ಶುಕ್ರವಾರ, ಸೆಪ್ಟೆಂಬರ್ 17, 2021
23 °C

PV Web Exclusive| ಚಿತ್ರಮಂದಿರಗಳ ಪುನರಾರಂಭಕ್ಕೆ ಸವಾಲುಗಳು ಹತ್ತಾರು

ಕೆ.ಎಂ. ಸಂತೋಷ್‌ಕುಮಾರ್‌‌ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌– 19 ಕಾರಣದಿಂದಾಗಿ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳನ್ನು ಷರತ್ತುಗಳಿಗೆ ಒಳಪಡಿಸಿ ಇದೇ 15ರಿಂದ ಪುನರಾರಂಭಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. ಇದರಿಂದ ಚಿತ್ರಮಂದಿರಗಳ ಮಾಲೀಕರು, ಚಿತ್ರಪ್ರದರ್ಶಕರು, ಚಿತ್ರವಿತರಕರು ಹಾಗೂ ನಿರ್ಮಾಪಕರು ಸೇರಿದಂತೆ ಚಿತ್ರೋದ್ಯಮದಲ್ಲಿ ಆಶಾಭಾವನೆಯೇನೋ ಗರಿಗೆದರಿದೆ. ಆದರೆ, ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸಿ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೋದ್ಯಮದ ಚಟುವಟಿಕೆಗಳನ್ನು ಚಿತ್ರಮಂದಿರಗಳ ಪುನರಾರಂಭದ ಮೂಲಕ ಯಥಾಸ್ಥಿತಿಗೆ ತರಲು ಸಾಧ್ಯವೇ ಎನ್ನುವುದು ಚಿತ್ರೋದ್ಯಮದ ಮಂದಿಯನ್ನು ಕಾಡುತ್ತಿರುವ ಪ್ರಶ್ನೆ.

ಕಳೆದ ಏಳು ತಿಂಗಳುಗಳಿಂದ ಚಟುವಟಿಕೆ ಇಲ್ಲದೆ ಧೂಳು ಹಿಡಿದಿರುವ ಚಿತ್ರಮಂದಿರಗಳನ್ನು ಸ್ವಚ್ಛಗೊಳಿಸುವ, ಕುರ್ಚಿಗಳನ್ನು ಸ್ಯಾನಿಟೈಸ್‌ ಮಾಡುವ, ತುಕ್ಕು ಹಿಡಿದಿರುವ ಯಂತ್ರೋಪಕರಣಗಳನ್ನು ಮರುಚಾಲನೆಗೊಳಿಸುವ ಕೆಲಸಗಳನ್ನು ಈಗಾಗಲೇ ಚಿತ್ರಮಂದಿರಗಳ ಸಿಬ್ಬಂದಿ ಕೈಗೆತ್ತಿಕೊಂಡಿದ್ದಾರೆ. ಚಿತ್ರಗಳ ಪ್ರದರ್ಶನದ ವೇಳೆ ಅನುಸರಿಸಬೇಕಿರುವ ಮಾರ್ಗಸೂಚಿಗಳನ್ನು (ಎಸ್‌ಒಪಿ) ಕೇಂದ್ರ ಸರ್ಕಾರ ಹೊರಡಿಸುವುದನ್ನು ಚಿತ್ರಪ್ರದರ್ಶಕರು ಎದುರು ನೋಡುತ್ತಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಮಾರ್ಗಸೂಚಿಯೂ ಬಿಡುಗಡೆಯಾಗುವ ನಿರೀಕ್ಷೆ ಅವರದು.

ಕಾರ್ಯಸಾಧ್ಯವೇ?

ಪ್ರಾರಂಭಿಕ ಹಂತದಲ್ಲಿ ಶೇ 50ರಷ್ಟು ಆಸನಗಳ ಭರ್ತಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಈ ಷರತ್ತಿನಿಂದಾಗಿ ದೊಡ್ಡ ಬಜೆಟ್‌ ಚಿತ್ರಗಳ ನಿರ್ಮಾಪಕರು ಸದ್ಯಕ್ಕೆ ತಮ್ಮ ಸಿನಿಮಾಗಳ ಬಿಡುಗಡೆಯನ್ನು ಮುಂದೂಡುವುದಾಗಿ ಈಗಾಗಲೇ ಹೇಳಿದ್ದಾರೆ. ಮೊದಲೇ ಚಿತ್ರಮಂದಿರಗಳಲ್ಲಿ ಆದಾಯ ಕಡಿಮೆ ಇರುವಾಗ, ಶೇ 50 ಆಸನಗಳಿಗೆ ನಿರ್ಬಂಧಿಸಿದರೆ ಆದಾಯ ಇನ್ನಷ್ಟು ಖೋತಾ ಆಗಲಿದೆ. ಹಾಕಿದ ಬಂಡವಾಳ ಎತ್ತಿಕೊಳ್ಳುವುದು ಕಷ್ಟ ಎನ್ನುವುದು ಕೆಲವು ನಿರ್ಮಾಪಕರ ಸಮಜಾಯಿಷಿ.

ಕೊರೊನಾಕ್ಕೂ ಪೂರ್ವದಲ್ಲೇ ಜನರು ಚಿತ್ರಮಂದಿರಗಳಿಗೆ ಬರುವುದು ಕಡಿಮೆಯಾಗಿ, ಚಿತ್ರರಂಗ ಸಂಕಷ್ಟದಲ್ಲಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಶೇ 50 ಆಸನ ನಿರ್ಬಂಧ ಸಡಿಲಿಸುವಂತೆ ಬೇಡಿಕೆ ಇಡಲು ಆಗದ ಪರಿಸ್ಥಿತಿಯೂ ಇದೆ. ಕಾರಣ ಕೊರೊನಾ ಸಮುದಾಯಕ್ಕೆ ಹರಡಿರುವ ಭೀತಿಯು ಜನರಲ್ಲಿ ಆವರಿಸಿದೆ. ಜೀವ ಸುರಕ್ಷತೆಯೇ ಎಲ್ಲರ ಆದ್ಯತೆಯೂ ಆಗಿದೆ. ಇನ್ನು ಸ್ಟಾರ್‌ ನಟರ ಮತ್ತು ಬಿಗ್‌ ಬಜೆಟ್‌ ಸಿನಿಮಾಗಳು ಬಿಡುಗಡೆಯಾಗದಿದ್ದರೆ ಜನರು ಚಿತ್ರಮಂದಿರಗಳಿಗೆ ಬರುವುದು ಕಷ್ಟ ಎನ್ನುವುದನ್ನು ಬಿಡಿಸಿಹೇಳಬೇಕಿಲ್ಲ.

‘ಶೇ 50 ಆಸನಗಳು ಅವಕಾಶವಿದ್ದರೂ ಅದು ಹೇಗೆ ಎನ್ನುವುದು, ಯಾವ ವಯೋಮಾನದವರಿಗೆ ಮಾತ್ರ ಪ್ರವೇಶ ಎನ್ನುವುದು ಸ್ಪಷ್ಟವಾಗಿಲ್ಲ. ಸರ್ಕಾರದಿಂದ ಇನ್ನು ಮಾರ್ಗಸೂಚಿ ಬಂದಿಲ್ಲ. ಅ.15ರಿಂದ ಚಿತ್ರಮಂದಿರಗಳು ಶುರುವಾಗುವುದು ಅನುಮಾನ. ಆದರೂ ಅ.21ರಿಂದ ಶುರುವಾಗಬಹುದು’ ಎನ್ನುತ್ತಾರೆ ರಾಜ್ಯ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌.

‘ಚಿತ್ರಮಂದಿರಗಳಿಗೆ ಮೊದಲಿನಂತೆ ಜನರು ಬರುತ್ತಾರೊ ಅಥವಾ ಇಲ್ಲವೋ ಎನ್ನುವ ಅನುಮಾನ ನಮಗೂ ಇದೆ. ಕೊರೊನಾ ಪೂರ್ವದಲ್ಲಿ ಇದ್ದಂತೆ ಯಥಾಸ್ಥಿತಿಗೆ ಬರಬೇಕೆಂದರೆ ಇನ್ನು ಕನಿಷ್ಠ ಆರು ತಿಂಗಳಾದರೂ ಬೇಕಾಗಬಹುದು. ಕೊರೊನಾ ವೈರಸ್‌ಗೆ ಲಸಿಕೆ ಬಂದು, ಕೊರೊನಾದಿಂದ ಯಾರೂ ಸಾಯುವುದಿಲ್ಲ ಎನ್ನುವ ಖಾತ್ರಿ ಸಿಗುವವರೆಗೂ ಕೊರೊನಾ ಭಯವಂತೂ ಜನರಿಂದ ದೂರವಾಗುವುದಿಲ್ಲ. ಭಯಮುಕ್ತ ವಾತಾವರಣ ಬರುವವರೆಗೂ ಚಿತ್ರೋದ್ಯಮವಷ್ಟೇ ಅಲ್ಲ, ಯಾವುದೇ ವ್ಯವಸ್ಥೆ ಯಥಾಸ್ಥಿತಿಗೆ ಬರುವುದು ಕಷ್ಟ’ ಎನ್ನುವುದು ಅವರ ಅನಿಸಿಕೆ.

ಸವಾಲುಗಳೇನು?

‘ಕೇಂದ್ರ ಸರ್ಕಾರದಿಂದ ಎಸ್‌ಒಪಿ ಸೋಮವಾರ ಸಿಗುವ ನಿರೀಕ್ಷೆ ಇದೆ. ಚಿತ್ರೋದ್ಯಮವನ್ನು ಯಥಾಸ್ಥಿತಿಗೆ ತರುವುದು ಕಾರ್ಯಸಾಧ್ಯವೇ ಅಥವಾ ಇಲ್ಲವೇ ಎನ್ನುವುದು ಚಿತ್ರಮಂದಿರಗಳಿಗೆ ಮರುಚಾಲನೆ ನೀಡಿದ ನಂತರವಷ್ಟೇ ಗೊತ್ತಾಗಬೇಕು. ಸರ್ಕಾರ ಈಗ ಅನುಮತಿ ನೀಡಿದೆ, ನಮ್ಮ ಹಣೆಬರಹ ಪರೀಕ್ಷೆ ಮಾಡಿಕೊಳ್ಳಲೇಬೇಕು. ಮೊದಲು ಚಿತ್ರಮಂದಿರಗಳ ಬಾಗಿಲು ತೆರೆಯುತ್ತೇವೆ, ಜನರು ಬರುವುದನ್ನು ಕಾಯುತ್ತೇವೆ. ಜನರನ್ನು ಮೊದಲಿನಂತೆ ಚಿತ್ರಮಂದಿರಕ್ಕೆ ಮುಕ್ತವಾಗಿ ಬರುವಂತೆ ಸುರಕ್ಷತೆ ಒದಗಿಸುವ ಸವಾಲು ನಮ್ಮ ಮುಂದಿದೆ’ ಎನ್ನುತ್ತಾರೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜಯರಾಜ್‌.

‘ಶೇ.50 ಆಸನಗಳಿಗೆ ನಿರ್ಬಂಧ ವಿಧಿಸಿರುವುದರಿಂದ ನಿರ್ಮಾಪಕರಿಗೆ ನಷ್ಟವಾಗುವುದು ಖಚಿತ. ಈ ನಿರ್ಬಂಧಕ್ಕೆ ಬಹುತೇಕ ಎಲ್ಲ ನಿರ್ಮಾಪಕರೂ ವಿರೋಧವಾಗಿಯೇ ಇದ್ದಾರೆ. ಅ.15ರಿಂದ ಚಿತ್ರಮಂದಿರಗಳು ಬಾಗಿಲು ತೆರೆದರೂ ಹೊಸ ಚಿತ್ರಗಳನ್ನು, ಅದರಲ್ಲೂ ದೊಡ್ಡ ಬಜೆಟ್‌ ಸಿನಿಮಾಗಳನ್ನು ಬಿಡುಗಡೆ ಮಾಡಲು ಯಾರೂ ತಯಾರಿಲ್ಲ. ಕಾರ್ಯಶೀಲ ನಿರ್ಮಾಪಕರೆಲ್ಲರೂ ಸೇರಿ ಮಂಗಳವಾರ ಸಭೆ ನಡೆಸುತ್ತಿದ್ದು, ನಮ್ಮ ಸ್ಪಷ್ಟ ನಿಲುವು ಪ್ರಕಟಿಸಲಿದ್ದೇವೆ’ ಎನ್ನುತ್ತಾರೆ ನಿರ್ಮಾಪಕರ ಪರವಾಗಿ ‘ಸಲಗ’ ಚಿತ್ರದ ನಿರ್ಮಾಪಕ ಕೆ.‍ಪಿ. ಶ್ರೀಕಾಂತ್‌. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು