‘ಡ್ರಾಮಾ ಕ್ವೀನ್’ ನಟನೆಯ ಪ್ಲ್ಯಾನ್!

7

‘ಡ್ರಾಮಾ ಕ್ವೀನ್’ ನಟನೆಯ ಪ್ಲ್ಯಾನ್!

Published:
Updated:

ಸೂಜಿಮಲ್ಲಿಗೆಯಂಥ ಮೊಗದಲ್ಲಿ ಕೆಂಡಸಂಪಿಗೆಯಂಥ ಮೂಗು. ಕೆಂಪು ದಾಸವಾಳದ ಎಸಳ ನಾಜೂಕಾಗಿ ಜೋಡಿಸಿದಂಥ ತುಟಿಗಳು ತುಸು ಬಿರಿದರಂತೂ ಖುಷಿಯಲ್ಲಿ ಕೆನ್ನೆ ಇನ್ನಷ್ಟು ಉಬ್ಬುವುದು. ನೋಟ ನೆಟ್ಟಲ್ಲೆಲ್ಲ ಕಿಡಿ ಹೊತ್ತಿಸುವಂಥ ಕಣ್ಣುಗಳು... ತುಂಟತನದ ಆಟವಾಡುವ ಮುಂಗುರುಳನ್ನು ಹಿಂದಕ್ಕೆ ಸರಿಸಿ ಮಾತಿಗೆ ಕೂತರೆ, ಈ ನೀಳಕಾಯದ ಸುಂದರಿ ಬಲು ಗಂಭೀರೆ. 

ಕೊಡಗಿನ ಮೂಲದ ಮೋಕ್ಷಾ, ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಅಂಟಿಕೊಂಡ ಫ್ಯಾಷನ್ ಷೋ ಗೀಳು, ಇವರ ಬದುಕನ್ನು ಬಣ್ಣದ ಲೋಕದ ಕಡೆಗೆ ಕವಲೊಡೆಯುವಂತೆ ಮಾಡಿತು. ‘ಕಾಲೇಜಿನಲ್ಲಿದ್ದಾಗ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಬೆಂಗಳೂರಿನಲ್ಲಿ ನಡೆಯುವ ಹಲವು ಫ್ಯಾಷನ್ ಷೋಗಳಲ್ಲಿ ನಮ್ಮ ಕಾಲೇಜನ್ನು ಪ್ರತಿನಿಧಿಸಿ ಬಹುಮಾನವನ್ನೂ ಗೆದ್ದಿದ್ಧೇನೆ. ಚಪ್ಪಾಳೆಯ ರುಚಿ ಹತ್ತಿದ್ದೂ ಅಲ್ಲಿಯೇ. ನಾನು ಇನ್ನೂ ಹೆಚ್ಚು ಜನರಿಗೆ ಪರಿಚಯ ಆಗಬೇಕು. ಅಂಥ ಸಾಧನೆ ಮಾಡಬೇಕು ಅನಿಸಲು ಶುರುವಾಯ್ತು’ ಎಂದು ಬೆಳಕಿನ ಜಗತ್ತಿಗೆ ಅಡಿಯಿಟ್ಟಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಕಾಲೇಜು ಮುಗಿದ ಮೇಲೆ ಪ್ರಸಾದ್ ಬಿದಪ್ಪ ಅವರ ಬಳಿಯೂ ಎರಡು ವರ್ಷ ರೂಪದರ್ಶಿಯಾಗಿ ಕೆಲಸ ಮಾಡದ ಅನುಭವ ಅವರಿಗಿದೆ. ಕ್ರಮೇಣ ಆ ಕ್ಷೇತ್ರವೂ ಸೀಮಿತ ಅನಿಸತೊಡಗಿತು. ಈ ಕ್ಷೇತ್ರದಲ್ಲಿ ತನ್ನ ವ್ಯಕ್ತಿತ್ವ ಬೆಳೆಯುತ್ತಿಲ್ಲ ಎಂದು ಅನಿಸತೊಡಗಿತು. ಸಿನಿಮಾದ ಬಗ್ಗೆ ಮೊದಲಿನಿಂದಲೂ ಮೋಹವೂ ಇತ್ತು. ಎಲ್ಲದಕ್ಕೂ ಕೊಂಚ ನಾಟಕೀಯವಾಗಿಯೇ ಪ್ರತಿಕ್ರಿಯಿಸುತ್ತಿದ್ದ ಅವರನ್ನು ಸ್ನೇಹಿತರೆಲ್ಲ ‘ಡ್ರಾಮಾ ಕ್ವೀನ್’ ಎಂದೇ ಕರೆಯುತ್ತಿದ್ದರು.

‘ಸಿನಿಮಾ ಕ್ಷೇತ್ರಕ್ಕೆ ಹೋಗುತ್ತೇನೆ ಎಂದು ಎಂದು ನಿರ್ಧಾರ ಮಾಡಿದಾಗ ಅಪ್ಪ– ಅಮ್ಮ ವಿರೋಧ ವ್ಯಕ್ತಪಡಿಸಿದರು. ಸಿನಿಮಾ ಕ್ಷೇತ್ರ ಹೆಣ್ಣುಮಕ್ಕಳಿಗೆ ಅಷ್ಟೊಂದು ಸುರಕ್ಷಿತ ಅಲ್ಲ ಎಂಬೊಂದು ಭಾವ ಇದೆಯಲ್ಲ, ಹಾಗಾಗಿ ಅವರು ಹೆದರಿದ್ದು ಸಹಜ. ಆದರೆ ಏನಾದರೂ ಮಾಡಲೇಬೇಕು ಎಂಬ ಹಟ ನನ್ನೊಳಗೆ ಮಡುಗಟ್ಟಿತ್ತು. ಹಟ ಮಾಡಿ ನಟನೆಯನ್ನೂ ಆಯ್ದುಕೊಂಡೆ. ನಾನು ತೆಗೆದುಕೊಂಡ ನಿರ್ಧಾರ ಸರಿಯಾದದ್ದು ಎಂದು ಪೋಷಕರಿಗೆ ಈಗ ಅನಿಸುತ್ತಿದೆ. ಅವರೂ ತುಂಬ ಪ್ರೀತಿಯಿಂದ ಬೆಂಬಲಿಸುತ್ತಿದ್ದಾರೆ’ ಎನ್ನುವ ಮೋಕ್ಷಾ ನಟಿಸಿರುವ ಎರಡನೇ ಸಿನಿಮಾ ‘ಆದಿ ಪುರಾಣ’ ಇಂದು (ಅ.05) ಬಿಡುಗಡೆಯಾಗುತ್ತಿದೆ.

ಆದಿಪುರಾಣಕ್ಕೂ ಮುನ್ನ ಅವರು ‘ಅಯನ’ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಒಂದು ಕಿರುಚಿತ್ರದಲ್ಲಿಯೂ ನಟಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಮೋಕ್ಷಾ ಅವರ ಚಿತ್ರಗಳನ್ನು ನೋಡಿದ ನಿರ್ದೇಶಕ ಮೋಹನ್ ಕಾಮಾಕ್ಷಿ ತಮ್ಮ ‘ಆದಿಪುರಾಣ’ ಚಿತ್ರದಲ್ಲಿ ದ್ವಿತೀಯ ನಾಯಕಿಯಾಗಿ ಅವರನ್ನು ಆಯ್ಕೆ ಮಾಡಿದರು.

‘ಆದಿ ಪುರಾಣ’ ಚಿತ್ರದಲ್ಲಿ ನಾನು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಬೋಲ್ಡ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ದಿಶಾ ಎಂಬುದು ಪಾತ್ರದ ಹೆಸರು. ಐಟಿ ತಂಡ ಮುಖ್ಯಸ್ಥೆ. ಹುಡುಗರ ಕಂಡರೆ ಮಾರು ದೂರ ಹೋಗುವವಳು. ಅಂಥ ಹುಡುಗಿಗೆ ಮೊದಲ ಬಾರಿ ಪ್ರೇಮವಾದಾಗ ಏನಾಗುತ್ತದೆ ಎನ್ನುವುದೇ ಕಥೆ’ ಎಂದು ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ. 

ಒಂದು ಮುತ್ತಿನ ಕಥೆ:

ತಮ್ಮ ಎರಡನೇ ಚಿತ್ರದಲ್ಲಿಯೇ ಅವರು ನಾಯಕನೊಂದಿಗೆ ತುಟಿಮುತ್ತು ವಿನಿಮಯ ಮಾಡಿಕೊಳ್ಳುವ ದೃಶ್ಯದಲ್ಲಿ ನಟಿಸಿದ್ದಾರೆ. ಈ ಕುರಿತು ಕೇಳಿದರೆ ಅವರ ಮುಖದ ಗಾಂಭೀರ್ಯದ ಜಾಗದಲ್ಲಿ ತುಸು ನಾಚಿಗೆ ಆವರಿಸಿಕೊಳ್ಳುತ್ತದೆ. ‘ಅಂಥ ದೃಶ್ಯಗಳಲ್ಲಿ ನಟಿಸಬೇಕು ಎಂದಾಗ ಭಯ ಇದ್ದೇ ಇರುತ್ತದಲ್ಲ. ನಂಗೂ ಸಾಕಷ್ಟು ಭಯ ಇತ್ತು. ಆದರೆ ಏನು ಮಾಡುವುದು? ಪಾತ್ರ, ಸನ್ನಿವೇಶ ಅದನ್ನು ಡಿಮ್ಯಾಂಡ್‌ ಮಾಡುತ್ತಿತ್ತು. ಮೊದ ಮೊದಲಿಗೆ ತುಂತಾನೇ ಕಷ್ಟ ಆಯ್ತು. ಆದರೂ ಹೇಗೋ ಮುಗಿದು ಹೋಯ್ತು ಬಿಡಿ’ ಎಂದು ಮಾತು ಬದಲಿಸುತ್ತಾರೆ. ಆದರೆ ಈ ಮುತ್ತು ಮುತ್ತು ನೀರ ಹನಿಯ ದೃಶ್ಯಕ್ಕೆ ಅವರು ಐದಾರು ಟೇಕ್ ತೆಗೆದುಕೊಂಡ ಮೇಲೆಯೇ ಓಕೆ ಆಗಿದ್ದಂತೆ! 

ಮುತ್ತಿನ ದೃಶ್ಯ ಇದ್ದರೂ ಅದನ್ನು ನಿರ್ದೇಶಕರು ತೋರಿಸಿರುವ ರೀತಿ ಅವರಿಗೆ ತುಂಬ ಇಷ್ಟವಾಗಿದೆ. ‘ಸಾಮಾನ್ಯವಾಗಿ ಇಂಥ ದೃಶ್ಯಗಳು ಆಶ್ಲೀಲವಾಗಿಯೇ ಕಾಣಿಸುತ್ತದೆ ತೆರೆಯ ಮೇಲೆ. ಆದರೆ ಈ ಚಿತ್ರದಲ್ಲಿ ಮುತ್ತಿನ ದೃಶ್ಯ ಸ್ವಲ್ಪವೂ ಆಶ್ಲೀಲವಾಗಿ ಕಾಣಿಸುವುದಿಲ್ಲ’ ಎನ್ನುವ ಸಮಾಧಾನ ಅವರಿಗಿದೆ.

‘ಆದಿ ಪುರಾಣ’ ಬಿಡುಗಡೆಗೂ ಮುನ್ನವೇ ಅವರಿಗೆ ಇನ್ನೊಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ದೊರೆತಿದೆ. ‘ನವರತ್ನ’ ಎನ್ನುವ ಚಿತ್ರಕ್ಕೆ ಮೋಕ್ಷಾ ನಾಯಕಿ. ಆ ಚಿತ್ರದ ಶೇ 90ರಷ್ಟು ಚಿತ್ರೀಕರಣವೂ ಈಗಾಗಲೇ ಮುಗಿದು ಹೋಗಿದೆ. 

‘ನವರತ್ನ’ ಮಹಿಳಾಪ್ರಧಾನ ಚಿತ್ರ. ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರಗಳೇ ಅಪರೂಪ. ಅಂಥದ್ದರಲ್ಲಿ ನಾನು ಮೊದಲಬಾರಿಗೆ ನಾಯಕಿಯಾಗಿ ನಟಿಸುತ್ತಿರುವ ಚಿತ್ರ ಮಹಿಳಾ ಪ್ರಧಾನ ಕಥಾವಸ್ತು ಹೊಂದಿದೆ ಎನ್ನುವುದು ನನ್ನ ಪಾಲಿಗಂತೂ ಹೆಮ್ಮೆಯ ವಿಷಯ. ಆ ಪಾತ್ರಕ್ಕಾಗಿ  ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಅಷ್ಟೇ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದೇನೆ’ ಎಂದು ವಿವರಿಸುತ್ತಾರೆ ಅವರು.

ಹಳ್ಳಿ ಹುಡುಗಿಯಾಗಬೇಕೆಂಬ ಆಸೆ:

ಆದಿ ಪುರಾಣದಲ್ಲಿ ಮೋಕ್ಷಾ ಆಧುನಿಕ ಹುಡುಗಿಯಾಗಿ ಕಾಣಿಸಿಕೊಂಡಿದ್ದಾಳೆ. ಅದರ ನಂತರ ಅವರಿಗೆ ಅಂಥದ್ದೇ ಮಾಡರ್ನ್‌ ಹುಡುಗಿಯ ಪಾತ್ರದಲ್ಲಿ ನಟಿಸಲು ಸಾಲು ಸಾಲು ಅವಕಾಶಗಳು ಅರಸಿಕೊಂಡು ಬರುತ್ತಿವೆ. ಆದರೆ ಅವುಗಳಿಗೆ ಒಲ್ಲೆ ಎನ್ನುತ್ತಿದ್ದಾರೆ. ಕಾರಣ ಒಂದೇ ಬಗೆಯ ಪಾತ್ರಕ್ಕೆ ಅಂಟಿಕೊಳ್ಳಬಾರದು ಎಂಬ ಅವರ ನಿಲುವು. 

‘ತುಂಬ ಜನ ನನ್ನ ಬಳಿಗೆ ಬಂದು ನೀವು ಮಾಡರ್ನ್‌ ಹುಡುಗಿಯ ಪಾತ್ರಕ್ಕೇ ಸೂಟ್ ಆಗುತ್ತೀರಾ. ಹಳ್ಳಿ ಹುಡುಗಿ ಅಥವಾ ಹೋಮ್ಲಿ ಪಾತ್ರಗಳಿಗೆ ಸೂಟ್ ಆಗಲ್ಲ ಅನ್ನುತ್ತಾರೆ. ಆದರೆ ಒಳ್ಳೆಯ ಕಲಾವಿದರು ಇಂಥದ್ದೇ ಪಾತ್ರಕ್ಕೆ ಸೂಟ್ ಆಗುತ್ತೇನೆ ಎಂದು ನಂಬಿಕೊಂಡು ಕೂಡುವುದಿಲ್ಲ. ಯಾವ ರೀತಿಯ ಪಾತ್ರಕ್ಕಾದರೂ ತಮ್ಮನ್ನು ಒಗ್ಗಿಸಿಕೊಳ್ಳಬೇಕು. ಹಳ್ಳಿ ಹುಡುಗಿ ಪಾತ್ರಕ್ಕೂ ನನ್ನನ್ನು ನಾನು ಒಗ್ಗಿಸಿಕೊಳ್ಳಬಲ್ಲೆ ಎಂಬ ನಂಬಿಕೆ ನನಗಿದೆ. ಅದಕ್ಕಾಗಿ ಕೊಂಚ ಕಷ್ಟಪಡಬೇಕಾಗಬಹುದು. ಆದರೆ ಆ ಸವಾಲಿಗೆ ನಾನು ಸಿದ್ಧ. ಹಳ್ಳಿ ಹುಡುಗಿ ಅಥವಾ ಹೋಮ್ಲಿ ಪಾತ್ರದಲ್ಲಿ ನಟಿಸಲು ನಾನು ಕಾಯುತ್ತಿದ್ದೇನೆ’ ಎನ್ನುತ್ತಾರೆ ಮೋಕ್ಷಾ. ಹಾಗೆಯೇ ಸಸ್ಪೆನ್ಸ್‌ ಥ್ರಿಲ್ಲರ್ ಚಿತ್ರಗಳಲ್ಲಿ ನಟಿಸಬೇಕು ಎಂಬ ಆಸೆಯೂ ಅವರಿಗಿದೆ.

ನಿದ್ದೆ ಜಾಸ್ತಿ; ತಿಂಡಿ ಪೋತಿ: 

ಫಿಟ್‌ನೆಸ್‌ ಕಾಯ್ದುಕೊಳ್ಳಲು ಏನು ಮಾಡುತ್ತೀರಿ ಎಂದು ಕೇಳಿದರೆ ಹೂ ಹಗುರವಾಗಿ ನಗುತ್ತಾರೆ ಮೋಕ್ಷಾ. ಜಿಮ್‌ಗೆ ಹೋಗುವ ವಿಷಯದಲ್ಲಿ ಅವರು ಕೊಂಚ ಲೇಜಿ. ಹಾಗೆಂದು ಒಮ್ಮೆ ಜಿಮ್‌ ಮೆಟ್ಟಿಲು ಹತ್ತಿದರೋ ಹೊರಗಿನ ಪರಿವೇ ಇಲ್ಲದ ಹಾಗೆ ಮೈದಂಡಿಸುತ್ತಾರೆ. ಬೆಳಿಗ್ಗೆ ಹತ್ತೂವರೆಗೆ ಜಿಮ್‌ಗೆ ಹೋದರೆ ಒಂದುಗಂಟೆಯವರೆಗೂ ವರ್ಕ್‌ಔಟ್ ಮಾಡುತ್ತಾರಂತೆ. 

ಸೇಬುಗೆನ್ನೆಯ ಈ ಬೆಡಗಿಗೆ ಹಣ್ಣುಗಳೆಂದರೆ ಪಂಪಪ್ರಾಣ. ಫ್ರೂಟ್ಸ್‌ ಸಿಕ್ಕರೆ ತಿನ್ನುತ್ತಲೇ ಇರುತ್ತಾರೆ. ಎಷ್ಟು ತಿಂಡಿಪೋತಿ ಎಂದರೆ ಅವರ ಅಮ್ಮ ಮೋಕ್ಷಾ ಕಣ್ಣಿಗೆ ಬೀಳದ ಹಾಗೆ ತಿಂಡಿಗಳನ್ನು ಬಚ್ಚಿಡುತ್ತಾರಂತೆ! ಹಾಗೆಂದು ಮನೆಯ ಹೊರಗೆ ತಿಂಡಿ ತಿನ್ನುವ ರೂಢಿಯೇ ಇಲ್ಲ ಅವರಿಗೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳೆಂದರೆ ಮಾರುದೂರ ಸರಿಯುತ್ತಾರೆ. 

ಮುಸುಕೆಳೆದುಕೊಂಡು ಮಲಗಿದರೆ ಎಂಟು ತಾಸು ಬಿಡುವಿಲ್ಲದ ನಿದ್ದೆ ಮಾಡುತ್ತಾರೆ ಮೋಕ್ಷಾ. ‘ನಿದ್ದೆ ಇಲ್ಲದಿದ್ದರೆ ನನಗೆ ತುಂಬ ಕಷ್ಟ. ಆದರೆ ಈ ನಡುವೆ ಸಿನಿಮಾ ಪ್ರಚಾರ, ನಟನೆ ಇವುಗಳ ಮಧ್ಯೆ ಸರಿಯಾಗಿ ನಿದ್ರೆ ಮಾಡಲೇ ಆಗುತ್ತಿಲ್ಲ. ಮೂರು ದಿನಗಳಿಂದ ನಿದ್ರೆಗೆಟ್ಟಿದ್ದೇನೆ. ಕೆಲಸ ಮುಖ್ಯ ನೋಡಿ’ ಎಂದು ತುಸು ಬೇಸರದಿಂದಲೇ ಹೇಳಿಕೊಳ್ಳುತ್ತಾರೆ. 

ಸಣ್ಣ ಪಾತ್ರದಿಂದ ದ್ವಿತೀಯ ನಾಯಕಿಯಾಗಿ, ಆಮೇಲೆ ನಾಯಕಿಯಾಗಿ ನಿಧಾನವಾಗಿ ಚಂದನವನದಲ್ಲಿ ನೆಲೆ ಕಂಡುಕೊಳ್ಳುತ್ತಿರುವ ಮೋಕ್ಷಾ ಅವರ ಮನಸಲ್ಲಿ ಸಿನಿತೆರೆಯಲ್ಲಿ ಅಚ್ಚಳಿಯದ ತಾರೆಯಾಗುವ ಕನಸು ಪ್ರಜ್ವಲಿಸುತ್ತಿದೆ. ಆ ದಿಶೆಯಲ್ಲಿ ಅವರು ಪಡುತ್ತಿರುವ ಶ್ರಮಕ್ಕೂ ಆ ಕನಸೇ ಇಂಧನವಾಗಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !