ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರದಲ್ಲಿ ಗೀತೆಗಳನ್ನು ತುರುಕಬಾರದು: ರಾಘವೇಂದ್ರ ರಾಜ್‌ಕುಮಾರ್

Last Updated 14 ಜನವರಿ 2023, 20:42 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್‌ಕುಮಾರ್ ಅವರ ಕಾಲದ ಚಲನಚಿತ್ರಗಳಲ್ಲಿ ಪಾತ್ರ, ಸನ್ನಿವೇಶಕ್ಕೆ ತಕ್ಕಂತೆ ಗೀತೆಗಳನ್ನು ಅಳವಡಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿನ ಚಲನಚಿತ್ರಗಳಲ್ಲಿ ಹಾಡುಗಳನ್ನು ತುರುಕಲಾಗುತ್ತಿದೆ’ ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದರು.

ಚಿತ್ರ ಪ್ರಕಾಶನ ನಗರದಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಜ್‌ಕುಮಾರ್ ಅವರ ಚಿತ್ರಗಳ ಸಮಗ್ರ ಗೀತಮಾಲಿಕೆ ‘ಗಂಧರ್ವಗಾನ’ ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು. ‘ರಾಜ್‌ಕುಮಾರ್ ಅವರಿಗೆ ಅವರ ತಂದೆಯವರು ಸಂಗೀತ ಅಭ್ಯಾಸಕ್ಕಾಗಿ ಮೇಷ್ಟ್ರು ಬಳಿ ಕಳಿಸುವ ವೇಳೆ ಚಡ್ಡಿ ಹಾಕಿಸಿ, ಕಳುಹಿಸುತ್ತಿದ್ದರಂತೆ. ರಾಜ್ ಅವರು ತಪ್ಪು ಮಾಡಿದ ಪ್ರತಿ ಬಾರಿಯೂ ತೊಡೆಯ ಮೇಲೆ ಗುರುಗಳಿಂದ ಏಟು ಬೀಳುತ್ತಿತ್ತು. ಇದರಿಂದ ತಪ್ಪು ಮಾಡದೆ, ಸಂಗೀತ ಕಲಿಯಲಿ ಎಂಬುದು ಅವರ ತಂದೆಯ ಆಶಯವಾಗಿತ್ತು. ಏಟು ಬೀಳದ ದಿನ ಮಗನನ್ನು ತಬ್ಬಿ ಮುದ್ದಾಡುತ್ತಿದ್ದರಂತೆ’ ಎಂದು ತಿಳಿಸಿದರು.

ಪುಸ್ತಕದ ಬಗ್ಗೆ ಮಾತನಾಡಿದ ಸಾಹಿತಿ ಮಂಜುನಾಥ್ ಅಜ್ಜಂಪುರ, ‘ಈ ಪುಸ್ತಕವನ್ನು ಓದಿದಾಗ ಹಿನ್ನೆಲೆ ಗಾಯನದಲ್ಲಿ ಹಾಡುಗಳನ್ನು ಕೇಳಿದ ಅನುಭವ ನೀಡಲಿದೆ. ರಾಜಕುಮಾರ್ ಅಭಿನಯದ ಎಲ್ಲ ಸಿನಿಮಾಗಳ ಹಾಡುಗಳ ಹಿನ್ನೆಲೆ ತಿಳಿದು, ಟಿಪ್ಪಣಿ ಬರೆಯಲಾಗಿದೆ. ಅದರ ಹಿಂದೆ ದಾಸಸಾಹಿತ್ಯ, ವಚನ, ಕವಿಗಳ ಅನುಭವ ಹೀಗೆ ಹತ್ತಾರು ಮಾಹಿತಿ ಸಿಗಲಿದೆ. ರಾಜ್ ಅವರ ಜೀವನ ಸಂಸ್ಕೃತಿ, ಗಾಯನ ಸಂಸ್ಕೃತಿ ಮತ್ತು ಅಪಾರವಾದ ನೆನಪಿವ ಶಕ್ತಿ ಎಂತಹದ್ದು ಎಂಬುದನ್ನು ಅರಿಯಲು ಸಾಧ್ಯ’ ಎಂದರು.

ಸಂಗೀತ ನಿರ್ದೇಶಕ ವಿ. ಮನೋಹರ್, ‘ರಾಜ್‌ಕುಮಾರ್ ಅವರ ಚಿತ್ರಗಳ ಹಾಡುಗಳ ಕುರಿತು ಸುಮಾರು 6 ವರ್ಷಗಳ ಕಾಲ ಸಂಶೋಧನೆ ಮಾಡಿ, ಈ ಪುಸ್ತಕ ಬರೆದಿದ್ದಾರೆ. ಎಲ್ಲಿಯೂ ಬೇಸರವಾಗದಂತೆ ಓದಿಸಿಕೊಂಡು ಹೋಗಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT