ಮಾಡೆಲಿಂಗ್ ಹುಡುಗನ ‘ವಿಲನ್’ ಕನಸು

7

ಮಾಡೆಲಿಂಗ್ ಹುಡುಗನ ‘ವಿಲನ್’ ಕನಸು

Published:
Updated:
ಬಿ.ಎಂ.ಅಭಿಷೇಕ್

ಕಂಡ ಕನಸಿನ ಬೆನ್ನತ್ತಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ಹುಡುಗ ಬಿ.ಎಂ.ಅಭಿಷೇಕ್. 6.1 ಅಡಿ ಎತ್ತರ, ಉದ್ದ ಕೂದಲು, ಕುರುಚಲು ಗಡ್ಡದಿಂದಲೇ ಆಕರ್ಷಿಸುತ್ತಾರೆ ಅವರು.

ಕಾಲೇಜಿನಲ್ಲಿ ಸಿಕ್ಕ ವೇದಿಕೆಗಳನ್ನು ಬಳಸಿ ಕೊಂಡು ನಾಟಕ, ನೃತ್ಯ ಮಾಡುತ್ತಿದ್ದ ಅಭಿಷೇಕ್‌ಗೆ ಮಾಡೆಲಿಂಗ್ ಹಾಗೂ ಬಣ್ಣದ ಲೋಕದ ಗಂಧಗಾಳಿಯೇ ಗೊತ್ತಿರಲಿಲ್ಲವಂತೆ. ಊರಲ್ಲೇ ಇದ್ದು ಏನಾದರೂ ಸಾಧಿಸಬೇಕು ಎಂದು ಮನಸು ಮಾಡಿದ್ದಾಗಲೇ ಸಿನಿ ಲೋಕದಲ್ಲಿ ಮಿಂಚುವ ಆಸೆಯನ್ನು ಅವರಲ್ಲಿ ಬಿತ್ತಿದವರು ದೊಡ್ಡಮ್ಮ ಹೇಮಲತಾ ಬಿ. ಗಿರಿಮಠ ಎನ್ನುತ್ತಾರೆ ಅವರು.

ಅಭಿಷೇಕ್ ಅವರ ತಾತ ಬಿ.ಎಂ.ವಿರೂಪಾಕ್ಷಯ್ಯ ರಂಗಭೂಮಿ ಯಲ್ಲಿದ್ದವರು. ಹೀಗಾಗಿ, ನಟನೆಯ ಅಭಿರುಚಿ ಅವರ ಮನೆಗೂ ಅಂಟಿಕೊಂಡಿತ್ತು. ಕುಟುಂಬಸ್ಥರ ಪ್ರೋತ್ಸಾಹವಿದ್ದರೂ ಸಿನಿಮಾ ಕ್ಷೇತ್ರಕ್ಕೆ ಬರಬೇಕು ಎಂದು ಅವರಿಗೆ ಯಾವತ್ತು ಅನಿಸಿರಲಿಲ್ಲವಂತೆ. ಊರಿನಲ್ಲೇ ಇದ್ದು ಏನಾದರೂ ಬಿಸಿನೆಸ್ ಮಾಡುವ ಇಚ್ಛೆ ಅವರದ್ದಾಗಿತ್ತು.

ದೊಡ್ಡಮ್ಮನಿಂದ ಐಡೆಂಟಿಟಿ
 ‘ಒಮ್ಮೆ ಊರಿಗೆ ಬಂದಿದ್ದ ದೊಡ್ಡಮ್ಮ, ಕಾಲೇಜಿನಲ್ಲಿ ನಾನು ನಟಿಸಿದ್ದ ನಾಟಕ ಹಾಗೂ ನೃತ್ಯಗಳ ಚಿತ್ರಗಳನ್ನು ನೋಡಿ ‘ನಿನ್ನಲ್ಲಿ ಪ್ರತಿಭೆ ಇದೆ. ಇಲ್ಲೇ ಇದ್ದು ಅದನ್ನೇಕೆ ಕೊಲ್ಲುತ್ತೀಯಾ. ಬೆಂಗಳೂರಿಗೆ ಬಂದು ಸಿನಿಮಾಗಳಲ್ಲಿ ನಟಿಸಲು ಪ್ರಯತ್ನಿಸು’ ಎಂದು ಒತ್ತಾಯಿಸಿ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದರು. ಅದು ನನ್ನ ಜೀವನದ ಮೊದಲ ತಿರುವು’ ಎನ್ನುವ ಅವರಿಗೆ ಇಲ್ಲಿ ಅವಕಾಶಗಳೇನೂ ಕಾದು ಕುಳಿತಿರಲಿಲ್ಲ.

‘ಅವಕಾಶಕ್ಕಾಗಿ ದೊಡ್ಡಮ್ಮನ ಜೊತೆ ಹಲವು ಕಡೆ ಸುತ್ತಾಡಿದೆ. ಕೆಲವೆಡೆ ಆಡಿಷನ್ ಕೊಟ್ಟಿದ್ದೆ.  ಸ್ನೇಹಿತನ ಮೂಲಕ ಭುವನೇಶ್ವರ ನಾಟಕ ತಂಡಕ್ಕೆ ಸೇರಿ, ರಂಗಭೂಮಿಯ ಗೀಳು ಬೆಳೆಸಿಕೊಂಡ ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸುವ ಅವಕಾಶವೂ ಸಿಕ್ಕಿತು. ಅದನ್ನು ಸಮರ್ಥವಾಗಿ ಬಳಸಿಕೊಂಡೆ’ ಎನ್ನುತ್ತಾರೆ ಅವರು. ‘ಊರಿನಲ್ಲೇ ಇದ್ದಿದ್ದರೆ ನನ್ನೂರಿನವರು ಬಿಟ್ಟು ಬೇರೆ ಯಾರೂ ಗುರುತಿಸುತ್ತಿರಲಿಲ್ಲ. ನನಗೆ ಈಗೀಗ ಒಂದು ಐಡೆಂಟಿಟಿ ಸಿಗುತ್ತಿದೆ. ಇದಕ್ಕೆಲ್ಲ ಕಾರಣ ದೊಡ್ಡಮ್ಮ’ ಎಂದು ಅವರು ಸ್ಮರಿಸುತ್ತಾರೆ.

ಸಿನಿಮಾಗೆ ಪ್ರವೇಶಿಸಲು ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬೇಕು. ಅದರ ಮೂಲಕ ಸುಲಭವಾಗಿ ಸಿನಿಮಾ ಲೋಕವನ್ನು ಪ್ರವೇಶಿಸಬಹುದು ಎಂಬ ಮಾತಿತ್ತು. ಆದರೆ, ನನ್ನ ವಿಚಾರದಲ್ಲಿ ಅದು ತದ್ವಿರುದ್ಧ. ಒಳ್ಳೆಯ ಪರ್ಸನಾಲಿಟಿ ಇದೆ, ಸಿನಿ ಪಯಣಕ್ಕೂ ನೆರವಾಗುತ್ತದೆ ಎಂದು ಹೇಳಿ ತಂದೆಯ ಅಕ್ಕನ ಮಗಳಾದ ಅರುಣಾ ಎಂ.ಪಿ. ಅವರು ಮಾಡೆಲಿಂಗ್ ಆಸೆ ಮೂಡಿಸಿದರು.

ಸಿಲ್ವರ್‌ಸ್ಟಾರ್ ಗ್ರೂಪ್‌ನ ಸಿಇಒ ರವಿ ಹಾಸನ್ ಅವರಿಗೆ ನನ್ನನ್ನು ಪರಿಚಯಿಸಿದರು. 6.1 ಅಡಿ ಎತ್ತರ ಇದ್ದಿದ್ದರಿಂದ ರವಿ ಸರ್ ಸಹ ನನಗೆ ಮಾಡೆಲಿಂಗ್ ತರಬೇತಿ ನೀಡಲು ಒಪ್ಪಿದರು. ಅವರ ಮಾರ್ಗದರ್ಶನದಂತೆ ಜಿಮ್‌ಗೆ ಸೇರಿಕೊಂಡು ದೇಹ ದಂಡಿಸಿದೆ. ಮಾಡೆಲಿಂಗ್‌ಗೆ ಬೇಕಾದ ರೀತಿ ದೇಹ ಕಾಯ್ದಿಟ್ಟುಕೊಳ್ಳಲು ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಪ್ರಸಾದ್ ಕುಮಾರ್‌  ನೆರವಾದರು ಎನ್ನುತ್ತಾರೆ ಅವರು.

 ಮಾಡೆಲಿಂಗ್‌ ಕ್ಷೇತ್ರದ ರ‍್ಯಾಂಪ್‌ ಮೇಲೆ ಮೊದಲ ಬಾರಿಗೆ ಉತ್ಸಾಹದಿಂದಲೇ ಹೆಜ್ಜೆ ಹಾಕಿದ ಅಭಿಷೇಕ್‌ಗೆ ‘ಪ್ರಿನ್ಸ್ ಆಫ್ ಇಂಡಿಯಾ 2018’ ಪ್ರಶಸ್ತಿ ದಕ್ಕಿತು. ‘ಗುಡ್ ಫಿಸಿಕ್ ಮೆನ್’ ಎಂಬ ಪ್ರಶಸ್ತಿಯೂ ಸಿಕ್ಕಿದೆ.

ಅಮೃತವರ್ಷಿಣಿ, ಕಿನ್ನರಿ, ಗೃಹಲಕ್ಷ್ಮಿ, ಅಕ್ಕ ಧಾರಾವಾಹಿಗಳಲ್ಲಿ ವಿಲನ್ ಪಾತ್ರ ನಿರ್ವಹಿಸಿರುವ ಅವರು ‘ಜಿಗರ್ ಥಂಡಾ’, ‘ಸಂತೂ ಸ್ಟ್ರೈಟ್ ಫಾರ್ವರ್ಡ್‌’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಜಾ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಇನ್ನೂ ಹೆಸರಿಡದ ಹೊಸ ಚಿತ್ರವೊಂದರ ಮುಖ್ಯ ಖಳನಟನ ಪಾತ್ರಕ್ಕೆ ಆಯ್ಕೆಯಾಗಿರುವ ಅವರು ನಾಯಕ ಪಾತ್ರಗಳನ್ನು ಸಾರಾಸಗಟಾಗಿ ಒಲ್ಲೆ ಎನ್ನುತ್ತಾರೆ. ‘ಚಂದನವನದಲ್ಲಿ ಖಳನಟನಾಗಿಯೇ ಬೆಳೆಯಬೇಕು’ ಎನ್ನುವ ಆಸೆ ಅವರದ್ದು. ಇಂಡಿಯನ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದಾರೆ.

‘26 ಮೊಟ್ಟೆ, 700 ಗ್ರಾಂ ಚಿಕನ್, 8 ಚಪಾತಿ, 2 ಸೌತೆಕಾಯಿ, ಮುಕ್ಕಾಲು ಕೆ.ಜಿ. ಬೀನ್ಸ್, ನಾಲ್ಕು ಗೋಧಿ ಬ್ರೆಡ್ ಹಾಗೂ 250 ಗ್ರಾಂ ಪರಂಗಿ ಹಣ್ಣು ಇವಿಷ್ಟು ನನ್ನ ನಿತ್ಯದ ಮೂರು ಹೊತ್ತಿನ ಊಟ’ ಎಂದು ನಗುತ್ತಲೇ ಹೇಳುವ ಅವರು ತಾನೇ ಸ್ಥಾಪಿಸಿದ ಟ್ರಸ್ಟ್‌ ಮೂಲಕ ಆರೋಗ್ಯ ಶಿಬಿರ, ಕ್ರೀಡಾಕೂಟ ಹಾಗೂ ನಾಟಕಗಳನ್ನು ಆಯೋಜಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !