ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಹೀರಾತು ಲೋಕವೇ ಇಷ್ಟ: ಸ್ನೇಹಾ ಶೆಣೈ

Last Updated 22 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

‘ಡೆಕ್ಕನ್‌ ಹೆರಾಲ್ಡ್‌ ಮೆಟ್ರೋ ಲೈಫ್‌’ ಫ್ಯಾಷನ್‌ ಷೋದಲ್ಲಿ ಮೊದಲ ಬಾರಿಗೆ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದವರು ರೂಪದರ್ಶಿ ಸ್ನೇಹಾ ಶೆಣೈ. ಆ ಮೊದಲ ಅವಕಾಶವೇ, ಅವರಿಗೆ ಮಾಡೆಲಿಂಗ್‌ ಕ್ಷೇತ್ರದ ರುಚಿ ತೋರಿಸಿತು.

ಮಾಡೆಲಿಂಗ್‌ ಜಗತ್ತಿಗೆ ಪ್ರವೇಶಿಸಬೇಕು ಎಂಬ ಹೆಬ್ಬಯಕೆಯಿಂದ ಸಿಲ್ವರ್‌ ಸ್ಟಾರ್‌ ಇಂಡಿಯಾ ಮಾಡೆಲಿಂಗ್‌ ಸಂಸ್ಥೆ ಸೇರಿದರು. ಅಲ್ಲಿ ಅವರಿಗೆ ಗ್ಲಾಮರ್‌ ಲೋಕದ ಪರಿಚಯ ಮಾಡಿಕೊಟ್ಟವರು ರವಿ ಹಾಸನ್‌. ಅನೇಕಫ್ಯಾಷನ್‌ ಷೋಗಳಲ್ಲಿ ಭಾಗವಹಿಸಿದ ಸ್ನೇಹಾ, ಫ್ಯಾಷನ್‌ ಸಂಯೋಜಕರಾಗಿಯೂ ಕೆಲಸ ಮಾಡಿದ್ದಾರೆ.

2019ರಲ್ಲಿ ಮಿಸ್‌ ಇಂಡಿಯಾ ಸೂಪರ್‌ ಮಾಡೆಲ್‌, ಮಿಸ್‌ ಇಂಡಿಯಾ ಸೌತ್‌ ಪಟ್ಟ ಪಡೆದಿರುವುದು ಅವರ ಮಾಡೆಲಿಂಗ್‌ ಜೀವನದ ತಿರುವು. ಮುದ್ರಣ ಜಾಹೀರಾತು ಸೇರಿದಂತೆ ಬೇರೆ ಬೇರೆ ರ‍್ಯಾಂಪ್‌ ಷೋಗಳಲ್ಲಿಕಾಣಿಸಿಕೊಂಡಿದ್ದಾರೆ.

ಸ್ನೇಹಾ ಮಂಗಳೂರಿನವರು. ಸದ್ಯ ಬೆಂಗಳೂರಿನ ಬಸವೇಶ್ವರನಗರದಲ್ಲಿ ನೆಲೆಸಿದ್ದಾರೆ.ಮಾಡೆಲಿಂಗ್‌ನಲ್ಲಿ ಸಕ್ರಿಯರಾಗಿರುವ ಸ್ನೇಹಾಗೆ ಮುಂದೆ ವಿಜ್ಞಾನಿಯಾಗುವ ಬಯಕೆ. ‘ಮಾಡೆಲಿಂಗ್‌ನಲ್ಲಿ ಸಾಕಷ್ಟು ಅವಕಾಶಗಳು ದೊರೆಯುತ್ತಿದೆ. ನಾನು ಎಂ.ಎಸ್‌ಸಿ ಓದುತ್ತಿದ್ದೇನೆ. ಬಿಡುವಿನ ಅವಧಿಯಲ್ಲಿ ರ್‍ಯಾಂಪ್ ಷೋ, ಜಾಹೀರಾತುಗಳಲ್ಲಿ ನಟಿಸುವುದನ್ನು ಮುಂದುವರಿಸುತ್ತೇನೆ’ ಎಂದು ಹೇಳುವ ಅವರಿಗೆ ಸಿನಿ ಕ್ಷೇತ್ರಕ್ಕೆ ಪ್ರವೇಶಿಸುವ ಯಾವುದೇ ಇರಾದೆ ಸದ್ಯಕ್ಕಿಲ್ಲ.

‘ಸಿನಿಮಾ ಎಂದರೆ ತಿಂಗಳುಗಟ್ಟಲೆ ಹೊರಗಿರಬೇಕಾಗುತ್ತದೆ. ಒಮ್ಮೆ ಒಪ್ಪಿಕೊಂಡರೆ ತುಂಬಾ ಬದ್ಧತೆ ಬೇಕು. ಈಗ ನನಗೆ ಶಿಕ್ಷಣವೇ ಮುಖ್ಯ’ ಎಂದು ತಮ್ಮ ಮುಂದಿನ ಹಾದಿಯ ಬಗ್ಗೆ ಹೇಳುತ್ತಾರೆ.

‘ಮಾಡೆಲಿಂಗ್‌ನಲ್ಲಿ ಸೌಂದರ್ಯ, ಫಿಟ್‌ನೆಸ್‌ ತುಂಬ ಮುಖ್ಯವಾಗುತ್ತದೆ. ಹಾಗಾಗಿ ಇಷ್ಟಪ‍ಟ್ಟಿದ್ದನ್ನೆಲ್ಲಾ ತಿನ್ನುವ ಹಾಗಿಲ್ಲ. ಆಹಾರದಲ್ಲಿ ಕಟ್ಟುನಿಟ್ಟು ಪಾಲಿಸುತ್ತೇನೆ’ ಎಂಬುದು ಅವರ ಮಾತು.ಲಾಕ್‌ ಡೌನ್‌ ಅವಧಿಯಲ್ಲಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ವ್ಯಾಯಾಮ, ವರ್ಕೌಟ್‌ ಮಾಡುತ್ತಿದ್ದಾರಂತೆ.

‘ಮಾಡೆಲಿಂಗ್‌ ಜಗತ್ತು ಎಂದರೆ ಬೆಕ್ಕಿನ ನಡಿಗೆ, ಪೋಸಿಂಗ್‌ ಎಂದು ಹೇಳುತ್ತಾರೆ. ಇಲ್ಲಿ ಪ್ರತಿಭೆಯೂ ಮುಖ್ಯ. ನಮ್ಮನ್ನು ನಾವು ಪ್ರಸ್ತುತಪಡಿಸಿಕೊಳ್ಳುವ ಆತ್ಮವಿಶ್ವಾಸ ಇರಬೇಕು’ ಎಂಬುದು ಸ್ನೇಹಾ ಅನುಭವದ ಮಾತು.

‘ಈ ಜಗತ್ತಿಗೆ ಪ್ರವೇಶಿಸಬೇಕು ಎಂದು ಬಯಸುವವರಿಗೆ ಮಾರ್ಗದರ್ಶಕರು ಮುಖ್ಯ.ಈಗ ಅನೇಕ ಸಂಸ್ಥೆ ಅಥವಾ ಮಾರ್ಗದರ್ಶಕರು ಇದ್ದಾರೆ.ಮಾಡೆಲಿಂಗ್‌ ಜಗತ್ತಿನ ಬಗ್ಗೆ ಅನೇಕರಿಗೆ ಕೆಟ್ಟ ಅಭಿಪ್ರಾಯವಿದೆ. ಹಾಗಾಗಿ ಸಂಸ್ಥೆ, ವ್ಯಕ್ತಿಗಳ ಹಿನ್ನೆಲೆ ಬಗ್ಗೆ ತಿಳಿದುಕೊಂಡು ಗ್ರೂಮಿಂಗ್‌ ತರಬೇತಿಗೆ ಸೇರಿಕೊಳ್ಳಬೇಕು. ಈ ಗ್ಲಾಮರ್‌ ಲೋಕದಲ್ಲಿ ಉತ್ತಮವಿಷಯದ ಜೊತೆಗೆ ಕೆಟ್ಟದೂ ಇದೆ. ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಇರಬೇಕು’ ಎಂದು ಮಾಡೆಲಿಂಗ್‌ ಲೋಕದಲ್ಲಿ ಗುರುತಿಸಿಕೊಳ್ಳಬಯಸುವವರಿಗೆ ಕಿವಿ ಮಾತು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT