ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹನ…ದಶಾವತಾರ

Last Updated 5 ಜೂನ್ 2020, 4:14 IST
ಅಕ್ಷರ ಗಾತ್ರ

ಹತ್ತು’ಮಹಾ’ ಕೃತಿಗಳು, ಹತ್ತು ಪ್ರಮುಖ ಪಾತ್ರಗಳು. ಒಬ್ಬ ನಟ; ಹತ್ತು ಮುಖ. ಕಲಾ-ಕಾವ್ಯ ಜಗತ್ತಿನಅಪರೂಪದ ಪ್ರಯೋಗಗಳಲ್ಲಿ ಒಂದಾದ ‘ಕದಯಾಟ್ಟಂ’ ದೃಶ್ಯರೂಪಕದ ಈ ‘ದಶಾವತಾರಿ’ ಬೇರೆ ಯಾರೂ ಅಲ್ಲ; ದಕ್ಷಿಣ ಭಾರತ ಸಿನಿಮಾರಂಗದ ಮಹಾನ್ ನಟ ಮೋಹನ್‌ಲಾಲ್.

ಕದಯಾಟ್ಟಂ (ಕಥೆಗಳ ದೃಶ್ಯರೂಪಕ) ಮಲಯಾಳಂ ಸಾಹಿತ್ಯ-ಕಲಾಕ್ಷೇತ್ರದಲ್ಲಿ ಈಗ ಚರ್ಚೆಯ ವಿಷಯ. ಅಭಿನಯದ ಎಲ್ಲ ವಿಧಗಳನ್ನೂ ತನ್ನೊಳಗೆ ಆವಾಹಿಸಿಕೊಂಡು ಸಾಹಿತ್ಯಕೃತಿಗಳ ಪಾತ್ರಗಳಲ್ಲಿ ಚೈತನ್ಯ ತುಂಬಿರುವುದು ಈ ರೂಪಕದಲ್ಲಿ ಮೋಹನ್ ಲಾಲ್ ಸಾಧಿಸಿರುವ ಶ್ರೇಷ್ಠತೆ. ತನ್ಮಯತೆಯಿಂದ ಕೂಡಿದ ಆಂಗಿಕ ಮತ್ತು ವಾಚಿಕದ ಮೂಲಕ ರೂಪಕದಲ್ಲಿ ನವರಸಗಳು ನಾಟ್ಯವಾಡುವಂತೆ ಅವರು ಮಾಡಿದ್ದಾರೆ.

ಕೇರಳ ರಾಜ್ಯೋತ್ಸವದ ಅಂಗವಾಗಿ 2003ರಲ್ಲಿ ತಿರುವನಂತಪುರದಲ್ಲಿ ಈ ಪ್ರಯೋಗ ಮಾಡಲಾಗಿತ್ತು. ಈಗ ಅದು ವಿಡಿಯೊ ರೂಪದಲ್ಲಿ ಬಿಡುಗಡೆಗೊಂಡಿದ್ದು ಕಲಾ-ಕಾವ್ಯ ಪ್ರೇಮಿಗಳಿಗೆ ಬೆರಳತುದಿಯಲ್ಲೇ ಲಭ್ಯವಿದೆ. ಕೊರೊನಾ ಹಾವಳಿಯಿಂದಾದ ‘ಬಂಧನ’ ಪರಿಸ್ಥಿತಿಯಲ್ಲಿ ದೃಶ್ಯರೂಪಕ ಲಕ್ಷಾಂತರ ಸಹೃದಯರ ಮನಸ್ಸಿನ ಹಸಿವನ್ನು ನೀಗಿಸಿದೆ.

ಮಲಯಾಳಂನ ಹತ್ತು ಲೇಖಕರ ಸಾಹಿತ್ಯಕೃತಿಗಳ ಪ್ರಮುಖ ಪಾತ್ರಗಳನ್ನು ಒಂದೇ ವೇದಿಕೆಯಲ್ಲಿ ಏಕವ್ಯಕ್ತಿ ಪ್ರದರ್ಶನದ ರೂಪದಲ್ಲಿ ಮೋಹನ್‌ಲಾಲ್ ಅಭಿನಯಿಸಿದ್ದಾರೆ. ಕ್ಷಣಾರ್ಧದಲ್ಲಿ ವೇಷ-ಭೂಷಣ ಬದಲಾಯಿಸುವುದು ಮತ್ತು ರೂಪಾಂತರಗೊಳ್ಳುವ ಪಾತ್ರಗಳಿಗೆ ತಕ್ಕಂತೆ ಭಿನ್ನಭಾವ ಅಭಿವ್ಯಕ್ತಿಗೊಳಿಸುವುದು ಈ ರೂಪಕದ ರೋಮಾಂಚಕ ಅಂಶ. ಈ ‘ಬದಲಾಗುವ’ ಸವಾಲನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಬಲ್ಲ ಪಾತ್ರಗಳನ್ನೇ ಆಯ್ದು ಮೋಹನ್ ಲಾಲ್‌ಗೆ ಕೊಟ್ಟದ್ದು ಸಾಹಿತಿ ಎಂ.ಟಿ.ವಾಸುದೇವನ್ ನಾಯರ್. ರಂಗಭೂಮಿಗೆ ಸಜ್ಜುಗೊಳಿಸಿದ್ದು ಪಿ.ಬಾಲಚಂದ್ರನ್. ನಿರ್ದೇಶನದ ಹೊಣೆ ನಿರ್ವಹಿಸಿದ್ದು ಟಿ.ಕೆ.ರಾಜೀವ್ ಕುಮಾರ್. ರಂಗಭೂಮಿ ಮತ್ತು ಸಿನಿಮಾ ದೃಶ್ಯಾವಳಿಯ ಸ್ಪರ್ಶವಿರುವ ಇದರಲ್ಲಿ ಮೋಹನ್‌ಲಾಲ್ ಅಭಿನಯದ ಸಾಧ್ಯತೆಗಳೆಲ್ಲವನ್ನೂ ಬಳಸಿಕೊಂಡು ಪಾತ್ರಗಳಿಗೆ ಜೀವ ತುಂಬಿದ್ದಾರೆ.

‘ಇಂದುಲೇಖ’ದಿಂದ ‘ರಂಡಾಮೂಳಂ’ವರೆಗೆ

ಮಲಯಾಳಂನ ಮೊದಲ ಕಾದಂಬರಿ ಎನ್ನಲಾಗುವ ಒ.ಚಂದುಮೇನೋನ್ ಅವರ ‘ಇಂದುಲೇಖ’ದಿಂದ ಆಧುನಿಕ ಸಾಹಿತ್ಯದ ಬಹುಮುಖ ಪ್ರತಿಭೆ ಎಂ.ಟಿ.ವಾಸುದೇವನ್ ನಾಯರ್ ಅವರ ರಂಡಾಮೂಳಂ ವರೆಗಿನ ಕಾದಂಬರಿಗಳು ಇಲ್ಲಿ ಮುನ್ನೆಲೆಗೆ ಬಂದಿವೆ. ಇಂದುಲೇಖಳ ಸೌಂದರ್ಯಕ್ಕೆ ವಶನಾದ ವೃದ್ಧ ಸೂರಿ ನಂಬೂದಿರಿಪ್ಪಾಡ್‌ನಿಂದ ಹಿಡಿದು ಪುರಾಣದಲ್ಲಿ ಕಾಣಸಿಗದ, ಆದರೆ ಎಂ.ಟಿ ಚಿತ್ರಿಸಿರುವ ‘ಪರಿಪೂರ್ಣ’ ಭೀಮನ ವರೆಗಿನ ಪಾತ್ರಗಳು ಇಲ್ಲಿ ನಳನಳಿಸಿವೆ.

ಕದಯಾಟ್ಟಂ ಆರಂಭವಾಗುವುದು ಸೂರಿ ನಂಬೂದಿರಿಪ್ಪಾಡ್ ಪಾತ್ರದ ಮೂಲಕ. ಅವಿವೇಕಿಯೂ ಲಂಪಟನೂ ಆದ ಸೂರಿ, ಕಾಮುಕತನ ಪ್ರದರ್ಶಿಸುವ ಮೂಲಕವೇ ಅಪಹಾಸ್ಯಕ್ಕೆ ಒಳಗಾಗಿರುವ ಪಾತ್ರ. ಸಾಂಪ್ರದಾಯಿಕ ಪೋಷಾಕುಗಳೊಂದಿಗೆ ವೇದಿಕೆಯನ್ನು ತುಂಬುವ ಮೋಹನ್‌ಲಾಲ್ ನಂತರ ಬರುವುದು ಸಿ.ವಿ.ರಾಮನ್ ಪಿಳ್ಳ ಅವರ ಕಾದಂಬರಿಯ ಐತಿಹಾಸಿಕ ಪಾತ್ರ, ಚಂದ್ರಕ್ಕಾರನ್ ಮೂಲಕ. ರೋಷಾವೇಶ ತುಂಬಿದ ಚಂದ್ರಕ್ಕಾರನ್‌ನನ್ನು ಮನೋಜ್ಞ ಭಾವಾಭಿನಯದ ಮೂಲಕ ಪ್ರಸ್ತುತಪಡಿಸಿದ್ದಾರೆ ಮೋಹನ್ ಲಾಲ್.

ರಿಕ್ಷಾವಾಲ ಪಪ್ಪುವಿನ ಕಥೆ ವಿಭಿನ್ನ. ಜನರನ್ನು ಗಮ್ಯಕ್ಕೆ ತಲುಪಿಸುವುದಕ್ಕಾಗಿ ತನ್ನ ಬದುಕಿನ ಹಾದಿಯನ್ನೇ ಮರೆತ ಪಪ್ಪು, ಶ್ರಮಜೀವಿಗಳ ಪ್ರತಿನಿಧಿ. ಮನೆಯವರಿಂದ ಮತ್ತು ಸಮಾಜದಿಂದ ದೂಷಣೆಗೆ ಒಳಗಾದ ಆತನ ಮಡುಗಟ್ಟಿದ ದುಃಖದಲ್ಲಿ ಪ್ರೇಕ್ಷಕರೂ ಭಾಗಿಯಾಗುವಂತೆ ಮಾಡುತ್ತದೆ, ಮೋಹನ್ ಲಾಲ್ ಅಭಿನಯ ಚಾತುರ್ಯ.

ಮುಕ್ಕಂ ನದಿಯ ನೀರುಂಡು ಬೆಳೆದ ಇಕ್ಕೋರನ್ ಪ್ರೇಮ ವಿಫಲಗೊಂಡು ನೊಂದು ಬೆಂದ ಜೀವ. ಗ್ರಾಮೀಣ ಪ್ರದೇಶದ ಮುಗ್ದ ಪ್ರೇಮಿಯೊಬ್ಬನ ತುಮುಲಗಳು ಈ ಭಾಗದ ಮುಖ್ಯ ಭಾವ.

ಮಲಯಾಳಂ ಸಾಹಿತ್ಯದಲ್ಲಿ ಮೂಡಿದ ಅತಿಪ್ರಬಲ ಪ್ರೇಮ ಕಥಾನಕಗಳಲ್ಲಿ ಒಂದು, ‘ಚೆಮ್ಮೀನ್’ನ ಚೆಂಬನ್ ಕುಂಞ್. ಸಮುದ್ರದ ತೆರೆಗಳ ಹಿನ್ನೆಲೆಯಲ್ಲಿ ಚೆಂಬನ್ ಕುಂಞ್ ಆಡುವ ಭಾವತೀವ್ರವಾದ ಮಾತುಗಳು ಪ್ರೇಕ್ಷಕರಲ್ಲಿ ಭಾವನೆಗಳ ಲೋಕವನ್ನೇ ಸೃಷ್ಟಿಸುತ್ತವೆ.

ಪ್ರೀತಿ-ಪ್ರೇಮ ಮತ್ತು ದ್ವೇಷಭಾವದ ಅಲೆಗಳು ಒಂದರ ಮೇಲೊಂದು ಮುಗಿಬೀಳುವ ಕೃತಿ ಉಮ್ಮಾಚು. ಧರ್ಮಗಳ ನಡುವಿನ ಬೇಲಿಯನ್ನು ದಾಟಿ ಸಾಗುವ ಮಾನವಪ್ರೀತಿಯ ಪ್ರತೀಕ, ಮಾಯನ್ ಮತ್ತು ಉಮ್ಮಾಚು ನಡುವಿನ ಸ್ನೇಹ. ಇದರಲ್ಲಿ ಮಾಯನ್ ಪಾತ್ರವನ್ನು ಮೋಹನ್ ಲಾಲ್ ಮರುಸೃಷ್ಟಿ ಮಾಡಿದ್ದಾರೆ.

‘ಖಸಾಕಿಂಡೆ ಇತಿಹಾಸಂ’ ಕೃತಿಯ ಅಳ್ಳಾಪಿಚ್ಚ ಮೊಲ್ಲಾಕ ಸಂಕೀರ್ಣವಾದೊಂದು ಮಾನಸಿಕ ಸ್ಥಿತಿಯ ಪಾತ್ರ. ಗ್ರಾಮೀಣ ಹಿನ್ನೆಲೆಯಲ್ಲಿ ಬೆಳೆದ ಮೊಲ್ಲಾಕನಿಗೆ ತನ್ನದೇ ಆದ ಕೆಲವು ವಿಶಿಷ್ಟ ಗುಣಗಳಿವೆ. ಕಥೆ ಹೇಳುವ ಇತಿಹಾಸಕಾರ ಮಹಮ್ಮದುಣ್ಣಿ ಮತ್ತು ಕಥೆಯೊಳಗಿನ ಮಾಯನ್‌ನನ್ನು ಏಕಕಾಲದಲ್ಲಿ ಅಭಿನಯಿಸಿ ಮೋಹನ್‌ಲಾಲ್ ಮೆಚ್ಚುಗೆ ಗಳಿಸಿದ್ದಾರೆ.

1970-80ರ ದಶಕದಲ್ಲಿ ಕೇರಳದ ಯುವ ತಲೆಮಾರಿನ ಮೇಲೆ ಭಾರಿ ಪ್ರಭಾವ ಬೀರಿದ ಪಾತ್ರ ದಾಸನ್. ಮೇಲ್ನೋಟಕ್ಕೆ ಸುಲಭವಾಗಿ ಕಂಡರೂ ದ್ವಂದ್ವಗಳು ತುಂಬಿದ ಸಂಕೀರ್ಣ ಪಾತ್ರವಿದು. ಆ ಪರಕಾಯದೊಳಗೆ ಪ್ರವೇಶಿಸಲು ಮೋಹನ್‌ ಲಾಲ್ ಯಶಸ್ವಿಯಾಗಿದ್ದಾರೆ.

ಪುರಾಣದಲ್ಲಿ ಅರ್ಜುನನಿಗೆ ಅಥವಾ ಕರ್ಣನಿಗೆ ಇರುವಷ್ಟು ಮಹತ್ವ ಭೀಮನಿಗೆ ಇಲ್ಲ. ಆದರೆ ಎಂ.ಟಿ.ವಾಸುದೇವನ್ ನಾಯರ್ ಅವರ ‘ರಂಡಾಮೂಳಂ’ನ ಭೀಮ ಹಾಗಲ್ಲ. ಆತ ವಿಭಿನ್ನ. ಇಂಥ ಭೀಮ ಮೋಹನ್‌ಲಾಲ್ ಪ್ರತಿಭೆಯಲ್ಲಿ ಬೆಳಗಿದ್ದಾನೆ.

ಹಿನ್ನೆಲೆಯಲ್ಲಿ ಪರದೆ ಮೇಲೆ ಪೂರಕ ದೃಶ್ಯಾವಳಿಗಳನ್ನು ಮೂಡಿಸಿರುವುದು ಈ ರೂಪಕದ ಸೊಗಸು ಹೆಚ್ಚಿಸಿದೆ. ಸಾಹಿತ್ಯ ಕೃತಿ ಸಿನಿಮಾ ಆಗಿದ್ದರೆ ಆ ಸಿನಿಮಾದ ಸಾಂದರ್ಭಿಕ ದೃಶ್ಯವನ್ನೂ ಪರದೆಯಲ್ಲಿ ತೋರಿಸಲಾಗಿದೆ. ಸಂದರ್ಭಕ್ಕೆ ತಕ್ಕಂತೆ ಭಾಷೆ ಮತ್ತು ಸಾಹಿತಿಗಳನ್ನು ಪರಿಚಯಿಸುವ ಕಾರ್ಯವೂ ಆಗಿದೆ. ಪ್ರತಿಯೊಂದು ಪಾತ್ರದ ನಿರ್ವಹಣೆಯ ನಂತರ ಮಾತೃಭಾಷೆಯ ಸೊಗಡಿನ ಬಗ್ಗೆ ವಿವರಣೆ ನೀಡಿ ಅಭಿಮಾನ ಮೂಡಿಸುವ ಮಾತುಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT