ಷವಾಗಿ ರಾಜಕೀಯ ತಾತ್ವಿಕ ನೆಲೆಗಳು ಕೆಲಸ ಮಾಡಿವೆ. ವಾಗ್ವಾದ, ಸಂವಾದ ಮತ್ತು ತಾರ್ಕಿಕತೆಗೆ ವೇದಿಕೆಗಳು ನಿರ್ಮಾಣವಾಗುತ್ತಿರುವುದೇ ರಾಜಕೀಯ ಸಿದ್ಧಾಂತಗಳ ಆರೋಗ್ಯಪೂರ್ಣತೆಯಿಂದ ಎಂಬುದನ್ನು ನಾವು ಮರೆಯಬಾರದು.

ಭಾರತದಲ್ಲಿ ಇಂದು ಸಾವಿರಾರು ಮಹಿಳಾ ಸಂಘಟನೆಗಳಿವೆ. ಅವೆಲ್ಲವೂ ರಾಜಕೀಯ ಇಚ್ಛಾಕ್ತಿಯಿಂದ ಪ್ರೇರೇಪಿತವಾದಂಥವು. ಇದಕ್ಕೆ ಅದ್ಭುತವಾದ ನೆಲೆಯನ್ನು ದೊರಕಿಸಿಕೊಟ್ಟವರು ಮಹಾತ್ಮ ಗಾಂಧಿ. ಗಾಂಧಿಯನ್ನು ಮರೆತು ಸ್ವಾತಂತ್ರ್ಯದ ನಂತರ ಹುಟ್ಟಿದ ಯಾವುದೇ ಚಳವಳಿಯನ್ನು ಚರ್ಚಿಸಲು ಸಾಧ್ಯವಿಲ್ಲ.

ಇಂದು ನಾವು ಚುನಾವಣೆಯನ್ನು ಗ್ರಾಮಗಳ ಹಂತದಿಂದಲೇ ಒಪ್ಪಿಕೊಂಡು ಬಂದಿದ್ದೇವೆ. ಆರೇಳು ದಶಕಗಳಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಈ ವ್ಯವಸ್ಥೆ ಅತ್ಯುತ್ತಮ ಮಾದರಿಯಾಗಿರುವುದರಿಂದ ಹೆಚ್ಚು ಹೆಚ್ಚು ಜನರ ಸಮೀಪಕ್ಕೆ ಹೋಗುವ ಪ್ರಕ್ರಿಯೆಯಲ್ಲಿ ಕ್ರಿಯಾಶೀಲವಾಗುತ್ತಲೇ ಇದೆ. ಇದು ನಾಗರಿಕ ಸಮಾಜದ ಬಹುದೊಡ್ಡ ಕೊಡುಗೆಯಾಗಿ ಮುಂದುವರಿಯುತ್ತಿದೆ.

ಆದ್ದರಿಂದ ಚುನಾವಣೆಯಲ್ಲಿ ಭಾಗವಹಿಸುವ ಎಲ್ಲಾ ವರ್ಗದ ಜನರು ತಾತ್ವಿಕ ನೆಲೆಯಲ್ಲಿ ಸಮಾಜಮುಖಿಯಾಗಲು ಪ್ರಯತ್ನಿಸಬೇಕು. ಇಲ್ಲಿ ಯಾವುದೇ ವಿಧವಾದ ಎಡವಟ್ಟು ಆಗಲು ಅವಕಾಶ ಕೊಡಬಾರದು. ಗುಂಪುಗಾರಿಕೆಗೆ ಜಾಗ ಕೊಟ್ಟಾಗ ಸಣ್ಣ ಸಣ್ಣ ಪ್ರಮಾಣದ ಸರ್ವಾಧಿಕಾರಿಗಳು ಹುಟ್ಟಿಕೊಂಡು ಆಕ್ರಮಣಕಾರಿಗಳಾಗಲು ಪ್ರಯತ್ನಿಸುವರು.

ಯಾವುದೇ ಕಾಲದಲ್ಲಿಯೂ ಸರ್ವಾಧಿಕಾರಿಗಳ ಮಧ್ಯೆ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಪ್ರಕ್ರಿಯೆ ನಡೆದಿಲ್ಲ. ಯುದ್ಧ ಮತ್ತು ಆಂತರಿಕ ಕಲಹಗಳಲ್ಲಿ, ಆತಂಕ ಮತ್ತು ಭೀತಿಯ‌ ಮಧ್ಯೆಯೇ ಬದುಕಬೇಕಾದ ಪರಿಸ್ಥಿತಿಯಲ್ಲಿ ಜನ ತಮ್ಮ ಬಾಳನ್ನು ಸಾಗಿಸಬೇಕಾಗಿತ್ತು. ಯಾರ ಮನೆಯಲ್ಲಿಯೂ ಅಮೂಲ್ಯವಾದ ವಸ್ತುಗಳು ಇರಲು ಬಿಡುತ್ತಿರಲಿಲ್ಲ.

ನಾವು ಕೆಲವು ಇತಿಹಾಸದ ರಾಜ– ಮಹಾರಾಜರನ್ನು ಉತ್ತುಂಗದಲ್ಲಿ ಕೂರಿಸಿದರೂ ಅವರ ಮಿತಿಗಳು ಬಹಳಷ್ಟು ಇದ್ದವು. ಕೆಲವರ ಕಟ್ಟುವ ಪ್ರಕ್ರಿಯೆಯ ಮುಂದೆ ಅದನ್ನು ಕೆಡವುವ ಪಾಳೆಯಗಾರರ ಗುಂಪು ಇದ್ದೇ ಇರುತ್ತಿತ್ತು. ಆಗ ಜನಸಾಮಾನ್ಯರು ಕ್ರಿಮಿಕೀಟಗಳ ರೀತಿಯಲ್ಲಿ ಸತ್ತಿದ್ದಾರೆ. ಇದರ ಜೊತೆಗೆ ನಿರಂತರ ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿ ಹೋಗಿದ್ದಾರೆ.

ಆ ಕಾಲಘಟ್ಟದ ಕೆಲವು ಸಮೀಕ್ಷೆಗಳು ಹೇಳುವ ಪ್ರಕಾರ ಹಳ್ಳಿ ಹಳ್ಳಿಗಳೇ ನಿರ್ನಾಮವಾಗಿಬಿಟ್ಟಿವೆ.

ಹಾಗೆಯೇ ಜನಾಂಗೀಯ ಕಲಹಗಳ ಕಾರಣಕ್ಕಾಗಿ ಅಪೂರ್ವ ಪಾರಂಪರಿಕ ಸ್ಮಾರಕಗಳೆಲ್ಲ ಸರ್ವನಾಶವಾಗಿಬಿಟ್ಟಿವೆ. ಈ ಎಲ್ಲಾ ವಿನಾಶಕಾರಿ ಸಂಗತಿಗಳನ್ನು ಅಧ್ಯಯನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ತಾತ್ವಿಕವಾಗಿ ಬೆಳೆಯುತ್ತಾ ಹೋಗಿದೆ. ಜಗತ್ತಿನಾದ್ಯಂತ ಇದಕ್ಕೆ ಪೂರಕವಾದ ಸಮನ್ವಯ ಏರ್ಪಡುತ್ತಲೇ ಇದೆ. ಅಲ್ಲೆಲ್ಲ ನಡೆಯುವ ಚುನಾವಣೆ ಪ್ರಕ್ರಿಯೆಯ ಸಾಧಕ ಬಾಧಕಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ.

ಇಂದು ಯಾವುದೂ ದೂರವಾಗಿ, ಪರಕೀಯವಾಗಿ ಉಳಿದಿಲ್ಲ. ಅನಾರೋಗ್ಯಕರ ಚುನಾವಣೆಯ ಬಗ್ಗೆ ವಿಶ್ವವ್ಯಾಪಿಯಾಗಿ ಪ್ರತಿಕ್ರಿಯಿಸುವ ಮತ್ತು ತಮ್ಮ ಅಸಮಾಧಾನ ತೀವ್ರವಾಗಿ ವ್ಯಕ್ತಪಡಿಸುವ ಆರೋಗ್ಯಕರ ವಾತಾವರಣ ನಿರ್ಮಾಣಗೊಂಡಿದೆ. ಇದಂತೂಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅದ್ಭುತವಾದ ಬೆಳವಣಿಗೆ. ಯಾಕೆಂದರೆ ಅಷ್ಟರಮಟ್ಟಿಗೆಜಗತ್ತಿನ ಉದ್ದಗಲಕ್ಕೂ ಚಿಂತನಶೀಲ ಮನಸ್ಸುಗಳು ಕ್ರಿಯಾಶೀಲವಾಗಿವೆ.

ಇದರಿಂದ ಅಪರಾಧೀಕರಣ ಕಡಿಮೆಯಾಗಲು ಸಾಧ್ಯವಾಗಿದೆ.

ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಕಾರಣಕ್ಕಾಗಿ ಪುಟ್ಟ ಪುಟ್ಟ ಸಮುದಾಯಗಳಲ್ಲಿ ಸ್ವಾಭಿಮಾನ ಮತ್ತು ಒಟ್ಟುಗೂಡುವಿಕೆಗೆ ಜೀವ ಬಂದಿದೆ. ಇದರಿಂದಾಗಿ ಎಲ್ಲರಲ್ಲೂ ಸಮಾನತೆಯ ತುಡಿತ ತೀವ್ರವಾಗತೊಡಗಿದೆ. ಇಂದು ಯಾರ ಮೇಲೆ ಯಾರೂ ದಬ್ಬಾಳಿಕೆಯನ್ನು ನಡೆಸಲು ಅವಕಾಶಗಳು ಕಡಿಮೆ. ಆ ಕ್ಷಣದಲ್ಲಿಯೇ ಪ್ರತಿಭಟನೆಯೆಂಬುದು ವ್ಯಾಪಕಗೊಳ್ಳುತ್ತದೆ.

ಯಾಕೆಂದರೆ, ಅಂತಹ ಅಮೂಲ್ಯವಾದ ಅಸ್ತ್ರವನ್ನು ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಪ್ರಕ್ರಿಯೆ ಜನರ ಕೈಗೆ ಕೊಟ್ಟಿದೆ. ಆದ್ದರಿಂದ ಇಂಥ ಸಾರ್ವಕಾಲಿಕ ಶ್ರೇಷ್ಠ ಸಂಸ್ಥೆಗಳನ್ನು ಅತ್ಯಂತ ಅನನ್ಯವಾದ ಭಾವನೆಯಿಂದ ಪೋಷಿಸುತ್ತಲೇ ಹೋಗಬೇಕಾಗುತ್ತದೆ. ಅದನ್ನು ಎಂದೆಂದಿಗೂ ದುರ್ಬಲವಾಗಲು ಬಿಡಬಾರದು.

ಯಾಕೆಂದರೆ ಒಂದು ಶ್ರೀಮಂತ ಸಮಾಜ ಹಾಗೂ ಅದರ ಬಹುಮುಖಿ ನೆಲೆಗಳು ಭದ್ರಗೊಳ್ಳುತ್ತಲೇ ಹೋಗಬೇಕು. ಇದರ ನಡುವೆ ನಮ್ಮ ಮಧ್ಯೆಎಂತೆಂತಹ ಸ್ಮರಣೀಯ ನೆಲೆಗಟ್ಟುಗಳಿವೆ ಎಂಬುದರ ಅರಿವು ನಮ್ಮ ಜನರಲ್ಲಿ ವಿಸ್ತಾರ‌ವಾಗುತ್ತ ಹೋಗಬೇಕು. ಇದು ಒಂದು ದಿನದ ಕೆಲಸವಲ್ಲ. ನಿರಂತರ ನಡೆಯುತ್ತಲೇ ಹೋಗಬೇಕಾದಂತಹದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT